ಚಿನ್ನಪ್ಪ ಸರ್
ಚಿನ್ನಪ್ಪ ಸರ್ ಈಗ ನನಗೆ ನೆನಪಾಗುತ್ತಾರೆ. ಅವರ ನೆನಪು ನನಗೆ ಒಂದು ರೀತಿಯ ಮುಜುಗರ ಉಂಟು ಮಾಡುತ್ತದೆ. ನನಗೆ ನನ್ನ ಮೇಲೇ ಸಿಟ್ಟು ಬಂದಂತಾಗುತ್ತದೆ. ಆದರೆ ಸಿಟ್ಟು ಮಾಡಿಕೊಂಡು ಏನೂ ಪ್ರಯೋಜನವಿಲ್ಲ. ಆಗ ನನಗೆ ಏಳೋ ಎಂಟೋ ವರ್ಷ ಆಗಿರಬೇಕು. ನನ್ನ ಕೇರಿಯ ಹುಡುಗರೆಲ್ಲ ಶಾಲೆಗೆ ಹೋಗುತ್ತಿದ್ದರು. ನಾನು ನನ್ನ ಸಣ್ಣ ತಮ್ಮನೊಂದಿಗೆ ಮನೆಯಲ್ಲೇ ಇರುತ್ತಿದ್ದೆ. ಆಗಲೇ ಚಿನ್ನಪ್ಪ ಸರ್ ನಮ್ಮ ಮನೆಗೆ ಬಂದಿದ್ದು. ಅವರಿಗೆ ನನ್ನನ್ನು ಶಾಲೆಗೆ ಕರೆದುಕೊಂಡು ಹೋಗಬೇಕೆಂದು ಹಟ. ಆಗಾಗ ಬರುತ್ತಲೇ ಇದ್ದರು. ಅದಕ್ಕೆ ಈಗ ಮತ್ತೆ ಬಂದಿದ್ದು. ನನ್ನ ಅಮ್ಮ ಹಾಗೂ ಅಜ್ಜಿಯ ಹತ್ತಿರ ನಿಮ್ಮ ಮಗನನ್ನು ಶಾಲೆಗೆ ಕಳಿಸಿಲ್ಲ. ಶಾಲೆಗೆ ದಾಖಲಾಗಿ ಒಂದು ವರ್ಷ ಕಳೆದುಹೋಯಿತು. ಅವನನ್ನು ಪ್ರೀತಿಯಿಂದ ನೋಡಿಕೊಳ್ಳುತ್ತೇವೆ. ಸಣ್ಣ ಮಕ್ಕಳು ಹಟ ಮಾಡುತ್ತಾರೆ ಅಂತ ನಾವು ದೊಡ್ಡವರು ಸುಮ್ಮನಿದ್ದರೆ ಅವರು ಹಾಳಾಗಿ ಬಿಡುತ್ತಾರೆ ಎಂದು ಏನೇನೋ ಹೇಳಿದರು. ಅವರ ಮಾತಿನ ಅರ್ಥ ನಾನು ತಿಳಿದಂತೆ ‘ನನ್ನನ್ನು ಶಾಲೆಗೆ ಕಳಿಸಿ, ಇಲ್ಲದಿದ್ದರೆ ನನಗೆ ತೊಂದರೆ ಆಗುತ್ತದೆ’ ಎಂಬುದಾಗಿತ್ತು. ಅವರು ಶಾಲೆಗೆ ಬಾರೊ ಎನ್ನುತ್ತ ನನ್ನ ಕಡೆಗೆ ಬಂದಂತೆ ನಾನು ಹಿಂದೆ ಸರಿಯುತ್ತ ಮನೆ ಒಳಗೆ ಹೊಕ್ಕು ಹಿಂಬದಿಯ ಬಾಗಿಲಿನಿಂದ ಗುಡ್ಡದ ಕಡೆಗೆ ಓಡಿಹೋದೆ. ಚಿನ್ನಪ್ಪ ಸರ್ ಹೊರಟು ಹೋದರು.
ಹಾಂ..... ನನಗೆ ಸ್ವಲ್ಪ ನೆನಪಿದೆ. ಮರುದಿನ ಎಲ್ಲರೂ ಸೇರಿ ಅಂದರೆ ಅಮ್ಮ, ಅಜ್ಜಿ ಹಾಗೂ ನೆರೆಯವರೆಲ್ಲ ಸೇರಿ ನನ್ನನ್ನು ಶಾಲೆಗೆ ಕಳಿಸುವ ನಿರ್ಧಾರ ಮಾಡಿದ್ದರು. ನಾನು ನನ್ನ ಅಪ್ಪನನ್ನು ಎರಡು ಸಲ ನೋಡಿದ್ದು ಮಾತ್ರ ನೆನಪಿದೆ. ಅವನು ಊರು ಬಿಟ್ಟು ಎಲ್ಲೋ ಹೊರಟು ಹೋಗಿದ್ದಾನೆ ಅಂತ ಅಮ್ಮ ಅಜ್ಜಿ ಹೇಳುತ್ತಾರೆ. ನಾಳೆ ನೀನು ಶಾಲೆಗೆ ಹೋಗಲೇಬೇಕು ಎಂದು ಅಜ್ಜಿ ಊಟ ಮಾಡುವಾಗ ಹೇಳಿದಳು. ನನಗೆ ಯಾಕೋ ಶಾಲೆಗೆ ಹೋಗಲು ಇಷ್ಟವಿರಲಿಲ್ಲ. ಆಚೆ ಈಚೆ ಮನೆಯಲ್ಲಿ ನಾಲ್ಕೈದು ಜನ ದೊಡ್ಡ ದೊಡ್ಡ ಅಣ್ಣಂದಿರು ಇದ್ದರು. ಅವರಿಗೆ ಅಂಗಡಿಯಿಂದ ಗುಟಕಾ ತಂದು ಕೊಡುವುದು. ಅವರು ಯಾರದೋ ಮನೆಯ ಕೆಲಸಕ್ಕೆ ಹೋಗುವಾಗ ಅವರ ಹಿಂದೇ ತಿರುಗಾಡುವುದು ಎಲ್ಲಾ ಮಾಡುತ್ತಿದ್ದೆ. ಒಂದೊಂದು ಸಾರಿ ನನ್ನ ಕಲ್ಲು ಹೊಡೆಯುವ ಕವಣೆ ತೆಗೆದುಕೊಂಡು ಗುಡ್ಡದಲ್ಲಿ ಹಕ್ಕಿ ಹೊಡೆಯಲು ಓಡಾಡುತ್ತಿದ್ದೆ. ಸಣ್ಣ ಸಣ್ಣ ಮುಳ್ಳು ಪೊದೆಗಳ ಹಿಂದೆ ಕುಳಿತು ಹಕ್ಕಿ ಎಲ್ಲಿ ಬಂದು ಕೂಡ್ರುತ್ತದೆ ಎಂದು ನೋಡುತ್ತ ಗಂಟೆಗಟ್ಟಲೆ ಕಳೆಯುತ್ತಿದ್ದೆ. ಹಕ್ಕಿ ನನ್ನ ಹತ್ತಿರ ಇರುವ ಗಿಡದ ಮೇಲೆ ಬಂದು ಕುಳಿತಾಗ ನಾನು ಕವಣೆಯಿಂದ ಕಲ್ಲು ಹೊಡೆದು ಅದನ್ನು ಉರುಳಿಸಲು ಪ್ರಯತ್ನಿಸುತ್ತಿದ್ದೆ. ಹಕ್ಕಿ ಉರುಳಿತೆಂದರೆ ಮನೆಗೆ ಬಂದು ಒಲೆಗೆ ಹಾಕಿ ಸುಟ್ಟು ತಿನ್ನುತ್ತಿದ್ದೆ. ಏನೆಲ್ಲ ಹೇಳುತ್ತಿದ್ದೇನೆ ಅನಿಸಿತಾ? ಹೌದು ಇದೆಲ್ಲ ನಾನು ಮಾಡಿದ್ದೆ. ಅದು ನನ್ನ ಬಾಲ್ಯದ ನೆನಪು......
ಈ ದಿನ ನಾನು ಶಾಲೆಗೆ ಹೋಗಬೇಕು. ನಾನು ಎರಡು ಮೂರು ವರ್ಷಗಳಿಂದ ಅರಣ್ಯ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಅಲ್ಲಿ ದೊಡ್ಡ ಸಾಹೇಬರು ಬಂದವರು ನನ್ನ ಬಗ್ಗೆ ಕೇಳಿ, ನನ್ನ ಕೆಲಸ ನೋಡಿ ತುಂಬಾ ಮೆಚ್ಚಿಕೊಂಡಿದ್ದಾರೆ. “ಏ ಜಗ್ಗು, ನೀನು ಏಳನೇ ತರಗತಿ ಪಾಸಾದ ಸರ್ಟಿಫಿಕೇಟ ತಂದರೆ ಸಾಕು. ನಿನ್ನನ್ನು ಇಲ್ಲಿಯ ವಾಚಮನ್ ಕೆಲಸಕ್ಕೆ ಖಾಯಂ ಆಗಿ ಸೇರಿಸಿಕೊಳ್ಳಬಹುದು ಎಂದಿದ್ದಾರೆ..... ಆದರೆ ನಾನು ಏಳನೇ ತರಗತಿ ಪಾಸಾಗಿಲ್ಲವಲ್ಲ...... ನಾನು ಚಿನ್ನಪ್ಪ ಸರ್ ಹೇಳಿದ ಮಾತನ್ನು ಕೇಳಿದ್ದರೆ....... ಚಿನ್ನಪ್ಪ ಸರ್ ಬಂದು ಹೋದ ಮರುದಿನ ನನ್ನ ಅಜ್ಜಿ, ಅಮ್ಮ ಹಾಗೂ ನನ್ನ ಪಕ್ಕದ ಮನೆಯ ಚಿಕ್ಕಪ್ಪ ನನ್ನನ್ನು ಶಾಲೆಗೆ ಕಳಿಸಲೇ ಬೇಕೆಂದು ನಿರ್ಧರಿಸಿದ್ದರು. ನಾನು ಬೆಳಗಾದ ತಕ್ಷಣವೇ ಗುಡ್ಡದ ಕಡೆಗೆ ಓಡಬೇಕು ಎಂದು ನಿರ್ಧರಿಸಿದ್ದೆ. ಆದರೆ ಬೆಳಗಾಗುತ್ತಲೇ ಆಚೆ ಮನೆಯ ಚಿಕ್ಕಪ್ಪ ನಮ್ಮ ಮನೆಗೇ ಬಂದು ಕುಳಿತಿದ್ದ. ನಾನು ಎದ್ದಾಗ ನನ್ನ ಹಿಂದೆಯೇ ಬಂದ. ಅಮ್ಮ ತಿಂಡಿ ತಯಾರಿಸಿ ಇಟ್ಟಿದ್ದಳು. ನಾನು ಮುಖ ತೊಳೆದು ಒಳಗೆ ಬಂದೆ. ಬೇಗ ತಿಂಡಿ ತಿಂದು ಶಾಲೆಗೆ ಹೋಗಲು ತಯಾರಾಗು ಎಂದಳು ಅಮ್ಮ. ನಾನು ‘ಶಾಲೆಗೆ ಹೋಗುವುದಿಲ್ಲ’ ಎಂದು ಹೇಳಿದ್ದೇ ತಡ ಚಿಕ್ಕಪ್ಪ ಎದ್ದು ಬಂದವನೇ ಸಣ್ಣ ಬೆತ್ತದ ಕೋಲಿನಿಂದ ನನಗೆ ಎರಡು ಮೂರು ಬಾರಿಸಿದ. ನಾನು ಅಯ್ಯಯ್ಯೋ ಎಂದು ಕೂಗುತ್ತ ಶಾಲೆಗೆ ಹೋಗುತ್ತೇನೆ ಎನ್ನುತ್ತ ದೊಡ್ಡದಾಗಿ ಅತ್ತೆ. ಆದರೂ ನನಗೆ ಹೊರಡಲು ಮನಸ್ಸಿರಲಿಲ್ಲ. ಅಳುತ್ತ ಕುಳಿತೆ. ಚಿಕ್ಕಪ್ಪ ನೋಡುತ್ತಲೇ ಇದ್ದ. ನನ್ನ ಪಾಟಿಪುಸ್ತಕ ಒಂದು ಚೀಲದಲ್ಲಿ ತುಂಬಿ ಅಮ್ಮ ಹೊರಟಳು. ಚಿಕ್ಕಪ್ಪ ನನ್ನ ಕೈಹಿಡಿದು ಎಳೆದುಕೊಂಡೇ ಹೊರಟ. ನಾನು ನನ್ನಿಂದ ಸಾಧ್ಯವಿದ್ದಷ್ಟೂ ಮಿಸುಕಾಡಿ, ಜಗ್ಗಾಡಿ ಅವರಿಗೆ ತೊಂದರೆ ಕೊಟ್ಟೆ.
ನಾವು ಶಾಲೆಗೆ ಬಂದಾಗ ಚಿನ್ನಪ್ಪ ಸರ್ ಹೊರಗೆ ಬಂದರು. ಮಗನನ್ನು ತಂದಿರಾ. ಒಂದು ದಿನ ಹಟ ಮಾಡುತ್ತಾನೆ. ಆಮೇಲೆ ಹಾಗೆಲ್ಲ ಮಾಡೋದಿಲ್ಲ. ದಿನಾಲೂ ಶಾಲೆಗೆ ಬರುತ್ತಾನೆ ಎಂದು ಹೇಳುತ್ತಾ ‘ಜಗ್ಗು ಬಾ’ ಎಂದು ನನ್ನನ್ನು ಕರೆದರು. ಚಿಕ್ಕಪ್ಪ ನನ್ನನ್ನು ಶಾಲಾ ಕೋಣೆಯ ಬಾಗಿಲವರೆಗೂ ತಂದು ಕೈಬಿಟ್ಟ. ಅವನು ಬಿಟ್ಟ ತಕ್ಷಣ ನಾನು ತಿರುಗಿ ಮನೆಗೆ ಓಡಲು ಪ್ರಯತ್ನಿಸಿದೆ. ಅಲ್ಲೇ ಇದ್ದ ಚಿನ್ನಪ್ಪ ಸರ್ ನನ್ನ ಕೈ ಹಿಡಿದುಕೊಂಡರು. ನನಗೆ ಏನನಿಸಿತೊ..... ನಾನು ತಿರುಗಿ ಅವರ ಕೈ ಗಟ್ಟಿಯಾಗಿ ಕಚ್ಚಿದೆ. ಅವರ ಕೈಯಿಂದ ಬಳ ಬಳ ರಕ್ತ ಇಳಿಯಿತು. ಅವರು ನೋವಿನಿಂದ ನನ್ನ ಕೈ ಬಿಟ್ಟುಬಿಟ್ಟರು. ಕೂಡಲೇ ಚಿಕ್ಕಪ್ಪ ತನ್ನ ಕೈಯಲ್ಲಿ ಇದ್ದ ಬೆತ್ತದಿಂದ ನನಗೆ ಮತ್ತೆರಡು ಪೆಟ್ಟು ಕೊಟ್ಟ........ ಸರ್ ನನ್ನನ್ನು ಬೈಯಲಿಲ್ಲ. ಅವರು ‘ಅವನಿಗೆ ತಿಳಿಯುವುದಿಲ್ಲ. ಒಳಗೆ ಕೂಡ್ರಿಸಿ. ಈ ದಿನ ನೀವೂ ಅವನ ಸಂಗಡ ಇರಿ’ ಎಂದು ಅಮ್ಮನಿಗೆ ಹೇಳುತ್ತ ಹತ್ತಿಯಿಂದ ಗಾಯ ಒರೆಸಿಕೊಳ್ಳುತ್ತಿದ್ದರು.
ನಾನು ಮೊದಲು ಹೇಳಿದಹಾಗೆ ನಮ್ಮ ಕೇರಿಯ ಅಣ್ಣಂದಿರ ಸಹವಾಸ ನನ್ನಲ್ಲಿ ಬೆಳೆಯುತ್ತಾ ಹೋಯಿತು. ಅವರ ಸಂಗಡ ಆಟ ಆಡುವುದು, ಎಲ್ಲಿ ಬೇಕೆಂದಲ್ಲಿ ತಿರುಗುವುದು, ಹಕ್ಕಿ ಕೋಳಿ ಮೀನು ಮುಂತಾದವನ್ನು ಹಿಡಿಯುವುದು, ಅಣ್ಣಂದಿರಿಗೆ ತರುವಾಗ ನಾನೂ ಗುಟಕಾ ತಿನ್ನುವುದು ಎಲ್ಲಾ ಅಭ್ಯಾಸ ಆಗಿಬಿಟ್ಟಿತು. ಚಿನ್ನಪ್ಪ ಸರ್ ನಮ್ಮ ಮನೆಗೆ ಆಗಾಗ ಬರುತ್ತಲೇ ಇದ್ದರು. ಅವರು ಬಂದಾಗ ನಾನು ನಾಲ್ಕೈದು ದಿನ ಶಾಲೆಗೆ ಹೋಗುತ್ತಿದ್ದೆ.
ಹೀಗೇ ಐದಾರು ವರ್ಷ ಕಳೆಯಿತು. ನನ್ನ ತಮ್ಮ ದೊಡ್ಡವನಾದ. ಅವನೂ ಶಾಲೆಗೆ ಹೋಗಲಿಲ್ಲ. ಆ ದಿನ ಸರ್ ಮತ್ತೆ ನಮ್ಮ ಮನೆಗೆ ಬಂದಿದ್ದರು. ಇದೊಂದು ವರ್ಷವಾದರೂ ಶಾಲೆಗೆ ಬಾ. ನಿನ್ನ ತಮ್ಮನೂ ನಿನ್ನ ಜೊತೆಗೆ ಬರುತ್ತಾನೆ. ನಿನಗೂ ಏಳನೇ ತರಗತಿ ಮುಗಿದಂತಾಗುತ್ತದೆ ಎಂದಿದ್ದರು. ಈಗ ಚಿನ್ನಪ್ಪ ಸರ್ ನಮ್ಮೂರ ಶಾಲೆಯಲ್ಲಿ ಇಲ್ಲ. ಅವರು ನಿವೃತ್ತಿ ಹೊಂದಿ ಯಾವುದೋ ಊರಲ್ಲಿ ಇದ್ದಾರೆ. ಆದರೆ ನಾನು ಶಾಲೆಗೆ ಹೋಗಿ ಏಳನೇ ತರಗತಿ ಸರ್ಟಿಫಿಕೇಟ ಕೊಡುತ್ತೀರಾ ಅಂತ ಕೇಳಬೇಕು. ಆದರೆ ನಾನು ಆ ವರ್ಷ ಶಾಲೆಗೆ ಹೋಗದೆ ನಿಲ್ಲಿಸಿಬಿಟ್ಟೆನಲ್ಲ.
ನಾನು ಶಾಲೆ ಹೋದಾಗ ಚಿನ್ನಪ್ಪ ಸರ್ ಹೇಗೆ ಸಂಭ್ರಮ ಪಡುತ್ತಿದ್ದರು ಎಂಬುದನ್ನು ನೆನಪಿಸಿಕೊಂಡರೆ ನನಗೆ ನಾನೆಂತಹ ಮೂರ್ಖ ಎನಿಸುತ್ತದೆ. ನನಗೆ ನಡೆದಾಡಲು ಚಪ್ಪಲಿ ಕೊಡಿಸಿದರು. ಹೊಸ ಕೊಡೆ ತಂದುಕೊಟ್ಟರು. ಹೆಗಲ ಮೇಲೆ ಕೈ ಹಾಕಿ ನೀನು ಜಾಣ ಹುಡುಗ ದಿನಾಲೂ ಶಾಲೆಗೆ ಬರಬೇಕು ಎಂದು ಹೇಳುತ್ತಿದ್ದರು. ಹುಟ್ಟು ಹಬ್ಬ ಎಂದು ಯಾರೋ ಅವರಿಗೆ ಕೊಟ್ಟ ಚಾಕಲೇಟನ್ನು ಜಗ್ಗು ಎಂದು ಕರೆದು ನನ್ನ ಕಿಸೆಗೆ ಹಾಕಿದರು. ಬರೆಯಲು ಸರಿಯಾಗಿ ಬರದಿದ್ದರೆ ಚಿತ್ರ ಬಿಡಿಸು ಅಂತ ನೋಟಬುಕ್ಕು ಬಣ್ಣ ಎಲ್ಲ ಕೊಟ್ಟರು. ಆದರೂ ನನಗೆ ಏಳನೇ ತರಗತಿ ಮುಗಿಸಲು ಏಕೆ ಮನಸ್ಸಾಗಲಿಲ್ಲ ಎಂದು ತಿಳಿಯುವುದಿಲ್ಲ.
ಅಜ್ಜಿ ಏಳಲಾಗದೆ ಮಲಗಿ ವರ್ಷವೇ ಆಯಿತು. ಅಮ್ಮನ ಹತ್ತಿರ ಸರಿಯಾಗಿ ಕೆಲಸ ಮಾಡಲು ಆಗುತ್ತಿಲ್ಲ. ತಮ್ಮ ಬೆಂಗಳೂರಿನ ಕಡೆ ನಮಗೆ ಗೊತ್ತಿಲ್ಲದೇ ಓಡಿ ಹೋದವನು ಎಲ್ಲಿದ್ದಾನೆ ಗೊತ್ತಿಲ್ಲ. ಕಳೆದ ವರ್ಷ ಸಾತುವನ್ನು ಮದುವೆ ಆಗಿದ್ದೇನೆ. ಅವರೆಲ್ಲ ನನ್ನನ್ನೇ ನಂಬಿದ್ದಾರೆ. ಅರಣ್ಯ ಇಲಾಖೆ ಕೆಲಸ ಸಿಕ್ಕಿರುವುದರಿಂದ ಹೇಗೂ ನಡೆಯುತ್ತಿದೆ. ಈಗ ಸಾಹೇಬರು ಹೇಳಿದ ಹಾಗೆ......
ಅದು ಚಿನ್ನಪ್ಪ ಸರ್ ಅವರ ಕೊನೆಯ ಭೆಟ್ಟಿ. ನಾನು ಅವರು ಏನೇ ಹೇಳಿದರೂ ಶಾಲೆಗೆ ಹೋಗಬಾರದು ಎಂದು ನಿರ್ಧರಿಸಿದ್ದೆ. ಅವರೇನಾದರೂ ಕರೆಯಲು ಬಂದರೆ ಸರಿಯಾಗಿ ಹೇಳಬೇಕು ಅಂದುಕೊಂಡಿದ್ದೆ. ಸರ್ ನಮ್ಮ ಮನೆಗೆ ಬಂದರು. ನಾನು ಎಲ್ಲೂ ಓಡಲಿಲ್ಲ. ಹೆದರಲಿಲ್ಲ. ಬಾಗಿಲ ಮುಂದೇ ನಿಂತಿದ್ದೆ. ಅವರು ಸ್ಕೂಟರ ತಂದು ನಿಲ್ಲಿಸಿ ನಗೆಯಾಡುತ್ತ “ಜಗ್ಗು ಶಾಲೆಗೆ ಬರಲೇ ಇಲ್ಲವಲ್ಲ” ಅಂದರು. ಇಲ್ಲ ಅಂದೆ. ತಮ್ಮ ಎಲ್ಲಿ ಹೋದ ಅಂದರು. ಗೊತ್ತಿಲ್ಲ ಅಂದೆ. ಅಷ್ಟರಲ್ಲಿ ಅಮ್ಮ ಅಜ್ಜಿ ಆಚೀಚೆ ಮನೆಯವರೆಲ್ಲ ಹೊರಗೆ ಬಂದರು. ಶಾಲೆಗೆ ಬಾರೊ. ನೀನು ಒಳ್ಳೆಯವ ಆಗಬೇಕು. ಶಾಲೆ ಕಲಿಯದಿದ್ದರೆ ಮುಂದೆ ನಿನಗೆ ಕಷ್ಟ. ನಿನ್ನ ತಮ್ಮನೂ ಶಾಲೆ ತಪ್ಪಿಸಿ ಹಾಳಾಗುತ್ತಿದ್ದಾನೆ ಎಂದೆಲ್ಲ ಹೇಳತೊಡಗಿದರು. ನನಗೆ ಅವರ ಉಪದೇಶ ಸರಿ ಎನಿಸಲಿಲ್ಲ. ನಾನು ಬರುವುದಿಲ್ಲ. ಬರದಿದ್ದರೆ ನಿಮಗೇನು? ಅಂದೆ. ಹೀಗೆ ಯಾಕೆ ಮಾತಾಡಿದೆ ಅಂತ ನನಗೆ ಗೊತ್ತಿಲ್ಲ. “ಹಾಗೆಲ್ಲ ಹೇಳಬೇಡ. ಈ ವರ್ಷ ಬಂದರೆ ಏಳನೇ ತರಗತಿ ಮುಗಿಯುತ್ತದೆ.” ಅದೇ ಮಾತು. ‘ನನಗೆ ಏನೂ ಬೇಡ, ನೀವು ಹೇಳುವುದೂ ಬೇಡ’ ಅಂದೆ. ನೀನು ಗುಟಕಾ ತಿನ್ನುತ್ತಿ ಎಂದು ಮಕ್ಕಳು ಹೇಳುತ್ತಾರೆ ಅಂದರು. “ಹೌದು ಗುಟಕಾ ತಿನ್ನುತ್ತೇನೆ. ನಿಮಗೆ ಏನು?” ಎಂದು ಉತ್ತರ ಕೊಟ್ಟೆ. ಅವರಿಗೆ ಬಹಳ ನೋವಾಗಿರಬೇಕು. ಕೈ ಎತ್ತಿದರು. ಹಾಗೆಲ್ಲ ಹೇಳಬೇಡ. ಗುಟಕಾ ಹೊಟ್ಟೆ ಹಾಳು ಮಾಡುತ್ತದೆ ಅಂದರು. “ನನ್ನ ಹೊಟ್ಟೆ ಹಾಳಾದರೆ ನಿಮಗೆ ಏನು?” ಅನ್ನುತ್ತಿದ್ದಂತೆ ಅಮ್ಮ ಬಂದು ನನ್ನ ಬಾಯಿ ಮುಚ್ಚಿದಳು. ನಾನು ಅಮ್ಮನನ್ನು ದೂಡಿ ಗುಡ್ಡದ ಕಡೆಗೆ ನಡೆದೆ. ನಂತರ ನಾನು ಶಾಲೆಗೆ ಹೋಗಲೇ ಇಲ್ಲ. ನನಗೇ ಗೆಲುವಾಯಿತೆಂದು ಆಗ ಖುಷಿಪಟ್ಟಿದ್ದೆ. ಆದರೆ.... ಎನ್ನುತ್ತ ಈಗ ಶಾಲೆಯ ಒಳಕ್ಕೆ ಹೊಕ್ಕೆ.
ಬನ್ನಿ ಬನ್ನಿ ಎಂದು ಮುಖ್ಯಾಧ್ಯಾಪಕರು ಖುರ್ಚಿ ತೋರಿಸಿದರು. ನನ್ನ ತೊಂದರೆ ಎಲ್ಲ ಹೇಳಿ ಏಳನೇ ತರಗತಿ ಸರ್ಟಿಫಿಕೇಟ ಕೊಟ್ಟರೆ ನಿಮಗೆ ಪುಣ್ಯ ಬರುತ್ತದೆ ಎನ್ನುತ್ತ ಕೈ ಮುಗಿದು ಕುಳಿತೆ. ನೀವು ಏಳನೇ ತರಗತಿ ಪಾಸಾಗಿದ್ದರೆ ಅದನ್ನೇ ಕೊಡೋಣ ಎನ್ನುತ್ತ ರಜಿಸ್ಟರನಲ್ಲಿ ನನ್ನ ಹೆಸರು ಹುಡುಕತೊಡಗಿದರು. ನಾನು ನೋಡುತ್ತ ಕುಳಿತಿದ್ದೆ. ಇಲ್ಲೇ ಇದೆ ನಿಮ್ಮ ಹೆಸರು ಆರನೇ ತರಗತಿ ಪಾಸು ಅಂತ ಇದೆ. ಮತ್ತೆ ಒಂದು ವರ್ಷ ನೀವು ಶಾಲೆಗೆ ಬಂದಿದ್ದರೆ...... “ಈಗ ಏಳು ಅಂತ ಬರೆದುಕೊಡಿ” ಅಂದೆ. “ಹಾಗೆಲ್ಲ ಆಗುವುದಿಲ್ಲ. ನಿಮಗೆ ಶಾಲೆಗೆ ಬನ್ನಿ ಅಂತ ತಿಳುವಳಿಕೆ ನೀಡಿ ಯಾರೂ ಒತ್ತಾಯ ಮಾಡಿಲ್ಲ ಅಂತ ಕಾಣುತ್ತದೆ’ ಎನ್ನುತ್ತ ರಜಿಸ್ಟರ್ ಮಡಚಿ ಕಪಾಟಿನಲ್ಲಿ ಹಾಕಿದರು. “ನಾನು ನೋಡಿ ಸರ್ ಅಂದೆ” “ಇಲ್ಲ ಇಲ್ಲ ಹಾಗೆಲ್ಲ ಕೊಡುವ ಹಾಗಿಲ್ಲ” ಎನ್ನುತ್ತ ತರಗತಿಯ ಕಡೆ ನಡೆದರೆ..... ನನಗೆ ಮತ್ತೆ ಮತ್ತೆ ಚಿನ್ನಪ್ಪ ಸರ್ ನೆನಪಾಗಿ ಕಣ್ಣು ಒದ್ದೆಯಾಗತೊಡಗಿತು.
-ತಮ್ಮಣ್ಣ ಬೀಗಾರ
9480474629