ಮನೆಯೊಳಗಿದ್ದೂ ನಾವೀಗ ಅಪರಿಚಿತರು
ಇವಳು ಆ ಕೋಣೆಯಲ್ಲಿ
ನಾನು ಈ ಕೋಣೆಯಲ್ಲಿ
ಮಗ ಉಪ್ಪರಿಗೆಯ ಮೇಲೆ
ಅವನದೇ ಲೋಕದಲ್ಲಿ
ಮಗಳು ಮಲಗುವ ಕೋಣೆಯಲ್ಲಿ
ಇವಳು ವಾಟ್ಸ್ ಆಪ್ ನಲ್ಲಿ
ಮಗ ಫೇಸ್ ಬುಕ್ ನಲ್ಲಿ
ಮಗಳು ಲ್ಯಾಪ್ ಟಾಪ್ ಮುಂದೆ
ನೋಡುತ್ತಿರಬೇಕು ಬಹುಶಃ
ಯಾವುದೋ ಸಿನಿಮಾ
ಲೋಕವೇ ಹತ್ತಿರಾಗಿದೆ
ಮನೆಯಿಡೀ ಸಂತೆಯಾಗಿದೆ
ಯಾವುದು ಬೇಕು ಯಾವುದು ಬೇಡ
ನಿರ್ಧಾರವೇ ಕಷ್ಟವಾಗಿದೆ
ಸಮುದ್ರದ ತಡಿಯಲೊಂದು ಮನೆಯ ಮಾಡಿದ್ದೇವೆ
ನೊರೆತೆರೆಗಳು ಅಪ್ಪಳಿಸುತ್ತಿವೆ
ಮನೆಯನ್ನು ಕಳೆದುಕೊಂಡಿದ್ದೇವೆ
ಜೊತೆಗೆ ನಮ್ಮನ್ನು ಕೂಡ
ನಾವೀಗ ಮಾತಾಡುವುದಿಲ್ಲ
ಯಾವಾಗಲೋ ಒಮ್ಮೆ ನಿರ್ಭಾವುಕವಾಗಿ
ನೋಡುತ್ತೇವೆ ಪರಸ್ಪರ
ಇದ್ದೇವೆ ನಾವು ನಮ್ಮದೇ ಲೋಕದಲ್ಲಿ
ಡಿಜಿಟಲ್ ಯುಗದಲ್ಲಿ
ಬಂದಿಯಾಗಿ ಒಂಟಿಯಾಗಿ.
-ಡಾ. ವಸಂತಕುಮಾರ ಪೆರ್ಲ
Kommentare