top of page

ದೇವರ ಗುಳೆ

ಇದೀಗ ಬಂದ ಸುದ್ದಿ ದೇವರುಗಳು ಗುಳೆ ಹೊರಟಿದ್ದಾರೆ! ಗುಂಡಿ ಗುಂಡಾರಗಳ ತಿರುತಿರುಗಿ ದಣಿದಿದ್ದಾರೆ ಮಣಭಾರ ಹಾರಗಳ ಕಿತ್ತೊಗೆದು ವಿರಮಿಸಬೇಕಂತೆ ಬಿಟ್ಟ ಕೈಲಾಸದ ಹಾದಿ ಕರೆಯುತ್ತಿದೆ ಜಡಿದ ಬೀಗ ಮುರಿದು ಬಂದು ಬಿಡು ಶಿವನೆ ಹೊನ್ನು- ಹುಂಡಿಗಳ ಕಾವಲು ಬೈರಾಗಿಗೇಕೆ? ನೋಡಿಲ್ಲಿ, ಶುಭ್ರ ಹಿಮ ವಸ್ತ್ರ ಗಂಟೆ ಗದ್ದಲವಿರದ ಸ್ಮಶಾನ ಮೌನ ನಿನಗಿಷ್ಟ ತಾನೆ? ಸ್ವಚ್ಛಂದ ವಿಹಾರಿ ಶಿವ ಹೊರಟಿದ್ದಾನೆ ಈಗ ಪದ್ಮನಾಭನದೂ ಅದೇ ಗೋಳು ಬಂಗಾರದ ಗೊಡವೆ ನನಗೇಕೆ? ನನ್ನೊಡವೆ ನನ್ನ ಲಕ್ಷ್ಮಿಯೇ ಹೊನ್ನ ಗಿಂಡಿಯಲ್ಲಿ ಬಂಧಿಸಿದ್ದೀರಿ ಕುಳಿತು, ನಿಂತು ಸಾಕಾಗಿದೆ ನೀರ ಮೇಲೆ ಹಾಯಾಗಿ ನಿದ್ರಿಸಬೇಕಿದೆ ಬ್ರಹ್ಮ ಕೇಳುತ್ತಿದ್ದಾನೆ ಸರಸ್ವತಿಯ ನನಗೆ ಕೊಟ್ಟು ಬಿಡಿ ವರುಷದ ಪೂಜೆ ಮಾಡಿ ದೋಚಿ ಸೂರೆಯಾಗಿದ್ದಾಳೆ ಅವಳು ಸೊರಗಿ ಸುಣ್ಣವಾಗಿದ್ದಾಳೆ ಉಪಚರಿಸಬೇಕಿದೆ ಅವಳ ಶಿವೆ ಹೊರಡಿಸಿದ್ದಾಳೆ ಶ್ರೀಯನ್ನು ಹಾದಿ ಬೀದಿ ಸುತ್ತಿ ಬಸವಳಿದ ಮಕ್ಕಳೊಂದಿಗೆ ಗುಳೆ ಹೊರಟಿದ್ದಾರೆ ದೇವಾನುದೇವತೆಗಳೆಲ್ಲ ಮೂಲ ನೆಲೆಗೆ ಅಧಿಕಾರ ಹಸ್ತಾಂತರ ಆಗಿದೆ ರಾಮನಿಗೆ ಈಗ ದಾಟಿ ಬಿಡುವುದು ಕ್ಷೇಮ. *** ನೂತನ

ದೇವರ ಗುಳೆ
bottom of page