top of page

ಜವಾರಿ ರಾಜಕಾರಣದ ಕೊನೆಯ ಕೊಂಡಿ.

ಕೋಲು ಮುಖ, ಚಿಕ್ಕ ಚಿಕ್ಕ ಕಣ್ಣುಗಳು,ಸದಾ ನುಣುಪಾದ ಗಲ್ಲ, ಮುಖದಲ್ಲಿ ಸಿಟ್ಟು ಸೆಡವು ,ಗೌಡಕಿಗತ್ತು , ಹೋರಾಟ,ವಾದ-ವಿವಾದ,ಬೈಗುಳ, ನೆಲದನಿಯ ಪ್ರೀತಿ, ಇವರು ಮಂಡ್ಯ ನೆಲದ ನಿಜವಾದ ಪ್ರತಿನಿಧಿ ಜಿ‌ ಮಾದೇಗೌಡ. ಅವರು ಸ್ಥಳೀಯತೆಯ ಪ್ರತಿನಿಧಿಯಾಗಿದ್ದರು.ಬೆಂಗಳೂರು ಹತ್ತಿರವಿದ್ದರೂ ಬದುಕಿನುದ್ದಕ್ಕೂ ಮಂಡ್ಯದ ಭಾಷೆ ಯಲ್ಲಿಯೇ ಮಾತನಾಡಿದರು.ರಾಜಕಾರಣಿ ಎಂದರೆ ನಮ್ಮವನು ಎನ್ನುವ ಹಾಗೆ ಬದುಕಿದರು.ಬೆಂಗಳೂರಿನ ನಾಜೂಕಿನ ರಾಜಕಾರಣದ ಭಾಷೆ ಅವರು ಕಲಿತಿದ್ದರೆ ಅವರೆಂದೋ ಮುಖ್ಯಮಂತ್ರಿಯಾಗುತ್ತಿದ್ದರು.ಹಠಕ್ಕೆ ಬಿದ್ದವರ ಹಾಗೆ ಅವರು ಆ ಭಾಷೆಯನ್ನು ಕಲಿಯಲಿಲ್ಲ.ಅವರಿಗೆ ಅದು ಬೇಕಾಗಿಯೂ ಇರಲಿಲ್ಲ. ಅವರು ಮುಲಾಜು ಹಿಡಿಯುತ್ತಿರಲಿಲ್ಲ.ಒಂದು ಕಾಲಕ್ಕೆ ಆಳುವ ಸರಕಾರದ ಮುಖ್ಯಮಂತ್ರಿಯನ್ನೇ‌ ಪ್ರಶ್ನಿಸಿದರು.ಸಂಸದರಾದರೂ ಬಸ್ಸಲ್ಲಿ ತಿರುಗಿದರು.ಹಿಂಬಾಲಕರಿಲ್ಲದೆಯೂ ಗಾಂಧಿಭವನದ ಕಟ್ಟೆಯ ಮೇಲೆ ಒಬ್ಬರೇ ಕೂಡುತ್ತಿದ್ದರು.ದೂರದ ಸಾವಿರಾರು ಹಳ್ಳಿ ಮನೆಯ ಜಗಳಗಳನ್ನು ಬಗೆ ಹರಿಸಿದರು.ಎಂಥ ದೊಡ್ಡ ರಾಜಕಾರಿಣಿ ಇದ್ದರೂ 'ಯಾಕಪ್ಪ? ಎಂದು ಕೇಳುತ್ತಿದ್ದರು.ಮಂಡ್ಯದಲ್ಲಿದ್ದುಕೊಂಡೇ ವಿಧಾನಸೌಧಕ್ಕೆ ಹಿರಿಯರಾದರು. ಯಾಕೋ ಗೊತ್ತಿಲ್ಲ, ಇಷ್ಟು ಜವಾರಿಯಾಗಿದ್ದ ಗೌಡರು ಕಾಳಮುದ್ದನದೊಡ್ಡಿ ಎಂಬ ಜವಾರಿ ಊರಿಗೆ ಭಾರತಿನಗರವೆಂಬ ಹೆಸರಿಟ್ಟರು.ಏನೇ ಇರಲಿ, ಶಂಕರೇಗೌಡರ ನಂತರ ನೀವೊಬ್ಬರಿದ್ದಿರಿ.ಮಂಡ್ಯ ಹಲವು ಅನಾಹುತಗಳಿಗೆ ಬಲಿಯಾಗದೇ ಇರುವುದಕ್ಕೆ ನಿಮ್ಮಂಥ ಹಿರಿಯರು ಕಾರಣ. ನೀವೂ ಹೋದಿರಿ.ನೀವಿಲ್ಲದ ಗಾಂಧಿಭವನದ ಕಟ್ಟೆಯ ಮೇಲಿನ ಅನಾಥ ಕುರ್ಚಿ ನಮ್ಮನ್ನು ಹೆಚ್ಚು ಕಾಲ ಕಾಡುತ್ತದೆ. ಬಸವರಾಜ ಹೂಗಾರ.

ಜವಾರಿ ರಾಜಕಾರಣದ ಕೊನೆಯ ಕೊಂಡಿ.
bottom of page