[ಚಿತ್ರಲೋಚನೆ - 2 ಅಂಕಣಕ್ಕೆ ಸ್ಪಂದನವಾಗಿ ಬಂದ ಕವನ ತಮ್ಮ ಓದಿಗೆ - ಸಂಪಾದಕ]

ಹೆಗಲಿಗೇರಿಸಿ ಹೊರಟ ಅಪ್ಪ
ಪಯಣವಿದು ಗುರಿಯಿಲ್ಲದೆಡೆಗೆ
ಉಸಿರ ಕೊಟ್ಟವ ನಿಲ್ಲಿಸುವವರೆಗೆ,,,
ಅರಿವೆ ಕಾಣದ ಕಪ್ಪನೆಯ ತೊಗಲು
ಕನಸಗೂಡಿ ಏರಿದೆ ಅಪ್ಪನ ಹೆಗಲು
ಬದುಕ ಅರಸಿ ಹೊರಟ
ಅಪ್ಪನ ಹೆಗಲು ಹೊತ್ತಿದೆ
ನಾಳಿನ ಕನಸುಗಳನ್ನು
ಚಿಂದಿಯಾದ ಅಪ್ಪನ ಬನಿಯನ್ನು
ಬಟಾಬಯಲು ಮಾಡಿದೆ
ತೇಪೆಗೂ ಬಾರದ ಹರಕು ಬದುಕನ್ನು
ಹೆಗಲೇರಿ ಕುಳಿತ ಮಗುವಿಗೇನು ಗೊತ್ತು?
ಅಪ್ಪ ಹೊತ್ತಿದ್ದು ತನ್ನನ್ನಲ್ಲ....
ಅಮ್ಮನಿಗೆ ಕೊಟ್ಟ ವಚನವನ್ನು
ಈಡೇರದ ಭರವಸೆಗಳನ್ನು
ನಾಳಿನ ಬದುಕಿನ ಆಸರೆಯನ್ನು......
ಕಂದನ ಕುತೂಹಲವ ಹೊತ್ತ
ಅಪ್ಪನ ಹೆಗಲು ಸಾಗಿದೆ
ಗುರಿಕಾಣದ ಬದುಕಿನತ್ತ.....
