ಚೆಂಬೆಳಕಿನ ಚೆನ್ನವೀರ ಕಣವಿ ಇನ್ನಿಲ್ಲ
ಚೆಂಬೆಳಕಿನ ಚೆನ್ನವೀರ ಕಣವಿ ಇನ್ನಿಲ್ಲ ಎಂದು ನಂಬುವುದು ಕಷ್ಟ. ಅವರ ಬಗ್ಗೆ ಅಭಿನಂದನ ಗ್ರಂಥದಲ್ಲಿ ಬರೆಯುತ್ತಾ ಕಣವಿ ಎಂಬ ಪದದೊಳಗೆ ಕವಿ ಇದ್ದಾನೆ ಎಂದಿದ್ದೆ. ಕವಿಯಂತೆ ಬದುಕಿ ಬಾಳಿದ ಹೃದಯವಂತ ಕವಿ ಚೆನ್ನವೀರ ಕಣವಿ ಅವರು. ನಾನು ಹೈಸ್ಕೂಲ್ ಓದುವಾಗ ಅವರ ಮಾತು ಕವನ ನಮಗೆ ಪಠ್ಯವಾಗಿತ್ತು. ಎಸ್.ಕೆ.ಪಿ ಜ್ಯೂ ಕಾಲೇಜು ಅರೆ ಅಂಗಡಿಯಲ್ಲಿ ಗುರುಗಳಾದ ಕೆ.ಎಸ್.ಹೆಗಡೆ ಕಾಜನಮನೆ ಅವರು ಅದನ್ನು ಹೇಗೆ ಓದಲು ಸಾಧ್ಯ ಎಂದು ಓದಿ ತಿಳಿಸಿದ್ದರು. ನಾನು ಅದನ್ನು ಹಾಗೆ ಮತ್ತೆ ಓದಿ ಕಂಠಪಾಠ ಮಾಡಿಕೊಂಡು ಎಂ.ಎ.ಓದುವಾಗ ಕಣವಿ ಅವರ ಮನೆಗೆ ಹೋಗಿ ಅವರ ಕವಿತೆಯನ್ನು ಸಾದರ ಪಡಿಸಿ ಅವರ ಮುಗುಳ್ನಗೆಯ ಅಭಿನಂದನೆಯ ಸ್ವೀಕರಿಸಿ ರೂಮಿಗೆ ಬಂದಿದ್ದೆ. ಉತ್ತರ ಕರ್ನಾಟಕದ ಸುಮನಸರಾದ ಕವಿ ಕಣವಿಯವರು ಎಲ್ಲರನು ತನ್ನವರೆಂದು ಭಾವಿಸಿ ಬರಮಾಡಿಕೊಂಡ ಸಜ್ಜನರು. ಕ.ವಿ.ವಿ.ಯ ಬೆಳ್ಳಿ ಹಬ್ಬದಲ್ಲಿ ಅವರು ರಚಿಸಿದ "ವಿಶ್ವವಿನೂತನ ವಿದ್ಯಾ ಚೇತನ ಸರ್ವ ಹೃದಯ ವಿಹಾರಿ" ಎಂಬ ಕವಿತೆಯ ಹಾಡಿನ ತರಂಗಗಳು ಕನ್ನಡ ಜನಮನವನ್ನು ಮುದಗೊಳಿಸಿದ್ದು ಇಂದಿಗೂ ಮಹಾವಿದ್ಯಾಲಯಗಳ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಆ ಹಾಡನ್ನು ಹಾಡುವ ಪರಂಪರೆ ಮುಂದುವರಿದಿದೆ. ಕಣವಿಯವರ ಬದುಕು ಶ್ರುತಿಮಾಡಿಟ್ಟ ವೀಣೆಯಂತೆ ಅವರು ಬದುಕಿರುವ ವರೆಗು ಸುಸ್ವರವನ್ನು ಹೊರಡಿಸುತ್ತಾ ಬಂದಿದೆ.ಅವರ ಪತ್ನಿ ಶಾಂತಾದೇವಿ ಕಣವಿಯವರು ಹೆಸರಾಂತ ಕತೆಗಾರ್ತಿ ಅವರ ಕತಾ ಸಂಕಲನದ (ಜಾತ್ರೆ ನೆರೆದಿತ್ತು) ವಿಮರ್ಶೆ ಮಾಡುವ ಅವಕಾಶ ನನಗೆ ಒದಗಿ ಬಂದಿತ್ತು. ಅವರಿಬ್ಬರದು ಅನುಪಮ ದಾಂಪತ್ಯ.ಅವರ ಮನೆಗೆ ಹೋದಾಗಲೆಲ್ಲ ಆಕಾಶ ಬುಟ್ಟಿಯ ಕಂಡು ಕಣವಿ ದಂಪತಿಗಳೊಡನೆ ಮಾತನಾಡಿ ಬರುವಾಗ ಮುದವೊಂದು ಮೊಳೆದು ಬಗೆಯ ಕಣ್ಣು ತೆರೆದ ಅನುಭವ. ನಾವು ಎಂ.ಎ.ಓದುವಾಗ ಕ.ವಿ.ವಿ.ಪ್ರಸಾರಾಂಗ, ಸಂಗೀತ ವಿಭಾಗ,ಮುದ್ರಣಾಲಯ ಆಸುಪಾಸಿನಲ್ಲಿತ್ತು. ಬಿಸ್ಕೇಟು ಬಣ್ಣದ ಕೋಟು ಅದೆ ಬಣ್ಣದ ಟೋಪಿ ಧರಿಸಿದ ಕಣವಿ ನಮ್ಮ ಕಣ್ಣಿಯೆ ಆಗಿದ್ದರು. ಕಣವಿಯವರು ನವೋದಯ,ನವ್ಯ,ದಲಿತ ಬಂಡಾಯ ( ನವ್ಯೋತ್ತರ) ಕಾಲಘಟ್ಟಗಳಲ್ಲಿ ಕವನವನ್ನು ಬರೆಯುತ್ತಾ ಬಂದವರು. ಕಾವ್ಯ ರಚನೆಗೆ ಅವರಿಗೆ ಅವರದೆ ಆದ ಒಂದು ಛಂದಸ್ಸು ಮತ್ತು ಲಯ ಸಿದ್ಧಿಸಿತ್ತು ನವ್ಯರು ಬೇಕಾಬಿಟ್ಟಿಯಾಗಿ ಕಾವ್ಯ ಬರೆಯುತ್ತಿರುವಾಗ ಕಣವಿಯವರ ಕಾವ್ಯ ಛಂದೋಲಯಗಳ ತೋಲವನ್ನು ತಪ್ಪದೆ ಕಾವ್ಯ ಕ್ರಿಯೆಯ ಅಸಲು ಕಸುಬನ್ನು ಬಿಡದೆ ಮುಂದುವರಿಸಿಕೊಂಡು ಬಂದವರು. ಅವರ ತಂದೆ ಸಕ್ಕರೆಪ್ಪ ತಾಯಿ ಪಾರ್ವತವ್ವ. ಮಗನಿಗೆ ಆ ಕಾಲದಲ್ಲಿಯೆ ಚೆನ್ನವೀರ ಎಂಬ ನವನವೀನವಾದ ಹೆಸರು. ಕಣವಿಯವರು ಎಲ್ಲರನ್ನು ಪ್ರೀತಿಸುವ ಗುಣದವರಾದ ಕಾರಣ ಎಲ್ಲರಿಗು ಅವರು ಚೆನ್ನ. ಸತ್ಯವಂತರಾದ ಅವರು ಎಂತಹ ಸಂದರ್ಭದಲ್ಲಿಯು ತಮ್ಮ ವ್ಯಕ್ತಿತ್ವಕ್ಕೆ ಕಲಂಕವನ್ನು ತಂದುಕೊಳ್ಳದ ವೀರ. ಅದಕ್ಕಾಗಿಯೆ ಚೆನ್ನವೀರ ಎಂಬ ಹೆಸರು ಅವರಿಗೆ ಅನ್ವರ್ಥಕ. ಕವಿ,ವಿಮರ್ಶಕ,ವಾಗ್ಮಿ, ಆಡಳಿತಗಾರ ಇದನ್ನೆಲ್ಲಾಮೀರಿಸಿದ ಮಾನವತಾವಾದಿ. ಅರಿತು ಬಾಳಿದ ಶರಣ. ಕನ್ನಡ ಕಾವ್ಯದಲ್ಲಿ ಸುನೀತ (sonnet) ಪರಂಪರೆಯನ್ನು ಬೆಳೆಸಿದ ಸುನೀತಗಳ ವಿನೀತ ಕವಿ ಚೆನ್ನವೀರ ಕಣವಿ. 2006 ನೇಯ ಇಸ್ವಿ ಜನವರಿ 26 ರಂದು ಹೊನ್ನಾವರದ ಶರಾವತಿ ನದಿಯ ದ್ವೀಪಕ್ಕೆ( ಕುರ್ವೆ) ಡಿಂಗಿಯಲ್ಲಿ ಹೋಗಿ ಸನ್ಮಾನ ಕವಿಗೋಷ್ಠಿ ನಡೆಸಿದ ಸುದ್ದಿಯನ್ನು ಪತ್ರಕರ್ತ ಎಂ.ಜಿ.ಹೆಗಡೆ ಅವರು ಪ್ರಜಾವಾಣಿಯಲ್ಲಿ ವಿಶೇಷ ವರದಿಯನ್ನಾಗಿ ಪ್ರಕಟಿಸಿದ್ದರು.ಅದನ್ನು ಓದಿದ ಕಣವಿ ಅವರು ಶ್ರೀಪಾದ ನೀವು ಎಷ್ಟು ಚೆಂದದ ಕಾರ್ಯಕ್ರಮ ಮಾಡಿದಿರಿ ನನ್ನನ್ನು ಕರೆದಿದ್ದರೆ ನಾನು ಬರುತ್ತಿದ್ದೆ ಎಂದು ನನ್ನನ್ನು ದಂಗು ಬಡಿಸಿದರು. ಧಾರವಾಡದ ಕ.ವಿ.ವಿ.ಯ ಮಾನಸೋಲ್ಲಾಸದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ದಿನಕರ ದೇಸಾಯಿಯವರ ಕಾವ್ಯವಾಚನ ಮಾಡಲು ನನ್ನ ಹೆಸರನ್ನು ಶಿಫಾರಸ್ಸು ಮಾಡಿದವರು ಕಣವಿಯವರು. ಕಣವಿ ಎಂದರೆ ಎರಡು ದಡಗಳ ತುಂಬಿ ಹರಿಯುವ ಕನ್ನಡದ ಜೀವನದಿ. ಕಣವಿಯವರು ನವೋದಯ,ನವ್ಯ,ದಲಿತ ಬಂಡಾಯ ( ನವ್ಯೋತ್ತರ) ಕಾಲಘಟ್ಟಗಳಲ್ಲಿ ಕವನವನ್ನು ಬರೆಯುತ್ತಾ ಬಂದವರು. ಕಾವ್ಯ ರಚನೆಗೆ ಅವರಿಗೆ ಅವರದೆ ಆದ ಒಂದು ಛಂದಸ್ಸು ಮತ್ತು ಲಯ ಸಿದ್ಧಿಸಿತ್ತು ನವ್ಯರು ಬೇಕಾಬಿಟ್ಟಿಯಾಗಿ ಕಾವ್ಯ ಬರೆಯುತ್ತಿರುವಾಗ ಕಣವಿಯವರ ಕಾವ್ಯ ಛಂದೋಲಯಗಳ ತೋಲವನ್ನು ತಪ್ಪದೆ ಕಾವ್ಯ ಕ್ರಿಯೆಯ ಅಸಲು ಕಸುಬನ್ನು ಬಿಡದೆ ಮುಂದುವರಿಸಿಕೊಂಡು ಬಂದವರು. ಅವರ ತಂದೆ ಸಕ್ಕರೆಪ್ಪ ತಾಯಿ ಪಾರ್ವತವ್ವ. ಮಗನಿಗೆ ಆ ಕಾಲದಲ್ಲಿಯೆ ಚೆನ್ನವೀರ ಎಂಬ ನವನವೀನವಾದ ಹೆಸರು. ಕಣವಿಯವರು ಎಲ್ಲರನ್ನು ಪ್ರೀತಿಸುವ ಗುಣದವರಾದ ಕಾರಣ ಎಲ್ಲರಿಗು ಅವರು ಚೆನ್ನ. ಸತ್ಯವಂತರಾದ ಅವರು ಎಂತಹ ಸಂದರ್ಭದಲ್ಲಿಯು ತಮ್ಮ ವ್ಯಕ್ತಿತ್ವಕ್ಕೆ ಕಲಂಕವನ್ನು ತಂದುಕೊಳ್ಳದ ವೀರ. ಅದಕ್ಕಾಗಿಯೆ ಚೆನ್ನವೀರ ಎಂಬ ಹೆಸರು ಅವರಿಗೆ ಅನ್ವರ್ಥಕ. ಕವಿ,ವಿಮರ್ಶಕ,ವಾಗ್ಮಿ, ಆಡಳಿತಗಾರ ಇದನ್ನೆಲ್ಲಾಮೀರಿಸಿದ ಮಾನವತಾವಾದಿ. ಅರಿತು ಬಾಳಿದ ಶರಣ. ಕನ್ನಡ ಕಾವ್ಯದಲ್ಲಿ ಸುನೀತ (sonnet) ಪರಂಪರೆಯನ್ನು ಬೆಳೆಸಿದ ಸುನೀತಗಳ ವಿನೀತ ಕವಿ ಚೆನ್ನವೀರ ಕಣವಿ. 2006 ನೇಯ ಇಸ್ವಿ ಜನವರಿ 26 ರಂದು ಹೊನ್ನಾವರದ ಶರಾವತಿ ನದಿಯ ದ್ವೀಪಕ್ಕೆ( ಕುರ್ವೆ) ಡಿಂಗಿಯಲ್ಲಿ ಹೋಗಿ ಸನ್ಮಾನ ಕವಿಗೋಷ್ಠಿ ನಡೆಸಿದ ಸುದ್ದಿಯನ್ನು ಪತ್ರಕರ್ತ ಎಂ.ಜಿ.ಹೆಗಡೆ ಅವರು ಪ್ರಜಾವಾಣಿಯಲ್ಲಿ ವಿಶೇಷ ವರದಿಯನ್ನಾಗಿ ಪ್ರಕಟಿಸಿದ್ದರು.ಅದನ್ನು ಓದಿದ ಕಣವಿ ಅವರು ಶ್ರೀಪಾದ ನೀವು ಎಷ್ಟು ಚೆಂದದ ಕಾರ್ಯಕ್ರಮ ಮಾಡಿದಿರಿ ನನ್ನನ್ನು ಕರೆದಿದ್ದರೆ ನಾನು ಬರುತ್ತಿದ್ದೆ ಎಂದು ನನ್ನನ್ನು ದಂಗು ಬಡಿಸಿದವರು ಪರಿಸರ ಪ್ರೀತಿಯ ಕವಿ ಕಣವಿಯವರು. ಧಾರವಾಡದ ಕ.ವಿ.ವಿ.ಯ ಮಾನಸೋಲ್ಲಾಸದಲ್ಲಿ ನಡೆಯುತ್ತಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮಕ್ಕೆ ದಿನಕರ ದೇಸಾಯಿಯವರ ಕಾವ್ಯವಾಚನ ಮಾಡಲು ನನ್ನ ಹೆಸರನ್ನು ಶಿಫಾರಸ್ಸು ಮಾಡಿದವರು ಕಣವಿಯವರು.ಅಂದು ದಿನಕರರ ಹರಿಜನರು ಎಂಬ ಕವನ ವಾಚನ ಮಾಡಿದ ನನ್ನನ್ನು ಬಳಿ ಕರೆದು ಅಭಿನಂದಿಸಿದ್ದರು. ಕಣವಿ ಎಂದರೆ ಎರಡು ದಡಗಳ ತುಂಬಿ ಹರಿಯುವ ಕನ್ನಡದ ಜೀವನದಿ. ದಕ್ಷಿಣ ಕರ್ನಾಟಕದ ಮೈಸೂರಿನಲ್ಲಿ ಕುವೆಂಪು ಬರೆದ ಗೀತೆಗಳು ನಾಡಿನಾದ್ಯಂತ ಸಂಚಲನ ಉಂಟು ಮಾಡಿದಂತೆ ಉತ್ತರ ಕರ್ನಾಟಕದ ಧಾರವಾಡದಲ್ಲಿ ಕಣವಿಯವರು ಬರೆದ ಕವಿತೆಗಳು ಕನ್ನಡದ ಜನ ಮನವನ್ನು ಸೂರೆಗೊಂಡವು.ಕಣವಿ ಎಲ್ಲರಿಗು ಪ್ರಿಯರಾದ ನಿರ್ಮತ್ಸರದ ಕವಿ. ೧೯೨೮ ನೇ ಇಸ್ವಿ ಜೂನ್ ೨೮ ರಂದು ಅಂದಿನ ಧಾರವಾಡ ಜಿಲ್ಲೆಯ ಗದಗದ ಹೊಂಬಳದಲ್ಲಿ ಜನಿಸಿದ ಕಣವಿಯವರು ೨೦೨೨ ನೇಯ ಇಸ್ವಿ ಫೆಬ್ರುವರಿ ೧೬ ರಂದು ತಮ್ಮ ಬಾಳ ಪಯಣವನ್ನು ಮುಗಿಸಿದರು ಕಾವ್ಯಾಕ್ಷಿ,ಭಾವ ಜೀವಿ,ಆಕಾಶ ಬುಟ್ಟಿ,ಮಧು ಚಂದ್ರ,ಮಣ್ಣಿನ ಮೆರವಣಿಗೆ,ದಾರಿ ದೀಪ,ನೆಲ ಮುಗಿಲು,ಎರಡು ದಡ,ನಗರದಲ್ಲಿ ನೆರಳು,ಜೀವಧ್ವನಿ,ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು,ಶಿಶಿರದಲ್ಲಿ ಬಂದ ಸ್ನೇಹಿತ,ಚಿರಂತನ ದಾಹ ಕಣವಿಯವರ ಕವನ ಸಂಕಲನಗಳು. ಕಾವ್ಯಾರ್ಥ ಚಿಂತನ , ಕಾವ್ಯಾನುಸಂಧಾನ,ಸಮಾಹಿತ,ಮಧುರ ಚೆನ್ನ, ಸಮತೋಲನ ಅವರ ವಿಮರ್ಶಾತ್ಮಕ ಕೃತಿಗಳು. ಹಕ್ಕಿ ಪುಕ್ಕ,ಚಿಣ್ಣರ ಲೋಕವ ತೆರೆಯೋಣ ಇವು ಅವರ ಮಕ್ಕಳ ಕವನ ಸಂಕಲನಗಳು. ಸಮನ್ವಯದ ಕವಿ ಎಂದೆ ಹೆಸರಾದ ಚೆನ್ನವೀರ ಕಣವಿಯವರು ತಮ್ಮ ಜೀವನದಲ್ಲಿಯು ಸಮನ್ವಯವನ್ನು ಸಾಧಿಸಿದ ಸಜ್ಜನ ಮತ್ತು ಸ್ನೇಹಪರ ವ್ಯಕ್ತಿ.ಜಿಎಸ್ಎಸ್,ಕೆಎಸ್ ನ,ನಿಸಾರ ಅಹಮ್ಮದ, ಎಂ.ಅಕಬರ ಅಲಿ ಇವರೆಲ್ಲರು ಸಮನ್ವಯ ಕವಿಗಳೆಂದೆ ಗುರುತಿಸಿಕೊಂಡವರು. ಕಣವಿಯವರ ಬದುಕು ಮತ್ತು ಬರಹಗಳಲ್ಲಿ ಹೊರಹೊಮ್ಮುವ ಪೃಕೃತಿ ಪ್ರೀತಿ,ಗುಣ ಗೌರವ, ಸಮುದಾಯದ ಹಿತಾಕಾಂಕ್ಷೆ, ಸಮಾನತೆಯ ಪ್ರೀತಿ ಅನನ್ಯ ಮತ್ತು ಅನುಪಮ. ಹಲವು ಪ್ರಶಸ್ತಿ ಪುರಸ್ಕಾರ ಗಳು ಅವರನ್ನು ಹುಡುಕಿ ಕೊಂಡು ಬಂದವು. ೧೯೮೧ ರಲ್ಲಿ ಅವರ ಜೀವ ಧ್ವನಿ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಹಾಸನದಲ್ಲಿ ೧೯೯೬ ನೆ ಇಸ್ವಿಯಲ್ಲಿ ಜರುಗಿದ ಅ.ಭಾ.ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ, ೨೦೦೮ ರಲ್ಲಿ ಆಳ್ವಾಸ್ ನುಡಿಸಿರಿ ಸಮ್ಮೇಳನದ ಅಧ್ಯಕ್ಷತೆ, ರಾಜ್ಯೋತ್ಸವ ಪ್ರಶಸ್ತಿ,ಪಂಪ ಪ್ರಶಸ್ತಿ,ಬಸವ ಕಾರುಣ್ಯ ಪ್ರಶಸ್ತಿ,ಕನ್ನಡ ವಿ.ವಿ.ಹಂಪಿಯ ನಾಡೋಜ ಗೌರವ,ಕರ್ನಾಟಕ ಕವಿರತ್ನ ಪ್ರಶಸ್ತಿ,ಅ.ನ.ಕೃ.ಪ್ರಶಸ್ತಿ, ೨೦೨೦ ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ. ಇದನ್ನು ಹೊರತು ಹಲವು ಮಾನ ಸನ್ಮಾನ ಗೌರವಗಳು ಕವಿ ಚೆನ್ನವೀರ ಕಣವಿ ಅವರಿಗೆ ಸಂದಾಯವಾಗಿದೆ. "ಯಾವ ದೇಶಕು ಯಾವ ಕಾಲಕು ಯುವಕ ಶಕ್ತಿ ಚಿಲುಮೆ" ಎಂಬ ಕಣವಿಯವರ ಕವನ ನಾಡಿನ ಯುವಜನ ಮೇಳಗಳಲ್ಲಿ ಮೊಳಗಿವೆ. ವಿಶ್ವ ಭಾರತಿಗೆ ಕನ್ನಡದ ಆರತಿ ಅವರ ಜನಪ್ರಿಯ ಕವನ. ಅಪಾರವಾದ ಜೀವನ ಪ್ರೀತಿಯನ್ನು ತಮ್ಮ ಬಾಳಿನ ಕಣಿವೆಯಲ್ಲಿ ಕಾಪಿಟ್ಟುಕೊಂಡಿದ್ದ ಕವಿ ಕಣವಿ ಇಲ್ಲಾ ಎಂದು ನಂಬುವುದು ಕಷ್ಟ. ತಮ್ಮ ಮೆದು ಮಾತಿನ ಮೂಲಕ ಲೋಕದ ಜನರ ಪ್ರೀತಿಯನ್ನು ಗೆದ್ದ ಕವಿ ಕಣವಿ. " ನಾವು ಆಡುವ ಮಾತು ಹೀಗಿರಲಿ ಗೆಳೆಯ ಮೆದುಮಾತು ಮೂಲೋಕ ಗೆಲ್ಲುವುದು ತಿಳಿಯ" ಅವರ ಮಾತು ಕವನದ ಸಾಲು. ಕಣವಿ ತಮ್ಮ ಕವಿತೆಗಳ ಮೂಲಕ ಸದಾ ನಮ್ಮೊಡನೆ ಉಳಿಯುತ್ತಾರೆ. ಡಾ.ಶ್ರೀಪಾದ ಶೆಟ್ಟಿ