top of page

ಅಧೋಲೋಕದ ನಂಬಿಕೆಯ ನಾವೆಗೆ ಇಂಬು ನೀಡಿದ ಅಂಬಿಗ : ಬಿ.ಆರ್. ಅಂಬೇಡ್ಕರ್

ಸಮಾಜದೊಳಿನ್ನೂ ಸಜೀವ ಶ್ರೇಣಿ

ಆಳುವವರಿಲ್ಲಿ ಧಣಿ

ಅವರಡಿಯೊಳಗೆ ನರಳುತಿವೆ

ದಮನಿತರ ದನಿ

ಅವರಿಲ್ಲದಿದ್ದೀತೆ ಧರಣಿ...?

ನಾವಿಕನಿಲ್ಲದ ದೋಣಿ

ಅವನಿಲ್ಲದೂರಿಗೆ ಯಾರು ಚುಕ್ಕಾಣಿ...?


ವಿಮೋಚನೆ ಎಂಬುದರ ಅರ್ಥ ಬಿಡುಗಡೆ. ನಿರ್ವಾಣ ಎಂಬುದು ಲೌಕಿಕ ಪ್ರಪಂಚದಿಂದ ಜೀವಾತ್ಮ ಪಡೆಯುವ ವಿಮೋಚನೆ. ಭವದ ಎಲ್ಲ ಕೇಡುಗಳಿಗೆ ತುಡಿದು, ಮಿಡಿದು, ಮಡಿದವರಿಗೆ ಬಿಡುಗಡೆಯುಂಟೇ? ಸಕಲ ಜೀವಾತ್ಮರಿಗೂ ಸಕಲೆಂಟು ಲೇಸ ಬಯಸಿ ಭವಬಂಧನದಿಂದ ಬಿಡಗಡೆ ಪಡೆದರೂ ಭಾವಕೋಶ ಬೆಳಗುವ ಭಾಸ್ಕರರಿದ್ದಾರೆ; ನಿರ್ಲಕ್ಷಿತ ಲೋಕವೊಂದರ ನಕ್ಷತ್ರವಾಗಿ ಮಿನುಗುವ, ಮನುಕುಲವನ್ನು ಕಾಡುವ ಕತ್ತಲನ್ನು ನೀಗಿಕೊಳ್ಳಲು ದೀವಿಗೆಯಾದವರು ಮಹಾ ಮಾನವತಾವಾದಿ, ಸಂವಿಧಾನಶಿಲ್ಪಿ ಭೀಮಭಾಸ್ಕರ ಡಾ. ಬಿ.ಆರ್. ಅಂಬೇಡ್ಕರ್ ಅವರು.


ಬಾಬಾಸಾಹೇಬ ಅಂಬೇಡ್ಕರ್ ಅವರು ಪರಿನಿರ್ವಾಣ ಹೊಂದಿದ ದಿನ(೧೯೫೬ ಡಿಸೆಂಬರ್ ೬)ವಿದು. ಚರಿತ್ರೆಯಲ್ಲಿ ಇದೊಂದು ಮರೆಯದ ಮಹಾದಿನ.

ಬದುಕಿದ್ದೂ ಸತ್ತವರನ್ನು ಲೆಕ್ಕಿಕ್ಕಿಟ್ಟುಕೊಳ್ಳದ ಚರಿತ್ರೆ ಸತ್ತೂ ಬದುಕಿದವರನ್ನು ಎಂದೂ ಮರೆಯುವುದಿಲ್ಲ, ಜೀವಂತವಾಗಿರಿಸುತ್ತದೆ. ಎಂದಿಗೂ ಅಜರಾಮರವಾಗಿರುವ ಅಂಬೇಡ್ಕರ್ ಅಧೋಲೋಕದ ನಂಬಿಕೆಗಳಿಗೆ ಇಂಬು ನೀಡಿದ ಅಂಬಿಗ. ಅಂಬೇಡ್ಕರ್ ಹುಟ್ಟಿದ್ದು ಏಪ್ರಿಲ್ ೧೪, ೧೮೯೧ ರಂದು. ಅವರ ಹುಟ್ಟು ಭಾರತೀಯ ಸಮಾಜದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಸ್ಥಗಿತಗೊಂಡ ಸಮಾಜಕ್ಕೆ ಚಾಲಕಶಕ್ತಿಯಾಗಿದ್ದ ಬಾಬಾ ಸಾಹೇಬರು ತಮ್ಮ ಜೀವಿತಾವಧಿಯುದ್ದಕ್ಕೂ ಸಮ ಸಮಾಜವನ್ನು ಕನಸಿದರು.


ಅಂಬೇಡ್ಕರ್ ಅವರದು ಬಹುಮುಖೀ ವ್ಯಕ್ತಿತ್ವ. ನ್ಯಾಯವಾದಿ, ಪ್ರಾಧ್ಯಾಪಕ, ಪತ್ರಕರ್ತ, ಸಮಾಜ ಸುಧಾರಕ, ಚಿಂತಕ, ತತ್ವಜ್ಞಾನಿ, ರಾಜ್ಯಶಾಸ್ತ್ರಜ್ಞರಾಗಿದ್ದ ಅವರು ಹಲವು ಕ್ಷೇತ್ರಗಳ ಬಗೆಗೆ ಆಳ ತಿಳಿವಳಿಕೆ ಹೊಂದಿದ್ದರು. ಬಾಲ್ಯದ ಕಡು ಬಡತನ, ಕೌಟುಂಬಿಕ ಪರಿಸ್ಥಿತಿ, ಜಾತೀಯತೆ, ಬ್ರಾಹ್ಮಣ್ಯದಲ್ಲಿನ ಗೊಡ್ಡುತನ, ಕರ್ಮಠತೆ ಇತ್ಯಾದಿ ಸಮಸ್ಯೆಗಳು ಅವರನ್ನು ತೀವ್ರವಾಗಿ ಬಾಧಿಸುತ್ತಿದ್ದವು. ಇಂಥ ಜ್ವಲಂತ ಸಮಸ್ಯೆಗಳಿಂದ ಮುಕ್ತವಾಗಬೇಕಿದ್ದರೆ ಶಿಕ್ಷಣವೇ ಸೂಕ್ತ, ಸಮರ್ಪಕ ಸಾಧನವೆಂಬುದು ಅವರಿಗೆ ಬಹುಬೇಗ ಅರ್ಥವಾಯಿತು. ಎಂಥ ಕಷ್ಟಗಳು ಬಂದರೂ ಎದೆಗುಂದದೇ ಅಧ್ಯಯನಶೀಲತೆ ಬೆಳೆಸಿಕೊಂಡರು. ಕಾನೂನು ಪದವಿ ಪೂರೈಸಿಕೊಂಡು ಮುಂದೆ, ಈ ದೇಶದ ಸಂವಿಧಾನ ರೂಪಿಸುವಷ್ಟು ಬೆಳೆದಿರುವುದು ಅವರ ಮೇಧಾವಿ, ಧೀಶಕ್ತಿಯ ದ್ಯೋತಕ.


ಬ್ರಾಹ್ಮಣ್ಯದ ಭಾರತ, ಬೌದ್ಧರ ಭಾರತ ಹಾಗೂ ಹಿಂದೂ ಇಂಡಿಯಾ ಎಂಬುದಾಗಿ ಮೂರು ಭಾರತಗಳಿರುವುದನ್ನು ಗುರುತಿಸಿದ ಅವರು, ಸ್ವಾತಂತ್ರ್ಯ ಸಮಾನತೆ ಬಂಧುತ್ವದಂಥ ಉದಾತ್ತ ತತ್ವಗಳ ಆಧಾರದಲ್ಲಿ ಬಹುತ್ವದ ಭಾರತವನ್ನು ಕಟ್ಟಲು ಶ್ರಮಿಸಿದರು. 'ಮೂಕನಾಯಕ', 'ಬಹಿಷ್ಕೃತ ಭಾರತ' ಹಾಗೂ 'ಪ್ರಬುದ್ಧ ಭಾರತ' ಪತ್ರಿಕೆಗಳನ್ನು ಪ್ರಾರಂಭಿಸಿದ ಅಂಬೇಡ್ಕರ್, ಅನ್ಯಾಯ, ಅನಾಚಾರ, ಅಧರ್ಮ, ಶೋಷಣೆಯನ್ನು ನೇರವಾಗಿ ಖಂಡಿಸಿದರು. ಮನುವಾದದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿದರು. ಪತ್ರಿಕಾಧರ್ಮ ಮೆರೆದರು. ಮ್ಯಾಥ್ಯೂ ಅರ್ನಾಲ್ಡ್ ಹೇಳಿರುವ " ಹಿಂದೂಗಳು ಸತ್ತು ಹೋದ ಜಗತ್ತು ಮತ್ತು ಜನ್ಮತಳೆಯಲು ಶಕ್ತಿಯಿಲ್ಲದ ಜಗತ್ತು" ಎಂಬ ಮಾತು ಮಾರ್ಮಿಕವಾದುದು. ವಿಧಿ- ನಿಷೇಧ, ಸಂಪ್ರದಾಯ, ಕಟ್ಟುಪಾಡುಗಳೇ 'ಧರ್ಮ' ಎಂಬುದನ್ನು ತಾನೂ ನಂಬಿದ್ದಲ್ಲದೇ, ಇತರೆ ಶೂದ್ರರನ್ನು ಅದೇ ಹೆಸರಿನಲ್ಲಿ ಶೋಷಿಸುತ್ತಿದ್ದ ಹಿಂದೂ ಧರ್ಮವು ನಾಗರಿಕ ಸಮಾಜದ ಚಲನಶೀಲತೆಗೆ, ಜೀವಂತಿಕೆಗೆ ತೊಡಕಾಗಿದ್ದುದನ್ನು ಎತ್ತಿ ತೋರಿದರು.


ಭಾರತೀಯ ಸಮಾಜವನ್ನು ಕಾಡುತ್ತಿದ್ದ ಜಾತೀಯತೆ, ಅಸ್ಪೃಷ್ಯತೆ, ದೀನದಲಿತರ ಶೋಷಣೆ, ವರ್ಗತಾರಮ್ಯ, ಲಿಂಗ ಅಸಮಾನತೆ ಇತ್ಯಾದಿ ಸಮಸ್ಯೆಗಳಿಗೆ ವೈಜ್ಞಾನಿಕ ಮಾರ್ಗೋಪಾಯಗಳನ್ನು ಹುಡುಕಿದರು. ಮನುಪ್ರಣೀತ ಮಾದರಿಯ ಭಾರತ ಎಂದಿಗೂ ಮುಂದಕ್ಕೆ ಚಲಿಸದೆ, ಸ್ಥಗಿತಗೊಳ್ಳುತ್ತದೆ ಎನ್ನುವ ಅರಿವು ಅವರಿಗೆ ಸ್ಪಷ್ಟವಿತ್ತು. ಹಿಂದೂ ಧರ್ಮದ ಕರ್ಮಠತೆಯ ಕೂಪದಿಂದ ಶೋಷಿತರನ್ನು ಪಾರು ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಅವರಿಗೆ ಶೋಷಿತರು ಸ್ವಾಭಿಮಾನ, ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿತ್ತು.


ಶಿಕ್ಷಣ, ಸಮಾನತೆ, ಸ್ವಾಭಿಮಾನ, ಸ್ವಾವಲಂಬನೆ, ಸಹಬಾಳ್ವೆ ಇಂಥ ಉದಾತ್ತ ಮೌಲ್ಯಗಳ ಹಿನ್ನೆಲೆಯಲ್ಲಿ ಸರ್ವಸಮುದಾಯಗಳ ಬದುಕೂ ಸಹ್ಯಗೊಳ್ಳಬೇಕೆಂಬ ಮಹತ್ವಾಕಾಂಕ್ಷೆಯಿಂದ ಬಾಬಾ ಸಾಹೇಬರು ರಚಿಸಿದ ಸಂವಿಧಾನದ ಆಶಯಗಳು ಇಂದು ತಲೆಕೆಳಗಾಗುತ್ತಿವೆ. ಪ್ರತಿಯೊಬ್ಬ ಭಾರತೀಯನಿಗೂ ಮೂಲಭೂತ ಹಕ್ಕು ಮತ್ತು‌ ಕರ್ತವ್ಯಗಳನ್ನು ನೀಡಿದ ಸಂವಿಧಾನವನ್ನೇ ಬದಲಿಸುವ, ಏಕ ಧರ್ಮ, ಏಕಭಾಷೆ, ಏಕಸಂಸ್ಕೃತಿ ಹೇರಿಕೆಯ ಹುನ್ನಾರಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಅಂಬೇಡ್ಕರ್ ರ ಆಶಯಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು? ವರ್ತಮಾನದ ಸಮಾಜವನ್ನು ಜಾತಿ, ವರ್ಗ, ವರ್ಣ ಸಂಕರದಿಂದ ಬಿಡಿಸಿಕೊಳ್ಳುವ ಬಗೆ ಯಾವುದು? ಅವರ ಕನಸುಗಳನ್ನು ಸಾಕಾರಗೊಳಿಸಿಕೊಳ್ಳಲು ಇರುವ ಉಪಾಯಗಳಾವುವು ? ಈ ಬಗ್ಗೆ ಗಂಭೀರವಾಗಿ ಚಿಂತಿಸಬೇಕಿದೆ. ಪ್ರಜಾಸತ್ತಾತ್ಮಕ ಮೌಲ್ಯಗಳು ಮೂಲೆಗುಂಪಾಗಿ ಸಂವಿಧಾನದ ಅಪಮೌಲ್ಯೀಕರಣ ನಡೆಯುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಪ್ರಕೃತ ಭಾರತದ ರಾಜಕೀಯ, ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿನ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗುತ್ತದೆ. ಅಂಬೇಡ್ಕರ್ ಅವರ "ವರ್ತಮಾನ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಎಂದು ಪರಿಗಣಿಸಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣೀಕೃತ ಸಮಾಜದ ಅಸ್ಪೃಶ್ಯತೆ, ತಾರತಮ್ಯಗಳೇ ಮೌಲ್ಯಗಳಾಗಿವೆ..." ಎನ್ನುವ ದೇವನೂರ ಮಹಾದೇವರ ಮಾತು ವಿವೇಚನಾರ್ಹ. ಜಾತಿ, ಕೋಮು, ವರ್ಗ, ವರ್ಣ ಇತ್ಯಾದಿ ರೋಗಗಳಿಂದ ನರಳುತ್ತಿರುವ ಭಾರತದ ಸದ್ಯದ ಸ್ಥಿತಿಗೆ ಅಂಬೇಡ್ಕರ್ ಅವರು ಹೇಳಿರುವ "ಎಲ್ಲಿ ಸ್ವರಾಜ್ಯ ಇದೆಯೊ, ಎಲ್ಲಿ ವಾಕ್ ಸ್ವಾತಂತ್ರ್ಯ, ಮತೀಯ ಸ್ವಾತಂತ್ರ್ಯ ಹಾಗೂ ಸುಖ ಜೀವನ ಸ್ವಾತಂತ್ರ್ಯವಿದೆಯೊ; ಎಲ್ಲಿ ಅಂತ್ಯೋದಯ ಸಹ ಸಾಧ್ಯವಿದೆಯೊ, ಎಲ್ಲಿ ಬಡತನ ಭಯಗಳಿಲ್ಲದೆ ನೀರಾಳವಾಗಿ ಬದುಕನ್ನು ನಡೆಸಬಹುದೊ, ಎಲ್ಲಿ ಹಿಂಸೆ ಅನ್ಯಾಯ ಶೋಷಣೆ ಗೊಂದಲ ಆಶಿಸ್ತುಗಳಿಗೆಡೆ ಇಲ್ಲವೊ, ಎಲ್ಲಿ ತುಚ್ಛೀಕರಣ, ಅಸಹ್ಯ ದ್ವೇಷಗಳಿಗೆ ಅವಕಾಶವಿಲ್ಲವೊ; ಎಲ್ಲಿ ಜಾತಿ ವರ್ಗ ಮತೀಯ ಕಲಹಗಳಿಲ್ಲವೋ ಅದೇ ಉತ್ತಮ ಸಮಾಜವೆಂದು" ಎಂಬ ಮಾತುಗಳು ಮದ್ದಾಗಿ ಒದಗುತ್ತವೆ.


"ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಸಾಯಲಾರೆ" ಎಂದು ಹೇಳಿದ ಅವರ ಮಾತಿನಲ್ಲಿ ಮನುಷ್ಯ ಮನುಷ್ಯನಲ್ಲಿ ಭೇದ ಭಾವ, ತರ-ತಮಗಳನ್ನು ಕಂಡ ಹಿಂದೂ ಧರ್ಮದ ಅಮಾನವೀಯತೆಯ ಬಗ್ಗೆ ಇನ್ನಿಲ್ಲದ ಅಸಹನೆಯಿತ್ತು. ಜೊತೆಗೆ ಮಾನವೀಯತೆಯನ್ನು ಜೀವಿಸುವ ಧರ್ಮವೊಂದನ್ನು ಆತುಕೊಳ್ಳುವ ಅಭಿಪ್ಸೆಯೂ ಇತ್ತು. ವಿಮರ್ಶಕ ಡಾ. ಡಿ.ಆರ್. ನಾಗರಾಜ್ ಹೇಳುವಂತೆ; "ಹಿಂದೂ ಧರ್ಮದಲ್ಲಿ ಕಾಣಬರುವ, ಚರಿತ್ರೆಯ ಎದುರು ತಾಟಸ್ಥ್ಯದ ಕಲ್ಪನೆ, ಅಥವಾ ಒಳಿತು ಎಂದರೆ ದುಷ್ಟ ಚಿಂತನೆ, ಕ್ರಿಯೆಗಳಿಂದ ದೂರವಿರುವುದು ಎಂಬ ಕಲ್ಪನೆ....ಅಂಬೇಡ್ಕರ್ ಹೆಚ್ಚು ಸೂಕ್ಷ್ಮವಾದ ರೀತಿಯಲ್ಲಿ ಚಿಂತಿಸಿ ಕ್ರಿಯಾಶೀಲವಾದ ಒಳಿತಿನ ಅಗತ್ಯತೆಯನ್ನು, ಸಕ್ರಿಯ ಪ್ರೇಮದ ಅಗತ್ಯತೆಯನ್ನು ಪ್ರದಿಪಾದಿಸುತ್ತಾರೆ...." ಎಂಬುದನ್ನು ನಟರಾಜ್ ಹುಳಿಯಾರು ಉಲ್ಲೇಖಿಸುತ್ತಾರೆ.


ಜಾತಿಯನ್ನು ಜೀವಂತವಾಗಿಟ್ಟ ಯಾವ ಸಮಾಜಕ್ಕೂ ದೇಶಕ್ಕೂ ಏಳಿಗೆ ಎಂಬುದಿಲ್ಲ.‌ ತಳಸಮುದಾಯಗಳ ಬೆಳವಣಿಗೆಗೆ ಹೋರಾಟ ಅಗತ್ಯ ಎಂದು ಮನಗಂಡಿದ್ದ ಅಂಬೇಡ್ಕರ್ "ನನ್ನ‌ ಜನರಿಗಾಗಿ ಜೀವನ‌ ಮುಡಿಪಾಗಿಟ್ಟು ಹೋರಾಡಿದ್ದೇನೆ.‌ ನನ್ನ‌ ಜನರ. ಈ ವಿಮೋಚನಾ ರಥವನ್ನು ಇಲ್ಲಿಯವರೆಗೆ ಎಳೆದು ತಂದಿದ್ದೇನೆ. ಈ ರಥವನ್ನು ನನ್ನ ನಂತರ ಮುನ್ನಡೆಸುವುದಾದರೆ ಒಳ್ಳೆಯದು. ಇಲ್ಲದಿದ್ದರೆ ಇಲ್ಲೇ ಬಿಟ್ಟುಬಿಡಲಿ. ಆದರೆ ಯಾರೂ ಈ ರಥವನ್ನು ಹಿಂದಕ್ಕೆ ತಳ್ಳುವ ಕೆಲಸ ಮಾಡಬಾರದು" ಎಂದು ಹೇಳಿರುವುದು ಅರ್ಥಪೂರ್ಣವಾದು.‌


ಜಾತಿ, ವರ್ಗ ತರತಮಗಳು, ಅಸ್ಪೃಶ್ಯತೆ, ಶೂದ್ರರ ಶೋಷಣೆ, ಇನ್ನೂ ಜೀವಂತವಾಗಿರುವ ನಮ್ಮ‌ ಭಾರತದಲ್ಲಿ ಬಂಡವಾಳಶಾಹಿಯ ಅಟ್ಟಹಾಸ ಹೆಚ್ಚಾಗುತ್ತಿದೆ. ಈ ಪ್ರಕ್ರಿಯೆ ತಳಸಮುದಾಯಗಳ ಬದುಕಿನ ತುತ್ತನ್ನು ಕಸಿಯುತ್ತಿದೆ.‌ ಅಲ್ಲದೇ ದೇಶ ಆರ್ಥಿಕವಾಗಿ ಬೆಳೆಯುವ ಭ್ರಮೆಯಲ್ಲಿದೆ !. ನೈತಿಕವಾಗಿ ನೆಲಕಚ್ಚುತ್ತಿದೆ ಎಂಬ ಸತ್ಯ ತಿಳಿಯುತ್ತಿಲ್ಲ. ಅಂತ್ಯಜನೂ ಸಮಾಜದ ಮಹುಮುಖ್ಯ ಭಾಗ ಎಂದು ಭಾವಿಸದ ಭಾರತ ಬೆಳೆಯಲಾರದು. ಸಮಾಜದ ಪ್ರತಿಯೊಂದು ಜಾತಿ ಜನಾಂಗವೂ‌ ನಿರಾಳವಾಗಿ ನೆಮ್ಮದಿಯಿಂದ ಬದುಕುವ ವಾತಾವರಣ ನಿರ್ಮಾಣವಾದರೆ ಮಾತ್ರ ಅಂಬೇಡ್ಕರ್ ಅವರ ಪರಿನಿರ್ವಾಣ ಹೊಂದಿದ ಈ ಪುಣ್ಯದಿನ ಸಾರ್ಥಕವಾಗುತ್ತದೆ.


ಡಾ. ಸಂಗಮೇಶ ಎಸ್. ಗಣಿ

ಮುಖ್ಯಸ್ಥರು, ಕನ್ನಡ ವಿಭಾಗ, ಟಿಎಂಎಇಎಸ್ ಅಕಾಡೆಮಿ ಆಫ್ ಸೈನ್ಸ್ ಅಂಡ್ ಕಾಮರ್ಸ್ ಕಾಲೇಜ್, ಹೊಸಪೇಟೆ.

5 views0 comments

Comentários


bottom of page