top of page

ಜನಪರ ಪ್ರವೃತ್ತಿಯ ಡಾ. ಗೌರೀಶ ಕಾಯ್ಕಿಣಿ

-ಸುನಂದಾ ಕಡಮೆ [ವಿಚಾರವಾದಿ ಖ್ಯಾತಿಯ ಜೊತೆಗೆ ಅಪ್ಪಟ ಮಾನವತಾವಾದಿ ಲೇಖಕ ದಿ. ಗೌರೀಶ ಕಾಯ್ಕಿಣಿಯವರ 108 ನೇ ಹುಟ್ಟುಹಬ್ಬದ ದಿನವಾದ ಇಂದು 'ಆಲೋಚನೆ' ಆ ಹಿರಿಯ ಚೇತನಕ್ಕೆ ನಮಿಸುತ್ತಾ ಲೇಖಕಿ ಶ್ರೀಮತಿ ಸುನಂದಾ ಕಡಮೆ ಯವರು ದಿ.ಗೌರೀಶರ ಬದುಕು ಮತ್ತು ಸಾಧನೆಯ ಕುರಿತು ಬರೆದ ಈ ಲೇಖನವನ್ನು ತಮ್ಮ ಮುಂದಿಡುತ್ತಿದೆ - ಸಂಪಾದಕ ] ತಮ್ಮ ವಿದ್ವತ್ತಿಗೆ ಶೋಭಿಸುವ ವಿನಯದಿಂದ ಬದುಕಿ ಬಾಳಿದ, ನಮ್ಮ ಸಂಸ್ಕೃತಿಯ ಹಾಗೂ ಸಾಹಿತ್ಯದ ಒಂದು ಹಿರಿಯ ಚೇತನ ಡಾ. ಗೌರೀಶ ಕಾಯ್ಕಿಣಿಯವರು 'ಹೋಗೋಣ ಬಾ ಇನ್ನು ಸೀಮೆಯನು ದಾಟಿ..' ಎಂಬ ಅಂಬಿಕಾತನಯರ ಕವಿನುಡಿಯಂತೆ, ಇದೇ ೨೦೨೦ ರ ಸೆಪ್ಟೆಂಬರ್ ಹನ್ನೆರಡರಂದು ನೂರ ಎಂಟನೆಯ ಹೊಸ್ತಿಲಲ್ಲಿ ಕಾಲಿಟ್ಟಿದ್ದಾರೆ. ಕುಮಟೆಯ ಗೌರೀಶ ಕಾಯ್ಕಿಣಿ ಪ್ರತಿಷ್ಠಾನವು ಕಾಯ್ಕಿಣಿ ಸಮಗ್ರ ಸಾಹಿತ್ಯದ ಅನೇಕ ವಿಚಾರ ಸಂಕೀರ್ಣಗಳನ್ನು ಆಗಾಗ ಹಮ್ಮಿಕೊಳ್ಳುವುದು ಸಂತೋಷದ ಸಂಗತಿ. ಗೌರೀಶರ ಪ್ರಜ್ಞೆಯಲ್ಲಿ ಅರಳಿದ ಅನಿಸಿಕೆಗಳು ಎಷ್ಟು ಅಪೂರ್ವವೋ ಅಷ್ಟೇ ಅಮೂಲ್ಯವಾದದ್ದು. ಇಂದಿನ ಹೊಸ ತಲೆಮಾರಿನ ಬರಹಗಾರರ ಚಿಂತನೆಯಲ್ಲಿ ಹೊಸ ಹೊಸ ವಿಚಾರದ ಬೀಜ ಚಿಗಿಯಲಿಕ್ಕೆ ಅದು ಸೊಂಪಾಗಿ ಬೆಳೆಯಲಿಕ್ಕೆ ಗಾಳಿ ನೀರು ಬೆಳಕಿನಂತೆ ಗೌರೀಶರ ಸಮಗ್ರ ಚಿಂತನೆಯ ಓದಿನ ಅಗತ್ಯವಿದೆ. ಹನ್ನೆರಡು ಸೆಪ್ಟೆಂಬರ್ ೧೯೧೨ ರಂದು ಗೋಕರ್ಣದಲ್ಲಿ ಜನಿಸಿದ ಡಾ. ಗೌರೀಶರು ಮುಂದೆ ಕುಮಟಾದಲ್ಲಿ ತಮ್ಮ ಮೆಟ್ರಿಕ್ಯುಲೇಶನ್ ಮುಗಿಸಿ, ೧೯೪೫ ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಇಂಟರ್ ಮಿಡಿಯೇಟ್ ಗೆ ಸೇರಿಕೊಂಡರು. ಆ ಸಂದರ್ಭದಲ್ಲೇ ರಾಷ್ಟಭಾಷಾ ವಿಶಾರದ ಪರೀಕ್ಷೆಯಲ್ಲಿ ಅಂದಿನ ಮುಂಬೈ ಪ್ರಾಂತ್ಯಕ್ಕೆ ಪ್ರಥಮರಾಗಿ ಉತ್ತೀರ್ಣರಾದರು. ಮುಂದೆ ೧೯೭೬ ರ ವರೆಗೆ ಗೋಕರ್ಣ ಬಂಕಿಕೊಡ್ಲಗಳಲ್ಲಿ ಹೈಸ್ಕೂಲು ಹಾಗೂ ಕಿರಿಯ ಮಹಾವಿದ್ಯಾಲಯಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಅವರಿಗೆ ರಾಜ್ಯ ಆದರ್ಶ ಶಿಕ್ಷಕ ಪ್ರಶಸ್ತಿ ಲಭಿಸಿತ್ತು. ಆ ಮಧ್ಯೆ ೧೯೫೩ ರಲ್ಲಿ ತದಡಿ ಊರಿನವರಾದ ಶಾಂತಾ ಅವರೊಂದಿಗೆ ಅಂತರ್ಜಾತಿ ವಿವಾಹವಾಗಿ ನಂತರ ಕವಿ ಕತೆಗಾರ ಜಯಂತ ಕಾಯ್ಕಿಣಿಯವರನ್ನು ಪಡೆದರು. ನಲವತ್ತರ ದಶಕದಲ್ಲಿ 'ಬೆಳಕು' ಹಾಗೂ ಐವತ್ತರ ದಶಕದಲ್ಲಿ 'ನಾಗರಿಕ' ಪತ್ರಿಕೆಗಳ ಸಂಪಾದಕರಾಗಿ ಕೆಲಸ ಮಾಡಿದ್ದು ಗೌರೀಶರನ್ನು ಪತ್ರಕರ್ತರನ್ನಾಗಿಯೂ ರೂಪಿಸಿದವು. ನಂತರ ಹದಿನೇಳು ವರ್ಷಗಳ ಕಾಲ ವಿವಿಧ ಹೆಸರಿನಲ್ಲಿ 'ಜನಸೇವಕ' ಎಂಬ ಸಮಾಜವಾದಿ ಪತ್ರಿಕೆಗೆ ಅಂಕಣಗಳನ್ನು ಬರೆದರು. ಗೌರೀಶರು ಕನ್ನಡ ಕೊಂಕಣಿ ಮರಾಠಿ ಹಿಂದಿ ಮತ್ತು ಇಂಗ್ಲೀಷಿನಲ್ಲಿ ಒಟ್ಟೂ ಎಪ್ಪತ್ತಕ್ಕಿಂತಲೂ ಹೆಚ್ಚು ಕೃತಿಗಳನ್ನು ನೀಡಿದ್ದಾರೆ. ಪ್ರೊಗ್ರೆಸ್ ಆಫ್ ಮೈಸೂರು ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿರುವ ಜೊತೆಗೆ ಕರ್ನಾಟಕ ವಿವಿ ವ್ಯಾಸಂಗ ವಿಸ್ತರಣ ವಿಭಾಗದ ಹಾಗೂ ಆಕಾಶವಾಣಿ ಧಾರವಾಡ ನಿಲಯದ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಈ ನಡುವೆ ಉತ್ತರ ಕನ್ನಡ ಜಿಲ್ಲಾ ಲೇಖಕ ಪ್ರಕಾಶಕ ಹಾಗೂ ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ಗೌರೀಶರ ಅತ್ಯಮೂಲ್ಯ 'ನವಮಾನವತಾ ವಾದ' ಕೃತಿಗೆ ಕರ್ನಾಟಕ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಮಂಗಳೂರಿನ ಸಂದೇಶ ಪ್ರಶಸ್ತಿ, ಮೀನಾಕ್ಷಿ ಕೊಂಕಣಿ ಕವನ ಸಂಕಲನಕ್ಕೆ ಕೊಂಕಣಿ ಸಾಹಿತ್ಯ ಅಕೆಡಮಿ ಪ್ರಶಸ್ತಿ, ಡಾ. ಶಂಭಾ ವಿಚಾರವೇದಿಕೆಯ ಸಂಶೋಧನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ವಜ್ರ ಮಹೋತ್ಸವ ಗೌರವ ಪ್ರಶಸ್ತಿ, ವರ್ಧಮಾನ ಪ್ರಶಸ್ತಿಗಳು ಸೇರಿದಂತೆ ಕರ್ನಾಟಕ ಸಾಹಿತ್ಯ ಅಕೆಡಮಿ ಗೌರವ ಪ್ರಶಸ್ತಿ ಕೂಡ ಇವರನ್ನು ಅರಸಿಕೊಂಡು ಬಂದಿವೆ. ಗೌರೀಶರು ತಮ್ಮ ಹದಿನೆಂಟನೇ ವಯಸ್ಸಿನಲ್ಲೇ ಈ ಲೇಖನ ವ್ಯವಸಾಯ ಆರಂಭಿಸಿದರು. ಮೊಟ್ಟ ಮೊದಲ ಲೇಖನ 'ಶಾಂಡಿಲ್ಯ ಪ್ರೇಮ ಸುಧಾ' ಕನ್ನಡ ಮತ್ತು ಮರಾಠಿ ಭಕ್ತಿ ಗೀತೆಗಳ ಸಂಕಲನ. ಗಂಡು- ಹೆಣ್ಣು, ಪ್ರೀತಿ, ಮನೋವಿಜ್ಞಾನದ ರೂಪರೇಖೆಗಳು, ಮಾರ್ಕ್ಸವಾದ, ವಿಚಾರವಾದ, ಪಶ್ಚಿಮದ ಪ್ರತಿಭೆಗಳು, ಭಾರತೀಯ ವಿಜ್ಞಾನಿಗಳು, ಒಲವಿನ ಒಗಟು, ಕೌಂಚಧ್ವನಿ, ಸ್ವಾತಂತ್ರೋತ್ತರ ವಿಚಾರ ಸಾಹಿತ್ಯ, ವಾಲ್ಮೀಕಿ ತೂಕಡಿಸಿದಾಗ, ಗ್ರೀಕ್ ದಾರ್ಶನಿಕರು, ನವ್ಯದ ನಾಲ್ಕು ನಾಯಕರು, ಚಾರ್ವಾಕ ದರ್ಶನದ ಲೋಕಾಯತ ಮುಂತಾದ ಎಪ್ಪತ್ತಕ್ಕಿಂತ ಹೆಚ್ಚು ಮಹತ್ವದ ಕೃತಿಗಳನ್ನು ಇವರು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ವರಕವಿ ಬೇಂದ್ರೆ ಕಾವ್ಯ ವಿಮರ್ಶೆಯನ್ನು 'ಕಂಪಿನ ಕರೆ' ಎಂಬ ಕೃತಿಯಲ್ಲೂ, ಕಣವಿ, ದಿನಕರ ದೇಸಾಯಿ, ಅಕಬರ ಅಲಿ, ವಿ.ಜಿ ಭಟ್ಟ, ಬಿಎ ಸನದಿ, ವಿಷ್ಣು ನಾಯ್ಕರವರ ಕಾವ್ಯ ಸಮೀಕ್ಷೆಗಳನ್ನೂ ಅಷ್ಟೇ ಧ್ವನ್ಯಾತ್ಮಕವಾಗಿ ವಿಂಗಡಿಸಿದವರು. ವಿಶೇಷವಾಗಿ ಕಾಯ್ಕಿಣಿಯವರ ಸೃಜನಶೀಲ ಪ್ರತಿಭೆ ಓದುಗರಿಗೆ ದಕ್ಕಿದ್ದು ರೂಪಕ ಮತ್ತು ನಾಟಕಗಳ ಮೂಲಕ. ಕ್ರೌಂಚ ಧ್ವನಿ ಇವರಿಗೆ ಕೀರ್ತಿಯನ್ನು ತಂದುಕೊಟ್ಟ ಗೀತರೂಪಕಗಳ ಸಂಕಲನ. ಇಲ್ಲಿರುವ ರೂಪಕಗಳು ರಂಗಸಾಧ್ಯತೆಯ ದೃಷ್ಟಿಯಿಂದಲೂ ಹೆಚ್ಚು ಯಶಸ್ವಿಯಾದವುಗಳು. ಶ್ಲೇಷೆಗಳು, ಪ್ರಾಸಾನುಪ್ರಾಸಗಳು, ಚತುರೋಕ್ತಿಗಳು ಕಾವ್ಯವನ್ನೂ ಮೀರಿಸುವಂತೆ ಇವರ ಗದ್ಯದಲ್ಲಿ ಹಾಸುಹೊಕ್ಕಾಗಿದೆ. ತನ್ನ ನಿಲುವನ್ನು ಬಿಟ್ಟುಕೊಡದೇ ಯಾರ ನಿಲುವಿನ ಬಗ್ಗೆಯೂ ಬರೆಯಬಲ್ಲ, ಮಾತಾಡಬಲ್ಲ, ಚರ್ಚಿಸಬಲ್ಲ ಒಂದು ಬಗೆಯ ಸಹ ಸಂಬಂಧದ ಗುಣಗ್ರಾಹಿ ನಿಲುವು ಗೌರೀಶರದು. ಗೌರೀಶರು ಬುದ್ಧನ ಜೀವನ ಸತ್ವದಿಂದ ಹಿಡಿದು ರತ್ನರ ಮಂಕು ತಿಮ್ಮನವರೆಗೆ, ಡಾರ್ವಿನ್ ವಾಲ್ಲೆಸ್‌ರಿಂದ ಹಿಡಿದು ಅಶೋಕ ಚಕ್ರವರ್ತಿಯವರೆಗೆ, ಶೂರ್ಪನಖಿ ಪ್ರಸಂಗದಿಂದ ಹಿಡಿದು ದ್ಯಾಮವ್ವನ ಜಾತ್ರೆಯವರೆಗೆ, ವೀಣೆಯ ತಂತಿಗಳಿಂದ ಹಿಡಿದು ಬ್ರಾಹ್ಮಣೀಕರಣದವರೆಗೆ ಇಂಥೆಲ್ಲ ವೈವಿಧ್ಯಮಯ ಬದುಕಿನ ಸಾಮಾನ್ಯ ತಿಳಿವಳಿಕೆಯನ್ನೂ ಸಹ ತಮ್ಮ ನೂರಾರು ಅಲಿಖಿತ ಭಾಷಣಗಳಿಂದ ಸಾವಿರಾರು ಲೇಖನಗಳಿಂದ ನಮಗೆ ನೀಡಿದ್ದಾರೆ. 'ಮಾನವೀಯ ಅನುಕಂಪ, ಸಹಾನುಭೂತಿ, ಜಾತಿ ಮತ ಪಂಥ ಉಚ್ಛ ನೀಚಗಳೆಂಬ ಭೇದಗಳನ್ನು ಮೀರಿದ, ಮನುಷ್ಯತ್ವದ ಸಾಮಯಿಕ ಭಾವನೆಯೆಂಬ ಅರ್ಥದ ಮಾನವೀಯತೆಯನ್ನು ಗೆದ್ದ, ತಾತ್ವಿಕವಾದ ತಾತ್ಪರ್ಯದ ಪರಿಕಲ್ಪನೆಯೇ ಮಾನವತಾವಾದ. ಇಲ್ಲಿ ಮಾನವತೆ ಹೊಸತಲ್ಲ. ಮಾನವನು ಕೂಡ ತೀರ ಹಳಬ. ಮಾನವತೆ ಕೂಡ ಅವನಷ್ಟೇ ಹಳೆಯ ಸಂಗತಿ. ಮಾನವರ ಬಗೆಗೆ ಹೊಸ ದೃಷ್ಟಿ, ನವೀನ ಪ್ರಬೋಧನೆಗಳಿರಬೇಕು. ನಮ್ಮನ್ನು ನಾವೇ ಮೇಲೆತ್ತಲು ಸುಲಭವಾದ ದಾರಿ ಯಾವಾಗಲೂ ಸುತ್ತು ಬಳಸಿನ ದಾರಿಯೇ. ಇಲ್ಲಿ ನೇರವಾದ ದಾರಿಯೇ ಹತ್ತಿರ ಅನ್ನಿಸುವದು, ಯಾವಾಗಲೂ ಸರಳ ರೇಖೆಯೇ ಅತಿ ಚಿಕ್ಕ ಅಂತರ. ಆದರೆ ಇವೆರಡರ ಒಂದು ಸುವರ್ಣ ಮಧ್ಯವನ್ನು ನಾವು ಅರಸಬೇಕು, ಮಾನವೀಯತೆಯ ಒಟ್ಟಾರೆ ಕ್ಷಕಿರಣದಂತಿರುವ ನವ ಮಾನವತಾವಾದವು ನಮ್ಮ ಕಾಲದ ಅತ್ಯಂತ ಮಿಗಿಲಾದ ಅವಶ್ಯಕತೆಗಳನ್ನು ಪೂರೈಸಬಲ್ಲದು. ಎಂದೆಲ್ಲ ಗೌರೀಶರು ತಮ್ಮ ನವ ಮಾನವತಾವಾದವನ್ನು ಮಂಡಿಸಿದರು. ಸ್ವಾತಂತ್ರ್ಯಕ್ಕಾಗಿ ಶೋಧ ಮತ್ತು ಸತ್ಯಕ್ಕಾಗಿ ಹುಡುಕಾಟ ಇವು ಎಲ್ಲ ಮಾನವೀಯ ವಿಕಾಸ ಹಾಗೂ ಪ್ರಗತಿಗೆ ಮೂಲ ಎಂದ ಎಂ.ಎನ್ ರಾಯ್ ಅವರ ರೆಡಿಕಲ್ ಹ್ಯೂಮ್ಯಾನಿಸಂ ಅನ್ನು ಗೌರೀಶರು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಪಶ್ಚಿಮದ ಪ್ರತಿಭೆ ಕೃತಿಯಲ್ಲಿ ವಿರಕ್ತ ನಿರುದ್ಯೋಗಿ ನಿವೃತ್ತಿಪರ ವಾಚಾಳಿ ಸಾಧು ಮತ್ತು ಸಂಸಾರಿಗನಾದ ಸಾಕ್ರೆಟಿಸ್ ಬಗ್ಗೆ ಬರೆಯುತ್ತ 'ಮಹಾತ್ಮರ ಮಾತು ಎಂಥ ಕೃತಿಗೂ ಮೇಲು, ಅಂಥವರ ಮಾತಿನ ಹಿಂದೆ ಅರ್ಥ ಓಡಿ ಬರುತ್ತದೆ. ಭಕ್ತನ ಹಿಂದೆ ಭಗವಂತ ಓಡಿ ಬಂದಂತೆ, ಸಾಕ್ರೆಟಿಸ್ ಅಂಥ ಮಹಾತ್ಮಾ' ಅನ್ನುತ್ತಾರೆ ಗೌರೀಶರು. ವಾಗ್ಭಟ, ಸತ್ಯದ ತತ್ವವೇತ್ತ, ತೀಕ್ಷ್ಣ ಶೋಧಕ ಸಹಸ್ರ ಬುದ್ಧಿಯ ಸಾಕ್ರೆಟಿಸ್ ಎಂಬ ಈ ಮೇಧಾವಿಯನ್ನು ಗೌರೀಶರು ಸರ್ವಜ್ಞನೆಂದು ಕರೆದರು. ತನ್ನ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿದ ಮೊನಾಲಿಸಾಳನ್ನು ಸೃಷ್ಟಿಸಿದ ಕಲಾ ಪ್ರತಿಭೆ ಲಿಯೊನಾರ್ಡೊ ಡಾವಿನ್ಸಿ ಕುರಿತು ಬರೆಯುತ್ತ, ತನ್ನ ಛಾಯಾ ಪ್ರಭೆಗೆ ಕಾರಣವಾಗುವ ನಿಸರ್ಗ ನಿಯಮವನ್ನು ಅರಿತುಕೊಳ್ಳದ ಹಾಗೂ ಕಿರಣಗಳ ಅಭ್ಯಾಸವನ್ನು ಹಾಗೂ ಬಿಂಬ ಪ್ರತಿಬಿಂಬಗಳ ರೀತಿಯನ್ನು ಪರಿಶೀಲಿಸದ ಹೊರತು ಲಿಯೊನಾರ್ಡೊ ಒಂದು ಚುಕ್ಕೆಯನ್ನೂ ಮೂಡಿಸುತ್ತಿರಲಿಲ್ಲ ಎಂದು ಬರೆಯುತ್ತಾರೆ. ಜೀವ ವಿಕಾಸ ಕ್ರಮದ ತತ್ವವನ್ನು ಹೇಳಿದ ಚಾರ್ಲಸ್ ಡಾರ್ವಿನ್ ಕುರಿತು ವಿಶ್ಲೇಷಿಸುತ್ತ, ಸೃಷ್ಟಿಯ ಕುರಿತು ಮಾನವ ದೃಷ್ಟಿಯನ್ನೇ ಪಲ್ಲಟಿಸಿದ ಡಾರ್ವಿನ್ ಜೀವ ಶಾಸ್ತçದ ಮುಂದಿನ ವಿಸ್ತಾರಕ್ಕೆಲ್ಲ ಹೇಗೆ ದಾರಿದೀಪವಾದ ಎಂಬ ಬಗೆಯನ್ನು ಗೌರೀಶರು ತಮ್ಮದೇ ವಿಶಿಷ್ಟ ಶೈಲಿಯಲ್ಲಿ ಪ್ರತಿಪಾದಿಸುತ್ತಾರೆ. ಹೀಗೆಯೇ ಶೆಲ್ಲಿ, ಕೀಟ್ಸ್, ಬಾಯರನ್, ಲೂಯಿ ಪಾಶ್ಚರ್, ನ್ಯೂಟನ್, ಎಡಿಸನ್, ಕುಕ್, ಲಿಂಕನ್, ಬಿಸ್ಮಾರ್ಕ, ಗೆರಿಬಾಲ್ಡ್, ಇನ್ನೂ ಮುಂತಾದವರ ಮಾಹಿತಿಗಳೇ ಎರಡು ಸಂಪುಟದಷ್ಟಿವೆ. ಇವೆಲ್ಲ ಅಧ್ಯಯನಶೀಲವೂ ವಿಮರ್ಶಾತ್ಮಕವೂ ಆದ ಬರಹಗಳು. 'ವಾಲ್ಮೀಕಿ ತೂಕಡಿಸಿದಾಗ' ಎಂಬ ತಮ್ಮ ಪ್ರಸಿದ್ಧ ಕೃತಿಯಲ್ಲಿ ಗೌರೀಶರು ರಾಮನ ಕುರಿತಾದ ಹಲವು ಸಂದೇಹಗಳನ್ನು ಎತ್ತುತ್ತಾರೆ. 'ಮರ್ಯಾದಾ ಪುರುಷೋತ್ತಮನೇ ಮರ್ಯಾದೆಯಿಂದ ನಡೆದುಕೊಳ್ಳಲಿಲ್ಲ. ವನವಾಸ ಮುಗಿಯಿತೆಂದು ಮರಳಿ ಪಟ್ಟಕ್ಕೆ ಬರುವ ಅಧಿಕಾರ ರಾಮನಿಗೆ ಸಲ್ಲದು, ಆತ ಓರ್ವ ಗಣ್ಯ ಪ್ರಜೆಯಾಗಿಯೋ ರಾಜಕುಲದ ಹಿರಿಯ ಪುರುಷನಾಗಿಯೋ ಉಳಿಯಬೇಕಿತ್ತು. ವಶಿಷ್ಠರ ಯೋಜನೆಗೆ ಸಮ್ಮತಿಸಿ ರಾಮನು ಪಾದುಕೆ ಕಳಿಸಿದಾಗಲೇ ಆತ ಪಟ್ಟ ಸ್ವೀಕರಿಸಿದಂತೆ, ಸತ್ಯವಚನಿ ಎನಿಸಿದ ಶ್ರೀರಾಮನ ಮೂಲ ಘಟನೆಯೇ ಅಸತ್ಯದ ಮೇಲೆ ನಿಂತಿದೆ' ಎಂಬ ತಮ್ಮ ಎಂದಿನದೇ ಆದ ಹರಿತ ವಿಮರ್ಶೆಯಿಂದ ಗೌರೀಶರು ವಾಲ್ಮೀಕಿಯನ್ನು ಸಂವಾದಕ್ಕೆಳೆಯುತ್ತಾರೆ. ಇದಲ್ಲದೇ ಮರಾಠಿ ಹಾಗೂ ಇಂಗ್ಲೀಷಿನಿಂದ ಅನೇಕ ಗ್ರಂಥಗಳನ್ನು ಕನ್ನಡಕ್ಕೆ ತಂದಿದ್ದಾರೆ. 'ನಾಸ್ತಿಕನು ಮತ್ತು ದೇವರು' ಇದು ವೈಚಾರಿಕ ಬೀಜಗಳನ್ನು ಹುಟ್ಟು ಹಾಕುವ ಕೃತಿ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, 'ಭಾರತೀಯ ತತ್ವಜ್ಞಾನದ ಇತಿಹಾಸ' ಇದು ಮೂಲ ಮರಾಠಿಯಿಂದ ಅನುವಾದಿತ ಪುಸ್ತಕ. ಪಂಜಾಬಿ ಕತೆಗಳು, ಬಿಳಿಯ ಕೊಕ್ಕರೆ, ಮಣ್ಣಿನ ಮನುಷ್ಯ, ಅಗ್ನಿವರ್ಣ, ಮಲೆನಾಡಿಗರು ಮುಂತಾದವು. ಮುಗುಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮರಾಠಿಗೆ ಅನುವಾದಿಸಿದ್ದಾರೆ. ಇವರ ಆಳವಾದ ಸಂಸ್ಕೃತ ಜ್ಞಾನ, ಇಂಗ್ಲೀಷ ಭಾಷೆಯ ಮೇಲಿರುವ ಹಿಡಿತ, ಮರಾಠಿ ಸಾಹಿತ್ಯದ ಮೇಲಿರುವ ವ್ಯಾಮೋಹಗಳು ಇವರನ್ನು ಪರಿಣತ ಅನುವಾದಕರನ್ನಾಗಿ ರೂಪಿಸಿವೆ. ಇಂಥ ಅನುವಾದಗಳನ್ನು ಬಿಟ್ಟು, ಇವರ ಸಮಗ್ರ ಸಾಹಿತ್ಯವನ್ನು ಹತ್ತು ಸಂಪುಟಗಳಲ್ಲಿ ಅಂಕೋಲೆಯ ಶ್ರೀ ರಾಘವೇಂದ್ರ ಪ್ರಕಾಶನ ಪ್ರಕಟಿಸಿದೆ. ಇವುಗಳನ್ನು ಹೊರತಾಗಿಯೂ ಗೌರೀಶರ ಸಾಹಿತ್ಯ ಕೃಷಿ ಇನ್ನೂ ಅನೇಕ ಸಂಪುಟಗಳಲ್ಲಿ ಒಳಗೊಳ್ಳುವಷ್ಟು ವಿಸ್ತಾರವೂ ವೈವಿಧ್ಯಮಯವೂ ಆಗಿದೆ. ಅಸಹ್ಯವಾಗಿರುವ ಜಾತಿ ಪದ್ದತಿಯ ಕುರಿತಂತೂ ಗೌರೀಶರಿಗೆ ತುಂಬ ಅಸಮಾಧಾನವಿತ್ತು. 'ಜಾತಿಯೆಂಬ ಬ್ರಹ್ಮರಾಕ್ಷಸನನ್ನು ಹೊಡೆದು ಕೊಲ್ಲಲು ಕತ್ತಿ ಗುರಾಣಿಗಳು ಬೇಕಾಗಿಲ್ಲ, ಅದು ಬುಂದೀಲಾಡುಗಳ ಹೊಡೆತ ತಿಂದೇ ಸಾಯುತ್ತದೆ'ಎಂದು ಅಂದಿನ ಬ್ಯಾರಿಸ್ಟರ್ ಸಾವರಕರ ಅವರು ಎಲ್ಲೋ ಬರೆದ ಮಾತನ್ನು ಗೌರೀಶರು ತುಂಬ ಆಸಕ್ತಿಯಿಂದ ಹೇಳುತ್ತಿದ್ದುದುಂಟು. ಇಂಥ ಅಸ್ಪ್ರಶ್ಯತೆ ಅಂಧಕಾರ ಮೌಢ್ಯತೆಗಳ ಕುರಿತು ಹೇಳುವಾಗ ಮಾನ್ಯ ಜಗಜೀವನರಾಮರಿಗೆ ಸಂಬಂಧ ಪಟ್ಟ ಎರಡು ಪ್ರಸಂಗವೊಂದನ್ನು ಅವರು ತುಂಬ ಖೇದದಿಂದ ನೆನಪಿಸಿಕೊಳ್ಳುತ್ತಿದ್ದರು. ಜೆ.ಪಿ ಕಾಯಿಲೆ ಬಿದ್ದು ಮುಂಬೈಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಅವರ ಹಳೆಯ ಗೆಳೆಯರಾದ ಜಗಜೀವನರಾಮರು ಅವರನ್ನು ಕಾಣಲು ಹೋದಾಗ ಆಗಷ್ಟೇ ಊಟಕ್ಕೆ ಕೂತಿದ್ದ ಜೆ.ಪಿ ಯವರು, ಇವರನ್ನು ತಮ್ಮ ಹತ್ತಿರವೇ ಕೂಡಿಸಿಕೊಂಡು ಆತ್ಮೀಯವಾಗಿ ಮಾತಾಡಿ ತಮ್ಮ ತಟ್ಟೆಯಿಂದ ಒಂದು ಹಪ್ಪಳವನ್ನು ತಿನ್ನಲಿಕ್ಕೆ ಕೊಟ್ಟರಂತೆ. ಅಷ್ಟಕ್ಕೇ ಸುತ್ತಲಿದ್ದ ಮೂಲಭೂತಗಳು ಜೇಪಿಯವರ ಗಮನಕ್ಕೆ ಬರದಂತೆ ಮರುದಿನ ಅವರ ಆ ಊಟದ ತಟ್ಟೆಯನ್ನೇ ಬದಲಿಸಿಬಿಟ್ಟಿದ್ದವಂತೆ. ಈ ಅರ್ಥವಿಲ್ಲದ ಅನಾಗರಿಕ ಜೀವವಿರೋಧೀ ಧೋರಣೆ, ಜಾತ್ಯಾತೀತ ರಾಷ್ಟçದಲ್ಲಿ ಸಮಗ್ರ ಕ್ರಾಂತಿಯ ನೇತಾರ ಸರ್ವೋದಯವಾದೀ ಜೇಪಿಯವರ ಮಟ್ಟದಲ್ಲೂ ಘಟಿಸಿದ ಕುರಿತು ನಮಗೆಲ್ಲ ಸಖೇದಾಶ್ವರ್ಯ ಮತ್ತು ನಾಚಿಕೆ ಎರಡೂ ಅನ್ನಿಸಬೇಕು ಎನ್ನುತ್ತಿದ್ದರು ಗೌರೀಶರು. ಹೀಗೇ ಇನ್ನೊಂದು ನಿಬ್ಬೆರಗಿನ ಪ್ರಸಂಗದಲ್ಲಿ ಅನೇಕ ವರ್ಷಗಳ ಹಿಂದೆ ಶ್ರೀಯುತ ಜಗಜೀವನರಾಮರ ಅಮೃತ ಹಸ್ತದಿಂದ ಅನಾವರಣಗೊಂಡ ಬನಾರಸ್‌ನ ಒಂದು ಸಾರ್ವಜನಿಕ ಸ್ಥಾನದಲ್ಲಿಯ ಪ್ರತಿಷ್ಠಿತ ಪ್ರತಿಮೆಯನ್ನು ಅವರು ಹೊರಟು ಹೋದ ಬೆನ್ನಿಗೇ ಅಲ್ಲಿಯ ಸ್ಥಾನಿಕ ಪಂಡಿತೋತ್ತಮರೆಲ್ಲರೂ ಕೂಡಿ ಗಂಗಾಜಲದಿಂದ ತಿಕ್ಕಿ ತೊಳೆದು ಪವಿತ್ರಗೊಳಿಸಿದರೆಂಬ ವಿಚ್ಛಿನ್ನ ಸಂಗತಿಯೊಂದನ್ನು ಕೇಳಿ ಸಹಿಸಲಾರದೇ ಆ ಸಮಯದಲ್ಲೇ ಗೌರೀಶರು ಇದರ ಕುರಿತೇ ಒಂದು 'ಮಣೆಯ ಮೈಲಿಗೆ' ಎಂಬ ದೀರ್ಘ ಲೇಖನವನ್ನು ಸಹ ಬರೆದಿದ್ದರು. 'ನರ ಓರ್ವನೆ ಕೊಂದನಲ್ಲನ್' ಎಂಬ ಪ್ರಬಂಧದಲ್ಲಿ ಒಕ್ಕಣಿಸಿದ ಗೌರೀಶರ ಬರಹ ಮನುಷ್ಯತ್ವದ ದಾರಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ನಮ್ಮನ್ನು ನಡೆಸುವಂತಹದು. ನಾಥೂರಾಮ ಗೋಡಸೆ ಮಹಾತ್ಮರನ್ನು ಹತ್ಯೆ ಗೈದ ದಿನ. ಲಾರ್ಡಮೌಂಟ್ ಬ್ಯಾಟನ್ ಆ ಸಂಜೆ ಬಿರ್ಲಾಭವನದಿಂದ ಹೊರಹೊಟಿದ್ದರಂತೆ. ಹೊರಗಿದ್ದ ಜನಸಂದಣಿಯಲ್ಲಿ ಒಬ್ಬ ಕೂಗಿದನಂತೆ. 'ಇಟ್ ವಾಜ್ ಅ ಮುಸ್ಲಿಂ ದೆಟ್ ಕಿಲ್ಡ್ ಬಾಪೂಜಿ' ಇಂಥದೊಂದು ವಾಕ್ಯ ಬ್ಯಾಟನ್ನರ ಕಿವಿಗೆ ಬಿದ್ದದ್ದೇ ಕೂಡಲೇ ಅವರು ಹೊರಳಿ ದೊಡ್ಡ ಕಂಠದಲ್ಲಿ 'ಯೂ ಫೂಲ್, ಡೋಂಟ್ ಯು ನೌ, ಇಟ್ ವಾಜ್ ಅ ಹಿಂದೂ?' ಅಂದರಂತೆ. ಆಗ ಬ್ಯಾಟನ್ನರ ಜೊತೆ ನಡೆಯುತ್ತಿದ್ದ ಅವರ ಸ್ನೇಹಿತನೊಬ್ಬ 'ಕೊಲೆಗಾರ ಹಿಂದೂ ಎಂಬುದು ನಿಮಗೆ ಹೇಗೆ ಗೊತ್ತು?' ಅಂತ ಕೇಳಿದ್ದಕ್ಕೆ ಅವರು 'ನನಗೂ ಗೊತ್ತಿಲ್ಲ, ಆದರೆ ಈ ಕ್ಷಣದಲ್ಲಿ ಕೊಲೆಗಾರ ಮುಸ್ಲಿಂ ಎಂದು ತಿಳಿದರೆ, ಪ್ರಪಂಚದಲ್ಲಿ ಹಿಂದೆಂದೂ ನಡೆಯದಷ್ಟು ಕಗ್ಗೊಲೆ ನಡೆಯುತ್ತದೆ' ಅಂತ ತುಂಬು ವಿಷಾದದಿಂದ ಅಂದರಂತೆ. ವಿದೇಶಿಯನ ಈ ಅಪ್ಪಟ ಮಾನವೀಯತೆಗೆ ವಿರುದ್ಧವಾಗಿ ಅದೇ ಸಂದರ್ಭದಲ್ಲಿ ಸ್ವತಃ ಗೌರೀಶರಿಗೆ ನೇರವಾಗಿ ಅನುಭವಕ್ಕೆ ಬಂದ ಇನ್ನೊಂದು ಕರಾಳ ಮತಾಂಧತೆಯ ಪ್ರಸಂಗದ ಕುರಿತು ಅವರು ಬರೆದಿದ್ದಾರೆ. ಗೌರೀಶರಿಗೆ ಪರಿಚಿತನಾದ ರಂಗರಾವ್ ತಲಚೇರಕರ್ ಎಂಬುವನು ಮಂಗಳೂರಿನಲ್ಲಿ ಹೆಸರಾಂತ ನ್ಯಾಯವಾದಿ. ಸ್ವಾತಂತ್ರ್ಯ ಯೋಧನಾಗಿ ಹೆಂಡತಿಯೊಂದಿಗೇ ಜೈಲಿಗೆ ಹೋಗಿ ಬಂದ ಖಾದೀಧಾರಿ. ಪ್ರಸಿದ್ಧ ಕಯ್ಯೂರ ಕಟ್ಲೆಯಲ್ಲಿ ಕಮ್ಯೂನಿಸ್ಟ ಪಕ್ಷ ಹಿಡಿದು ಕೋರ್ಟಿನಲ್ಲಿ ವಾದಿಸಿದವ. ಒಮ್ಮೆ ಗೌರೀಶರು ಅಕಸ್ಮಾತಾಗಿ ಅವನೊಂದಿಗೆ ಸಂದಿಸಿದಾಗ ಸಹಜವಾಗಿ ದಾರುಣವಾದ ಗಾಂಧೀಹತ್ಯೆಯ ಮಾತು ಬಂತಂತೆ. ಆಗ ಅವನು ಅಷ್ಟೇ ಕುಹಕದಿಂದ 'ಗಾಂಧೀಜಿಯ ಕೊಲೆ ಆದದ್ದು ಸರಿಯೇ ಆಯಿತು, ಆದರೆ ಗೋಡ್ಸೆ ಮುಸಲ್ಮಾನನ ವೇಷ ತೊಟ್ಟು ಗುಂಡು ಹಾರಿಸಬೇಕಾಗಿತ್ತು!' ಅನ್ನಬೇಕೇ. ಗಾಂಧೀ ಚಳುವಳಿಯಲ್ಲಿ ಸಕುಟುಂಬ ಸಕ್ರಿಯ ಭಾಗವಹಿಸಿದ ಈ ಸ್ವಾತಂತ್ರö್ಯಯೋಧನ ರಕ್ತದಲ್ಲಿ ತುಂಬಿದ ನಂಜು ಆಲಿಸಿದ ಮುಗ್ಧ ಗೌರೀಶರಿಗೆ ಮೈಮೇಲೆ ಒಮ್ಮೆಲೇ ಹಾವು ಹರಿದಂತೆ ಭಯ ಮತ್ತು ಅಸಹ್ಯ ಎರಡೂ ಆದವಂತೆ. ಹೀಗೆ ಗೋಡ್ಸೆಯ ಬೆನ್ನಿಗೆ ಹಿಂದುತ್ವವಾದಿಗಳು ಮಾತ್ರವಲ್ಲ, ಅನೇಕ ಗಣ್ಯ ಕಾಂಗ್ರೆಸ್ಸಿಗರೂ ದೇಶಭಕ್ತರೆನಿಸಿಕೊಂಡವರೂ ಇದ್ದದ್ದು ಎಂಥ ದೊಡ್ಡ ಐತಿಹಾಸಿಕ ದುರಂತ ಅನ್ನುತ್ತಾರೆ ಗೌರೀಶರು. ಹೀಗೆ ಅನನ್ಯವಾದ ಸಾಮಾಜಿಕ ಬದ್ಧತೆಯುಳ್ಳ ಗೌರೀಶರು ತಮ್ಮ ಬದುಕು ಮತ್ತು ಬರಹ ಎರಡನ್ನೂ ಒಂದೇ ಪಾತಳಿಯಲ್ಲಿ ಕಂಡವರು. 'ಮನುಷ್ಯನಿಗೆ ಆತ್ಮತೃಪ್ತಿಯೊಂದೇ ಸಾಕಾಗುವದಿಲ್ಲ, ಲೌಕಿಕವಾಗಿ ಬದುಕುವವನಿಗೆ ಲೋಕಮತದ ಪರಿವೆಯೂ ಬೇಕು' ಎಂದು ಧೃಡವಾಗಿ ಪ್ರತಿಪಾದಿಸಿದ ಗೌರೀಶರ ಬರಹ ಇಂದಿನ ಯುವ ಪೀಳಿಗೆಗೆ ಸ್ಪೂರ್ತಿಯಾಗಬೇಕು. ಗೌರೀಶರ ಕಡಲ ಕಿನಾರೆಯ ಬದುಕೇ ಒಂದು ಮೂಲ ರೂಪಕ. ಅವರು ತಮ್ಮ ಜೀವದಿಂದ ಎಳೆದು ತರುವ ಪ್ರತಿಮೆಗಳೇ ಜೀವನದ ಗಾಢವಾದ ಅನುಭವ ಲೋಕದಿಂದ ಮೈದಳೆದಂಥವು. ಬೀಜದಲ್ಲೇ ಬ್ರಹ್ಮಾಂಡ ತೆರೆದು ತೋರುವ ಶಕ್ತಿ ಅವರ ವಕ್ಚಾತುರ್ಯಕ್ಕೆ. ಬಳ್ಳಿಗೆ ಹೂವು ಗಿಡಕ್ಕೆ ಚಿಗುರು ಮೂಡುವಷ್ಟೇ ಸಹಜವಾಗಿ ಅವರ ವೈಚಾರಿಕತೆ ಒಡಮೂಡಿರುತ್ತವೆ. ವ್ಯವಧಾನದಿಂದ ವಿವೇಚಿಸಿದರೆ ಅದರ ಚಿಂತನೆಯ ಆಳ ಪಾತಳಗರಡಿಯಾಗಿರುತ್ತದೆ. ಬದುಕಿನ ಕುರಿತ ಸಹಾನುಭೂತಿ, ಬಾಳಿನ ವಿಸ್ತಾರವಾದ ಜೀವಂತ ಅನುಭೂತಿ ಇವು ಗೌರೀಶರ ಚಿಂತನೆಗಳ ಭದ್ರ ನೆಲಗಟ್ಟು. ಮತ್ತು ಸದಾ ವಿಚಿಕಿತ್ಸೆ. ಪ್ರತಿ ಹೇಳಿಕೆಯಲ್ಲೂ ಅವರು ನುಡಿಸುವ ಶ್ರುತಿಯೇ ಭಿನ್ನ. ಗೋಕರ್ಣದಂಥ ಸಾಂಪ್ರದಾಯಿಕ ಸ್ಥಳದಲ್ಲಿ ನೆಲೆ ನಿಂತೂ ತಮ್ಮ ವೈಚಾರಿಕತೆಯನ್ನು ಕೊಂಚವೂ ಸಡಿಲಿಸದೇ ಬದುಕಿದವರು. ಗೋಕರ್ಣದಲ್ಲಿರುವದು ಮಾರ್ಕೆಟಿಂಗ್ ಭಕ್ತಿ ಎನ್ನುತ್ತ ಅದರ ಒಳ ಹೊರ ಮಗ್ಗಲುಗಳನ್ನು ತೆರೆದಿಟ್ಟವರು. 'ಜರ್ಮನ್ ಯೋಧನು ತೋಫಿನ ಗುಂಡಿನೊಳಗಿAದ ಹುಟ್ಟಿ ಬಂದ ಎನ್ನುನ ಮಾತಿದೆ ಆದರೆ ತನ್ನಂಥವರು ವ್ಯಾಸಂಗ ವಿಸ್ತಾರದಿಂದ ಹಾಗೂ ಪತ್ರಿಕೋಧ್ಯಮದಿಂದ ಹುಟ್ಟಿದವರು' ಎಂಬ ಮಾತನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು. ಕಬ್ಬು ಎಷ್ಟೇ ಅಂಕುಡೊಂಕಾದರೂ ಅದನ್ನು ಎಲ್ಲಿ ಕಚ್ಚಿದರೂ ಸವಿಯೇ ಎಂಬಂತೆ ಗೌರೀಶ ಸಾಹಿತ್ಯವನ್ನು ನಾವು ಎಲ್ಲಿಂದ ಬೇಕಾದರೂ ಓದಲು ಮೊದಲ್ಗೊಳ್ಳಬಹುದು. ಮನುಷ್ಯ ಲೋಕದ ವಾಸ್ತವಗಳೇ ಗೌರೀಶರಲ್ಲಿ ಮಾಗಿ ಹೀಗೆ ನಿಕಟವಾದ ಅಕ್ಷರ ಸಂಪತ್ತುಗಳಾಗಿವೆ. ಅವರು ತಮ್ಮ ಮೂಲಭೂತ ತತ್ವಗಳಿಗೆ, ಪ್ರಜಾಪ್ರಭುತ್ವ ಮತ್ತು ಸಮಾಜವಾದಗಳಿಗೆ ಭಂಗ ಬರದ ರೀತಿಯಲ್ಲಿ ಈ ಭೂ ಮಂಡಲದ ಸಕಲ ವಿಷಯಗಳ ಕುರಿತು ಸಂಕೋಚವಿಲ್ಲದೇ ಬರೆದವರು. ವಯಕ್ತಿಕವಾಗಿ ಅವರು ಮೂರ್ತಿ ಭಂಜಕ ಪ್ರವೃತ್ತಿಯವರಲ್ಲ. 'ಸುಖಕ್ಕೆ ಮೂಲ ಮನಃಶಾಂತಿಯೇ, ಈ ಮನಃಶಾಂತಿಗೆ ಕಾರಣ ನಮ್ಮಲ್ಲಿಯ ಆತ್ಮ ವಿರೋಧಿಯಾಗದಂಥ ಬದುಕು, ಇದೇ ನನ್ನ ಜೀವನ ದೃಷ್ಠಿ ಕೂಡ' ಅನ್ನುತ್ತಿದ್ದರು ಗೌರೀಶರು. ಅವರ ಎಲ್ಲ ಬರಹಗಳಲ್ಲೂ ಒಂದು ತೆರನಾದ ತೀವ್ರ ಜನಪರ ಪ್ರವೃತ್ತಿ ಮಿರುಗುತ್ತದೆ. ಈ ಸಮಾಜದಲ್ಲಿ ನಾಲ್ಕು ಭೇದಗಳು ಇದ್ದೇ ಇವೆ ಅನ್ನುತ್ತಿದ್ದ ಗೌರೀಶರು ಅವುಗಳಲ್ಲಿ ಬೆಸೆದ ದ್ವಂದ್ವವನ್ನು ವಿಶ್ಲೇಷಿಸುತ್ತ, ಬುದ್ಧಿಜೀವಿಗಳು, ಅರ್ಥ ಜೀವಿಗಳು, ಪರಮಾರ್ಥ ಜೀವಿಗಳು ಮತ್ತು ಶ್ರಮ ಜೀವಿಗಳು ಎಂಬ ಬೇರೆಯದೇ ಆದ ನಾಲ್ಕು ಸಹಜ ಪ್ರಭೇದಗಳನ್ನು ತೆರೆದಿಡುತ್ತಿದ್ದರು. ಇಲ್ಲಿಯ ಅಪರಾಧವು ಒಂದು ಮನೋರೋಗ, ನಮ್ಮಲ್ಲಿ ಜಾತೀಯತೆ ಕೇವಲ ರಾಜಕೀಯವಾಗಿ ಬೆಳೆಯುತ್ತಿದೆ, ಇಂದಿನ ರಾಜಕಾರಣವೇ ಒಂದು ಕಸುಬು, ಧಂದೆ. ಪ್ರತಿಯೊಂದು ಪಕ್ಷವೂ ತನ್ನದೇ ಮಯ ಸಭೆಯಲ್ಲಿ ಧ್ಯೂತವಾಡುತ್ತಿದೆ. ಸಮಾಜದಲ್ಲಿ ಭ್ರಷ್ಟಾಚಾರ ಹೆಡೆಯೆತ್ತಿದಾಗೆಲ್ಲ ನಮ್ಮ ಭಾರತೀಯ ಬುದ್ಧಿ ಜೀವಿಗಳು, ಉಸುಕಿನಲ್ಲಿ ತಲೆ ಹುಗಿದುಕೊಂಡು ನಿಲ್ಲುವ ಶಹಾಮೃಗದ ಧೋರಣೆ ಅನುಸರಿಸುತ್ತಿದ್ದೇವೆ, ಬ್ರಷ್ಟಾಚಾರದ ಎದುರು ತಟಸ್ಥವೆಂಬುದು ಸಾಧ್ಯವೇ ಇಲ್ಲ. ಪಾಪಕ್ಕೆ ಸಾಕ್ಷಿಯಾಗುವುದು ಅದರಲ್ಲಿ ಭಾಗಿಯಾದಂತೆಯೇ ಎಂಬ ಮಾತನ್ನು ಆಯಾ ಸಮಯದಲ್ಲಿ ಬರೆಯತ್ತ ಬಂದಿದ್ದಾರೆ. 'ಇಂದಿನ ಕಷ್ಟ ಕೋಟಲೆಗಳಿಗೆ ಗಾಂಧೀಜಿ ಮದ್ದಲ್ಲ, ಗಾಂಧೀಜಿ ಕಲ್ಪಿಸಿದ ಹಿಂದ್ ಸ್ವರಾಜ್ಯ ಇಂದು ಇಲ್ಲ, ಅದನ್ನು ತರುವುದೂ ಒಂದು ಹಗಲುಗನಸು, ಗಾಂಧೀಜಿಯವರನ್ನು ಕೊಲ್ಲುವ ಮೊದಲೇ ನಾವು ಗಾಂಧೀವಾದವನ್ನು ಕೊಂದೆವು, ಆದರೆ ಸತ್ಯಾಗ್ರಹದಂತಹ ಆದರ್ಶ ತಂತ್ರಗಳು ಇಂದಿಗೂ ಎಂದೆದಿಗೂ ಸ್ವಾಗತಾರ್ಹವೇ' ಎಂದು ಅರವತ್ತರ ದಶಕದಲ್ಲೇ ತಮ್ಮ ಲೇಖನವೊಂದರಲ್ಲಿ ಬರೆದಿದ್ದರು ಗೌರೀಶರು. ಬೇರಿನಿಂದ ಬಿಡುಗಡೆ ಹೊಂದಿದರೆ ಮರಕ್ಕೆ ಮೋಕ್ಷವಿಲ್ಲವೆಂಬಂತೆ ಅವರ ವೈಚಾರಿಕ ಸಾಹಿತ್ಯವು ತನ್ನ ಸಾಂಸ್ಕೃತಿಕ ಆವರಣಕ್ಕೆ ಬದ್ಧವಾಗಿವೆ. 'ನಮಗೆ ಪರಂಪರೆಯ ಬಂಧನಗಳಿವೆ, ಇಂಥ ಚಕ್ರವ್ಯೂಹದಲ್ಲಿ ನಾವೇ ಹಾದಿ ಮಾಡಿಕೊಂಡು ಆಧುನಿಕ ಅಭಿಮನ್ಯುವಾಗಿ ಒಳ ನುಗ್ಗಿ ಮುನ್ನಡೆಯಬೇಕು. ಒಳನುಗ್ಗುವ ಹಾದಿಯಂತೆ ಹೊರ ಬರುವ ಹಾದಿಗೂ ನಾವು ಪಳಗಬೇಕು' ಎಂದವರು ಗೌರೀಶರು. ಒಬ್ಬ ನಡೆದಾಡುವ ಜ್ಞಾನಕೋಶವೇ ಆಗಿದ್ದ ಗೌರೀಶರ ಅಪಾರವಾದ ಬರಹ ಮತ್ತು ತೇಜಸ್ವೀ ಮನಸ್ಸು ಎರಡೂ ಒಂದು ಸಾಹಿತ್ಯಕ ಸಾಮಾಜಿಕ ಅಧ್ಯಯನ ಪೀಠಕ್ಕೆ ಸಮಾನವಾದದ್ದು. ಗೌರೀಶರ ಅರ್ಥಪೂರ್ಣ ಯೋಚನಾ ದೃಷ್ಟಿ, ವೈಚಾರಿಕ ಮಂಥನ, ಸುದೀರ್ಘ ಆಲೋಚನಾ ಕ್ರಮಗಳ ಆ ಪ್ರಭಾವಲಯ ವಿಶಿಷ್ಟವಾದುದು. ಏನೇ ಕೇಳಿದರೂ ಅದಕ್ಕೊಂದು ಸಮರ್ಥವಾದ ನಿಖರ ಉತ್ತರ. ಬೆಕ್ಕಿನ ತಲೆಯ ಮೇಲೆ ದೀಪವಿಟ್ಟಂತೆ ಮಾತಾಡುವ ಜಾಯಮಾನ ಅವರದಾಗಿರಲಿಲ್ಲ. ಡಾ. ಕಾಯ್ಕಿಣಿಯವರು ಒಂದು ರೀತಿಯ ಸಹಜ ನಿಸ್ವಾರ್ಥ ನಿಷ್ಕಲ್ಮಷ ಮಹಾ ಪಾಂಡಿತ್ಯದ ಬದುಕಿಗೆ ಮಾದರಿಯಾಗಿದ್ದರು. ತಮ್ಮ ತೊಂಬತ್ತರ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಓದುಗ ಬಳಗ ಅವರ ಗೋಕರ್ಣದ ಮನೆಯಂಗಳದಲ್ಲೇ ಅಂತಃಕರಣದಿಂದ ಆಚರಿಸಿಕೊಂಡ ಕೆಲವೇ ದಿನಗಳಲ್ಲಿ ಅಂದರೆ ಹದಿನಾಲ್ಕು ನೆವ್ಹೆಂಬರ್ ೨೦೦೨ ರಂದು ಭೌತಿಕವಾಗಿ ನಮ್ಮನ್ನಗಲಿದ ಡಾ. ಗೌರೀಶ ಕಾಯ್ಕಿಣಿಯವರು ಕನ್ನಡದ ವಿಚಾರ ಸಾಹಿತ್ಯದ ದೂರದಿಗಂತದಲ್ಲಿ ಮಿನುಗುವ ಬೆಳ್ಳಿ ಚುಕ್ಕೆ. = 000= -ಸುನಂದಾ ಕಡಮೆ

ಜನಪರ ಪ್ರವೃತ್ತಿಯ ಡಾ. ಗೌರೀಶ ಕಾಯ್ಕಿಣಿ
bottom of page