top of page

ಜಟಗನ ಬೋಳೆ

ಹೋಗ ಬೇಡ ಮಗ ಜಟಗನ ಬೋಳೆಗೆ, ಹೆಣ ನಿದ್ರಿಸುವ ಜಾಗಕ್ಕೆ, ಹಗಲಲ್ಲೆ ಕುಣಿಯುತ್ತವೆ ದೆವ್ವಗಳು,  ಬಟ್ಟೆ ಬಿಚ್ಚಿ ಕಾಣದ ಜಗಕೆ, ಗಾಳಿ ಮರದ ಬುಡದಲ್ಲಿ ಸುಳಿ ಗಾಳಿಯಲಿ ಸುತ್ತಿ, ತರಗೆಲೆಗಳ ಧರೆಗಾಸುತ್ತಿದೆ ಶವದಿ, ಮಸಣದ ಚಿತೆಯ ಉರಿಯಿಂದ,  ಬೆನ್ನಟ್ಟಿ ಬರುತ್ತಿವೆ ಭೂತಗಳು,  ಬೊಜ್ಜು  ಸೊಣೆದು ಕಣ್ಣು ಗುಡ್ಡೆಯ ಕೀಳಲು,  ಬಿದ್ದರೆ ಬದುಕಲಾರೆ ಆ ಗುಡ್ಡದೊಳು,  ಹೋಗ ಬೇಡ ಮಗ ಜಟಗನ ಬೋಳೆಗೆ..... ಅರ್ಧ ರಾತ್ರಿಯಲ್ಲಿ ತಿಂಗಳ ಬೆಳಕಲ್ಲಿ, ಹಾನ ಚೆಲ್ಲುವ ಸೊನಗಾರ ಪ್ರೇತಾತ್ಮಗಳು,  ಮುಖಕ್ಕೆ ಬಟ್ಟೆ ಕಟ್ಟಿ,  ಮಧ್ಯ ಹಗಲಲ್ಲೆ ಅಡ್ಡಗಟ್ಟಿ, ಸುಲಿಗೆಯಾಟವಾಡುವ ಜೀವಾತ್ಮಗಳು,  ಹೋಗ ಬೇಡ ಮಗ ಜಟಗನ ಬೋಳೆಗೆ..... ದುಡಿಸಿ ಸತ್ತ ನಂತರ ಎಸೆಯುವರು ಗುಡ್ಡಕ್ಕೆ,  ಮಿಕ್ಕ ದೇಹಕ್ಕೆ ಮುಕ್ತಿ ತೊರುವ ಶಾಸ್ತ್ರದ ಗಿಡುಗ, ಇತ್ತ ಧರ್ಮದ ಕುನ್ನಿಗಳು ,  ಮಾಡುತ್ತಿಹವು ಮೂಳೆಗಾಗಿ ಜಗಳ,  ಹೋಗ ಬೇಡ ಮಗ ಜಟಗನ ಬೋಳೆಗೆ..... ಮಟ ಮಟ ಮಧ್ಯಾಹ್ನವೇ ಮೆರೆಯುತ್ತಿಹವು,  ಮತಿಗೆಟ್ಟ ಭೂತಗಳು, ತಾನು ತನ್ನದೆಂಬ ಅತೀ ಲೋಭದ ದಾಹ, ಪಾಪದ ಕಲ್ಲೆಸೆದು , ಮೋಜಿನಲ್ಲಿ ಮೈಮರೆತು, ಸಾವಿನೊಡೆಯ ಮೋಹದ ದೇಹವನು ಬೇಡುವಾಗ, *ನಾನು* ಬಂದು ಆ ಬಂಧನ ಬಿಡಿಸಲಾರೆ,  ಹೋಗ ಬೇಡ ಮಗ ಜಟಗನ ಬೋಳೆಗೆ..... -ಅರುಣ್ ಗೌಡ.ಕಡಮೆ. ಅರುಣ ಗೌಡ ಅವರುಕುಮಟಾ ತಾಲೂಕಿನ, ಗೋಕರ್ಣದ ಸಮೀಪದ ಕಡಮೆ ಗ್ರಾಮದವರು.ವೃತ್ತಿಯಲ್ಲಿ  ದೈಹಿಕ ಶಿಕ್ಷಣ ಶಿಕ್ಷಕರು.ಕಥೆ,ಕವನ, ಚುಟುಕು ಬರೆಯುವ ಹವ್ಯಾಸ ಇವರದು.ಅವರ ಕವಿತೆ ನಿಮ್ಮ ಓದಿಗಾಗಿ. ಸಂಪಾದಕ

ಜಟಗನ ಬೋಳೆ
bottom of page