ದೇರಾಜೆ ಸೀತಾರಾಮಯ್ಯನವರ ಕುರುಕ್ಷೇತ್ರಕ್ಕೊಂದು ಆಯೋಗ: ಒಂದು ಅವಲೋಕನ
ಭಾಗ -3 ವಿದುರ ವಿದುರನ ಪಾತ್ರದ ಸ್ವಗತದಲ್ಲಿ ದೇರಾಜೆಯವರ ಜೀವನ ದೃಷ್ಟಿ ಎದ್ದು ಕಾಣುತ್ತದೆ. ಜೀವನದಲ್ಲಿ ಕಣ್ಣಿಗೆ ಕಾಣದ ಶಕ್ತಿಯೊಂದು ಕರ್ತೃವಾಗಿ ನಮ್ಮಿಂದ ಮಾಡಿಸುವ ಕೆಲಸಕ್ಕೆಲ್ಲಾ ನಾವು ನಿಮಿತ್ತ ಮಾತ್ರವೇನೋ ಎಂದು ಅನಿಸುತ್ತದೆ. “ಕುರುಕ್ಷೇತ್ರದ ಸಂಗ್ರಾಮದಲ್ಲಿ ನಾನೇನೂ ಯುದ್ಧ ಮಾಡಿದವನಲ್ಲ. ಅಲ್ಲಿ ಯುದ್ಧ ಮಾಡಿದ ಕೌರವ ಪಾಂಡವರ ಕಲಹಗಳನ್ನೂ, ಆ ಸಂಬಂಧವಾದ ಪರಿಸ್ಥಿತಿಗಳನ್ನೂ ತಕ್ಕಷ್ಟು ಅರಿತುಕೊಂಡವ ನಾನು. ಕಾಲಪ್ರಭಾವವು ಮಾನವ ಜೀವನದ ಮೇಲೆ ಎಂತೆಂತಹ ಪರಿಣಾಮವನ್ನು ಬೀರುತ್ತದೆ, ಕಾಲಚೋದಿತವಾದ ಮನುಷ್ಯನು ಹೇಗೆ ಪರಿಸ್ಥಿತಿಯ ಕೈಗೊಂಬೆಯಾಗಿ ಅಸ್ವತಂತ್ರನಾಗುತ್ತಾನೆ ಎಂಬುದನ್ನು ಒಂದಿಷ್ಟು ವಿಚಾರ ಮಾಡಿದಾಗ ಹುಟ್ಟು, ಬೆಳವಣಿಗೆ, ಶಾಸ್ತ್ರಜ್ಞಾನ, ಲೋಕಾನುಭವ, ಒಂದೂ ನೆರವಿಗೆ ಬರುವುದಿಲ್ಲವೆಂದೇ ಅನಿಸುತ್ತದೆ. ‘ಕಣ್ಣಿಗೆ ಕಾಣದ ಯಾವುದೋ ಒಂದು ಶಕ್ತಿ ವಿಶೇಷವು ನಮ್ಮನ್ನೆಲ್ಲ ಹಿಡಿದಾಡಿಸಿ ಕುಣಿಸುತ್ತದೆ.’ ಎಂಬುದೇ ಸತ್ಯವಾಗಿರಬೇಕು. ಅಲ್ಲದಿದ್ದರೆ ಹೀಗೆಲ್ಲ ಯಾಕೆ ಆಗುತ್ತಿತ್ತು?” (ಪು.೧೧೮). ಇದನ್ನು ಓದುವಾಗ ನನಗೆ ಭಾಗವತ ನೆಬ್ಬೂರರು ಭಾವಪೂರ್ಣವಾಗಿ ಹಾಡಿದ್ದು ನೆನಪಿಗೆ ಬಂತು: “ನೀನೆ ಕುಣಿಸುವೆ ಜೀವರನು / ಶಂಕರನಾರಾಯಣ ನೀನೆ ಕುಣಿಸುವೆ ಜೀವರನು / ನೀನೆ ಕುಣಿಸಿ ದಣಿಸಿ ತಣಿಸಿ... ನೀನೆ ಬೆಳೆಸಿ, ಅಳಿಸಿ, ಉಳಿಸುವೆ...” (ನನ್ನ ಇಷ್ಟದ ಈ ಪದ್ಯವನ್ನು ನೆಬ್ಬೂರರ ಕಂಠ ಸಿರಿಯಲ್ಲೇ ಕೇಳುವ ಇಚ್ಛೆ ನಿಮಗೂ ಇದ್ದರೆ ಈ ಕೊಂಡಿಯನ್ನು ಒತ್ತಿ: https://www.youtube.com/watch?v=Xmn94GK1yNk&app=desktop) ನಾನು ಹಿಂದೆ ಹೇಳಿದ್ದಂತೆ ‘ವರ್ಣ ಸಂಕರ ಮತ್ತು ಜಾತಿಯ ಉಗಮ’ದ ಬಗ್ಗೆ ವಿಸ್ತೃತ ಚರ್ಚೆ ಇಲ್ಲಿ ಬರುತ್ತದೆ. ಈ ಕುರಿತಾದ ತಮ್ಮ ತರ್ಕವನ್ನು ದೇರಾಜೆಯವರು ವಿದುರನ ಬಾಯಿಯಿಂದ ಹೇಳಿಸಿದ್ದು ಅತ್ಯಂತ ಸಮಯೋಚಿತ ಹಾಗೂ ಸಮಂಜಸವೆಂದೇ ನನ್ನ ಭಾವನೆ. ಯಾಕೆಂದರೆ ಧೃತರಾಷ್ಟ್ರ, ಪಾಂಡುವಿನಂತೆ ವೇದವ್ಯಾಸರ ಕ್ಷೇತ್ರಜ ಸಂತಾನವೇ ಆಗಿದ್ದರೂ ವಿದುರನು ತನ್ನ ತಾಯಿಯ ಜಾತಿಯಿಂದಾಗಿ ಅವಕಾಶವಂಚಿತನಾಗುತ್ತಾನೆ. ಹಾಗಾಗಿ ಇದನ್ನು ಅವನ ಬಾಯಿಯಿಂದಲೇ ಹೇಳಿಸುವುದು ಸೂಕ್ತ ಎಂದು ದೇರಾಜೆಯವರು ಭಾವಿಸಿದ್ದರು ಎಂದು ಧಾರಾಳವಾಗಿ ಹೇಳಬಹುದು. ಗಮನವಿಟ್ಟು ಓದಿ: “ನಾನು ದಾಸೀಪುತ್ರ, ಮಹಾತ್ಮರಾದ ವೇದವ್ಯಾಸರ ಮಗ. ಆದರೂ ಶೂದ್ರನೆಂದೇ ಪರಿಗಣಿಸಲ್ಪಟ್ಟವನು. ಅಂಬಿಕೆ ಮತ್ತು ಅಂಬಾಲಿಕೆಯರಲ್ಲಿ ಹುಟ್ಟಿದ ಧೃತರಾಷ್ಟ್ರ ಮತ್ತು ಪಾಂಡು ಇಬ್ಬರೂ ಕ್ಷತ್ರಿಯರಂತೆ. ಅವರೂ ವೇದವ್ಯಾಸರ ಮಕ್ಕಳೇ. ಸತ್ಯವತಿಯು ಬ್ರಾಹ್ಮಣಿಯೂ ಅಲ್ಲ, ಕ್ಷತ್ರಿಯಾಣಿಯೂ ಅಲ್ಲ, ಬೆಸ್ತರವಳು. ಅವಳಲ್ಲಿ ಪರಾಶರರಿಂದ ಹುಟ್ಟಿದ ಮಗ ವೇದವ್ಯಾಸರು ಬ್ರಾಹ್ಮಣರಂತೆ. ಶಂತನುವಿಂದ ಹುಟ್ಟಿದ ಮಕ್ಕಳು ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಇಬ್ಬರೂ ಕ್ಷತ್ರಿಯರಂತೆ. ಹಾಗಾದರೆ ಜಾತಿಯು ತಾಯಿಯಿಂದಲೇ, ಅಲ್ಲ ತಂದೆಯಿಂದಲೆ? (ನಮ್ಮ ದೇಶದ ಈಗಿನ ಕಾನೂನಿನ ಪ್ರಕಾರ ಜಾತಿ ತಂದೆಯಿಂದ ಬರುತ್ತದೆ.) ಧೃತರಾಷ್ಟ್ರ, ಪಾಂಡು ಮತ್ತು ನನಗೆ ತಾಯಿಯ ಜಾತಿ. ಇದೆಂಥಾ ಜಾತಿ ನಿರ್ಣಯ? ವಿಚಾರಿಸುವುದಕ್ಕೆ ತೊಡಗಿದರೆ ಜಾತಿಗಾಗಿ ಹುಯ್ಯಲೆಬ್ಬಿಸುತ್ತಾನೆ ಎನ್ನಬಹುದು. ಇದು ರಾಜ್ಯಾಧಿಕಾರಕ್ಕಾಗಿ ಎತ್ತುವ ಪ್ರಶ್ನೆ ಎಂದು ಭಾವಿಸಿದರೂ ಭಾವಿಸಬಹುದು. ಹಾಗಾಗಿ ನಾನೇ ತರ್ಕಿಸಿ ‘ತಂದೆ ಮತ್ತು ತಾಯಿ ಇವರಲ್ಲಿ ಮಕ್ಕಳು ಯಾರಿಗೆ ಬೇಕಾಗಿ ಹುಟ್ಟುತ್ತಾರೋ, ಅವರ ಜಾತಿಯೇ ಆ ಮಕ್ಕಳಿಗೆ.’ ಎಂಬ ಯುಕ್ತಿಯ ನಿಲುಮೆ ಇದು ಎಂದು ಭಾವಿಸಿಕೊಂಡೆ. ತಾಯಿ ತಂದೆಯರಿಬ್ಬರಿಗೂ ಬೇಕಾಗಿ ಹುಟ್ಟುವ ಮಕ್ಕಳಿರುತ್ತಾರಲ್ಲ! ಒಂದೇ ಜಾತಿಯ ತಂದೆ ತಾಯಿಯರಾದರೆ ಯಾವ ಸಮಸ್ಯೆಯೂ ಇಲ್ಲ. ಮಕ್ಕಳಿಗೆ ಅದೇ ಜಾತಿ. ತಂದೆ ತಾಯಿಯರು ಭಿನ್ನಜಾತಿಯವರಾದರೆ ಹುಟ್ಟುವ ಮಕ್ಕಳ ಜಾತಿ ಯಾವುದು? ಹೊಸತೇ ಒಂದು ಜಾತಿ ನಿರ್ಮಾಣವಾಗಬೇಕಾದೀತು. ಅಂಥಾ ಜಾತಿಗಳೂ ಇದೆಯಲ್ಲ, ಅನುಲೋಮ, ಪ್ರತಿಲೋಮಸಂತಾನ ಎಂದು. ಹಾಗೆಯೇ ಕುಂಡ, ಗೋಳಕ, ಸೂತ ಮುಂತಾಗಿ. ಹಾಗಾದರೆ ಇಂಥವುಗಳೆಲ್ಲಾ ಪರಿಸ್ಥಿತಿಗೊ, ಸಂದರ್ಭಕ್ಕೊ ಅನುಗುಣವಾಗಿ ಹುಟ್ಟಿಕೊಂಡ ಜಾತಿಗಳಾಗಿರಬೇಕು. ಮಾತ್ರವಲ್ಲ ವರ್ಣಸಾಂಕರ್ಯದಿಂದಲೇ ಉದ್ಭೂತವಾದವುಗಳಾಗಿರಬೇಕು. ವರ್ಣಸಾಂಕರ್ಯವು ಶಾಸ್ತ್ರನಿಷಿದ್ಧವಂತೆ. ಆದರೂ ಸಂಕರ ವರ್ಣಗಳು ಅಸ್ತಿತ್ವವನ್ನು ತಳೆದವು. ಅಂದರೇನು? ‘ಧರ್ಮಶಾಸ್ತ್ರಗಳು ಅತಿಕ್ರಮಿಸಲ್ಪಟ್ಟಿವೆ’ ಎಂದಲ್ಲವೇ? ಇದರ ಉಗಮ ಎಲ್ಲಿ ಎಂದು ಊಹಿಸುವುದು ಕಷ್ಟ... ಬ್ರಾಹ್ಮಣ ಸ್ತ್ರೀ (ವಿಧವೆ)ಯರಲ್ಲಿ ಕ್ಷತ್ರಿಯರು ಪಡೆದ ಸಂತಾನವು ಸೂತಜಾತಿಯೆಂದೇ ಪ್ರಸಿದ್ಧವಾಗಿದೆ. ಇವರು ಅರಸರ ಅಂಗರಕ್ಷಕರಾಗಿಯೋ, ಸಾರಥಿಗಳಾಗಿಯೋ ನಿಯುಕ್ತರಾಗುತ್ತಾರೆ.” (ಪು.೧೧೮-೧೧೯). ಜೀವನ ಧರ್ಮದ ಜಿಜ್ಞಾಸೆ ನಡೆಸಲು ವಿದುರನ ಪಾತ್ರಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ತಿಳಿದ ದೇರಾಜೆಯವರು ಕೆಲವೇ ಶಬ್ದಗಳಲ್ಲಿ ಅದನ್ನು ಹಿಡಿದಿಡುವ ಬಗೆ ವಿಸ್ಮಯ ಹುಟ್ಟಿಸುವಷ್ಟು ಅಪೂರ್ವವಾಗಿದೆ. “ಆಚಾರದಲ್ಲಿ ಶುದ್ಧಗೆಟ್ಟ ಧರ್ಮವು (ಈ ‘ಶುದ್ಧಗೆಟ್ಟ’ ಶಬ್ದವೂ ಹವ್ಯಕ ಭಾಷೆಯ ಒಂದು ಟಿಪಿಕಲ್ ಪ್ರಯೋಗ!) ಜೀವನದಲ್ಲಿ ಎಷ್ಟು ವಿಪರ್ಯಾಸವನ್ನುಂಟುಮಾಡಿದೆ ಎಂಬುದನ್ನು ಎಣಿಸಿಕೊಂಡರೆ ಹೃದಯವೇ ತಲ್ಲಣಗೊಳ್ಳುತ್ತದೆ. ಮುಖ್ಯವಾಗಿ ರಾಜಧರ್ಮವೇ ಕಲುಷಿತಗೊಂಡು ಜನಜೀವನವು ಭದ್ರತೆಯನ್ನೇ ಕಳೆದುಕೊಂಡಿದೆ ಎಂದು ಅನಿಸುತ್ತದೆ. ಧರ್ಮ, ಅರ್ಥ, ಕಾಮಗಳಲ್ಲಿ ಧರ್ಮವೇ ಸರ್ವಪ್ರಧಾನವೆಂದೂ, ಧರ್ಮಸಮ್ಮತವಾದ ಅರ್ಥಕಾಮಗಳು ಮಾತ್ರ ಪರಿಗ್ರಾಹ್ಯವೆಂದೂ ಹೇಳುವುದು ಶಾಸ್ತ್ರದ ಮಾತನ್ನೇ ಆದರೂ ಅದಿಂದು ಎಷ್ಟು ವಿರೂಪಗೊಂಡಿದೆ? ಕಾಮವು ಧರ್ಮವನ್ನು ಮೆಟ್ಟಿ ನಿಂತು ಅದನ್ನು ಹೊಂದಿದ್ದ ಅರ್ಥವ್ಯವಸ್ಥೆಯನ್ನೇ ಅಲ್ಲಾಡಿಸಿತು. ಅರ್ಥವೂ ಕಾಮವನ್ನು ಹೊಂದಿ ಧರ್ಮವನ್ನೇ ತುಳಿಯಿತು. ಪರಿಣಾಮದಿಂದ ಅರ್ಥವೇ ಸರ್ವಪ್ರಧಾನವಾಯಿತು.” (ಪು.೧೧೯). ದೇರಾಜೆಯವರ ಈ ಚಿಂತನೆ ಇಡೀ ಮಹಾಭಾರತಕ್ಕೆ ಬರೆದ ಅತ್ಯಂತ ಚುಟುಕು ಭಾಷ್ಯ. - ಕಿರಿದರೊಳ್ ಪಿರಿದರ್ಥಮಂ ಪೇಳ್ವಂತೆ - ಎಂದರೆ ಅದು ಅತಿಶಯೋಕ್ತಿಯಾಗಲಾರದೆಂದೇ ನನ್ನ ಭಾವನೆ. ಇದನ್ನು ಅಧಿಕೃತಗೊಳಿಸಲು ಶ್ರೀಕೃಷ್ಣನಿಗಿಂತ ಸಮರ್ಥ, ಸೂಕ್ತ ವ್ಯಕ್ತಿ ಬೇರೆ ಯಾರೂ ಇಲ್ಲ. ಶ್ರೀಕೃಷ್ಣ ಕೌರವನೊಡನೆ ಸಂಧಿಯ ಮಾತನ್ನಾಡಲು ಬಂದಾಗ ಉಳಿದುಕೊಂಡದ್ದು ವಿದುರನ ಮನೆಯಲ್ಲಿ. ಆಗ ವಿದುರ ಸಂಧಿಕಾರ್ಯವು ಯಶ:ಪ್ರದವಾದೀತೇ ಎಂಬ ತನ್ನ ಮನದ ಸಂಶಯವನ್ನು ಶ್ರೀಕೃಷ್ಣನಲ್ಲಿ ಹೇಳಿಕೊಂಡಾಗ ಆತ ವಿದುರನನ್ನು ಸಂತೈಸಿ ಆಡಿದ ಮಾತುಗಳನ್ನು ವಿದುರ ಮೆಲುಕು ಹಾಕಿಕೊಳ್ಳುವುದು ಹೀಗೆ: “ಅದು ಆಗುವುದಿಲ್ಲ ಎಂಬುದನ್ನು ನಾನು ಬಲ್ಲೆ. ಕೌರವರು ಶಾಂತಿಗೆ ಒಡಂಬಡುವವರಲ್ಲ. ಆದರೂ ಪಾಂಡವರಿಗಾಗಿ ನಾನು ಆ ಕುರಿತು ಪ್ರಯತ್ನಿಸಬೇಕು. ಲೋಕಾಪವಾದದಿಂದ ಅವರು ಮುಕ್ತರಾಗಬೇಕು. ಯುದ್ಧವೇ ಆಗುವುದಿದ್ದರೆ ಅದು ಪಾಂಡವರಿಗೆ ಕರ್ತವ್ಯವೇ ಆಗುತ್ತದೆ. ಕೌರವರಿಗೆ ಅಲ್ಲ. ನಿಜವಾಗಿ ನೋಡಿದರೆ ಈ ಹಸ್ತಿನಾವತಿಯ ಸಾಮ್ರಾಜ್ಯದ ಅಧಿಕಾರವು ಯಾರಿಗೆ? ಕೌರವರಿಗೋ? ಪಾಂಡವರಿಗೋ? ಅದೇ ಸಮಸ್ಯೆಯು ಬೆಳೆದು ಪರಿಸ್ಥಿತಿಯು ಹದಗೆಟ್ಟದ್ದು. ಧೃತರಾಷ್ಟ್ರ ಹಾಗೂ ಪಾಂಡು ಇಬ್ಬರೂ ಸಿಂಹಾಸನಕ್ಕೆ ಅನರ್ಹರು. ಆದರೂ ಯಾಕೊ ಪಾಂಡುವಿಗೆ ಪಟ್ಟವಾಯಿತು. ಧೃತರಾಷ್ಟ್ರನಿಗೇ ಇಲ್ಲದ ರಾಜ್ಯದ ಹಕ್ಕು ಅವನ ಮಕ್ಕಳಿಗೆ ಹೇಗೂ ಇಲ್ಲವಲ್ಲ. ಪಾಂಡುವು ರಾಜನಾದರೂ ಶಾಪವನ್ನು ಪಡೆದು ವಿರಕ್ತನಾಗಿ ಎಲ್ಲವನ್ನೂ ಬಿಟ್ಟು ತಪೋವನಕ್ಕೆ ಹೋದ. ಪಟ್ಟವನ್ನು ಬಿಟ್ಟು ಕಾಡಿಗೆ ಹೋದ ಮೇಲೆ ಹುಟ್ಟಿದ ಅವನ ಮಕ್ಕಳಿಗೆ ಆ ಪಟ್ಟದ ಹಕ್ಕು ಬರುವುದಾದರೂ ಹೇಗೆ?” (ಪು.೧೨೪). ಇಂತಹ ಒಂದು ಸಂದಿಗ್ಧ ಪರಿಸ್ಥಿತಿಯಲ್ಲಿ ಹಸ್ತಿನಾವತಿಗೆ ಸಮರ್ಥ ರಾಜನೇ ಇಲ್ಲದೆ ಹೋದರೆ ಮುದಿ ಭೀಷ್ಮ ಎಷ್ಟು ಕಾಲ ಸಿಂಹಾಸನದ ರಕ್ಷಕನಾಗಿ ಉಳಿಯಬಲ್ಲ ಎಂಬ ಹಿನ್ನೆಲೆಯಲ್ಲಿ ಧರ್ಮಸೂಕ್ಷ್ಮವನ್ನು ಬಲ್ಲ ಶ್ರೀಕೃಷ್ಣ ಆಲೋಚಿಸಿದ್ದು ಹೀಗೆ ಎಂದು ವಿದುರ ಹೇಳುತ್ತಾನೆ: “ಹಸ್ತಿನಾವತಿಯ ಸಾಮ್ರಾಜ್ಯವನ್ನಾಳಲು ಸಾಕ್ಷಾತ್ ಯಮಧರ್ಮನೊಂದಿಗೆ ಧರ್ಮಜಿಜ್ಞಾಸೆಯನ್ನು ಮಾಡಿ ಯಶ:ಶಾಲಿಯಾದ ಧರ್ಮನಂದನನೇ ಬೇಕೋ? ಬಹಿರಂಗವಾಗಿ ಸ್ತ್ರೀಯರ ಮಾನಹರಣಕ್ಕುಜ್ಜುಗಿಸುವ ದುರ್ಯೋಧನನೇ ಸಾಕೋ?” (ಪು.೧೨೫). ಕೊನೆಯ ಮಾತು ಮಹಾಭಾರತದ ಸಾರಸರ್ವಸ್ವವನ್ನೂ ಸಾರುವ ಭಾರತವಾಕ್ಯದಂತಿದೆ: “ಜನಬಲ, ಧನಬಲ, ಅಸ್ತ್ರಬಲ, ಎಲ್ಲ ಬಲವೇ ಅಲ್ಲ, ಧರ್ಮದ ಬಲವೊಂದೇ ನಿಜವಾದ ಬಲ” (ಪು.೧೨೫). ಹಾಗಾಗಿ ಕೌರವರ ಹನ್ನೊಂದು ಅಕ್ಷೋಹಿಣಿ ಸೈನ್ಯ ಪಾಂಡವರ ಏಳು ಅಕ್ಷೋಹಿಣಿ ಸೈನ್ಯದ ಮುಂದೆ ಮಂಡಿಯೂರಿತು. ಮತ್ತು ಹದಿನೆಂಟು ದಿನಗಳ ಕಾಲ ನಡೆದ ಕುರುಕ್ಷೇತ್ರ ಯುದ್ಧ ಮುಗಿದಾಗ ‘ಧರ್ಮಸಂಸ್ಥಾಪನಾರ್ಥಂ’ ಶ್ರೀಕೃಷ್ಣನಿಗೆ ಬೇಕಾಗಿದ್ದ “ಐದು ಮಂದಿ ಪಾಂಡವರು ಉಳಿದರು. ಅವರು ಅಷ್ಟೇ ಸಾಕೆಂದು ಶ್ರೀಕೃಷ್ಣ ಅವರನ್ನಷ್ಟೇ ಉಳಿಸಿಕೊಂಡನು.” (ಪು.೧೨೬). ಶೌನಕ ಶೌನಕಾದಿ ಮುನಿಗಳಿಗೆ ವ್ಯಾಸಶಿಷ್ಯರಾದ ಸೂತಪುರಾಣಿಕರಿಂದ ‘ಶ್ರೀಮನ್ಮಹಾಭಾರತ’ ಕಥಾಪ್ರವಚನವು ವಿಶ್ರುತಗೊಂಡಿದೆ. ಶೌನಕ ಮುನಿಗಳ ಬಾಯಿಯಿಂದ ನಮಗೆ ಶ್ರೀಕೃಷ್ಣನ ವ್ಯಕ್ತಿತ್ವದ ದರ್ಶನವನ್ನು ದೇರಾಜೆಯವರು ಮಾಡಿಸುತ್ತಾರೆ. ಶ್ರೀಕೃಷ್ಣನು ತನ್ನ ಅತಿಮಾನುಷ ಶಕ್ತಿಯನ್ನು ಕೆಲವು ವಿಶಿಷ್ಟ ಸಂದರ್ಭಗಳಲ್ಲಷ್ಟೇ ಪ್ರದರ್ಶಿಸುತ್ತಾನೆ. ಇದನ್ನು ಯೌಗಿಕ ಶಕ್ತಿ ಎಂದು ಶೌನಕರು ಕರೆಯುತ್ತಾರೆ. “ಮನುಷ್ಯಶಕ್ತಿಯ ಸರ್ವವೂ ಸ್ಥಗಿತಗೊಂಡಾಗ ಮಾತ್ರ ಶ್ರೀ ಕೃಷ್ಣನು ತನ್ನ ದೇವತ್ವದ ಅತಿಮಾನವತೆಯ ಯೌಗಿಕ ಶಕ್ತಿಯನ್ನು ಅವಲಂಭಿಸಿದ್ದನೆಂದೇ ಹೇಳಬಹುದು.” (ಪು.೧೨೭). ದ್ರೌಪದಿಯ ಮಾನಭಂಗ ಪ್ರಕರಣ ಇದಕ್ಕೆ ಒಂದು ಒಳ್ಳೆಯ ಉದಾಹರಣೆ: “... ಸೀರೆಯನ್ನು ಅಕ್ಷಯವಾಗಿಸುವುದು ಮಾತ್ರ ಯಾವ ಮನುಷ್ಯನಿಂದಲೂ ಸಾಧ್ಯವಾಗುವ ಕೆಲಸವಲ್ಲ. ದೇವರು ರಕ್ಷಿಸುವ ರೀತಿ ಅದು, ದೇವರಿಗೆ ಮಾತ್ರ ಸಾಧ್ಯ. ಅದನ್ನು ಜಗತ್ತು ತಿಳಿಯಬೇಕು. ಮನುಷ್ಯರು ಮಾಡಬೇಕಾದುದನ್ನು ಮನುಷ್ಯರಿಗೇ ಬಿಟ್ಟು ಮನುಷ್ಯರಿಂದ ಮಾಡಲಾಗದ್ದನ್ನು ಮಾಡಿ ದೇವತ್ವದ ಮಹಿಮೆಯನ್ನು ಪ್ರಕಟಿಸಿದ್ದು ನಿಜವಾಗಿಯೂ ದೇವತಾ ಮಹತ್ತೇ ಆಗಿದೆ.” (ಪು.೧೨೮). ಇದನ್ನೇ ವಿಸ್ತರಿಸುತ್ತಾ, ಧರ್ಮರಾಯ ಜೂಜಿನಲ್ಲಿ ಗೆಲ್ಲುವಂತೆ ಶ್ರೀಕೃಷ್ಣ ಮಾಡಬಹುದಿತ್ತಲ್ಲವೇ, ಅದರಿಂದ ಪಾಂಡವರಿಗೆ ವನವಾಸದ ಕಷ್ಟವಾದರೂ ತಪ್ಪುತ್ತಿತ್ತಲ್ಲವೇ ಎಂಬ ಪ್ರಶ್ನೆಗೆ ಸಮಾಧಾನ ಹೀಗಿದೆ: “ಜೂಜಾಡುವವರಿಗೆ ವಿನಿಯೋಗಿಸಲ್ಪಡುವ ಸಂಪತ್ತಲ್ಲ ‘ಆ ದೇವತಾ ಮಹತ್ತು’.” ಇನ್ನೊಂದು ಪ್ರಕರಣ ವನವಾಸದಲ್ಲಿದ್ದ ಪಾಂಡವರ ಬಳಿಗೆ ಅವರನ್ನು ಶಪಿಸಲೆಂದೇ ತನ್ನ ಶಿಷ್ಯರೊಂದಿಗೆ ಬಂದು ‘ಊಟ ಬೇಕು’ ಎಂಬ ಆಗ್ರಹವನ್ನು ಧರ್ಮರಾಯನಲ್ಲಿ ಮಾಡಿದ ದೂರ್ವಾಸರನ್ನು ಶ್ರೀಕೃಷ್ಣ ಪರಿವರ್ತಿಸಿದ ರೀತಿ ಹೀಗೆ: “ತನ್ನ ಹೊಟ್ಟೆಯ ಮೇಲೆ ಕೈಯಾಡಿಸಿಕೊಂಡು ಋಷಿಗಳ ಜಠರಾಗ್ನಿಯನ್ನೇ ತಣಿಸಿಬಿಟ್ಟ.” (ಪು.೧೩೦). ಯಾಕೆಂದರೆ ದೂರ್ವಾಸರಿಗೆ ಬೇಕಾಗಿದ್ದುದ್ದು ಊಟ ಅಲ್ಲ, ಸಿಟ್ಟು! ಶ್ರೀಕೃಷ್ಣನ ದರ್ಶನಮಾತ್ರದಿಂದಲೇ ದೂರ್ವಾಸರಿಗೆ ಸತ್ಯದರ್ಶನವೂ ಆಯಿತು ಮತ್ತು ಪಾಂಡವರು ತನ್ನ ಅನುಗ್ರಹ ಮಂತ್ರದಿಂದಲೇ ಜನಿಸಿದವರೆಂಬ ನೆನಪೂ ಬಂದು ಅವರು ಸಂತುಷ್ಟರಾಗಿಯೇ ತೆರಳಿದರು. ಕರ್ಣನಿಗೆ ಶ್ರೀಕೃಷ್ಣ ಆತನ ಜನ್ಮರಹಸ್ಯವನ್ನು ಹೇಳಿದ್ದು ಅದೂ ಯುದ್ಧಪೂರ್ವದಲ್ಲಿ ಸರಿಯೇ ಎಂಬ ಜಿಜ್ಞಾಸೆಗೆ ಸಮಾಧಾನ:- “ಎಷ್ಟೇ ದುಷ್ಟರಿದ್ದರೂ ಅವರಿಗೆ ತಮ್ಮನ್ನು ತಾವೇ ತಿದ್ದಿಕೊಳ್ಳುವ ಒಂದು ಅವಕಾಶವನ್ನು ನೀಡುವುದು ಧರ್ಮ.” (ಪು.೧೩೧). ಕೌರವನಲ್ಲಿ ಶ್ರೀಕೃಷ್ಣ ಸಂಧಿಯ ಪ್ರಸ್ತಾಪ ಮಾಡಿದ್ದು ಇದಕ್ಕಾಗಿಯೇ. ಅಂತೆಯೇ ಕರ್ಣನೂ ದುಷ್ಟಕೂಟದಿಂದ ಹೊರಬಂದು ಸತ್ಪುರುಷರ ಸಹವಾಸಕ್ಕೆ ಬರುವುದಾದರೆ ಅಂತಹ ಒಂದು ಅವಕಾಶವನ್ನು ಆವನಿಗೆ ಧರ್ಮದ ನೆಲೆಯಲ್ಲಿ ಶ್ರೀಕೃಷ್ಣ ನೀಡಿದ. ಕರ್ಣ ಈ ಅವಕಾಶವನ್ನು ನಿರಾಕರಿಸಿದಾಗಲೂ ತಾನು ಸೂತಪುತ್ರನೆಂದು ಕೊರಗುತ್ತಿದ್ದ ಆತನಿಗೆ ತಾನು ದೇವತಾನುಗ್ರಹದಿಂದಲೇ ಹುಟ್ಟಿದವನು ಎಂಬ ಧನ್ಯತಾ ಭಾವವು ಕೊನೆಗಾಲಕ್ಕಾದರೂ ಸಿಕ್ಕಿತಲ್ಲವೇ? ಈ ರಹಸ್ಯವನ್ನು ಪಾಂಡವರಿಗೆ ತಿಳಿಸಬಹುದಾಗಿತ್ತಲ್ಲವೇ? ಈ ಪ್ರಶ್ನೆಯೂ ಸಾಧುವಾದುದೇ. “ಹೇಳಿದ್ದರೆ ಯುದ್ಧವು ಆಗುತ್ತಿರಲಿಲ್ಲ... ಹೇಗಾದರೂ ಮಾಡಿ ಯುದ್ಧವನ್ನು ನಿಲ್ಲಿಸುವುದಾಗಲೀ, ಮಾಡಿಸುವುದಾಗಲೀ ಎರಡೂ ಶ್ರೀಕೃಷ್ಣನ ಉದ್ದೇಶವಲ್ಲ... ಯುದ್ಧವು ನಿಲ್ಲುವುದಿದ್ದರೂ ಆಗುವುದಿದ್ದರೂ ಯಾವುದೇ ಆದರೂ ಧರ್ಮಸಮ್ಮತವಾಗಿಯೇ ನಡೆಯಬೇಕೆಂಬುದು ಶ್ರೀಕೃಷ್ಣನ ಇಚ್ಚೆಯಾಗಿತ್ತೆಂದು ಕಾಣುತ್ತದೆ.” (ಪು.೧೩೩). ದ್ರೋಣವಧಾ ಸಂದರ್ಭದಲ್ಲಿ ‘ಧರ್ಮರಾಜ ಸತ್ಯವನ್ನೇ ಹೇಳಿದರೂ ಶ್ರೀಕೃಷ್ಣ ಅದನ್ನು ಸುಳ್ಳಾಗಿ ಮಾಡಿದ’ ಎಂಬ ಅಪವಾದದ ಬಗ್ಗೆ ಶೌನಕ ಮುನಿ ಮುಖೇನ ಕೊಡುವ ವಿವರಣೆ ಹೀಗಿದೆ: “ಯುದ್ಧಾರಂಭದ ದಿನ ಧರ್ಮರಾಜನು ಆಚಾರ್ಯರಿಗೆ ವಂದಿಸಿದಾಗ ಅವರು ‘ನಿನ್ನ ಬಾಯಿಯಿಂದ ಅನೃತವನ್ನು ಕೇಳಿದಾಗ ಯುದ್ಧವನ್ನು ನಿಲ್ಲಿಸುತ್ತೇನೆ’ ಎಂದು ನುಡಿದಿದ್ದರು. ಧರ್ಮರಾಯನು ಸುಳ್ಳು ಹೇಳ್ಳುವವನಲ್ಲ. ಹಾಗಾಗಿ ಅವನಿಂದ ಸತ್ಯವನ್ನೇ ಹೇಳಿಸಿ ಅದನ್ನು ಅಪೂರ್ಣಸತ್ಯವನ್ನಾಗಿ ಪರಿವರ್ತಿಸುವ ಕಾರ್ಯವನ್ನು ಮಾಡಬೇಕಾಗಿ ಬಂದದ್ದಾಗಿರಬೇಕು.” (ಪು.೧೩೫). ಕೊನೆಯದಾಗಿ ಕರ್ಣನ ರಥ ಹೂತುಹೋದ ಸಂದರ್ಭದಲ್ಲಿ ನಿರಾಯುಧನೂ, ರಥವನ್ನು ಮೇಲೆತ್ತುವುದಕ್ಕೆ ಸಮಯದ ಅವಕಾಶವನ್ನೂ ಕೇಳಿದ್ದ ಕರ್ಣನ ಮೇಲೆ ಅರ್ಜುನ ಬಾಣಪ್ರಯೋಗಿಸಿದ್ದು ಸರಿಯೇ ಎಂಬ ಸಂದೇಹಕ್ಕೆ ತಕ್ಕ ಉತ್ತರ ಇಲ್ಲಿದೆ: “ಅರ್ಜುನನು ತನ್ನ ಪ್ರತಿಜ್ಞೆಯಂತೆ ಅದೇ ದಿನ ಕರ್ಣನನ್ನು ವಧಿಸಬೇಕು. ಇಲ್ಲದಿದ್ದರೆ ಅವನೇ ಉಳಿಯುವಂತಿಲ್ಲ. ಅದರಲ್ಲಿ ಗುಟ್ಟೆಂಬುದೇನೂ ಇಲ್ಲ. ಕರ್ಣನೂ ಅದನ್ನು ಅರಿತಿರಲೇಬಹುದು. ಅರ್ಜುನನ ಯುದ್ಧನೀತಿಯಂತೆ ಅವನು ಕರ್ಣನಿಗೆ ನೀಡಬಹುದಾದ ಕಾಲಾವಕಾಶವು ಕೇವಲ ರಥವನ್ನೆತ್ತುವುದಕ್ಕೆ ಮಾತ್ರ ಉಪಯೋಗವಾದೀತೆಂಬ ನಂಬಿಕೆಯೇನು? ಅಂಥಾ ಅವಕಾಶಕ್ಕೆ ಕರ್ಣನು ರಥವನ್ನು ಮೇಲೆತ್ತಿಕೊಳ್ಳುವಷ್ಟು ಹೊತ್ತಿನ ಸಮಯದ ಮಿತಿಯಷ್ಟೆ? ರಥವನ್ನು ಎತ್ತಲು ಸಾಧ್ಯವಾಗದೆ ಹೋದರೂ ಆ ಪ್ರಯತ್ನವೇನೂ ನಿಲ್ಲಲಾರದು. ಅದೇ ಸ್ಥಿತಿಯಲ್ಲಿ ಹೊತ್ತು ಮುಳುಗಿದರೆ ಮತ್ತೆ ಅರ್ಜುನನೇ ಇಲ್ಲವಾಗಬೇಕು... ತನಗೆ ದುಷ್ಪರಿಣಾಮಕಾರಕವಾದ ಅಂಥಾ ಅವಕಾಶವನ್ನು ನೀಡದಿರುವುದು ಅರ್ಜುನನಿಗೆ ಅಧರ್ಮವೆಂದೇನೂ ಆಗುವುದಿಲ್ಲ...” ಶ್ರೀಕೃಷ್ಣನ ಮಾತೂ ‘ಧರ್ಮವನ್ನು ರಕ್ಷಿಸಿದವನಿಗೆ ಮಾತ್ರ ಧರ್ಮದ ರಕ್ಷಣೆಯ ಪ್ರಾಪ್ತಿ’ ಇಲ್ಲಿ ನಿರ್ಣಾಯಕವಾಗಿ ದ್ರೌಪದಿ ವಸ್ತ್ರಾಪಹಾರ, ಅಭಿಮನ್ಯು ವಧಾ ಪ್ರಕರಣಗಳೆಲ್ಲ ಅರ್ಜುನನಿಗೆ ಶ್ರೀಕೃಷ್ಣದ್ವಾರಾ ನೆನಪಿಗೆ ಬಂದು ಧರ್ಮಚ್ಯುತನಾದ ಕರ್ಣನ ವಧೆಯಾಯಿತು. (ಪು.೧೩೬-೧೩೭). ಧರ್ಮಪುರುಷ - ಕೊನೆಯಲ್ಲಿ ಧರ್ಮಪುರುಷನ ಸಾನಿಧ್ಯದ ನ್ಯಾಯಪೀಠವಾದ ಆಯೋಗ ಕೊಟ್ಟ ತೀರ್ಪು ತುಂಬಾ ಮಹತ್ವದ್ದು. ಕುರುಕ್ಷೇತ್ರದ ಕೊನೆಯ ರಾತ್ರಿಯ ಅಶ್ವತ್ಥಾಮನ ವಿವೇಚನಾರಾಹಿತ್ಯ ಪೈಶಾಚಿಕ ಕೃತ್ಯ, ವಾರಣಾವತದ ಅರಗಿನ ಮನೆಯ ಪ್ರಕರಣ, ಮತ್ತು ದ್ರೌಪದಿಯ ಮಾನಭಂಗದ ಪ್ರಕರಣಗಳು ‘ಅಪರಾಧ’ ಎಂದು ಪರಿಗಣಿಸಲ್ಪಟ್ಟಿದೆ. ಅಶ್ವತ್ಥಾಮನ ಅಪರಾಧಕ್ಕೆ ಅವನಿಗೆ ಶ್ರೀಕೃಷ್ಣ ವಿಧಿಸಿದ ಶಿಕ್ಷೆಯೇ ಸರ್ವೋಚಿತ ಎಂದು ಆಯೋಗ ಅಭಿಪ್ರಾಯ ಪಟ್ಟಿದೆ. ಮುಂದಿನ ಎರಡೂ ಪ್ರಕರಣಗಳಲ್ಲಿ ಯಾರೂ ಜೀವಂತವಾಗಿ ಉಳಿದಿಲ್ಲವಾದ್ದರಿಂದ ಅವರಿಗೆ ಶಿಕ್ಷೆ ವಿಧಿಸುವ ಅವಕಾಶ ಇರುವುದಿಲ್ಲ. ಆದರೆ ಅಂತಹ ಘಟನೆಗಳು ಮರುಕಳಿಸದಂತೆ ಜಗತ್ತು ಜಾಗೃತವಾಗಬೇಕೆಂದು, ಸಂವೇದನಾಶೀಲವಾಗಬೇಕೆಂದು ಆಯೋಗ ಬಯಸುತ್ತದೆ. ಆಯೋಗದ ತೀರ್ಪು ನಮಗೆಲ್ಲರಿಗೂ ಮಾನ್ಯವೆಂದೇ ನಾನು ಭಾವಿಸುತ್ತೇನೆ. ಶ್ರೀಕೃಷ್ಣ ಅವತಾರ ಪುರುಷ ಎಂಬುದನ್ನು ಒಪ್ಪಿಕೊಂಡು ಆತನ ಧರ್ಮದೃಷ್ಟಿಯ ಸಮಭಾವದಲ್ಲಿ ಇಡೀ ಕುರುಕ್ಷೇತ್ರ ಯುದ್ಧ ನಡೆದುದು ‘ದುಷ್ಟ ನಿಗ್ರಹ, ಶಿಷ್ಟ ಪರಿಪಾಲನ’ ಎಂಬ ದೈವೀ ತತ್ವಕ್ಕೆ ಅನುಸಾರವಾಗಿ ಎಂಬುದನ್ನು ದೇರಾಜೆಯವರು ಯಾವ ಎಗ್ಗಿಲ್ಲದೇ ಒಪ್ಪಿಕೊಳ್ಳುತ್ತಾರೆ. ನಾನು ಮೊದಲೇ ಹೇಳಿದಂತೆ ಇದು ದೇರಾಜೆಯವರ ಮನೋಧರ್ಮವನ್ನು ಪ್ರತಿಬಿಂಬಿಸುತ್ತದೆ. ಪುರಾಣಭಂಜನೆ ಅವರಿಗೆ ಸಮ್ಮತವಲ್ಲ. ಆ ಚೌಕಟ್ಟನ್ನು ಒಡೆದರೆ ಅದು ಕಾವ್ಯೇತಿಹಾಸವಾಗಿ ತನ್ನ ಮಹತ್ವನ್ನು ಕಳೆದುಕೊಳ್ಳುತ್ತದೆ ಎನ್ನುವುದು ಅವರ ದೃಢ ನಂಬಿಕೆಯಾಗಿತ್ತು. ಮಾತ್ರವಲ್ಲ ಶ್ರೀಕೃಷ್ಣ ‘ಪರಮಾತ್ಮ’ ಮಹಾವಿಷ್ಣುವಿನ ಎಂಟನೇ ಅವತಾರ ಎಂಬುದು ಲಕ್ಷಾಂತರ ಜನರ ಭಾವುಕ ನಂಬಿಕೆ. ಇದನ್ನು ಭಂಗಮಾಡುವುದರಲ್ಲಿ ದೇರಾಜೆಯವರು ಆಸಕ್ತರೂ ಅಲ್ಲ, ಅದನ್ನು ಪ್ರೋತ್ಸಾಹಿಸುವವರೂ ಅಲ್ಲ. ಕುರುಕ್ಷೇತ್ರ ಯುದ್ಧದ ಅತೀ ದೊಡ್ಡ ಫಲಶೃತಿಯೇ ಶ್ರೀಮದ್ಭವದ್ಗೀತೆ ಎಂಬುದಾಗಿ ದೇರಾಜೆಯವರು ನಂಬಿದ್ದಾರೆ. ಈ ನಂಬಿಕೆ ಬಹು ಉದಾತ್ತವಾದುದು ಮತ್ತು ಅವರ ದೃಷ್ಟಿಯಲ್ಲಿ ಸರ್ವವ್ಯಾಪಿಯಾದುದು. ಇದನ್ನು ಅಲ್ಲಗಳೆಯಲು ನನಗೆ ಯಾವ ಕಾರಣಗಳೂ ಕಾಣಿಸುತ್ತಿಲ್ಲ. “ ಅಂದು ಈ ಯುದ್ಧದ ಆರಂಭದಂದು ವಿಶೃತಗೊಂಡದ್ದು ಕೇವಲ ಅರ್ಜುನನಿಗಾಗಿಯೂ ಅಲ್ಲ. ಕುರುಕ್ಷೇತ್ರದ ಯುದ್ಧಕ್ಕಾಗಿ ಮಾತ್ರವೂ ಅಲ್ಲ. ಜಗತ್ತಿನ ಎಲ್ಲ ದೇಶದ, ಎಲ್ಲ ಕಾಲದ, ಎಲ್ಲ ಜೀವರ ‘ಜೀವನಧರ್ಮಶಾಸ್ತ್ರ’ವಾಗಿ, ಅರಿತು ಆಚರಿಸುವ ಸರ್ವಜ್ಞರ ಶ್ರೇಯೋಭಿವೃದ್ಧಿಗಾಗಿ, ಆ ಮಹತ್ಪೂರ್ಣ ದರ್ಶನದ ಯೋಗಭಾಗ್ಯದ ಪ್ರಾಪ್ತಿಯ ನಿರಂತರತೆಗಾಗಿ.” (ಪು.೧೩೯). ಆದರೆ ಈ ಮನೋಧರ್ಮ ಕೇವಲ ‘ಆರಾಧನೆ, ಪಾರಾಯಣ’ಗಳಿಗೆ ಸೀಮಿತವಾದರೆ ದಿವ್ಯವೂ, ಭವ್ಯವೂ ಆದ ಒಂದು ಅಲೌಕಿಕ ಅನುಭೂತಿ ಲೌಕಿಕದ ನೆಲೆಯಲ್ಲಿ ದಕ್ಕಲಾರದು ಎಂಬುದನ್ನೂ ದೇರಾಜೆಯವರು ಚೆನ್ನಾಗಿ ಅರಿತಿದ್ದರು ಎಂಬುದು ಈ ವ್ಯಾಖ್ಯಾನದುದ್ದಕ್ಕೂ ನಮಗೆ ಸಕಾರಣವಾಗಿ ಮನವರಿಕೆಯಾಗುತ್ತಾ ಹೋಗುವ ಬಗೆ ನನಗೆ ಕುತೂಹಲ, ಅಚ್ಚರಿ, ಹಾಗೂ ಆನಂದಾನುಭೂತಿಯನ್ನು ಕೊಟ್ಟಿದೆ ಎಂದು ನಾನು ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಯಾವುದೇ ಒಂದು ಘಟನೆ ಅದನ್ನು ನಿರ್ವಚಿಸುವ ರೀತಿಯಲ್ಲಿ ನಮಗೆ ಆಪ್ತವೋ, ಅಗ್ರಾಹ್ಯವೋ ಆಗುತ್ತದೆ ಎಂಬುದು ಸತ್ಯವಲ್ಲವೇ? ಈ ದಿಕ್ಕಿನಲ್ಲಿ ದೇರಾಜೆ ಸೀತಾರಾಮಯ್ಯನವರ ಪ್ರಯತ್ನ ಸಾಧು, ಸಾಧು, ಹಾಗೂ ಸಾರ್ಥಕ ಎಂದು ನಾನು ಭಾವಿಸುತ್ತೇನೆ. ಅದು ದೇರಾಜೆಯವರು ಬದುಕಿದ ರೀತಿಯೂ ಹೌದು. ಆದುದರಿಂದಲೇ ಅದಕ್ಕಿಷ್ಟು ಮೌಲ್ಯ. ಸರಳ, ಸಜ್ಜನಿಕೆಯ ಸಾಕಾರ ಮೂರ್ತಿಯೇ ಆಗಿದ್ದ ಕೃಶಕಾಯದ ರಸಋಷಿ, ಅಜಾತಶತ್ರು ದೇರಾಜೆಯವರು ಏರಿದ ಎತ್ತರ ಅನುಕರಣೀಯ, ಅನುಸರಣೀಯ ಎಂದು ಹೇಳುವಲ್ಲಿ ನನಗೆ ಯಾವ ದಾಕ್ಷಿಣ್ಯವೂ, ಸಂಕೋಚವೂ ಕಾಡುವುದಿಲ್ಲ. ‘ಕುರುಕ್ಷೇತ್ರಕ್ಕೊಂದು ಆಯೋಗ’ ಎಲ್ಲರೂ ಓದಲೇ ಬೇಕಾದ ಪುಸ್ತಕ ಎಂಬುದನ್ನು ಹೇಳುತ್ತಾ ನನ್ನ ಈ ಲೇಖನವನ್ನು ಓದಿ ನಿಮ್ಮ ಅಭಿಪ್ರಾಯ ತಿಳಿಸಿ ಎಂಬ ವಿನಂತಿಯೊಂದಿಗೆ ನನ್ನ ಮಾತು ಮುಗಿಸುತ್ತಿದ್ದೇನೆ. ನಮಸ್ಕಾರ. ಲಕ್ಷ್ಮಿನಾರಾಯಣ ಭಟ್ಟ.ಪಿ. ಮಂಗಳೂರು