'ನಾವು' ಇಲ್ಲದ ಊರಿನಲ್ಲಿ 'ನಾನು'
'ನಾವು' ಊರಿನಲ್ಲಿದ್ದಾಗ- ದಣಪೆ ದಾಟಿದರೆ ಕಾಲು ದಾರಿಗಳ ಗೆರೆ-ಗೀರು, ತೇರು ಮನೆಯಂಗಳಗಳು ಬೆಸೆದು ಒಕ್ಕೂಟದ ಸ್ಥಾನ, ಮಹಾ ಮೈದಾನ ತೆಂಗಿನ ಗರಿಗಳ ಚಪ್ಪರ ಡಬ್ಬಿ ತಗಡಿನ ಅಬ್ಬರ ಯಕ್ಷಗಾನದ ಹೆಜ್ಜೆ, ಅಜ್ಜನ ಭಾಗವತಿಗೆ ಮೊಮ್ಮಕ್ಕಳ ಒಡ್ಡೋಲಗ. ಹೊಸ ಮಳೆ, ಮಣ್ಣಿನ ವಾಸನೆ ಅಂಗಳವೆ ಕೈದೋಟ ಒಬ್ಬರಿಗೊಬ್ಬರು ತಬ್ಬಿ,ಬಾಗಿ ಬಳುಕಿ ಸವತೆ,ಹೀರೆ,ಸೋರೆ- ಅವ್ವ ಹೊಸೆದ ಕಸೂತಿಯ ಹಸಿರು ಸೀರೆ ರಂಗು ರಂಗಿನ ಹೂದೋಟ ಪಾತರಗಿತ್ತಿಗಳ ಹಾರಾಟ ಬಣ್ಣದ ಕನಸು ಸೊಗಸು,ನಲಿವು. 'ನಾವು' ಊರಿನಲ್ಲಿದ್ದಾಗ ನೆರೆಮನೆಯೆಂಬುದೆ ಇರಲಿಲ್ಲ ಎಲ್ಲವೂ ನಮ್ಮದೆ ಮನೆ ಒಬ್ಬರ ಹಸಿವು ಎಲ್ಲರ ನೋವು ಹೊಸಮನೆ, ಮದುವೆ ಚಪ್ಪರ ಪಾಯಸ ಚಪ್ಪರಿಸಿದ ರುಚಿಯೇನು! ಈಗ 'ನಾವು' ಎಲ್ಲರೂ ಊರ ಹೊರಗೆ 'ನಾನು' ಮಾತ್ರ ಮನೆಯೊಳಗೆ ದಣಪೆ ಇರುವಲ್ಲಿ ಗೇಟು ಕಾಯುತ್ತಿದೆ ಕಳೆದು ಹೋಗಿವೆ ಕಿರುದಾರಿಗಳು ಅಂಗಳಗಳು ಸರುಳಿಗಟ್ಟಿದ ಹಾಸಿಗೆ ಮನೆಗಳನ್ನಾವರಿಸಿವೆ ಆವರಣದ ಗೋಡೆಗಳು ಚಿಕ್ಕ ವಠಾರ ಹಸಿರು ಚಪ್ಪರದುಪ್ಪರಿಗೆ ಇರುವಲ್ಲಿ ಕ್ರೋಟಾನ್ ಗಿಡಗಳ ಎಲೆ ಚೂಪು ನೋವು ಕಾಂಕ್ರೀಟಂಗಳದ ಬಿಸಿಯೇರಿ ನಡೆದರೆ ಮನೆಯೊಳಗೆ ಗಾಢ ಮೌನ ಮುರಿಯುವ ಕಿರು ತೆರೆಯ ಮಾತು. ಕಣಜ ಇರುವಲ್ಲಿ- ಲೋಹದ ತಿಜೋರಿ ದಿನದ ಜೀವನಕೆ ಹಣದ ವ್ಯವಕಲನ ಸಂಕಲನ ಅಡುಗೆ ಮನೆಯೊಳಗೆ ಎಸರು ಕೊತಕೊತನೆ ಕಾಯುತ್ತಿದೆ ಸಂತೆ ದಿನಕ್ಕಾಗಿ ಯಾರ ಕೂಗಿಗೂ ಪ್ರತಿ ಕೂಗಿಲ್ಲ ಅಗತ್ಯವಿದ್ದರೆ ಮಾಡಬೇಕು ಫೋನು ಮಮತೆ,ಪ್ರೀತಿ,ಕಾಳಜಿ, ಮತ್ತೆಲ್ಲವನ್ನು ಪಾವತಿಸಿ ಪಡೆಯಬೇಕು ನಾನು. ---ಕೃಷ್ಣ ನಾಯಕ ಹಿಚ್ಕಡ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಿಚ್ಕಡ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕುಟುಂಬದಲ್ಲಿ ಜನನ. ಹಿಚ್ಕಡ ಮತ್ತು ಅಂಕೋಲೆಯಲ್ಲಿ ಶಿಕ್ಷಣ. ಈ ನಾಡಿನ ಖ್ಯಾತ ಕವಿ, ಹೋರಾಟಗಾರ ರಾಜಕಾರಣಿ,ಸಾಮಾಜಿಕ ಚಿಂತಕ, ದಿನಕರ ದೇಸಾಯಿ ಯವರು ಸಂಸ್ಥಾಪಿಸಿದ ಗೋಖಲೆ ಶತಾಬ್ದಿ ಕಾಲೇಜಿನಲ್ಲಿ ಕಲೆ ವಿಭಾದಲ್ಲಿ ಪದವಿಶಿಕ್ಷಣ. ವಿದ್ಯರ್ಥಿಯಾಗಿರುವಾಗಲೆ ಕಲೆ ಮತ್ತು ಸಾಹಿತ್ಯದಲ್ಲಿ ಅಭಿರುಚಿ. 'ಕೋಗಿಲೆ ಅಳುತ್ತಿದೆ' 'ಭೂಗೋಳ ಪ್ರಶ್ನೆ' ಮತ್ತು 'ಹದ' ಕವನ ಸಂಗ್ರಹಗಳು ಪ್ರಕಟಗೊಂಡಿವೆ. ನಾಟಕ, ಬೀದಿನಾಟಕಗಳಲ್ಲಿ ಅಭಿನಯ. ಗ್ರಾಮೀಣ ಮಟ್ಟದಿಂದ ಅಂತರ್ರಾಷ್ಟ್ರೀಯ ಮಟ್ಡದಲ್ಲಿ ಜರುಗಿದ ಕವಿ ಗೋಷ್ಟಿ ಗಳಲ್ಲಿ ಕವಿತೆಗಳ ವಾಚನ. ಪ್ರಬಂಧಗಳನ್ನು ಮಂಡನೆ ಮತ್ತು ಕೃಷಿ, ಮನತನದ ಕಸುಬಾಗಿರುವದರಿಂದ ಕೃಷಿಯಲ್ಲಿ ವಿಷೇಷ ಆಸಕ್ತಿ. ಸಣ್ಣ ಉಳಿತಾಯ ಇಲಾಖೆಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸರಕಾರಿ ಸೇವೆಯಲ್ಲಿ ತೊಡಗಿಕೊಂಡು, ಅಂಕೋಲಾ ಮತ್ತು ಉಡುಪಿಯಲ್ಲಿ ಸೇವೆ , ಪ್ರತಿನಿಯೋಜನೆಯ ಮೇಲೆ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾ ಪಂಚಾಯತ್ ನಲ್ಲಿ ಅಧೀಕ್ಷ ನಾಗಿ ಸೇವೆಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು. ಸದ್ಯ ಹಿಚ್ಕಡದಲ್ಲಿ ವಾಸ್ತವ್ಯ.