top of page

ಅಮೂರ್ತ_ಹುಡುಕಾಟದಲ್ಲಿ 'ನಿರುತ್ತರ'

ಕಾವ್ಯ ಮೂಲತಃ ತನಗೆ ದಕ್ಕುವುದನ್ನು ಕಕ್ಕುತ್ತದೆ. ಹಾಗಾದರೆ ಕಾವ್ಯಕ್ಕೆ ಸಿಕ್ಕುವುದು ಯಾವುದು ? ಕವಿಯ ಕಲ್ಪನೆ, ಗ್ರಹಿಕೆ, ಲೋಕದೃಷ್ಟಿ, ಬದುಕಿನ ಅನುಭವಗಳು, ಪ್ರಕೃತಿಯ ವ್ಯಾವಹಾರಗಳು, ಸುತ್ತಣ ಸಮಾಜದ ಘಟನೆಗಳು ಇತ್ಯಾದಿ ಸಂಗತಿಗಳೂ ಸೇರಿದಂತೆ ವ್ಯಕ್ತಿಯ ಬಿಕ್ಕುಗಳು, ಸಮಾಜದ ಸಿಕ್ಕುಗಳನ್ನು ಸಡಿಲಗೊಳಿಸಿ ಆತ್ಯಂತಿಕ ಸತ್ಯವನ್ನು ಕಾಣಿಸುವ ಪ್ರಾಮಾಣಿಕ ಅಭಿವ್ಯಕ್ತಿಯೇ ಕಾವ್ಯ. ಮಾತಿಗೂ ಮೀರಿದ ಮಿಡಿತ, ತುಡಿತ, ತಲ್ಲಣ ತೊಳಲಾಟಗಳನ್ನು ತನ್ನದೆ ಮಿತಿಯೊಳಗೆ ಹಿಡಿದಿಡುವ ಕವಿಯ ಕಾವ್ಯ ನಿಜವಾದ ಅರ್ಥದಲ್ಲಿ ತನ್ನ ಸಮಕಾಲೀನ ಸಮಾಜ ಎದುರಿಸುವ ಸಂಕಟ, ಸಂಘರ್ಷ, ಸಂಭ್ರಮಗಳನ್ನು ಒಳಗೊಂಡೂ ಮುಂಗಾಣ್ಕೆಗಳನ್ನು ಒದಗಿಸುವ ಅಸೀಮ, ಅನಂತ ಸಾಧ್ಯತೆಗಳ ಕರುಣಿಸುವ ಕಲ್ಪವೃಕ್ಷ. ಕಾವ್ಯಕಣ್ಣಿಗೆ ಎಲ್ಲವೂ ವಸ್ತು. ಆದರೆ ಕಂಡಿದ್ದೆಲ್ಲವನ್ನೂ ಅದು ಕಾಣಿಸುವುದಿಲ್ಲ. ಕರುಣೆ ಇಲ್ಲದವನಿಗೆ ಕ್ರೂರತೆಯೇ ಕಾಣುತ್ತದೆ. ಕರುಣೆ ಇಲ್ಲದವನನ್ನು ಕವಿಯೆಂದು ಕರೆಯುವುದಾದರೂ ಹೇಗೆ? ಕವಿತೆಗೆ ಕ್ರೂರತೆಯನ್ನೂ ಕರಗಿಸುವ ಶಕ್ತಿ ದತ್ತವಾಗಿರುತ್ತದೆ. ಬದುಕಿನಲ್ಲಿ, ಸಮಾಜದಲ್ಲಿ ಕರುಣೆಗೂ ಕರಗದ ಸಂಗತಿಗಳೆಲ್ಲಾ ಘಟಿಸುವಾಗ ಕವಿ ‘ನಿರುತ್ತರ’ನಾಗುತ್ತಾನೆ, ಮೌನದ ಮೊರೆಹೋಗುತ್ತಾನೆ. ಆ ಮೌನದೊಳಗೂ ಮಾತಾಗುತ್ತಾನೆ; ಆ ಮಾತಿನೊಳಗೂ ಕಾಠಿಣ್ಯತೆಗಿಂತ ಕಾರುಣ್ಯದ ಕಿಡಿ ಹೊತ್ತಿಸಲು ಹಂಬಲಿಸುತ್ತಾನೆ. ಇಲ್ಲಿ ಹೊತ್ತಿಸುವ ಕಿಡಿಗೆ ಕೇಡಿನ ಹಂಗಿಲ್ಲ. ಹಾಗಾಗಿ ಈ ಕಿಡಿ ಬೆಳಕಿನ ಕುಡಿ. ಈ ಹಿನ್ನೆಲೆಯಲ್ಲಿಯೇ ಕವಿ ಕೆ.ಬಿ. ವೀರಲಿಂಗನಗೌಡ್ರ ‘ನಿರುತ್ತರ’ ಸಂಕಲನದ ಬೆಳಕಿನ ಕುಡಿಕವಿತೆಗಳನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ.


ಸದ್ಯದ ಕನ್ನಡಕಾವ್ಯ ವಿಭಿನ್ನ ಸ್ವರೂಪದಲ್ಲಿ ಹುಟ್ಟು ಪಡೆಯುತ್ತಿದೆ. ಅದರ ಚಹರೆ ಆಶ್ಚರ್ಯಕರ ರೀತಿಯಲ್ಲಿ ಬದಲಾಗುತ್ತಿದೆ. ಕವಿತೆ, ಹನಿಗವಿತೆ, ದ್ವಿಪದಿ, ತ್ರಿಪದಿ, ಚೌಪದಿ, ಗಜಲ್, ಪದ್ಯ ರೀತಿಯ ಕವಿತೆಗಳು ರೂಪುತಾಳುತ್ತಿವೆ. ಕನ್ನಡದಲ್ಲಿ ಕಾವ್ಯದ ಫಸಲು ಸಮೃದ್ಧವಾಗಿದೆ. ಎಲ್ಲವೂ ಉತೃಷ್ಟ ಎಂದು ಹೇಳಬರುವುದಿಲ್ಲ. ಅದರಲ್ಲಿ ಜೊಳ್ಳಿನ ಜೊತೆಗೆ ಹಲವು ಗಟ್ಟಿಕಾಳುಗಳೂ ಸೇರಿಕೊಂಡಿವೆ. ಇಂಥ ಗಟ್ಟಿಕಾಳುಗಳಲ್ಲಿ ವೀರಲಿಂಗನಗೌಡ್ರ ‘ನಿರುತ್ತರ’ದ ಕೆಲ ಕವಿತೆಗಳು ಮಹತ್ವದ್ದಾಗಿ ತೋರುತ್ತವೆ.

ಕವಿ ವೀರಲಿಂಗನಗೌಡರಿಗೆ ಗಜಲ್ ಸಿದ್ಧಿಸಲಿಲ್ಲ. ಆದರೆ ಅದರಲ್ಲಿನ ‘ಸಾಕಿ’ ಈ ಕವಿಯನ್ನು ಉದ್ದಕ್ಕೂ ಪೊರೆದಿದ್ದಾಳೆ. ತನ್ನ ನೋವುಗಳ ನೆತ್ತಿ ನೇವರಿಸಿ, ಸ್ಪೂರ್ತಿಯ ನಶೆಯೇರಿಸಿದ ನಿರಾಕಾರ ಶಕ್ತಿಯಾಗಿ ಸಾಕಿ ಸದಾ ಜೊತೆಗಿದ್ದಾಳೆ ಎಂದು ಹೇಳಿಕೊಳ್ಳುವ ಕವಿ ಕಾವ್ಯವನ್ನು ಬದುಕಿನ ಅದಮ್ಯ ಅಭಿಪ್ಸೆಯಾಗಿ ಸ್ವೀಕರಿಸಿರುವುದು ಇಲ್ಲಿ ಸ್ಪಷ್ಟವಾಗಿದೆ.


ಇಪ್ಪತ್ತಾರು ಕವಿತೆಗಳನ್ನು ಒಳಗೊಂಡಿರುವ ‘ನಿರುತ್ತರ’ ಸಂಕಲನದಲ್ಲಿ ಪ್ರೇಮ, ಕಾಮ, ವಿರಹ, ಜಾತಿ, ಯುದ್ಧ, ಪ್ರಭುತ್ವ, ಹಿಂಸೆ, ದುರಾಡಳಿತ, ಅಧಿಕಾರ, ಅರಾಜಕತೆ, ಕಾವ್ಯಮೀಮಾಂಸೆ ಹೀಗೆ ಹಲವು ಸಂಗತಿಗಳು ಚೆಲ್ಲುವರಿದಿವೆ. ಇಲ್ಲಿನ ಬಹುತೇಕ ಕವಿತೆಗಳ ಅಮೂರ್ತ ಅಂತಃಶಕ್ತಿಯಾಗಿರುವ ‘ಅವಳು’ ಸಾಕಿಯ ರೂಪದಲ್ಲಿ ಅವತರಿಸಿ, ಆವರಿಸಿಕೊಂಡಿದ್ದಾಳೆ. ಕವಿಗೆ ಹಲವು ಆಯಾಮಗಳಲ್ಲಿ ದಕ್ಕುವ ಅವಳು; ತೊರೆದವನಿಗೆ ಅರಳಿಮರವಾದವಳು, ಕೂಡಬೇಕೆನ್ನುವವನಿಗೆ ಅನುಭವ ಮಂಟಪವಾಗಿ, ಹೋರಾಟಗಾರನಿಗೆ ಊರುಗೋಲಾಗಿ ಒದಗುವುದಲ್ಲದೆ, ಕಾಣದ ತಂಗಾಳಿಯಾಗಿ ಅರ್ಥವಾಗದ ಅಮೂರ್ತವಾಗಿ ಇಲ್ಲಿ ತೋರುತ್ತಾಳೆ. ಒಲವಾಮೃತ ಸಿಂಚನಸ್ಪರ್ಶದಿಂದಲೇ ಮನುಷ್ಯ ಪರಿಪೂರ್ಣನಾಗುತ್ತಾನೆ. ಅದು ಬರೀ ಹೆಣ್ಣು-ಗಂಡುಗಳ ಆಕರ್ಷಣೆಗೆ, ಅನುಭವಕ್ಕೆ ಸೀಮಿತಗೊಂಡರೆ ನಿಷ್ಪ್ರಯೋಜಕ. ಈ ಹಿನ್ನೆಲೆಯಲ್ಲಿ ‘ಪ್ರೀತಿಯೆಂದರೆ’ ಕವಿತೆಯನ್ನು ಗಮನಿಸಬಹುದಾಗಿದೆ ;

‘ಸಾಕಿ..

ಪ್ರೀತಿಯೆಂದರೆ

ಗುಟ್ಟಾಗಿ ಗುನುಗುವುದಲ್ಲ

ಸುಟ್ಟ ರೊಟ್ಟಿಯಂತಾಗುವುದು

ಕಾದು ಕೆನೆಗಟ್ಟುವುದಲ್ಲ

ಹೆಪ್ಪುಗಟ್ಟಿ ತುಪ್ಪದಂತಾಗುವುದು

ಹಾಯಾಗಿ ಹಾರುವುದಲ್ಲ

ಫೀನಿಕ್ಸ್ ಹಕ್ಕಿಯಂತಾಗುವುದು

ನಿತ್ಯ ಮಥಿಸುವುದಲ್ಲ

ಮಾನವೀಯತೆಯ ಸ್ತುತಿಸುವುದು

ಶರಣಾಗುವುದಲ್ಲ

ಶರಣ ಸಂಸ್ಕøತಿಗೆ ಅಣಿಯಾಗುವದು

ಮುದ್ದಾಡುವುದಲ್ಲ

ಎದ್ದುಹೋಗಿ ಬುದ್ಧನಂತಾಗುವುದು’ ಮನುಷ್ಯ ಇಡೀ ತನ್ನ ಬದುಕಿನ ಹದಕ್ಕೆ ಹಂಬಲಿಸುವುದು ಸಹಜವೇ. ಗಂಡು ಹೆಣ್ಣೊಲವಿಗೆ, ಆಕರ್ಷಣೆಗೆ ಸೀಮಿತಗೊಳ್ಳದ ಇಲ್ಲಿನ ಪ್ರೀತಿ ಬುದ್ಧನಂತಾಗುವ ಕಾರುಣ್ಯಪೂರಿತ ನೆಲೆಯಲ್ಲಿ ಪರ್ಯಾವಸನಗೊಳ್ಳುವ ಮೂಲಕ ವಿಸ್ತøತ ಆಯಾಮ ಪಡೆದುಕೊಳ್ಳುವುದು ಇಲ್ಲಿ ಮುಖ್ಯವೆನಿಸುತ್ತದೆ. ‘ಮೌನ ತುಳಿದು ಮಾತೆತ್ತುವ ಸಂಗಾತಿಯೊಂದಿಗೆ ಸಂವಹನ ಸಾಧ್ಯವಾಗುವುದಿಲ್ಲ’ ಎಂದು ಹೇಳುವ ಕವಿಗೆ ‘ದಿಟದ ದೀಪ ಹಚ್ಚುವ ಹುಚ್ಚು ಬಿಡಲಾರದ’ ದಿಟ್ಟತನ ವ್ಯಕ್ತವಾಗುವುದು ಕವಿಯಲ್ಲಿನ ಮೌನಸಂವಹನದ ಹಂಬಲಕ್ಕೆ ಸಾಕ್ಷಿಯಾಗಿದೆ. ಅಲ್ಲದೆ, ‘ಅಕ್ಕ ಅಲ್ಲಮರ ಬಯಲಲಿ ಲಯವಾಗಿ ಬಿಡುವ’ ಮನುಷ್ಯನ ಅನಂತ ಸಾಧ್ಯತೆಯನ್ನು ‘ಅಲ್ಲಮರ ಬಯಲು’ ಕವಿತೆ ಮನವರಿಕೆ ಮಾಡಿಕೊಡುತ್ತದೆ. ‘ಕೋರಿಕೆಗಳು’ ಕವಿತೆಯು ಪ್ರಭುತ್ವದ ನಿಷ್ಕಾರುಣ್ಯತೆ, ಕ್ರೂರತೆ, ಬೀಭತ್ಸತೆಯನ್ನು ಬಯಲು ಮಾಡಿ, ‘ಮಂಗಗಳ ಕೈಗೆಂದೂ ಯುದ್ಧ ಅನ್ನೋ ಮದ್ಯ ಸಿಗದಿರಲಿ, ಹದ್ದು ತನ್ನ ‘ಹದ್ದು’ಮೀರಿ ನೆತ್ತರೇ ನನ್ನ’ತ್ತರವೆನ್ನದಿರಲಿ, ಶವಪೆಟ್ಟಿಗೆಗಳು

ಮತಪೆಟ್ಟಿಗೆಗಳಾಗದಿರಲಿ, ಸೈನಿಕರೆಂದೂ ಚುನಾವಣೆಯ ಸರಕಾಗದಿರಲಿ ಪಾರಿವಾಳಗಳೆಂದೂ ಸರಳುಗಳ ಹಿಂದೆ ನಿಲ್ಲದಿರಲಿ’ ಎಂಬ ಸಾಲುಗಳಲ್ಲಿ ಸದ್ಯದ ಪ್ರಭುತ್ವ ಸ್ವರೂಪ, ಅದು ನಡೆದುಕೊಳ್ಳುವ ರೀತಿ, ಶಾಂತಿಸಮಾಜ ನಿರ್ಮಾಣದ ಬಹುದೊಡ್ಡ ಆಶಯವನ್ನು ಪ್ರಕಟಿಸುತ್ತದೆ.

ವೀರಲಿಂಗನಗೌಡರಿಗೆ ಸಮಾಜ, ಕವಿತೆ, ಪ್ರೀತಿ, ಕರುಣೆ, ಸ್ಪಂದನೆ ಪರಸ್ಪರ ಪ್ರತ್ಯೇಕವಲ್ಲ, ಬದಲಾಗಿ ಅವು ಪೂರಕ ಪ್ರೇರಕ ಮತ್ತು ಪ್ರಚೋದಕ ಎಂಬ ನಿಲುವಿದೆ. ‘ಕವಿತೆಯೆಂದರೆ...’ ಎನ್ನುವ ಅವರ ಕವಿತೆಯಲ್ಲಿ ;

‘ಕವಿತೆಯೆಂದರೆ

ಪದ ಪೋಣಿಸುವುದಲ್ಲ

ನೊಂದೆದೆ ತಣಿಸುವುದು’ ಎಂದು ಹೇಳುವ ಅವರು ಅದು, ಬರೀ ಬರೆಯುವುದಲ್ಲ ಪ್ರೀತಿಯಲಿ ಬೇಯುವುದು, ಬೆಳೆಯುವುದಲ್ಲ ಬೇರಾಗಿ ಕೆಳಗಿಳಿಯುವುದು, ಹೊಸೆಯುವುದಲ್ಲ ಒಲವ ಬೆಸೆಯುವುದು’ ಎನ್ನುವಲ್ಲಿ ಕವಿತೆ ಮಿಡಿಯಬೇಕಾದುದು, ಪಡೆದುಕೊಳ್ಳಬೇಕಾದುದು ಯಾವುದಕ್ಕೆ ಎಂಬುದನ್ನು ಅರುಹುತ್ತಾರೆ. ಮುಂದುವೆರೆದು ‘ಮಾಯದ ಗಾಯದಂತೆ ಗಾಯಗೊಳಿಸಿದವರ ಎದೆಗೊದೆಯುವ ಅಸ್ತ್ರವಾಗಿಯೂ ಕವಿತೆ ದಕ್ಕುತ್ತದೆಯಲ್ಲದೆ, ಸಾಕಿ ಸಂಕಟಗಳಿಗೆ ಸಾಂತ್ವನ ಹೇಳಲು, ಮೌನದೆದೆ ಸೀಳಿ ಮಥಿಸಿ ಮುದ್ದಿಸಲು, ಇರುಳೊಡನೆ ಬೆಳದಿಂಗಳಾಗಿರಲು, ಲೋಕವಿರೋಧಿಯ ಗುಡಿಸಲಲಿ ಪವಡಿಸಲು, ಸುಟ್ಟಕಲ್ಲಿ (ಸುಣ್ಣದ ಕಲ್ಲು)ಗೆ ಶಾಂತಿಯ ಪಟ್ಟ ಕಟ್ಟಲು ‘ಕವಿತೆ ಬರುವುದಂತೆ’ ಎಂಬ ಕವನವು ಕಾವ್ಯ ಮೂಲಭೂತವಾಗಿ ತುಡಿಯಬೇಕಾದುದು ಸಮಾಜದ ಊನಗಳನ್ನು ಮಾಯಿಸುವುದಕ್ಕೆ, ಶಾಂತಿಯನ್ನು ನೆಲೆಗೊಳಿಸುವುದಕ್ಕೆ, ಪರಿವರ್ತನೆಯ ಬೀಜಗಳನ್ನು ಬಿತ್ತುವುದಕ್ಕೆ ಎಂಬುದು ಸ್ಪಷ್ಟವಾಗುತ್ತದೆ.


ಕಾವ್ಯವು ಸಮಾಜದ ಸಂದಿಗ್ಧತೆ, ಸಂಕೀರ್ಣತೆ, ಸಂಘರ್ಷಗಳನ್ನು ಕಾಣಿಸಬೇಕು. ನೊಂದ ಮನಸ್ಸುಗಳಿಗೆ ಸಾಂತ್ವನದ ದನಿಯಾಗಬೇಕೆಂಬುದು ಈ ಕವಿಯ ಇಂಗಿತ. ‘ಅಮಲಲಿ...’ ಕವಿತೆಯಲ್ಲಿ ಕವಿ ಸಾಕಿಗೆ ಬೇಡಿಕೊಳ್ಳುವ ಪರಿಯೇ ವಿಶಿಷ್ಟವಾಗಿದೆ.

“ಸಾಕಿ

ಅಲ್ಯಾರೋ..

ಯುದ್ಧದ ಸುದ್ದಿ ಎತ್ತಿದ್ದಾರೆ

ಮಧುರಸದಲ್ಲಿ ಬುದ್ಧರಸವನ್ನು ಬೆರೆಸಿಕೊಡು

ಅಲ್ಯಾರೊ..

ಸಂಚಿನ ಯೋಜನೆಯಲ್ಲಿದ್ದಾರೆ

ಕೊಂಚ ಸಮರಸ ಬೆರೆಸಿಕೊಡು

..............

ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ

ಮುಖವಾಡ ಕಳಚಿ ಹೊರದಬ್ಬಿಬಿಡು

ನಿನ್ನಂಗಳದಲಿ

ರಂಗೋಲಿಯಾಗುವೆ

ಮಲ್ಲಿಗೆಯ ಮರವಾಗಿ ಸಾಕಿಬಿಡು” ಎಂದು ಸಾಮಾಜಿಕ ವಿಸಂಗತಿಗಳ ವಿಚಿತ್ರ ಸನ್ನಿವೇಶವನ್ನು ನಿರ್ಭಿಡೆಯಿಂದ ದಾಖಲಿಸುತ್ತಾರೆ. ಸಾಕಿಯ ಕಣ್ಣಿನಲ್ಲಿ ಈ ಪುರುಷಸಮಾಜ ಸಂಪೂರ್ಣವಾಗಿ ಶೋಷಣೆಯ ಕೇಂದ್ರವಾಗಿ ಕಂಡಿದೆ. ಇದು ಕಾಣುವ ಕಣ್ಣಿನ ತಪ್ಪಲ್ಲ, ಈವರೆಗೂ ಕಂಡರಿಸಿದ ಕೈಯ ತಪ್ಪು. ಈ ದಾರುಣತೆಯು ಕವಿಗೆ ತೀವ್ರವಾಗಿ ಕಾಡಿದೆ. ಪರಂಪರೆಯಲ್ಲಿ ನಿರಂತರವಾಗಿ ಹೆಣ್ಣು ಅನುಭವಿಸಿದ ಶೋಷಿತ ಸ್ತ್ರೀಸಮಾಜದ ಚಾರಿತ್ರಿಕ ನೊಂದ ಕಥನ. ‘ನೋವು’ ಕವಿತೆಯಲ್ಲಿ ಧ್ವನಿ ಪಡೆದಿದೆ.

‘ಸಾಕಿ,

ಅವನೆಂದರೆ..

ನೆರಳಿರದ ಮರ

ಕರುಳಿರದ ಇರುಳು

ಹೊಳೆಯ ಮೇಲಿನ ಮಳೆ

ತೊಳೆದರೂ ಉಳಿವ ಕೊಳೆ

ಅವರಿವರ ನಡುವೆ

ಅಡ್ಡಗೋಡೆ ಕಟ್ಟುವ ಹೆಡ್ಡ

ಅವಳ ಆತ್ಮಕಥೆಯಲ್ಲಿ

ಬೆತ್ತಲಾಗುವ ಕತ್ತಲು

ಕೀವು ತುಂಬಿದ ಗಾಯ

ನೋವು ತುಂಬಿದ ಕವಿತೆ’ ನಮ್ಮ ದೇಶದಲ್ಲಿ ಇದೂವರೆಗೂ ಪುರುಷ ಸ್ತ್ರೀಯನ್ನು ನಡೆಸಿಕೊಂಡ ಪರಿಯನ್ನು ಕಟ್ಟಿಕೊಡುತ್ತದೆ. ಲೋಕದ ದಂದುಗಗಳಲ್ಲಿ ನಡೆಯುತ್ತಿರುವ ಅಪಸವ್ಯಗಳಿಗೆ ಚರಿತ್ರೆ ಮತ್ತು ವರ್ತಮಾನದಲ್ಲಿ ಉತ್ತರ ಹುಡುಕುವ ಕವಿಯ ಹಂಬಲ ವಿಶೇಷವಾದುದು. ಕೂಡಲಸಂಗಮ, ಬಹುರೂಪಿಗಳು!, ಕರುಳಕೂಗು! ಮಣ್ಣುಮರ ಮಧುಶಾಲೆಯಲ್ಲಿ..., ಶುಗರಲೆಸ್, ನಿರಾಳ, ಸಾಸಿವೆಗೀಗ ಸಂಭ್ರಮ, ಬಯಲು ಮುಂತಾದ ಕವಿತೆಗಳು ವಿಭಿನ್ನ ವಸ್ತುಗಳನ್ನು ಒಳಗೊಂಡು ಬಹುಸ್ತರೀಯ ಅನುಭವವನ್ನು ಕಟ್ಟಿಕೊಡುತ್ತವೆ.


ಕವಿಗೆ ಸಾಮಾಜಿಕ ಹೊಣೆಗಾರಿಕೆ ಹಾಗೂ ನೈತಿಕ ಎಚ್ಚರ ಇರಬೇಕಾದುದು ಅವಶ್ಯ ಎಂದು ಪ್ರತಿಪಾದಿಸುವ ಕವಿ ‘ಚೂರು ನಿರಾಳವಾಗಿದೆ ಕವಿಯಾಗಿದ್ದಕ್ಕಲ್ಲ, ಕಟುಕ ಕವಿತೆಯಾಗಿದ್ದಕ್ಕೆ’ ಎಂಬ ಸಾಲುಗಳು ಬರೆಹಗಾರನ ಪ್ರಾಮಾಣಿಕತನವನ್ನು ಪರೀಕ್ಷೆಗೊಡ್ಡುತ್ತವೆ. ಕವಿ ವೀರಲಿಂಗನಗೌಡರಿಗೆ ಕವಿತೆ ಎಂದರೆ ಪೋಣಿಸುವುದಲ್ಲ, ಭಾವಕೋಶವನ್ನು ಪರಿಶುದ್ಧಗೊಳಿಸಿ ಸಮಾಜದ ಸಮಸ್ತವನ್ನು ಸ್ವಾಸ್ಥ್ಯಗೊಳಿಸಲು ಇರುವ ಪರಿಕರ. ಸಾಂಪ್ರದಾಯಿಕ ಸಿದ್ಧ ಮಾದರಿಯ ಕವಿತೆಗಳ ಛಂದೋ ಚೌಕಟ್ಟನ್ನೂ ಮೀರಿ ರೂಪುಗೊಂಡಿರುವ ಇಲ್ಲಿನ ಕವನಗಳು ಮನುಷ್ಯ ತನ್ನೊಳಗೆ ತಾನು ನೋಡಿಕೊಳ್ಳುವ, ಒಳದನಿಗೆ ಕಿವಿಯಾಗುವ ಆ ಮೂಲಕ ತನ್ನ ಸುತ್ತಣ ಸಮಸ್ತ ವ್ಯಾವಹಾರಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುವ ಪ್ರಯತ್ನದ ಭಾಗವಾಗಿ ಹುಟ್ಟುಪಡೆದಿವೆ. ಇಲ್ಲಿ ಪ್ರೀತಿಯೂ ಪ್ರತಿಭಟನೆಯೂ ಇದೆ. ‘ಅಮೂರ್ತವನ್ನು ಅರ್ಥಮಾಡಿಕೊಳ್ಳಲು ತೊಡಗಿಕೊಂಡಿರುವ ಕವಿ ಕುಳಿತಿರುವುದು ‘ನಿರುತ್ತರ’ದಲ್ಲಿ ಎಂಬುದನ್ನು ಗಂಭೀರವಾಗಿ ಆಲೋಚಿಸಿದರೆ ‘ನಿರುತ್ತರ’ಕವಿತೆ ಹೊರಡಿಸುವ ಅರ್ಥವಿಸ್ತಾರತೆ ದೊಡ್ಡದು ಎಂಬುದು ವೇದ್ಯವಾಗುತ್ತದೆ. ಸಮಾಜವನ್ನು ಎಚ್ಚರಿಸಲು ಮೊನಚು, ವ್ಯಂಗ್ಯ, ವಿಡಂಬನೆಯನ್ನು ಸಮರ್ಪಕವಾಗಿ ಬಳಸಿಕೊಂಡಿರುವ ಕವಿ, ತಾತ್ವಿಕವಾಗಿಯೂ ಕೆಲವೊಂದು ಮಹತ್ವದ ಬೆಳಕಿನ ಮಿಣುಕಗಳನ್ನು ಹೊಳೆಯಿಸಿದ್ದಾರೆ. ಕಾವ್ಯದಲ್ಲಿನ ರೂಪಕಗಳಿಗೆ ಅರ್ಥವಿಸ್ತಾರದ ಸಾಧ್ಯತೆ ಇರುವಂತೆ ಅರ್ಥಸಂಕುಚನಗೊಳಿಸುವ ಮಿತಿಯೂ ಇರುತ್ತದೆ. ಈ ಮಿತಿಯನ್ನು ಮೀರುವ ಪ್ರಯತ್ನವೂ ಆಗಬೇಕು.

ವೀರಲಿಂಗನಗೌಡರ ಕಾವ್ಯಪ್ರತಿಭೆಯ ಕುರಿತು ‘ಗೌಡರಿಗೆ ಬರವಣಿಗೆ ಅನ್ನುವುದು ಫ್ಯಾಶನ್ ಅಲ್ಲ, ಅಭಿವ್ಯಕ್ತಿ ಇವರಿಗೊಂದು ಅಗ್ನಿದಿವ್ಯ’ ಎಂಬ ಸುಬ್ರಾಯ ಮತ್ತಿಹಳ್ಳಿ ಅವರ ಅಭಿಪ್ರಾಯ ಸರಿಯಾಗಿಯೇ ಇದೆ.


‘ಸಮಾಜದ ಕೆಡುಕಗಳಿಗೆ ಮರುಗುವ ಕರಗುವ ವೀರಲಿಂಗನಗೌಡರ ಕವಿತೆಗಳು ಮುಳ್ಳುಬೇಲಿಯಲ್ಲರಳಿರುವ ಪ್ರೀತಿಯ ಹೂಗಳು’ ಎಂಬುದಾಗಿ ಮಾರುತಿ ದಾಸಣ್ಣವರ ಅವರ ಬೆನ್ನುಡಿಯ ಮಾತುಗಳು ಅರ್ಥಪೂರ್ಣವಾಗಿವೆ. ಕಾಗದ ಪ್ರಕಾಶನ ಸಂಸ್ಥೆಯಿಂದ ಪ್ರಕಟವಾಗಿರುವ ಸಂಕಲನದ ಕವಿತೆಗಳಿಗೆ ರೇಖಾಚಿತ್ರಗಳು ಆಕರ್ಷಕವಾಗಿವೆ. ಆಶಯದ ದೃಷ್ಟಿಯಿಂದ ಮಹತ್ವದ ಕವಿತೆಗಳನ್ನು ಕಟ್ಟಿಕೊಟ್ಟಿರುವ ಕವಿ ವೀರಲಿಂಗನವಗೌಡರು ಸಮಾಜ, ಧರ್ಮ, ಪ್ರೀತಿ, ಪ್ರೇಮ, ಕಾಮ, ವಿರಹ ಇತ್ಯಾದಿ ಬದುಕಿನ ಸಮಸ್ತ ಸಂವೇದನೆಗಳು; ಅನ್ಯಾಯ, ಅಧರ್ಮ, ಪ್ರಭುತ್ವ, ಅಧಿಕಾರ ಇತ್ಯಾದಿ ಸಂಗತಿಗಳನ್ನು ಕಡಿಮೆ ಪದ, ಸಂಕ್ಷಿಪ್ತ ಸಾಲುಗಳಲ್ಲಿ ವ್ಯಂಗ್ಯವಾಗಿ, ಧ್ವನಿಪೂರ್ಣವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ವಿಶಿಷ್ಟ ಬಗೆಯ ಲಕ್ಷಣವುಳ್ಳ ಕವಿತೆಗಳನ್ನು ಕೊಡಬಲ್ಲ ವೀರಲಿಂಗನಗೌಡರಿಂದ ನಿಸ್ಸಂದೇಹವಾಗಿ ಕನ್ನಡ ಕಾವ್ಯಲೋಕ ಇನ್ನೂ ಹೆಚ್ಚಿನದನ್ನು ನಿರೀಕ್ಷಿಸಬಹುದಾಗಿದೆ.


ಡಾ. ಸಂಗಮೇಶ ಎಸ್. ಗಣಿ

ಕನ್ನಡ ಉಪನ್ಯಾಸಕರು
4 views0 comments

Comentarios


bottom of page