ನದಿ ಜಾನಪದ
ಡಾ. ಪೆರ್ಲರ ವಾರಾಂಕಣ – 11. *ನದೀಜಾನಪದ* ನದಿಯ ಬಗೆಗಿನ ನಂಬಿಕೆ - ನಡವಳಿಕೆಗಳು, ಅದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಪರಿ, ಅದರ ಹುಟ್ಟು ಬೆಳವಣಿಗೆ ಮತ್ತು ಆ ಮೂಲಕ ವಿಕಾಸಗೊಂಡಿರುವ ಸಂಸ್ಕೃತಿ – ನಾಗರಿಕತೆ ಈ ಎಲ್ಲವುಗಳ ಒಟ್ಟು ಸಾರವು ನದೀಜಾನಪದವಾಗಿ ಒಂದು ದೊಡ್ಡ ಅಧ್ಯಯನ ಶಾಖೆಯಾಗಿ ಬೆಳೆದು ನಿಂತಿದೆ. ನದಿ ನಮ್ಮ ಬದುಕಿನ ಮೂಲಾಧಾರ. ನೀರಿಲ್ಲದೆ ಜೀವನರಥ ಮುಂದೆ ಸಾಗದು. ಕೃಷಿ ಮಾಡಬೇಕಾದರೆ ನೀರು ಬೇಕು. ಪಶುಪಕ್ಷಿಗಳಿಗೆ ಸಸ್ಯವರ್ಗಕ್ಕೆ ನೀರು ಬೇಕೇ ಬೇಕು. ನಮ್ಮ ವೇದಮಂತ್ರಗಳು ರಚನೆಯಾದದ್ದು, ಪ್ರಾಚೀನ ನೆಲಮೂಲ ಸಂಸ್ಕೃತಿ ನಾಗರಿಕತೆಗಳು ವಿಕಾಸವಾದದ್ದು ನದೀದಂಡೆಗಳಲ್ಲಿ. ದೇವಸ್ಥಾನಗಳು ನಿರ್ಮಾಣಗೊಂಡುದು ನದೀದಂಡೆಗಳಲ್ಲಿ. ಪೇಟೆಪಟ್ಟಣಗಳು ವ್ಯಾಪಾರ ವಹಿವಾಟುಗಳು ಬೆಳೆದದ್ದು ನದೀದಂಡೆಗಳಲ್ಲಿ. ನದಿಯ ಹರಿವು ಸರಿಯಾಗಿದ್ದರೆ ಮಾತ್ರ ನೆಲದ ಸಮತೋಲನ ಸಾಧ್ಯ. ಅಂತರ್ಜಲ ವೃದ್ಧಿಯಾಗಲು ನೀರಿನ ಸತತ ಹರಿವು ಇರಲೇಬೇಕು. ಉತ್ತರ ಭಾರತದಲ್ಲಿ ಹರಿಯುವ ನದಿಗಳು ಹಿಮಾಲಯದಿಂದ ಹುಟ್ಟಿರುವುದರಿಂದ ಬೇಸಿಗೆಯಲ್ಲೂ ಅವು ಮೈದುಂಬಿ ಹರಿಯುತ್ತವೆ. ದಕ್ಷಿಣ ಭಾರತದ ನದಿಗಳು ಬೇಸಿಗೆಯಲ್ಲಿ ಸೊರಗಿ ಒಣಗಿ ಹೋಗುತ್ತವೆ. ನದಿಗಳು ಸಂತತವಾಗಿ ಹರಿವಿನ ಗತಿಯನ್ನು ಹೊಂದಿರಲು ಮಳೆ ಮೂಲಾಧಾರವಾಗಿದೆ. ನದಿಗಳ ವರ್ತನೆ ಬಲು ವಿಚಿತ್ರ. ಅದರ ನೆಗಸು ಧುಮ್ಮಿಕ್ಕುವಿಕೆ, ಮಂದ ಹರಿವು, ನೆರೆ - ಪ್ರವಾಹ, ರುದ್ರಭೀಕರ ಅವತಾರ, ಹಿನ್ನೀರು ಮತ್ತು ಸಮುದ್ರಮುಖದಲ್ಲಿನ ನಿಲುಗಡೆ ಇತ್ಯಾದಿಗಳು ಭಿನ್ನ ಭಿನ್ನವಾಗಿರುತ್ತದೆ. ಕೆಲವು ನದಿಗಳು ತಮ್ಮ ಹರಿವಿನ ಪಾತ್ರವನ್ನೇ ಬದಲಿಸುವುದುಂಟು. ಶಾಖೋಪಶಾಖೆಗಳಾಗಿ ಹೊಸ ಹೊಸ ಅವತಾರ ತಾಳುವುದುಂಟು. ಕಾವೇರಿ ನದಿ ಮುಡುಕುತೊರೆ ಎಂಬಲ್ಲಿ ತನ್ನ ದಂಡೆಯಲ್ಲಿದ್ದ ತಲಕಾಡು ಎಂಬ ಪುರವನ್ನೇ ಮುಚ್ಚಿ ಅರ್ಧವೃತ್ತಾಕಾರವಾಗಿ ಮುಡುಕು ತೊರೆಯಾಗಿ ಹರಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಉತ್ತರದ ಗೋದಾವರಿ, ಮಹಾನದಿ, ಬ್ರಹ್ಮಪುತ್ರ ಮೊದಲಾದವು ಪ್ರತೀವರ್ಷ ತಮ್ಮ ಗತಿ ಬದಲಿಸುವುದು, ಶಾಖೋಪಶಾಖೆಗಳಾಗಿ ಹರಿಯುವುದು ಪ್ರಕೃತಿಯ ವಿಚಿತ್ರ ಸಂಗತಿಗಳಲ್ಲಿ ಒಂದು. ಕೆಲವೊಮ್ಮೆ ನದಿಗಳು ಕಾಣೆಯಾಗುವುದುಂಟು! ಹಿಮಾಲಯದಲ್ಲಿ ಹುಟ್ಟಿ ಪಶ್ಚಿಮ ಸಮುದ್ರವನ್ನು ಸೇರುವ ಮಹಾ ನದಿ ಸರಸ್ವತಿ ಅಂತಹ ನದಿಗಳಲ್ಲೊಂದು. ಇವತ್ತಿಗೂ ಅದು ನೆಲದಡಿಯಲ್ಲಿ ಹರಿಯುತ್ತಿದೆ. ಉಪಗ್ರಹಗಳು ತೆಗೆದ ಭೂಮಿಯ ಮೇಲ್ಮೈ ಚಿತ್ರಗಳಲ್ಲಿ ಸರಸ್ವತಿ ನದಿ ಹರಿಯುತ್ತಿರುವುದು ಕಾಣಿಸುತ್ತದೆ! ನಾವು ನದಿಗಳನ್ನು ಎಷ್ಟು ದೈವೀಕವಾಗಿ ಕಂಡಿದ್ದೇವೆ ಎಂಬುದಕ್ಕೆ ಸರ್ವ ಪಾಪನಾಶಿನಿಯಾದ ಗಂಗೆಯ ಉದಾಹರಣೆಯೊಂದೇ ಸಾಕು. ಶಿವನ ಮುಡಿಯಲ್ಲಿ ಆಕೆಗೆ ಸ್ಥಾನ ಕೊಟ್ಟಿದ್ದೇವೆ. ಆಕೆ ಧುಮ್ಮಿಕ್ಕುವುದು ಕೂಡ ಶಿವನ ಮಡಿಲಿಗೆ! ಹೀಗೆ ನದಿ ಗಂಗೆಯಾಗುವುದುಂಟು; ತುಂಗೆಯಾಗುವುದುಂಟು; ಯಮುನೋತ್ರಿ - ಗಂಗೋತ್ರಿಯಾಗಿ ಮನುಕುಲವನ್ನು ಕಾಯುವುದುಂಟು. ನಮ್ಮ ಧಾರ್ಮಿಕ ವಿಧಿವಿಧಾನಗಳಲ್ಲಿ, ಪೂಜೆಗಳಲ್ಲಿ ‘ಗಂಗೇಚ ಯಮುನೇ ಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಮ್ ಕುರು’ ಎಂಬ ಮಂತ್ರೋಚ್ಚರಣವು ಉತ್ತರ ಮತ್ತು ದಕ್ಷಿಣವನ್ನು ಬೆಸೆದು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗಿನ ಇಡೀ ಭೂಭಾಗವನ್ನು ಸಂಪೂರ್ಣ ಭಾರತವಾಗಿ ಕಂಡ ಪರಿ ಅನನ್ಯವಾದದ್ದು. ಆಧುನಿಕ ಕಾಲದಲ್ಲಿ ನದಿಗೆ ಅಣೆಕಟ್ಟು ಕಟ್ಟಿ ಕಾಲುವೆಗಳನ್ನು ನಿರ್ಮಿಸಿ ವರ್ಷದ ಎಲ್ಲ ಋತುಗಳಲ್ಲೂ ಕೃಷಿಗೂ ವಿದ್ಯುಚ್ಛಕ್ತಿಗೂ ಸಲ್ಲುವಂತೆ ಬಳಸಿಕೊಳ್ಳುತ್ತಿರುವುದು ಮನುಷ್ಯನ ವೈಜ್ಞಾನಿಕ ಮನೋಧರ್ಮಕ್ಕೆ ಸಾಕ್ಷಿ. ಒಳನಾಡು ಮೀನುಗಾರಿಕೆಗೆ ನದಿಗಳೇ ಬಲುದೊಡ್ಡ ಆಶ್ರಯಸ್ಥಾನ. ದೋಣಿವಿಹಾರಕ್ಕೆ, ಸರ್ಫಿಂಗ್ ಮುಂತಾದ ಜಲಕ್ರೀಡೆಗಳಿಗೆ ಹಿನ್ನೀರು ಪ್ರಶಸ್ತ ತಾಣ. ಜಲಪಾತಗಳಂತೂ ರುದ್ರಮನೋಹರ ತಾಣಗಳು. ಪಶ್ಚಿಮಘಟ್ಟದಲ್ಲಿ ಹುಟ್ಟಿ ಅರಬ್ಬೀ ಸಮುದ್ರ ಸೇರುವ ನದಿಗಳಿಗೆ ‘ಪಶ್ಚಿಮವಾಹಿನಿ’ ಯೋಜನೆಯ ಅನುಸಾರ ಅಲ್ಲಲ್ಲಿ ಕಿಂಡಿ ಅಣೆಕಟ್ಟುಗಳನ್ನು ಕಟ್ಟಿ ನಗರಗಳಿಗೆ ಜನಜಾನುವಾರುಗಳಿಗೆ ಪಶುಪಕ್ಷಿಗಳಿಗೆ ಕೃಷಿಗೆ ಅಂತರ್ಜಲವೃದ್ಧಿಗೆ ಅನುಕೂಲ ಮಾಡಿಕೊಟ್ಟುದು ಒಂದು ವಿನೂತನ ಪರಿಕಲ್ಪನೆ. ಇಡೀ ನದೀಪಾತ್ರವು ಒಂದು ನೀರಿನ ತೊಟ್ಟಿಯಂತೆ ಪ್ರವರ್ತಿಸುವ ಪರಿ ಅನನ್ಯ. ಸೇತುವೆ ನಿರ್ಮಾಣದ ತಾಂತ್ರಿಕತೆ ಅಭಿವೃದ್ಧಿಯಾದ ಬಳಿಕ ದೋಣಿಗಳ ಬಳಕೆ ಕಡಿಮೆಯಾಗಿ ಜನರ ಸಂಚಾರ – ಸಂಪರ್ಕ ಅಧಿಕಗೊಂಡು ನದಿಗಳು ಭಾಷೆ ಮತ್ತು ಸಂಸ್ಕೃತಿಯ ಗಡಿಗಳಾಗಿ ಪ್ರವರ್ತಿಸುವುದು ಕಡಿಮೆಯಾಯಿತು. ನದಿಗಳ ಜೋಡಣೆ ಎಂಬೊಂದು ಪರಿಕಲ್ಪನೆ ಸಾಕಾರಗೊಂಡರೆ ಇಡೀ ಭಾರತ ನೀರಿನ ಕೊರತೆಯಿಂದ ಪಾರಾಗುವುದು ನಿಶ್ಚಯ. ದೇಶದ ಎಲ್ಲ ಭಾಗಗಳಲ್ಲಿ ವರ್ಷದ ಎಲ್ಲ ಋತುಗಳಲ್ಲೂ ಯಥೇಚ್ಛವಾಗಿ ನೀರು ಲಭಿಸುವಂತಾದರೆ ನಮ್ಮ ಜೀವನಶೈಲಿ ಬದಲಾಗುವುದರಲ್ಲಿ ಅನುಮಾನವಿಲ್ಲ. ನದಿಗಳ ಕುರಿತು ಹಾಡುಗಬ್ಬಗಳು ರಚನೆಯಾಗಿವೆ. ಸಾಹಿತ್ಯ ನಿರ್ಮಾಣವಾಗಿದೆ. ನದಿ ನಮ್ಮ ಉಸಿರು; ನದಿ ನಮ್ಮ ಕಸುವು. ಜನಪದದ ಬೆನ್ನೆಲುಬಾಗಿರುವ ನದಿಗಳ ಕುರಿತು ಹೊಸ ದೃಷ್ಟಿಕೋನದ ಜಾನಪದ ಅಧ್ಯಯನ ಆಗಬೇಕಾಗಿದೆ. ಡಾ.ವಸಂತಕುಮಾರ ಪೆರ್ಲ