top of page

ಅಮ್ಮನ ನೆನೆಯುತ

ನನ್ನಮ್ಮ ಇರುವಾಗ ಎದೆ ತುಂಬ ಒಲವಿತ್ತು

ನೂರಾನೆ ಬಲವಿತ್ತು ಬಳಗಕ್ಕೆ ।ಸಾಹಸದಿ।

ಗೆದ್ದೇ ಗೆಲುವೆನೆಂಬ ಛಲವಿತ್ತು ॥


ಮತ್ತೆ ಅವಳಿರುವಾಗ ಮೊಗ ತುಂಬ ನಗುವಿತ್ತು

ಹಸಿದ ಹೊಟ್ಟೆಗೆ ಮೂರ್ಹೊತ್ತು ।ಕವಳ।

ಮನೆಯಲ್ಲಿ ತುಂಬಿ ಇರುತಿತ್ತು ॥


ಬಡಿದಾಡಿ ಗುದ್ದಾಡಿ ಕಷ್ಟದ ಕೆಲಸವ

ಕರ್ಪೂರದಂತೆ ಕರಗಿಸುತ ।ನನ್ನಮ್ಮ ।

ಮನದಲ್ಲಿ ಸಂತಸ ಕಾಣುವಳು॥


ಅನ್ನಪೂರ್ಣೆ ನನ್ನಮ್ಮ ಸೌಭಾಗ್ಯದ ಹೆಣ್ಣು

ಕೈತುಂಬ ಕೆಲಸ ಮನೆಯಲ್ಲಿ। ತಲೆತುಂಬ।

ನೆಂಟರಿಗುಣಬಡಿಸುವಳು॥


ಏನಿದ್ದರೇನಂತೆ ಯಾರಿದ್ದರೇನಂತೆ

ಪ್ರೀತಿ ಆದರ ತೋರಿದರೂ।ತಾಯಿ ಮಮತೆ।

ಮತ್ತೆ ದೊರೆವುದೆ ತವರಲ್ಲಿ?॥


ರಚನೆ-ಸಾವಿತ್ರಿ ಮಾಸ್ಕೇರಿ

7 views0 comments

Comments


bottom of page