ದೇವರೇ
ನೀ ಬರುವೆಯೆಂದು ಬಾಲೆಯರು ಸಡಗರಗೊಂಡು ಬೆರಳ ಲೀಲೆಯಲಿ ರಂಗೋಲಿ ಬಿಡಿಸಿ ಮುದಗೊಂಡಿದ್ದಾರೆ ಬಣ್ಣಗಳ ಬೆರಸದೆಯೆ ಒಂದೊಂದು ಬಣ್ಣಗಳ ಸಂಬಾಳಿಸಿ ನವುರಾದ ಭಾವಗಳ ಮೊಳಕೆಗಳ ಹಿಟ್ಟಿನಲಿ ಒಟ್ಟಾಗಿ ಸೇರಿಸಿ ಬಾಲೆಯರು ಬರೆದರು ಎಂಥ ಚಿತ್ರ ವಿಚಿತ್ರ ಟೊಂಗೆ ಟಿಸಿಲು ಮರ ಹಕ್ಕಿ ಹಕ್ಕಿ ಸಾಲು ತಾಯಿ ಮಗು ಸೂರ್ಯ ಚಂದ್ರಾಮ ದನ ಕರು ಪಲ್ಲಕ್ಕಿ ಹೊಳೆ ಮೀನು ಬಾಸಿಂಗ ಅಲ್ಲಿ ಇಲ್ಲಿ ಮೊಸಳೆಯ ಹಲ್ಲು ಹಸಿರಾಗಿ ಹೊಮ್ಮಿದ ಭಕ್ತಿಯ ಸೊಲ್ಲು ಎಂಥ ಭಾವ ನೋವಿರದ ಜೀವ ನವುರಾಗಿ ಬಿಡಿಸಿದ ರಂಗವಲ್ಲಿ ದೇವರೇ ನೀನು ಬಂದೆ ಸಿಂಗರದ ಪಲ್ಲಕ್ಕಿಯಲಿ ಭಕ್ತಿಯ ಮಹಾಪೂರವ ತಂದೆ ಜನರ ಪರೀಸೆ ಪೂಜೆ ಆರತಿ ಜಾಗಟೆ ಗಂಟೆ ಪಟಾಕ್ಷಿ ತೂಗುತಿಹ ಭಟ್ಟರ ಜುಟ್ಟು ಗಂಟೆ ಪ್ರಸಾದ ವಿತರಣೆ ನೂಕು ನುಗ್ಗಲು ಓಡೋಡಿ ಬಂದ ಜನ ಸಂದಣಿ ನಿನಗೆ ಖುಷಿಯೊ ಸಂಭ್ರಮವೊ ಪಲ್ಲಕ್ಕಿ ಹೊತ್ತವರು ಹೊಂತಗಾರರು ಭಾರ ಬಂದವರಂತೆ ತೂಗಾಡಿ ಜನರು ಕಾಯಿಕಡಿಗಾಗಿ ಬಡಿದಾಡಿ ಆವೇಶದಲಿ ನುಗ್ಗುತಿರೆ ಒಸರಿದ ರಕುತ ದೇವರೇ ಮಿದು ಬೆರಳ ಶಿಲ್ಪ ಚೆದುರಿ ಚಲ್ಲಾಪಿಲ್ಲಿ ರಂಗೋಲಿ ಮರೆಯಾಗಿ ಹಿಟ್ಟುಗಳು ಕಲೆತು ಹೊಟ್ಟೆ ತೊಳೆಸಿ ರಂಗೋಲಿ ಬಿಡಿಸಿದ ಕನ್ನೆಯರು ಸುಮಂಗಲಿಯರಾಗಿ ಮಿದುವಾದ ಭಾವನೊಂದಿಗೆ ಮರೆಯಾಗಿದ್ದಾರೆ ಮರೆತು ಹೋಗಿದ್ದಾರೆ. ಶ್ರೀಪಾದ ಶೆಟ್ಟಿ