ಡಾ. ಎಸ್. ಎಲ್. ಭೈರಪ್ಪನವರ"ಉತ್ತರ ಕಾಂಡ" ಪುಸ್ತಕದ ಓದು
ಕನ್ನಡದಲ್ಲಿ ಸದ್ಯ ಅತಿ ಹೆಚ್ಚು ಓದುಗರನ್ನು ಪಡೆದಿರುವ ಕಾದಂಬರಿಕಾರರೆನಿಸಿರುವ ಭೈರಪ್ಪನವರ 'ಭೀಮಕಾಯ'ದಿಂದ ಯಾನ, ಆವರ್ತನಗಳತನಕ ಎಲ್ಲ ಕಾದಂಬರಿಗಳನ್ನೂ ಓದಿದವರಲ್ಲಿ ನಾನೂ ಒಬ್ಬ. ಹಿಂದೆ ಐವತ್ತು ಅರವತ್ತರ ದಶಕಗಳಲ್ಲಿ ಅನಕೃ, ಬಕ, ತರಾಸು, ಬೀಚಿ, ಪುರಾಣಿಕ , ನಿರಂಜನ ಮೊದಲಾದವರ ಕಾದಂಬರಿಗಳನ್ನು ಒಂದೂ ಬಿಡದಂತೆ ಓದುತ್ತಿದ್ದ ಜಮಾನಾದವರು ನಾವು. ಸುಮಾರು ೬೦ ವರ್ಷಗಳ ಹಿಂದೆ ಕೆ. ಎಂ. ಮುನಶಿ ಅವರ " ಕೃಷ್ಣಾವತಾರ" ( ಸಿದ್ಧವನಹಳ್ಳಿ ಕೃಷ್ಣಶರ್ಮ ಅವರಿಂದ ಅನುವಾದಿತ) ಓದಿದ್ದೆ. ಅದರಲ್ಲಿ ಶ್ರೀಕೃಷ್ಣನ ಅವತಾರ/ ಪವಾಡಗಳನ್ನೆಲ್ಲ ಬದಿಗಿಟ್ಟು ಅವನನ್ನು ಒಬ್ಬ ಚತುರ, ಮುತ್ಸದ್ದಿ ನಾಯಕನನ್ನಾಗಿ ಚಿತ್ರಿಸಲಾಗಿತ್ತು. ನಂತರ ಮಹಾಭಾರತ ಆಧರಿಸಿ ಅದೇ ಮಾದರಿಯಲ್ಲಿ ಭೈರಪ್ಪನವರ " ಪರ್ವ" ಬಂತು. "ಉತ್ತರ ಕಾಂಡ" ರಾಮಾಯಣದ ಉತ್ತರ ಭಾಗವನ್ನು ಆಧಾರವಾಗಿರಿಸಿಕೊಂಡು ಭೈರಪ್ಪನವರೇ ಬರೆದ ಕಾದಂಬರಿ. ಆದರೆ ಇದರಲ್ಲಿ ಮಧ್ಯೆ ಹೆಚ್ಚಿನ ಪುಟಗಳು ರಾಮನ ಕತೆಗೇ ಮೀಸಲಾಗಿದೆ. ( ಒಟ್ಟು ೩೩೦ ಪುಟ). ಆರಂಭ ಮತ್ತು ಕೊನೆಯ ಕೆಲವು ಪುಟಗಳಷ್ಟೇ ಸೀತೆಯ ಎರಡನೇ ವನವಾಸಕ್ಕೆ ಸಂಬಂಧಿಸಿದೆ. ಅಂದರೆ ವಾಲ್ಮೀಕಿ ಆಶ್ರಮದಲ್ಲಿ ಕುಶಲವರ ಜನನ ಇತ್ಯಾದಿ). ನಾನು ಪುಸ್ತಕವನ್ನು ವಿಮರ್ಶಿಸುವ ಕೆಲಸಕ್ಕೆ ಹೋಗದೆ ಅಲ್ಲಿ ಏನಿದೆ/ ಹೇಗಿದೆ ಎನ್ನುವದನ್ನು ಮಾತ್ರ ಹೇಳುತ್ತಿದ್ದೇನೆ. ಭೈರಪ್ಪನವರು ಮೂಲ ವಾಲ್ಮೀಕಿ ರಾಮಾಯಣದ ಕಥೆ ನೇರವಾಗಿ ಹೇಳಲುಹೊರಟಿಲ್ಲ. ತಮ್ಮ ಕಲ್ಪನೆಯ ಅಥವಾ ವಿಚಾರದ ಹಿನ್ನೆಲೆಯಲ್ಲಿ ತಮಗೆ ಬೇಕಾದ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಉದಾಹರಣೆಗೆ * ದಶರಥ ಯುದ್ಧದ ಸಂದರ್ಭದಲ್ಲಿ ಕೈಕೆಯಿಗೆ ಎರಡು ವರಗಳನ್ನು ನೀಡಿದ ಪ್ರಸ್ತಾಪ ಇದರಲ್ಲಿಲ್ಲ. ಆ ಪ್ರಸಂಗವನ್ನು ಬೇರೆ ರೀತಿ ತೆಗೆದುಕೊಂಡಿದ್ದಾರೆ. * ಗೌತಮ ಮುನಿ - ಅಹಲ್ಯೆ ಪ್ರಸಂಗದಲ್ಲಿ ಅಹಲ್ಯೆ ಕಲ್ಲಾದ ವಿಚಾರ ಇದರಲ್ಲಿಲ್ಲ. ಅದನ್ನು ವಿಭಿನ್ನವಾಗಿ ಚಿತ್ರಿಸಿದ್ದಾರೆ. * ರಾವಣ ಪುಷ್ಪಕ ವಿಮಾನದಲ್ಲಿ ಬಂದು ಸೀತೆಯನ್ನು ಅಪಹರಿಸುವದಿಲ್ಲ. ಬದಲಾಗಿ ನಾಲ್ವರು ರಾವಣನ ದೂತರು ಬಂದು ಸೀತೆಯನ್ನು ಎಳೆದುಕೊಂಡು ದೋಣಿಯಲ್ಲಿ ಸಮುದ್ರ ದಾಟಿ ಲಂಕೆಗೆ ಒಯ್ಯುತ್ತಾರೆ. * ರಾಮನ ಸೇನೆ ಸೇತುವೆ ಕಟ್ಟಿದ ವಿಚಾರವೂ ಇಲ್ಲ. * ಹನುಮಂತನಿಗೆ ವಿಶೇಷ ಮಹತ್ವವಿಲ್ಲ. ಲಂಕೆ ಸುಟ್ಟ ಪ್ರಸಂಗವೂ ಇಲ್ಲ. ಇಂತಹ ಸಾಕಷ್ಟು ಬದಲಾವಣೆಗಳನ್ನು ಇಲ್ಲಿ ಕಾಣಬಹುದಾಗಿದೆ. ಇದಕ್ಕಿಂತ ಹೆಚ್ಚಾಗಿ ಕೆಲವೆಡೆ ಬಳಸಲಾದ ಭಾಷೆ ಕೆಲವು ಓದುಗರಿಗಾದರೂ ತುಂಬ ಕಿರಿಕಿರಿ ಕೊಡುವ ಸಾಧ್ಯತೆಗಳಿವೆ. ಅಯೋಧ್ಯೆಯ ರಾಣಿ ಕೌಸಲ್ಯೆಯ ಬಾಯಲ್ಲಿ ಸಹ ಅತ್ಯಂತ ಕೆಟ್ಟ ರೀತಿಯ ಬೈಗಳ ಭಾಷೆ ಕೇಳಿಬರುತ್ತದೆ. ಅವು ಕೆಲವೆಡೆ ಬಳಕೆಯಲ್ಲಿರುವಂತಹ ಶಬ್ದಗಳೆಂದು ಒಪ್ಪಿದರೂ ಕೂಡ ಕೌಸಲ್ಯೆಯಂಥವರ ಬಾಯಲ್ಲಿ ಅಂತಹ ಅಸಭ್ಯ ಶಬ್ದಗಳು ಬಂದಿರಲು ಸಾಧ್ಯವೇ ಎನ್ನುವ ಸಂದೇಹ ಉಂಟಾದರೆ ಆಶ್ಚರ್ಯವೇನಿಲ್ಲ. ಇತರ ಕೆಲ ಪಾತ್ರಗಳಲ್ಲೂ ಅಂತಹ ಸಂಭಾಷಣೆಗಳಿವೆ. ಅಲ್ಲಲ್ಲಿ ಕೆಲ ಸನ್ನಿವೇಶಗಳು ಹೃದಯಸ್ಪರ್ಶಿಯಾಗಿವೆ. ಕಾದಂಬರಿ ಕಲೆ ಒಲಿದಿರುವ ಭೈರಪ್ಪನವರ ಕೃತಿ ಎಂದ ಮೇಲೆ ಅದು ಓದಿಸಿಕೊಂಡು ಹೋಗುವದರಲ್ಲಿ ಅಚ್ಚರಿಯೇನಿಲ್ಲ. ಇಲ್ಲಿ ಹೆಸರುಗಳನ್ನು ಬದಲಿಸಿದರೆ ಅದೊಂದು ಉತ್ತಮ ಸಾಮಾಜಿಕ ಕಾದಂಬರಿಯೆನಿಸಬಹುದಿತ್ತೇನೊ. ರಾಮಾಯಣ ಮಹಾಭಾರತಗಳು ಈತನಕ ಹಲವರಿಂದ ಹಲವು ರೂಪ ತಾಳಿಬಂದಿವೆ. ತಮ್ಮ ತಮ್ಮದೇ ಆದ ಕಲ್ಪನೆಯಂತೆ ಅವನ್ನು ಬಳಸಿಕೊಂಡಿದ್ದಾರೆ. ಅದೇನೂ ಹೊಸದಲ್ಲ. ಬೇರೆಬೇರೆ ದೇಶಗಳಲ್ಲೂ ಬೇರೆಬೇರೆ ಥರಾ ಕಾಣಿಸಿಕೊಂಡಿವೆ. ನೂರಾರು ತರಹದ ರಾಮಾಯಣಗಳು, ಮಹಾಭಾರತಗಳು ಹೊರಬಂದಿವೆ. ಅವುಗಳಲ್ಲಿ ಇದು ಒಂದು ಎಂದು ಪರಿಗಣಿಸಲಡ್ಡಿಯಿಲ್ಲ. ಒಪ್ಪುವದು ಬಿಡುವದು ಬೇರೆ ಪ್ರಶ್ನೆ. ಓದಿ ತಮ್ಮ ತಮ್ಮ ಅಭಿಪ್ರಾಯಗಳನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ ಎಲ್ಲರಿಗೂಇದೆ. ಓದಿ ನನಗನಿಸಿದ್ದನ್ನು ನಾನು ಹೇಳಿದ್ದೇನೆ. ನನಗನಿಸಿದ ಹಾಗೆಯೇ ಇತರರಿಗೆ ಅನಿಸಬೇಕೆಂದೇನೂ ಇಲ್ಲ. - ಎಲ್. ಎಸ್. ಶಾಸ್ತ್ರಿ