ಅಜ್ಜ ನೆಟ್ಟಾಲ ಇದು
- ಆಲೋಚನೆ
- Feb 24, 2022
- 1 min read
ಅಜ್ಜನೆಟ್ಟಾಲ ಇದು ಮುನ್ಸಿಪಾಲಿಟಿ ಮಂದಿ
ಕೆಡಹ ಬಂದಿದ್ದಾರೆ ರಸ್ತೆಯಗಲಕ್ಕೆ
ಇನ್ನೇನು ಒಂದೆರಡು ಗಳಿಗೆಯಲಿ ಈ ದೈತ್ಯ
ಮಗುಚಿ ಬಿದ್ದಾನಯ್ಯೊ ! ಯುಗಮುಗಿದ ಹಾಗೆ !
ನಿಂತು ನೋಡಿದೆ ಕೊನೆಯ ಬಾರಿ ನೋಡುವ ಹಾಗೆ
ಇನ್ನಿಲ್ಲ ಈ ಪಟ್ಟಣದಿ ಆದಿಪರ್ವ
ಕಣ್ಣುಮುಚ್ಚಿದರು ಸೊಂಡಿಲೆತ್ತಿ ಬರುವಂಥ
ಇದರ ಠೀವಿಯು ಇನ್ನು ಕನಸಿನಲಿ ಮಾತ್ರ
ನಾಲ್ಕಾರು ತಲೆಮಾರುಗಳ ನೋಡಿದೀ ಮರದ
ಕೆಳಗೆ ಪಟ್ಟಾಂಗ ಹೊಡೆದವರೆಷ್ಟೋ ಮಂದಿ
ಗಾಂಧಿ ನೆಹರು ಪ್ರಭಾತಫೇರಿ ಇಲ್ಲಿನ ಯುವಕ
ರನ್ನು ಬಡಿದೆಬ್ಬಿಸಿದ ಕತೆ ಇತಿಹಾಸವಾಗಿ
ಕಾಗೆ ಕೋಗಿಲೆ ನವಿಲು ಗೊರವಂಕ ಇತ್ಯಾದಿ
ಹಕ್ಕಿಗಳ ಚಿಲಿಪಿಲಿಯಿಲ್ಲಿ ಸಂಜೆ ಮುಂಜಾನೆ
ಹಸಿರುಮುಕ್ಕಳಿಸುವೆಲೆಗಳ ನಡುವೆ ಬಿಸಿಲಕೋ
ಲಿನ ಆಟ ! ಇಹಪರವು ಇಲ್ಲಿದ್ದಂತೆ ಕಣ್ಗೆ
ಅನೇಕಾನೇಕ ಚರ್ಚೆ ಸಂವಾದಗಳ
ಬಹುಮತ ಭಿನ್ನಮತ ಬಹುತ್ವದ
ಬೇರು ಇಳಿದಿತ್ತಿಲ್ಲಿ ಅಹಹ ! ಆಕಾಶದಲಿ
ರಾಷ್ಟ್ರಧ್ವಜವು ಹಾರಾಡುವುದು ನಿತ್ಯಸತ್ಯ
ಕೊರಳಿಲ್ಲದೆಂತು ಕೆಡಹುವುದನು ತಡೆಯುವುದಾನು?
ಬಹುಮತಕೆ ಸಾಯಬೇಕೇ ಮರದ ಜೀವ ?
ಮಾತಿರದ ಮರವು ಮಾತಾಡೀತೇ ಭವಿಷ್ಯದಲಿ
ಪ್ರಾಣವಾಯುವಿಗಿಲ್ಲವಾಗಿ ಅವಕಾಶ !
ಅದೊ ಅದೋ ಬಂತೆನ್ನುವಂತೆ ಬಂತಾಕ್ಷಣವು
ಗರಗಸದ ಗರಗರಾ ಸದ್ದು ಎದೆ ಸೀಳಿ
ಆನೆ ಬಂತೊಂದಾನೆ ಎನ್ನುವುದು ನೆನಪಾಗಿ
ಬಿತ್ತು ಮರ, ಅದೋ ಭುವಿ ನಡುಗುವಂತಾಗಿ
ಡಾ.ನಾ.ಮೊಗಸಾಲೆ
コメント