top of page

ಡಾ. ರಾಮಕೃಷ್ಣ ಗುಂದಿಯವರ ಸಮಗ್ರ ಕತೆಗಳು

ಪುಟ ಸಂಖ್ಯೆ : 344 ಪುಸ್ತಕದ ಬೆಲೆ : ರೂ. 325/- ಉತ್ತರ ಕನ್ನಡ ಜಿಲ್ಲೆಯ ನಾಮಾಂಕಿತ ಕತೆಗಾರ ಡಾ. ರಾಮಕೃಷ್ಣ ಗುಂದಿ ಕಳೆದ ಸುಮಾರು ಮೂರೂವರೆ ವರ್ಷಗಳಿಂದ ಕತೆಗಳನ್ನು ರಚಿಸುತ್ತ ಬಂದವರು. ಅವರ ಮೊದಲ ಕಥಾಸಂಕಲನ `ಅವಾರಿ’ 1984ರಲ್ಲಿ ಪ್ರಕಟವಾಯಿತು. ಆ ಕಾಲದಲ್ಲಿ ಅದು ಇಡೀ ಜಿಲ್ಲೆಯಲ್ಲಿ ಸಂಚಲನವನನ್ನೇ ಸೃಷ್ಟಿಸಿತು. ಈ ಸಂಕಲನದ ಮೂಲಕ ಜಿಲ್ಲೆ ಅವರನ್ನು ಉತ್ತಮ ಕತೆಗಾರ ಎಂದು ಗುರುತಿಸುವಂತಾಯಿತು.. ಹಿರಿಯ ಚಿಂತಕ, ಸಾಹಿತಿ ಡಾ. ರೋಹಿದಾಸ ಭಂಡಾರಿ ಅವರನ್ನು `ಉತ್ತರ ಕನ್ನಡದ ದೇವನೂರು ಮಹಾದೇವ’ ಎಂದು ಕರೆದರು. ಬರವಣಿಗೆಯಲ್ಲಿ ತೋರುವ ಸಂಯಮ ಮತ್ತು ಒಂದು ಸಮುದಾಯದ ತವಕ-ತಲ್ಲಣಗಳನ್ನು ಅನಾವರಣಗೊಳಿಸುವ ನೆಲೆಯಲ್ಲಿ ಈ ಹೋಲಿಕೆ ಸರಿಯಾಗಿಯೇ ಇದೆ. ದೇವನೂರು ಮಹಾದೇವ ಚನ್ನಪಟ್ಟಣದ ಸುತ್ತಣ ದಲಿತ ಸಮುದಾಯದ ಬದುಕನ್ನು ತಮ್ಮ ಕತೆ ಕಾದಂಬರಿಗಳಲ್ಲಿ ಕಟ್ಟಿಕೊಟ್ಟರೆ ರಾಮಕೃಷ್ಣ ಗುಂದಿ ತಮ್ಮ ಕತೆಗಳಲ್ಲಿ ನಮ್ಮ ಜಿಲ್ಲೆಯ ಆಗೇರ ಸಮುದಾಯದ ಬದುಕನ್ನು ಚಿತ್ರಿಸಿದ್ದಾರೆ. ಅವರ ನಾಲ್ಕನೆಯ ಕಥಾಸಂಕಲನ `ಸೀತೆದಂಡೆ ಹೂವೆ’ ಪ್ರಕಟವಾದುದು 2015ರಲ್ಲಿ. ಅಂದರೆ, 35 ವರ್ಷಗಳ ಅವಧಿಯಲ್ಲಿ ಗುಂದಿ ಅವರು ರಚಿಸಿದ್ದು 34 ಕತೆಗಳನ್ನು-ಹೆಚ್ಚು ಕಡಿಮೆ ವರ್ಷಕ್ಕೆ ಒಂದೇ ಒಂದು ಕತೆಯನ್ನು!. ಗುಂದಿಯವರ ನಿಜ ಜೀವನದ ನಡೆ, ನುಡಿಗಳಲ್ಲಿ ಅವಸರ ಕಾಣುವುದಿಲ್ಲ; ಅಂತೆಯೇ ಬರೆಹದಲ್ಲೂ ಕೂಡ. ಇದೀಗ `ಡಾ. ರಾಮಕೃಷ್ಣ ಗುಂದಿಯವರ ಸಮಗ್ರ ಕತೆಗಳು’ ಕೃತಿ ಹೊರಬಂದಿದೆ(1920). ಇದನ್ನು ಆಗುಮಾಡಿದವರು ಶ್ರೀ ರಾಘವೇಂದ್ರ ಪ್ರಕಾಶನದ ವಿಷ್ಣು ನಾಯ್ಕ ಅವರು. ಅವರ ಒತ್ತಾಸೆ ಇರದಿದ್ದರೆ ಪ್ರಾಯಶಃ ಕನ್ನಡ ಸಾರಸ್ವತ ಲೋಕ ಗಮನಿಸಲೇಬೇಕಾದ ಇಂಥದೊಂದು ಕೃತಿ ಮೊಗ ಪಡೆಯುತ್ತಿರಲಿಲ್ಲವೇನೊ. ಈ ಕಾರಣಕ್ಕಾಗಿ `ರಾಘವೇಂದ್ರ ಪ್ರಕಾಶನ ಅಭಿನಂದನಾರ್ಹ. ಮುಖ್ಯವಾಗಿ, ಈ ಕೃತಿ ಕತೆಗಾರ ಗುಂದಿಯವರನ್ನು ಕೇವಲ ಉತ್ತರ ಕನ್ನಡ ಜಿಲ್ಲೆಗೆ ಕಟ್ಟಿಹಾಕದೇ ಕನ್ನಡ ನಾಡಿನಾದ್ಯಂತ ಪರಿಚಯಿಸುವ ಕ್ಷಮತೆಯನ್ನು ಹೊಂದಿದೆ ಎಂಬುದಕ್ಕೆ ಅವರು ಕಟ್ಟಿಕೊಟ್ಟ ಕಥಾಪ್ರಪಂಚದ ಸಾಲುಸಾಲುಗಳು ಸಾಕ್ಷಿಯಾಗಿ ನಿಲ್ಲುತ್ತವೆ. ಇದರ ಜೊತೆಗೆ, ನಮ್ಮ ನಾಡು ಇಂಥ ಅಭಿಜಾತ ಕತೆಗಾರನನ್ನು ಇದುವರೆಗೆ ಗುರುತಿಸದೆ ಹೋಯಿತಲ್ಲ ಎಂಬ ವ್ಯಥೆ ಕಾಡುತ್ತದೆ. ಈ ಕತೆಗಾರರ ಬಹುತೇಕ ಕಥೆಗಳು ದಲಿತ ಸಮುದಾಯಗಳು ತಲತಲಾಂತರಗಳಿಂದ ಅನುಭವಿಸುತ್ತ ಬಂದ ಶೋಷಣೆಯ ಕಥನ ಎಂದೆನಿಸಿದರೂ, ಜೊತೆಜೊತೆಗೆ ಈ ಜನಪದರ ಅಜ್ಞಾನ, ಬಡತನ, ಪರಾವಲಂಬನೆ, ದೈನೇಸಿ ಬದುಕು, ಕೀಳರಿಮೆ, ಅವಮಾನ, ಅನಕ್ಷರತೆ ಮುಂತಾದ ಸಾಮಾಜಿಕ ಒತ್ತಡಗಳ ನಡುವೆಯೂ ಹೊರಹೊಮ್ಮುವ ಜೀವನಪ್ರೀತಿ, ಪ್ರೇಮ, ಪ್ರಣಯ, ಮಾನವೀಯ ಸಂಬಂಧಗಳ ಕಥಾನಕಗಳೂ ಆಗಿವೆ. ಕತೆಗಾರರು ದಲಿತ ಸಮುದಾಯದಿಂದ ಬಂದವರಾದ್ದರಿಂದ ಅವರ ಕತೆಗಳು ವಾಸ್ತವ ಮತ್ತು ಅಧಿಕೃತ (ಖeಚಿಟisಣiಛಿ ಚಿಟಿಜ ಚಿuಣheಟಿಣiಛಿ) ಎನಿಸುತ್ತವೆ. ಈ ನಿಟ್ಟಿನಲ್ಲಿ ಗುಂದಿಯವರ ಕತೆಗಳ ಕುರಿತು ಲಂಕೇಶ ವ್ಯಕ್ತಪಡಿಸಿದ ಅಭಿಪ್ರಾಯವನ್ನು ಒಪ್ಪಬಹುದು. (ಭಾಷೆಯ ಬನಿಯನ್ನು ಅರಿತ ಇವರು ಕಡಲು, ಬೆಸ್ತರು, ದಲಿತರು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡಾಗ ಒಳಗಿನವರಂತೆ ಬರೆಯಬಲ್ಲರು-ಲಂಕೇಶ). ಗುಂದಿಯವರ ಕಥನಶೈಲಿಯ ಕುರಿತು ಲಂಕೇಶ ಇನ್ನೊಂದು ಮಾತನ್ನು ಹೇಳಿದ್ದಾರೆ. `ಶುದ್ಧವಾಗಿ ಕನ್ನಡ ಬರೆಯುವ ರಾಮಕೃಷ್ಣ ಗುಂದಿ ಹೃದಯಸ್ಪರ್ಶಿಯಾಗಿ ಬರೆಯಬಲ್ಲರು’. ಈ ಮಾತಿಗೆ ಹಿನ್ನೆಲೆಯಾಗಿ ಎರಡು ಅಂಶಗಳನ್ನು ಇಲ್ಲಿ ದಾಖಲಿಸಬೇಕು. ಒಂದು, ಗುಂದಿಯವರು ಕನ್ನಡ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡಿದವರು. ಪಿ.ಎಚ್.ಡಿ.ಗಾಗಿ ಅವರು ಮಂಡಿಸಿದ ಸಂಪ್ರಬಂಧ ಕೂಡ ತಮ್ಮದೇ ಸಮುದಾಯದ ಕುರಿತಾಗಿ ಸಿದ್ಧ ಪಡಿಸಿದ ಜನಾಂಗಿಕ ಅಧ್ಯಯನ. ಮೂರೂವರೆ ದಶಕಗಳ ಕಾಲ ಪದವಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಅವರು ಕೆಲಸ ಮಾಡಿರುವ ಅವರು ವಿದ್ಯಾರ್ಥಿ ಸಮುದಾಯದಲ್ಲಿ ತುಂಬ ಜನಪ್ರಿಯರು. ಇನ್ನೊಂದು, ಅವರು ಯಕ್ಷಗಾನದ ಅಭಿಜಾತ ಕಲಾವಿದರು. ಉತ್ತಮ ರಂಗನಟರೂ ಕೂಡ. ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕøತಿಕ ವಲಯದಲ್ಲಿ ಅವರದು ಎದ್ದು ಕಾಣುವ ವ್ಯಕ್ತಿತ್ವ. ಪರಿಣಾಮವಾಗಿ, ಅವರು ಕನ್ನಡದಲ್ಲಿ ಶುದ್ಧವಾಗಿ ಮಾತನಾಡುತ್ತಾರೆ. ಅವರ ಮಾತು ಹೇಗೋ ಅಂತೆಯೇ ಅವರ ಬರೆಹ ಕೂಡ ಪರಿಶುದ್ಧ. ಪ್ರಸ್ತುತ ಕೃತಿಯಲ್ಲಿ ಒಟ್ಟಿಗೆ 33 ಕತೆಗಳಿದ್ದು ಅವುಗಳಲ್ಲಿ 18 ಕತೆಗಳು ದಲಿತ ಸಂವೇದನೆಯನ್ನು ಅಭಿವ್ಯಕ್ತಿಸುತ್ತವೆ. ಶೋಷಣೆಯನ್ನೇ ಪ್ರಧಾನ ವಸ್ತುವನ್ನುವನ್ನಾಗಿರಿಸಿಕೊಂಡ ಆರು ಕತೆಗಳಿದ್ದು ಅವುಗಳಲ್ಲಿ ಎರಡು ಕಥೆಗಳು (ಸಾಕ್ಷಿ ಮತ್ತು ಹುಣಸೇ ಅಬ್ಬೆ) ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿದ ವಸ್ತುವನ್ನೊಳಗೊಂಡಿದೆ. ಈ ಕತೆಗಳನ್ನು ಗಮನಿಸಿದಾಗ ಶೋಷಣೆ ಕೇವಲ ಒಂದು ವರ್ಗ/ಜಾತಿಗೆ ಸಂಬಂಧಿಸಿದುದಲ್ಲ ಎಂಬ ಸತ್ಯ ವೇದ್ಯವಾಗುತ್ತದೆ. ಇತರ 15 ಕತೆಗಳು ಮಾನವೀಯ ಮೌಲ್ಯಗಳನ್ನು/ಮೌಲ್ಯಗಳ ಅಧಃಪತನವನ್ನು ಚಿತ್ರಿಸುವ ವಸ್ತುವೈವಿಧ್ಯವನ್ನು ಹೊಂದಿವೆ. ಕತೆಗಾರ ಗುಂದಿ ದೇವನೂರರ ಹಾಗೆ ತಮ್ಮ ಆಡುಭಾಷೆಯನ್ನು ಯಥೋಚಿತವಾಗಿ ಬಳಸಬಲ್ಲರು. ಈ ಅಂಶ ಗುಂದಿಯವರ ಕತೆಗಳಿಗೆ ವಿಶೇಷ ಮೆರುಗನ್ನು ನೀಡಿದೆಯಷ್ಟೇ ಅಲ್ಲ; ಇತರ ಕತೆಗಾರರಿಗಿಂತ ಭಿನ್ನವಾದ ಪರಿಪ್ರೇಕ್ಷ್ಯವನ್ನು ಒದಗಿಸಿದೆ. ಇದೇ ಕಾರಣದಿಂದ ಕತೆಗಾರ ಗುಂದಿ ಕನ್ನಡ ಕಥಾಲೋಕದಲ್ಲಿ ವಿಶಿಷ್ಟವಾಗಿ ನಿಲ್ಲುತ್ತಾರೆ. ಸಮುದಾಯವೊಂದರ ಆಡುಮಾತಿನ ಬಳಕೆ ಬರೆಹಕ್ಕೆ ವಾಸ್ತವದ ಬಲವನ್ನು ಉದ್ದೀಪಿಸುವುದಷ್ಟೇ ಅಲ್ಲ; ಆ ಸಮುದಾಯದ ಬದುಕು ಮತ್ತ ಸಂಸ್ಕøತಿಯನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುತ್ತದೆ. ಗುಂದಿಯವರ ಕತೆಗಳ ವಿನ್ಯಾಸ ವೈವಿಧ್ಯಮಯವಾಗಿದ್ದು ಪ್ರತಿಯೊಂದು ಕತೆಯ ಆರಂಭ ಮತ್ತು ಕೊನೆ ವಿಭಿನ್ನವೂ, ವಿಶಿಷ್ಟವೂ ಆಗಿವೆ. ಕತೆಗಳ ನಡೆ ನಾಟಕೀಯವಾಗಿದ್ದು ಅವುಗಳಲ್ಲಿ ನಡೆಯುವ ಸಂಭಾಷಣೆಗಳು ಕಥಾವಸ್ತುವಿನ ಬೆಳವಣಿಗೆಗೆ ಪೂರಕವಾಗುತ್ತ ಅವುಗಳನ್ನು ಪೋಷಿಸುವಂತಿವೆ. ರೋಚಕತೆ ಗುಂದಿಯವರ ಕತೆಗಳ ಇನ್ನೊಂದು ಗುಣ. ಕತೆಗಾರ ಬಳಸುವ ಭಾಷೆ ಅಲ್ಲಲ್ಲಿ ಕಾವ್ಯಾತ್ಮಕವಾಗಿದ್ದು ಓದುಗನನ್ನು ತಾನೇತಾನಾಗಿ ಸೆಳೆದುಕೊಂಡು ಹೋಗುತ್ತವೆ. ಕೆಲವು ಕತೆಗಳ ನಡೆ ನಿಗೂಢವಾಗಿದ್ದು ಕತೆಯ ಅಂತ್ಯದ ವರೆಗೂ ಈ ನಿಗೂಢತೆಯನ್ನು ಕಾಪಾಡಿಕೊಳ್ಳುವ ಮೂಲಕ ಕತೆಗಾರ ಓದುಗನನ್ನು ಬೆಚ್ಚಿಬೀಳಿಸುತ್ತಾರೆ. ಗುಂದಿಯವರ ಕಥನಗಳು ಮೂರು ಬಗೆಗಳಲ್ಲಿ ಅಭಿವ್ಯಕ್ತಗೊಂಡಿವೆ : 1. ದಲಿತ ಸಂವೇದನೆಯ ಕತೆಗಳು 2. ಶೋಷಣೆ ಪ್ರಧಾನ ವಸ್ತುವಾಗುಳ್ಳ ಕತೆಗಳು 3. ದಲಿತೇತರ ಕಥೆಗಳು ಇವುಗಳ ಪರಿಶೀಲನೆ ಪ್ರತ್ಯೇಕ ಪ್ರಬಂಧವನ್ನು ಬೇಡುತ್ತದೆ. ಈ ಎಲ್ಲ ಕತೆಗಳ ಹರಹು ಸಣ್ಣ ಕತೆಗಳ ಪರಿಕಲ್ಪನೆಗೆ ಹೊಂದುವಂತಹದು. ಬಹಳಷ್ಟು ಕತೆಗಳು ಶೀರ್ಷಿಕೆಗೆ ನಿಷ್ಠವಾಗಿ ಅರಳಿಕೊಂಡರೂ ತಮ್ಮದೇ ಸಮುದಾಯದ ತಲ್ಲಣಗಳನ್ನು ಚಿತ್ರಿಸುವ ಕತೆಗಳು ಶೀರ್ಷಿಕೆಯಾಚೆ ಹೋಗಿ ಬಹಳಷ್ಟನ್ನು ಹೇಳಲು ಹವಣಿಸುತ್ತವೆ. ಗುಂದಿಯವರ ಕಥನಶಕ್ತಿ ಹರಳುಗಟ್ಟುವುದು ಇಂಥ ಕತೆಗಳಲ್ಲಿ. ಕತೆಗಳಿಗೆ ಪೂರಕವಾಗಿ ಗುಂದಿ ರೂಪಿಸುವ ಸಂಭಾಷಣೆಗಳು ದಲಿತರ ಮುಗ್ಧತೆಯ ಒಡಲಿನಿಂದ ಹೊಮ್ಮುವ ನವಿರಾದ ಹಾಸ್ಯಪ್ರಸಂಗಗಳಾಗಿ ಸಲ್ಲುತ್ತವೆ. ತಮ್ಮ ವಿಶಿಷ್ಟ ಕತೆಗಾರಿಕೆಯ ಮೂಲಕ ಡಾ. ರಾಮಕೃಷ್ಣ ಗುಂದಿ ಕನ್ನಡ ಕಥಾಲೋಕದ ಗಟ್ಟಿ ಕತೆಗಾರರ ಸಾಲಿನಲ್ಲಿ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ. -ಮೋಹನ ಹಬ್ಬು ಪ್ರತಿಗಳೀಗಾಗಿ ಸಂಪರ್ಕಿಸಿ : ಡಾ. ರಾಮಕೃಷ್ಣ ಗುಂದಿ, `ಸೌಗಂಧಿಕಾ’, ಕೆ.ಈ.ಬಿ. ರಸ್ತೆ, ಅಂಕೋಲಾ-581 314

ಡಾ. ರಾಮಕೃಷ್ಣ ಗುಂದಿಯವರ ಸಮಗ್ರ ಕತೆಗಳು
bottom of page