ಮರೆಯಲಾಗದ ಮಹಾನುಭಾವರು
ಹುಲಗಬಾಳಿಯವರ ಲಲಿತ ಸಾಹಿತ್ಯ ********** ಕನ್ನಡದ ಹಾಸ್ಯ, ಲಲಿತಪ್ರಬಂಧ ಪ್ರಕಾರಗಲಲ್ಲಿ ಪ್ರಮುಕವೆನಿಸುವ ಒಂದು ಹೆಸರು ಬನಹಟ್ಟಿಯ ಮಲ್ಲಿಕಾರ್ಜುನ ಹುಲಗಬಾಳಿಯವರದು. ಅವರು ಈ ಪ್ರಕಾರಕ್ಕೆ ನೀಡಿದಕೊಡುಗೆ ದೊಡ್ಡದು. ಅವರು ಪತ್ರಿಕಾ ವರದಿಗಾರರೂ ಆಗಿರುವದರಿಂದ ಅವರ ದೃಷ್ಟಿ ವಿಶಾಲವಾದದ್ದು ಮತ್ತು ಸೂಕ್ಷ್ಮವಾದದ್ದು. ಪತ್ರಿಕಾ ವೃತ್ತಿ ಲೇಖಕರಾದವರಲ್ಲಿ ಅಂತರ್ದೃಷ್ಟಿ ಬೆಳೆಸುತ್ತದೆ. ಇತರರಿಗಿಂತ ಅವರು ನೋಡುವ ಬಗೆ ಭಿನ್ನವೆನಿಸುತ್ತದೆ. ಈಗಾಗಲೇ ೨೫ ಕ್ಕೂ ಹೆಚ್ಚು ಕೃತಿ ರಚಿಸಿರುವ ಹುಲಗಬಾಳಿಯವರ ಟೊಂಯ್ ಟೊಂಯ್ ಮಾತು, ಉದರೋನಿಷತ್, ಚಷ್ಮಾ ಚರಿಷ್ಮಾ, ಜನರಲ್ ಬೋಗಿ, ಖುಷಿ, ಮೆಳ್ಳೆಗಣ್ಣು, ಬೆಲ್ಲದ ಪುತ್ಥಳಿ, ಸಮತೆಯ ಮನೆ ಮೊದಲಾದ ಕೃತಿಗಳು ಕನ್ನಡ ಓದುಗರಿಗೆ ಕಚಗುಳಿ ನೀಡಿ ಖುಷಿಪಡಿಸಿವೆ. ಲಲಿತ ಪ್ರಬಂಧ ಪ್ರಕಾರದ ಶತಮಾನದ ಬೆಳವಣಿಗೆಯಲ್ಲಿ ಎ. ಎನ್. ಮೂರ್ತಿರಾವ್, ವಿ. ಸೀತಾರಾಮಯ್ಯ ಮೊದಲಾದ ಹಲವು ಹಿರಿಯ ಬರೆಹಗಾರರ ಪಾಲು ಬಹಳ ದೊಡ್ಡದು. ಲಲಿತ ಪ್ರಬಂಧಕ್ಕೆ ಅದರದೇ ಆದ ಒಂದು ಸುಲಲಿತವಾದ ಶೈಲಿಯಿದೆ. ಗಂಭೀರವಾದ ವಿಚಾರವನ್ನೇ ಲಘು ಹಾಸ್ಯದೊಡನೆ ಬೆರೆಸಿ , ಸಂಗಡ ಚಿಂತನೆಗೂ ಅವಕಾಶ ಮಾಡಿಕೊಡುವ ಈ ಸಾಹಿತ್ಯ ಪ್ರಕಾರ ತುಂಬ ಜನಪ್ರಿಯವಾದದ್ದೂ ಹೌದು. ಉತ್ತಮ ಲಲಿತಪ್ರಬಂಧಗಳು ಓದುಗನ ಸುತ್ತ ಒಂದು ಆಹ್ಲಾದಕರ ವಾತಾವರಣವನ್ನು ನಿರ್ಮಾಣ ಮಾಡುತ್ತವೆ. ಮಲ್ಲಿಕಾರ್ಜುನ ಹುಲಗಬಾಳಿಯವರಲ್ಲಿಯೂ ಅಂತಹ ಮನ ಸೆಳೆಯುವ ಹಾಸ್ಯಭರಿತ ಶೈಲಿಯಿದೆ. ಯಾವುದೇ ವಸ್ತು ವಿಷಯವಾದರೂ ಅದನ್ನು ವಿಡಂಬಿಸುವ, ವಿಶ್ಲೇಷಿಸುವ, ವಿವರಿಸುವ ರೀತಿ ಓದುಗನನ್ನು ತಟ್ಟನೇ ಸೆಳೆದುಕೊಂಡುಬಿಡುತ್ತದೆ. ೨೩೬ ಪುಟಗಳ ಈ ಸಂಗ್ರಹದಲ್ಲಿ ೩೭ ಬಿಡಿ ಪ್ರಬಂಧಗಳಿವೆ. ಈ ತಲೆಬರೆಹವೇ ಸಾಕು, ಓದುಗನನ್ನು ಆಕರ್ಷಿಸಲಿಕ್ಕೆ. ಅವರೇ ಹೇಳುವ ಹಾಗೆ ತೊಟ್ಟಿಲಿನಿಂದ ಚಟ್ಟದತನಕವೂ ಜೀವಮದ ಎಲ್ಲಾ ವ್ಯವಹಾರವು ಸಾಕ್ಷಾತ್ಕಾರ ಆಗೋದು ಈ " ನಮಸ್ಕಾರ" ಎಂಬ " ಕ್ರಿಯಾ" ಪದದಿಂದ. ಹಿಂದಂತೂ ಪತ್ರ ಬರೆಯುವಾಗ. ಈ "ಇಂತು ನಮಸ್ಕಾರ"ಗಳಿಲ್ಲದೇ ನಡೆಯುತ್ತಲೇ ಇರಲಿಲ್ಲ. ಆದರೆ ನಮಸ್ಕಾರದ ಚಮತ್ಕಾರ ಅಲ್ಲಿಗೇ ನಿಲ್ಲುವದಿಲ್ಲ. ಅದರದು ವಿಶ್ವವ್ಯಾಪಿ ಸ್ವರೂಪ. ಹುಲಗಬಾಳಿಯವರು ಅದನ್ನು ಎಲ್ಲಾ ಮಗ್ಗುಲುಗಳಲ್ಲೂ ಜಾಲಾಡಿಬಿಟ್ಟಿದ್ದಾರೆ. ನಮಸ್ಕಾರದ ಶತಾವತಾರಗಳನ್ನು ನೋಡಿ ನಾವು ಸಹ ಇಷ್ಟೇ ಸಾಕ್ರೀ ನಮಸ್ಕಾರ , ಇಲ್ಲಿಗೇ ಮುಗಿಸ್ರಿ ಅನ್ನೋಹಾಂಗಾಗ್ತದ. ಓದು, ಜೀವನಾನುಭವ ಮತ್ತು ಸಮಾಜವನ್ನು ನೋಡುವ ದೃಷ್ಟಿ ಇವೆಲ್ಲ ಸೇರಿದಾಗಲೇ ಸಮೃದ್ಧ ಸಾಹಿತ್ಯ ರಚನೆ ಆಗುತ್ತದೆ. ಹುಲಗಬಾಳಿಯವರಲ್ಲಿ ಅವೆಲ್ಲ ಶಕ್ತಿಗಳು ಮೇಳೈಸಿರುವದರಿಂದಲೇ ಅವರಿಂದ ಉತ್ತಮ ಸಾಹಿತ್ಯ ರಚನೆ ಆಗುತ್ತಿದೆ. ಉಂಬೋದಂದ್ರೆ ಅದು ತಿಂಬೋದಲ್ಲ, ಮೀಸೆ ಅಂಬೋದು ದಂಡ, ಇಂಗ್ಲಿಷ್ ಮಾಯಾಂಗನೆ, ತಿಂಡೋಪಂತರು,ಜೇಬುದಾರರು, ಹಳವಂಡದ ಹೊಂಡ, ಕುರ್ಚಿ ಸಿಕ್ಕರೆ ಕುಳ್ಳಿರೋ, ಹೆಂಡವೂ ಹೆಂಡತಿಯೂ, ಬದ್ನಾಮಿ ಬಾದಶಾ ಮೊದಲಾದ ಇಲ್ಲಿನ ಲಲಿತ ಪ್ರಬಂಧಗಳ ತಿಳಿಹಾಸ್ಯದ ಲಾಸ್ಯ ನಮ್ಮನ್ನು ಬೇಡ ಎಂದರೂ ಸಲೀಸಾಗಿ ಓದಿಸಿಕೊಂಡು ಹೋಗಿಬಿಡುತ್ತದೆ. ಅಪ್ಪಟ ಉತ್ತರ ಕರ್ನಾಟಕದ ಗಂಡು ಭಾಷೆಯ ಬಳಕೆ, ಸಂಗಡ ಆಡುಮಾತಿನ ಸೊಗಡು, ಗಾದೆ ಮಾತುಗಳ ಗರಂ ಮಸಾಲೆ, ಪ್ರಬಂಧಗಳ ರುಚಿಯನ್ನು ಹೆಚ್ಚಿಸುತ್ತವೆ. ಪುಸ್ತಕ ಓದಿದ ಮೇಲೆ ನಾವೇ ಅವರಿಗೆ " ಇಂತು ನಮಸ್ಕಾರಗಳು" ಎಂದು ಸಲಾಂ ಹೊಡೆಯದಿರಲಾರೆವು. ಅದರ ಸ್ವಾರಸ್ಯವೇ ಬೇರೆ. ಅದಕ್ಕೇ ಒಮ್ಮೆ ಓದಿ ನೋಡಿ. ನೀವೂ ಹುಲಗಬ್ಯಾಳಿಯವರ ಫ್ಯಾನ್ ಆಗಿಬಿಡ್ತೀರಿ . ಅವರ ಲೇಖನಿ ಇನ್ನೂ ಬಹುಕಾಲ ಇದೇ ರೀತಿ ತನ್ನ ಕರಾಮತ್ತು ತೋರಿಸುತ್ತಿರಲಿ ಎಂದು ಆಶಿಸುತ್ತೇನೆ - ಎಲ್. ಎಸ್. ಶಾಸ್ತ್ರಿ