top of page

ಚೆಂಬೆಳಕಿನ ಚುಟುಕುಗಳು

ಚೆನ್ನವೀರ ಕಣವಿಯವರನ್ನು ನಾವು ಚುಟುಕು ಕವಿ ಎಂದೇನೂ ಪರಿಗಣಿಸದೇ ಇದ್ದರೂ ಅವರೂ ಈ ಕಾವ್ಯಪ್ರಕಾರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಮೈಸೂರಿನ ರಾಜ್ಯ ಚುಟುಕು ಸಾಹಿತ್ಯ ಪರಿಷತ್ತಿನ ಸಂಚಾಲಕರಾದ ಡಾ. ಅರಸ್ ಅವರು ಕಣವಿಯವರ ಚುಟುಕುಗಳ ಒಂದು ಸಂಕಲನವನ್ನೇ ಹೊರತಂದಿದ್ದಾರೆ. ಕಣವಿಯವರ ಹಲವು ಕವನಗಳಲ್ಲೂ ಚುಟುಕುಗಳಂತೆ ಪ್ರತ್ಯೇಕ ಅಸ್ತಿತ್ವವನ್ನು ಕಾಣಿಸುವ ಸಾಲುಗಳನ್ನು ಕಾಣಬಹುದಾಗಿದೆ. ಅಂತಹ ಕೆಲವು ಮಾದರಿ ಚುಟುಕುಗಳನ್ನಿಲ್ಲಿ ಗಮನಿಸಬಹುದು. * ನಾಡಿನ ತುಂಬಾ ನೂರು ಜಗದ್ಗುರು ಇರುವದು ಜಗವೊಂದೇ; ಕಾಡಿನ ತುಂಬಾ ಬಣ್ಣದ ಹೂಗಳು ವಾಸನೆ ಕೆಲವೊಂದೇ. * ಅವನನ್ನು ಚೆನ್ನಾಗಿ ಬಯ್ಯಬೇಕೆಂದು ಹೋದೆ; ಅವನು " ಹೊಡೆದುಬಿಡು ನನ್ನ " ಎಂದ, ಗೆದ್ದವರು ಯಾರು? * ದೊಡ್ಡವರ ಆಕಸ್ಮಿಕ ಸಾವು ಅತ್ಯಂತ ಘೋರವಾದದ್ದು ಆದರೆ ಅದಕ್ಕೂ ಘೋರ ಒಮ್ಮೊಮ್ಮೆ ಅವರ ಅಂತ್ಯಸಂಸ್ಕಾರ! * ಎನಿತೌಷಧ ಕುಡಿದು ಗುಳಿಗೆ ನುಂಗಿ, ಚುಚ್ಚಿಕೊಂಡರೂ ಈ ದೇಹದ ಯಂತ್ರ ಬೇರೆ ಬ್ರಹ್ಮದೇವರೆ ಬಲ್ಲ * ಎಂದಿನಿಂದಲೋ ನಿದ್ದೆಯಿಲ್ಲದೆ ಸದಾ ಎಚ್ಚರದಲ್ಲೇ ಇದ್ದ ಭಗವಂತ ಸುಪ್ರಭಾತದ ಧ್ವನಿಸುರುಳಿಗಳ ಹಾವಳಿಗೆ ಬೆಚ್ಚಿ ಇನ್ನು ಮಲಗುವುದೇ ಲೇಸೆಂದು ನಿಶ್ಚಯಿಸಿಬಿಟ್ಟ * ನೀನು ಚಪ್ಪಲಿಗಳನ್ನು ಮೆಟ್ಟಿಕೊಂಡು ನಡೆದು ಹೋಗುತ್ತೀ ಚಪ್ಪಲಿಗಳು ಭಾವಿಸುತ್ತವೆ ಅವೇ ನಿನ್ನನ್ನು ಹೊತ್ತುಕೊಂಡಿದ್ದೇವೆಂದು. * ನಾನು ನೀರಿನಲಿ ಮುಳುಗಿ ಚಿಪ್ಪುಗಳನು ಹೊರತಂದೆ ಕೆಲವು ಮುತ್ತುಗಳು ಉಳಿದುವೆಲ್ಲ ಕಂಬನಿಗಳು! -ಚೆನ್ನವೀರ ಕಣವಿ ಸಂಗ್ರಹ: ಎಲ್.ಎಸ್.ಶಾಸ್ತ್ರಿ

ಚೆಂಬೆಳಕಿನ ಚುಟುಕುಗಳು
bottom of page