top of page

ಅಬ್ಳಿ ಹೆಗಡೆಯವರ ಕಿರುಕಾದಂಬರಿ "ಗುಂದ"

ಫೇಸಬುಕ್ ನಲ್ಲಿರುವ ಸಾಹಿತ್ಯಾಸಕ್ತರಿಗೆಲ್ಲ ಪರಿಚಿತರಾಗಿರುವ ಅಬ್ಳಿ ( ಸುಬ್ರಹ್ಮಣ್ಯ) ಹೆಗಡೆಯವರ ಈ "ಗುಂದ" ಒಂದು ಅಪ್ಪಟ ಪ್ರಾದೇಶಿಕ ಕಾದಂಬರಿ. ದೀರ್ಘಕಾಲದ ಪ್ರಸವವೇದನೆಯ ನಂತರ ಹೊರಬಂದ ಅವರ ಚೊಚ್ಚಿಲು ಕೂಸು. ಇದನ್ನು " ನೀಳ್ಗತೆ" ಎಂದು ಕರೆದರೂ ತಪ್ಪಿಲ್ಲ. ಏಕೆಂದರೆ ಕಾದಂಬರಿಗಿರಬೇಕಾದ ವ್ಯಾಪ್ತಿ , ವಿಸ್ತಾರ ಇದಕ್ಕಿಲ್ಲ. ೧೨೫ ಪುಟಗಳಲ್ಲಿ ಬರುವ ಪಾತ್ರಗಳು ನಾಲ್ಕಾರು ಮಾತ್ರ. ಇಲ್ಲಿಯ ಕತೆಯೂ ಏಕಮುಖವಾದದ್ದು. ಟೊಂಗೆ ಟಿಸಿಲು ಬೇರು ಬಿಳಲುಗಳನ್ನು ಬಿಟ್ಟು ಹರಡಿಕೊಂಡ ಮರವಲ್ಲ ಇದು.

ಅಬ್ಳಿಯವರೇ ಹೇಳಿಕೊಂಡ ಹಾಗೆ ಇದು ಮೂರು ದಶಕಗಳಿಗೂ ಹಿಂದೆ ಬರೆದಿಟ್ಟಿದ್ದು. ಇದರ ಹಾಗೇ ಇನ್ನೊಂದು ಕಿರು ಕಾದಂಬರಿ " ಅಮ್ನೋರು" ಸಹ. ಏನೇನೋ ಕಾರಣಗಳಿಂದಾಗಿ ಅವು ಅಜ್ಞಾತವಾಸದಲ್ಲಿ ಉಳಿದುಕೊಂಡುಬಂದವು. ಅವರ ಬರವಣಿಗೆ ಆಗಲೇ ಮುಂದುವರಿದಿದ್ದರೆ ಬಹುಶಃ ನಮಗೆ ಅವರಿಂದ ಅನೇಕ ಉತ್ತಮ ಕೃತಿಗಳು ದೊರಕುತ್ತಿದ್ದವು. ಕೆಲವೊಮ್ಮೆ ಮನುಷ್ಯ ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನನ್ನು ತಾನೇ ಕತ್ತಲಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಈ ಕಾದಂಬರಿಯಲ್ಲಿ " ಗುಂದ" ವೇ ಒಂದು ಪ್ರಧಾನ ಪಾತ್ರ. ಇಲ್ಲಿ ಬರುವ ನಾಯಕನೆನ್ನಬಹುದಾದ " ಕನ್ಯ" ನಿಗೆ ತನ್ನ ಮನೆ ಗುಂದದೊಡನೆ ಒಂದು ಬಗೆಯ ಭಾವನಾತ್ಮಕ ಸಂಬಂಧ. ನಮ್ಮ ಕಡೆ ಒಂದು ಬಯ್ಗಳ ಮಾತು ಪ್ರಚಲಿತದಲ್ಲಿದೆ-" ನಿನ್ನ ಮನೆ ಗುಂದ ತೊಳೆದುಹೋಗ...‌" . ಇದರಲ್ಲಿ ಕನ್ಯನ ಮನೆ ಗುಂದ ತೊಳೆದುಹೋಗುವದು ಅವನು ನಂಬಿದ ಭಟ್ಟರಿಂದ. ಮೊದಲು ಒಬ್ಬ ಹೆಗಡೆ ಮನೆಯ ಆಳಾಗಿದ್ದ ಕನ್ಯ ನಂತರ ಒಬ್ಬ ಭಟ್ಟರ ಮನೆಯ ಆಳಾಗಿ ತನ್ನ ಅತ್ಯಂತ ಪ್ರೀತಿಯ ಹೆಂಡತಿ ಗಂಗೆಯ ಜೊತೆ ಕೆಲಸ ಮಾಡುತ್ತಿರುತ್ತಾನೆ. ಕಷ್ಟಪಟ್ಟು ತನ್ನ ತಾಯಿಯ ಮಾತಿನಂತೆ ಒಂದು ಸ್ವಂತದ ಸಣ್ಣ ಮನೆ ಕಟ್ಟಿಕೊಳ್ಳುತ್ತಾನೆ. ಅವನದೇ ಸ್ವಂತ ತೋಟಗದ್ದೆ ಇದ್ದರೂ ಅದನ್ನು ಸ್ವಸಂತೋಷದಿಂದ ಯಜಮಾನರ ಕೈಗೆ ಕೊಟ್ಟು ಆಳಾಗಿ ದುಡಿಯುವ ಕನ್ಯನ ಒಳ್ಳೆಯತನದ ದುರುಪಯೋಗವಾಗುವದೇ ಈ ಕೃತಿಯ ಮೂಲ ತಿರುಳು.

ಕತೆಯಲ್ಲಿ ಗಮನ ಸೆಳೆಯುವದು ಅಬ್ಳಿಯವರು ಬಳಸಿದ ಬಿಡುಬೀಸಾದ ಗ್ರಾಮ್ಯ ಭಾಷೆ. ಈ ಭಾಷೆಯ ಪರಿಚಯವಿಲ್ಲದವರಿಗೆ ಓದಲು / ಅರ್ಥ ಮಾಡಿಕೊಳ್ಳಲು ಕಷ್ಟವಾಗುವಷ್ಟು ಗಡುಚಾಗಿ ಭಾಷೆಯನ್ನು ಬಳಸಿದ್ದಾರೆಂದರೂ ತಪ್ಪಿಲ್ಲ. ಆದರೆ ಅದು ಈ ಕೃತಿಗೆ ಒಂದು ದೇಸೀಯ ವಾತಾವರಣದ ಕವಚವನ್ನು ನಿರ್ಮಿಸಿಕೊಟ್ಟಿದೆ. ಕತೆಗೆ ಸೊಗಸನ್ನೂ ತಂದುಕೊಟ್ಟಿದೆ. ಇದು ಹಿಂದೆ ಇದ್ದ ( ಬಹುಶಃ ಈಗಲೂ ಕೆಲವೆಡೆ ಇರಬಹುದಾದ) ಸಾಮಾಜಿಕ/ ಜಾತೀಯ ಅಸಮಾನತೆ, ಇದ್ದವರಿಂದ ಇಲ್ಲದವರ ಶೋಷಣೆ, ಮೇಲು ಕೀಳು ಮನೋಭಾವಗಳ ಹಿನ್ನೆಲೆಯಲ್ಲಿ ರೂಪುಗೊಂಡ ಒಂದು ಕತೆ. ಕತೆಯಲ್ಲಿ ನೈಜತೆ ಇದೆ. ನಿರೂಪಣೆಯಲ್ಲೂ ಅಬ್ಳಿಯವರು ಎಲ್ಲೂ ಎಡವಿಲ್ಲ.

ಹಾಗೆ ನೋಡಿದರೆ ಇಲ್ಲಿ ಬರುವ ಕಾನಳ್ಳಿಯ ಪರಿಸರದ ಬದುಕಿನ ಜೀವನಶೈಲಿ, ಇಂತಹ ಪರಿಸರದಲ್ಲಿ ಬದುಕಿ ಬಾಳುವವರ ರೀತಿ ನೀತಿ, ರೂಢಿರಿವಾಜು, ಸಂಸ್ಕೃತಿ, ಭಾಷೆ ಇವೇ ಮುಖ್ಯವೆನಿಸುತ್ತವೆ‌. ಬಾಗುವವರಿದ್ದರೆ ಬಗ್ಗಿಸುವವರಿಗೇನೂ ಬರಗಾಲವಿಲ್ಲ. ಅಶಿಕ್ಷಿತ , ಮುಗ್ಧ, ಮತ್ತು ಬಡವನೊಬ್ಬ ಚೆಂದದ ಹುಡುಗಿಯನ್ನು ಕಟ್ಟಿಕೊಂಡು ಮರ್ಯಾದೆಯಿಂದ ಹಾಗೂ ಸುರಕ್ಷಿತವಾಗಿ ಬದುಕುವ ವಾತಾವರಣ ಎಲ್ಲಿದೆ? ಇದು ಈ ಕೃತಿಯ ತಿರುಳು.

ಉತ್ತರ ಕನ್ನಡದ ಖ್ಯಾತ ಕವಿ-ಕತೆಗಾರ ರಾಜು ಹೆಗಡೆಯವರ ಬೆನ್ನುಡಿಯಿದೆ. ಮುಖಪುಟವನ್ನು ಅರ್ಥವತ್ತಾಗಿ ಬಿಡಿಸಿದ ಅವರ ಅಳಿಯ ವಾದಿರಾಜ ಅವರನ್ನೂ , ಕೆಲವೊಂದು ಅನಾನುಕೂಲಗಳ ನಡುವೆಯೂ ಡಿಟಿಪಿ ಕೆಲಸವನ್ನು ವ್ಯವಸ್ಥಿತಗೊಳಿಸಿದ ಪ್ರಹ್ಲಾದ ಜೋರಾಪೂರ ಅವರನ್ನೂ, ಸುಂದರವಾಗಿ ಮುದ್ರಿಸಿದ ಕಲ್ಲಚ್ಚು ಪ್ರಕಾಶನವನ್ನೂ ಅಭಿನಂದಿಸಬೇಕಾಗಿದೆ. ಮುನ್ನುಡಿ ಬರೆಯುವ ಕೆಲಸವನ್ನು ಅಬ್ಳಿಯವರು ಪ್ರೀತಿಯಿಂದ ನನಗೇ ವಹಿಸಿಕೊಟ್ಟಿದ್ದರಿಂದ ಕೃತಿ ಹೊರಬರುವ ಮೊದಲೇ ಓದುವವ ನಾನಾದೆ. ಗುಂದ ಪುಟಗಳ ದೃಷ್ಟಿಯಿಂದ ಸಣ್ಣದಾದರೂ ಓದಿದ ನಂತರ ಸ್ವಲ್ಪಕಾಲವಾದರೂ ನಮ್ಮನ್ನು ಅದರ ಅಂತ್ಯ ಕಾಡುತ್ತದಲ್ಲ, ಅದೇ ಒಂದು ಕೃತಿಯ ಯಶಸ್ಸಿನ ಲಕ್ಷಣ. ಅಬ್ಳಿಯವರ " ಅಮ್ನೋರು" ಕಾದಂಬರಿಯೂ ಬೇಗ ಹೊರಬರಲಿ. ಅವರೊಬ್ಬ ಒಳ್ಳೆಯ ಕವಿಯೂ ಹೌದು. ಕವನ ಸಂಕಲನವನ್ನೂ ಹೊರತರಲಿ. ಎಲ್ಲಕ್ಕಿಂತ ಹೆಚ್ಚಾಗಿ ಇನ್ನು ಮುಂದಾದರೂ ಅವರ ಬರವಣಿಗೆ ನಿಲ್ಲದೇ ಮುಂದುವರಿಯಲಿ, ಇನ್ನಷ್ಟು ಕರತಿಗಳು ನಮಗೆ ಅವರಿಂದ ಸಿಗಲಿ ಎನ್ನುವುದು ನನ್ನ ಅಪೇಕ್ಷೆ.


‌‌‌‌ - ಎಲ್. ಎಸ್. ಶಾಸ್ತ್ರಿ

20 views0 comments

Comments


bottom of page