top of page

ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶ

ನಮಸ್ಕಾರಗಳು. ಈ ಸಾಲಿನ ಛಂದ ಪುಸ್ತಕ ಬಹುಮಾನವನ್ನು ಕಾವ್ಯ ಕಡಮೆ ಪಡೆದುಕೊಂಡಿದ್ದಾರೆ. ಇದು ಛಂದ ಪುಸ್ತಕಕ್ಕೆ ಬಹು ಸಂಭ್ರಮದ ಸಂಗತಿಯಾಗಿದೆ. ಇದೇ ಬಹುಮಾನವನ್ನು 2005 ರಲ್ಲಿ ಅವರ ತಾಯಿ, ಈಗ ಕನ್ನಡದ ಪ್ರಮುಖ ಕತೆಗಾರ್ತಿ, ಸುನಂದಾ ಪ್ರಕಾಶ ಕಡಮೆ ಅವರು ಪ್ರಪ್ರಥಮವಾಗಿ ಪಡೆದುಕೊಂಡಿದ್ದರು. ಈ ಹದಿನಾರು ವರ್ಷಗಳಲ್ಲಿ ಛಂದವು ಎರಡು ತಲೆಮಾರಿನ ಲೇಖಕರನ್ನು ಸ್ಪರ್ಶಿಸಿದೆ ಎನ್ನುವುದು ನಮಗೆ ಅತೀವ ಸಂತಸ ನೀಡುತ್ತಿದೆ. ಕಾವ್ಯ ಕಡಮೆಯವರಿಗೆ ಹೃತ್ಪೂರ್ವಕ ಅಭಿನಂದನೆಗಳು. ಕಾವ್ಯಾ ಕಡಮೆ ಉತ್ತರ ಕನ್ನಡ ಜಿಲ್ಲೆಯ ಕಡಮೆಯವರು; 1988 ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. 2013 ರಿಂದ ಅಮೆರಿಕಾದ ನ್ಯೂಜೆರ್ಸಿಯಲ್ಲಿ ವಾಸ. ‘ಧ್ಯಾನಕೆ ತಾರೀಖಿನ ಹಂಗಿಲ್ಲ’, ‘ಜೀನ್ಸ್ ತೊಟ್ಟ ದೇವರು’ ಪ್ರಕಟಿತ ಕವನ ಸಂಕಲನಗಳು. ‘ಪುನರಪಿ’ ಕಾದಂಬರಿ. ‘ಆಟದೊಳಗಾಟ ಮತ್ತು ಡೋರ್ ನಂಬರ್ ಎಂಟು’ ನಾಟಕಗಳ ಸಂಕಲನ. ‘ದೂರ ದೇಶವೆಂಬ ಪಕ್ಕದ ಮನೆ’ ಪ್ರಬಂಧ ಸಂಕಲನ. ಇವರ ಕೃತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ‘ಯುವ ಪುರಸ್ಕಾರ,’ ಯುವ ಬರಹಗಾರರಿಗೆ ನೀಡುವ ಟೋಟೋ ಪುರಸ್ಕಾರ, ಗುಲ್ಬರ್ಗ ಜಿಲ್ಲೆಯ ಸೇಡಂನ ಅಮ್ಮ ಪ್ರಶಸ್ತಿ, ಬೇಂದ್ರೆ ಗ್ರಂಥ ಬಹುಮಾನ, ರತ್ನಮ್ಮ ಹೆಗ್ಗಡೆ ಗ್ರಂಥ ಬಹುಮಾನ, ಕಡಂಗೋಡ್ಲು ಕಾವ್ಯ ಪುರಸ್ಕಾರ, ದಿನಕರ ಕಾವ್ಯ ಪ್ರಶಸ್ತಿ, ಸಾಹಿತ್ಯ ಪರಿಷತ್ತಿನ ಕಾಕೋಳ ಸರೋಜಮ್ಮ ದತ್ತಿ ಬಹುಮಾನ ಮತ್ತು ನಾಟಕ ಅಕಾಡಮಿಯ ನಾಟಕ ಬಹುಮಾನ ದೊರೆತಿವೆ. 118 ಕತೆಗಾರರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬಹುಮಾನ ಕೇವಲ ಒಬ್ಬರಿಗೇ ನೀಡಲಾಗುತ್ತದೆಂಬ ಕಾರಣದಿಂದ ಇತರರಿಗೆ ಬೇಸರ ಮಾಡುತ್ತೇವೆಂಬ ಅಳುಕು ನಮಗಿದೆ. ಆದರೆ ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯಲ್ಲಿ ಭಾಗವಹಿಸುವುದು, ಮೊದಲ ಮತ್ತು ಎರಡನೆಯ ಸುತ್ತಿನಲ್ಲಿ ಆಯ್ಕೆಯಾಗುವುದನ್ನು ನಾವು ಅತ್ಯಂತ ಗೌರವದ ಸಂಗತಿಯೆಂದು ಭಾವಿಸುತ್ತೇವೆ. ಅದನ್ನು ನಾಡಿನ ಓದುಗರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳಬಹುದು ಎನ್ನುವ ವಿಶ್ವಾಸ ನಮಗಿದೆ. ಆದ್ದರಿಂದ ಭಾಗವಹಿಸಿದ ಎಲ್ಲರಿಗೂ ಈ ಮೂಲಕ ಅಭಿನಂದನೆಗಳನ್ನೂ, ಧನ್ಯವಾದಗಳನ್ನೂ ಅರ್ಪಿಸುತ್ತಿದ್ದೇವೆ. ಈ ಬಾರಿಯ ನಮ್ಮ ಈ ಹಸ್ತಪ್ರತಿ ಬಹುಮಾನದ ಆಯ್ಕೆಯನ್ನು ಹಿರಿಯ ವಿಮರ್ಶಕ ಟಿ.ಪಿ. ಅಶೋಕ ಅವರು ಮಾಡಿದ್ದಾರೆ. ಅತ್ಯಂತ ಆಸಕ್ತಿಯಿಂದ ಹಸ್ತಪ್ರತಿಗಳನ್ನು ಓದಿ, ಅವುಗಳನ್ನು ಧ್ಯಾನಿಸಿ, ತಮ್ಮ ನಿರ್ಣಯವನ್ನು ಕೆಳಗಿನ ಟಿಪ್ಪಣಿಯ ಮೂಲಕ ವ್ಯಕ್ತಪಡಿಸಿದ್ದಾರೆ. ಕಿರಿಯರ ಬರವಣಿಗೆಯ ಕುರಿತ ಅವರ ಕುತೂಹಲ, ಶ್ರದ್ಧೆ, ಸಾಹಿತ್ಯ ಪ್ರೀತಿಗೆ ನೂರು ನಮನಗಳು. "ವಿಭಿನ್ನ ಸಾಂಸ್ಕೃತಿಕ ಆವರಣಗಳಲ್ಲಿ ಅರಳಿರುವ ಕಾವ್ಯಾ ಕಡಮೆ ಅವರ ಕತೆಗಳು ಅನುಭವದ ತಾಜಾತನದಿಂದ, ಲವಲವಿಕೆಯ ನಿರೂಪಣೆಯಿಂದ, ಪ್ರಬುದ್ಧ ನಿರ್ವಹಣೆಯಿಂದ ಮನಮುಟ್ಟುತ್ತವೆ. ತೀರ್ಪು ಕೊಡುವ ಆತುರಕ್ಕೆ ಬೀಳದೆ ಮನುಷ್ಯ ಸ್ವಭಾವ ಮತ್ತು ಸಂಬಂಧಗಳ ಹಲವು ಆಯಾಮಗಳನ್ನು ಮುಕ್ತವಾಗಿ, ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳುವ ವ್ಯವಧಾನ, ಉದಾರತೆ ಇಲ್ಲಿ ಕಾಣುತ್ತವೆ. ಜೀವನ ವೈಶಾಲ್ಯ-ವೈವಿಧ್ಯಗಳ ಬಗ್ಗೆ ಲೇಖಕಿ ಉಳಿಸಿಕೊಂಡಿರುವ ಬೆರಗು ಈ ಕತೆಗಳ ಸ್ಥಾಯೀಭಾವವಾಗಿದೆ. ಸಿದ್ಧಜಾಡನ್ನು ಬಿಟ್ಟು ಹೊಸ ಹೊಸ ಲೋಕಗಳನ್ನು ಅನ್ವೇಷಿಸುವ ದಿಟ್ಟತನ, ಕಾವ್ಯಕ್ಕೆ ಸಮೀಪವೆನ್ನಿಸುವಂಥ ಭಾಷಾ ಬಳಕೆ, ಕತೆಗಿಂತ ಕಥನಕ್ಕೆ ನೀಡಿರುವ ಪ್ರಾಮುಖ್ಯತೆಗಳಿಂದಾಗಿ ಈ ಬರಹಗಳು ವಿಶಿಷ್ಟವಾಗಿವೆ. ಕನ್ನಡೇತರ ಪರಿಸರಗಳಲ್ಲಿ ಸೃಷ್ಟಿಯಾಗುವ ಅನುಭವಗಳನ್ನು ಕನ್ನಡ ಭಾಷೆಯಲ್ಲಿ ಗ್ರಹಿಸಿ-ಅಭಿವ್ಯಕ್ತಿಸುವ ಮೂಲಕ ಕನ್ನಡ ಓದುಗರ ಭಾವಲೋಕಗಳನ್ನು ಹಿಗ್ಗಿಸುವಲ್ಲಿ ಲೇಖಕಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಈ ಕತೆಗಳನ್ನು ಓದುತ್ತಿದ್ದಂತೆ ಹೊಸದೇನನ್ನೋ ಅನುಸಂಧಾನ ಮಾಡುತ್ತಿರುವ ಅನುಭವವಾಗುತ್ತದೆ." ಪುಸ್ತಕವು ಮುಂದಿನ ತಿಂಗಳಲ್ಲಿ ಓದುಗರಿಗೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ. ಕಾವ್ಯ ಕಡಮೆಯವರಿಗೆ 30,000 ರೂಪಾಯಿ ಬಹುಮಾನ, ಫಲಕ ಮತ್ತು ಪ್ರಶಸ್ತಿ ಪತ್ರಗಳನ್ನು ಕೊಡಲಾಗುತ್ತದೆ. ಟಿ.ಪಿ. ಅಶೋಕ ========= ನಾಡಿನ ಹಿರಿಯ ವಿಮರ್ಶಕರಾದ ಟಿ.ಪಿ. ಅಶೋಕರನ್ನು ಅರಿಯದ ಕನ್ನಡದ ಓದುಗರು ಇರಲಿಕ್ಕಿಲ್ಲ. ಕಳೆದು ನಾಲ್ಕೈದು ದಶಕಗಳಿಂದ ನಿರಂತರವಾಗಿ ಕನ್ನಡ ಸಾಹಿತ್ಯದ ಅಧ್ಯಯನದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಯಾವ ಪೂರ್ವಗ್ರಹವೂ ಇಲ್ಲದೆ, ಸದಭಿರುಚಿಯಿಂದ ಮತ್ತು ಸವಿನಯದಿಂದ ಸಾಹಿತ್ಯ ವಿಮರ್ಶೆಯನ್ನು ಮಾಡಿಕೊಂಡು ಬಂದಿದ್ದಾರೆ. ಕನ್ನಡದ ಎಲ್ಲಾ ವಯೋಮಾನದ ಲೇಖಕರ ಕೃತಿಗಳನ್ನೂ ತೀವ್ರ ಶ್ರದ್ಧೆಯಿಂದ ಓದಿ, ಓದುಗರಿಗೆ ಮತ್ತು ಲೇಖಕರಿಗೆ ಉಪಯೋಗವಾಗುವಂತಹ ವಿಮರ್ಶೆಯನ್ನು ಬರೆದಿದ್ದಾರೆ. ನಂಜನಗೂಡಿನಲ್ಲಿ ಜನಿಸಿದ ಶ್ರೀಯುತರು ತಮ್ಮ ಆರಂಭದ ವಿದ್ಯಾಭ್ಯಾಸವನ್ನು ಟಿ. ನರಸೀಪುರ ಮತ್ತು ಮೈಸೂರುಗಳಲ್ಲಿ ಮಾಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಿಂದ ಸುವರ್ಣ ಪದಕ ಸಮೇತ ಬಿ.ಎ. ಪದವಿ, ಮಾನಸ ಗಂಗೋತ್ರಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಗರದ ಲಾಲ್‌ ಬಹದ್ದೂರ್ ಕಾಲೇಜಿನಲ್ಲಿ 36 ವರ್ಷಗಳ ಕಾಲ ಇಂಗ್ಲೀಷ್ ಪ್ರಾಧ್ಯಪಕರಾಗಿ ಸೇವೆ ಸಲ್ಲಿಸಿ, ಅಲ್ಲಿಯೇ ತಮ್ಮ ನಿವೃತ್ತ ಜೀವನವನ್ನು ಸಾಗಿಸುತ್ತಿದ್ದಾರೆ. ಕುವೆಂಪು, ಕಾರಂತ, ಮಾಸ್ತಿ, ಎಚ್ಚೆಸ್ವಿ, ಅನಂತಮೂರ್ತಿ, ತೇಜಸ್ವಿ, ಬೊಳುವಾರು, ದೇವನೂರು, ಆಲನಹಳ್ಳಿ ಮತ್ತು ವೈದೇಹಿಯವರ ಸಮಗ್ರ ಸಾಹಿತ್ಯದ ಕುರಿತು ವಿಮರ್ಶಾ ಗ್ರಂಥಗಳನ್ನು ಪ್ರಕಟಿಸಿದ ಹೆಮ್ಮೆ ಇವರದು. ಹತ್ತೊಂಬತ್ತು ವಿಮರ್ಶಾ ಸಂಕಲನಗಳನ್ನೂ, ಮೂರು ಅನುವಾದಗಳನ್ನೂ, ಹದಿನೈದು ಸಂಪಾದಿತ ಕೃತಿಗಳನ್ನೂ ಈವರೆಗೆ ಪ್ರಕಟಿಸಿದ್ದಾರೆ. ಜಿ.ಎಸ್.ಎಸ್. ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಮತ್ತು ಇತರ ಹಲವಾರು ಪ್ರಶಸ್ತಿಗಳ ಜೊತೆಗೆ, ಅವರ ಕೃತಿ ’ಕಥನ ಭಾರತಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ. ಇಂತಹ ಹಿರಿಯರು ನಮ್ಮ ಛಂದ ಪುಸ್ತಕ ಹಸ್ತಪ್ರತಿಯ ತೀರ್ಪುಗಾರರಾಗಿದ್ದು ನಮ್ಮ ಅದೃಷ್ಟವೆಂದೇ ಭಾವಿಸುತ್ತೇವೆ.

ಛಂದ ಪುಸ್ತಕ ಹಸ್ತಪ್ರತಿ ಸ್ಪರ್ಧೆಯ ಫಲಿತಾಂಶ
bottom of page