ಚಿಂತಕ ಜಾರ್ಜ್ ಬರ್ನಾರ್ಡ್ ಶಾ
1898 ರಲ್ಲಿ ಶಾ ಐರ್ಲೆಂಡ್ ನ ಶ್ರೀಮಂತ ಮಹಿಳೆ ಚಾರ್ಲೆಟ್ ಎಂಬವಳನ್ನು ವಿವಾಹವಾದ. ನಂತರ ಅವನು ನಾಟಕ ರಚನೆಯತ್ತ ಹೆಚ್ಚಿನ ಗಮನ ಹರಿಸಿದ. ಅವನ ಪ್ರಸಿದ್ಧ ನಾಟಕ ಜಾನ್ ಬುಲ್ಸ್ ಅದರ್ ಐಲ್ಯಾಂಡ್'" ಇಂಗ್ಲೆಂಡ್ ನಲ್ಲಿ ಬಹಳ ಜನಪ್ರಿಯವಾಯಿತು. ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿಗಳಲ್ಲೂ ಅವನು ಜನಪ್ರಿಯ ನಾಗಿದ್ದ. 1904 ರಿಂದ 1907 ರವರೆಗೆ ರಾಯಲ್ ಕೋರ್ಟ್ ಥಿಯೇಟರ್ ಶಾ ನ ಕ್ಯಾಂಡಿಡಾ ಸಹಿತ ಅನೇಕ ನಾಟಕಗಳನ್ನು ಪ್ರದರ್ಶಿಸಿತು. ಆಂಡ್ರೊಕಲ್ಸ್, , ದಿ ಲಾಯನ್, ಪಿಗ್ಮೇಲಿಯನ್ , ಶಾವಿಯಾನ್, ಮೊದಲಾದ ನಾಟಕಗಳು ಪ್ರದರ್ಶನ ಕಂಡವು. 191೪ ರಲ್ಲಿ ವಿಶ್ವಯುದ್ಧ ಆರಂಭವಾದಾಗ ಶಾ ಅದರ ವಿರುದ್ಧವೇ ಬರೆಯತೊಡಗಿದ. ಇದರಿಂದ ಸರಕಾರದ ಕೋಪಕ್ಕೂ ಸಿಲುಕಿದ. ಅವನ ಬರವಣಿಗೆ ನಿಂತಿತು. ಆಗ ಆತ ಬರೆದದ್ದು ಹಾರ್ಟ್ಬ್ರೆಕ್ ಹೌಸ್ ಎಂಬ ಒಂದೇ ನಾಟಕ. ಯುದ್ಧ ಕೊನೆಗೊಂಡ ನಂತರ ಆತ ಮತ್ತೆ ನಾಟಕ ಬರೆಯಲು ಪ್ರಯತ್ನಿಸಿದ. ಆತನ ಇನ್ನೊಂದು ಪ್ರಸಿದ್ಧ ನಾಟಕ " ಸೇಂಟ್ ಜಾನ್" ಅವನ ಶ್ರೇಷ್ಠ ಕೃತಿಗಳಲ್ಲೊಂದೆಂದು ಪರಿಗಣಿಸಲಾಗುತ್ತದೆ. ಆತ ಜೋನ್ ಆಫ್ ಆರ್ಕ್ ಬಗ್ಗೆ ರಚಿಸಿದ ಸಾಹಿತ್ಯ ಅಂತಾರಾಷ್ಟ್ರೀಯ ಖ್ಯಾತಿ ಪಡೆಯಿತು. 1925 ರಲ್ಲಿ ಬರ್ನಾರ್ಡ್ ಶಾಗೆ ನೋಬೆಲ್ ಸಾಹಿತ್ಯ ಪಾರಿತೋಷಕ ನೀಡಲಾಯಿತು. ಶಾ ಪ್ರಶಸ್ತಿ ಸ್ವೀಕರಿಸಿದನಾದರೂ ಆ ಹಣವನ್ನು ನಿರಾಕರಿಸಿದ. ಆತ ಆ ವೇಳೆಗಾಗಲೇ ಸಾಕಷ್ಟು ಹಣ ಗಳಿಸಿದ್ದ. ಶಾ ಆ ಹಣವನ್ನು ಇನ್ನೊಬ್ಬ ಸ್ವೀಡಿಶ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್ ಬರ್ಗನ ನಾಟಕಗಳ ಇಂಗ್ಲೀಷ್ ಆವೃತ್ತಿ ಪ್ರಕಟನೆಗೆ ನೀಡಿ ತನ್ನಹೃದಯ ವೈಶಾಲ್ಯ ಮೆರೆದ. 192೦ ರ ವೇಳೆಗೆ ಇಂಗ್ಲೆಂಡ್ ನಲ್ಲಿ ಶಾ ನಾಟಕೋತ್ಸವವನ್ನು ಏರ್ಪಡಿಸಲಾಯಿತು. ನ್ಯೂಯಾರ್ಕ್ ನ ಥಿಯೇಟರ್ ಗಿಲ್ಡ್ ಶಾ ನಾಟಕಗಳಿಗೆ ಅಂತಾರಾಷ್ಟ್ರೀಯ ಪ್ರಚಾರ ಒದಗಿಸಿತು. ಜಾಗತಿಕ ಪ್ರಸಿದ್ಧಿ ಪಡೆದ ಶಾನನ್ನು ಸ್ಟಾಲಿನ್ ಆಮಂತ್ರಿಸಿದ. ಸೋಶಲಿಸ್ಟ್ ಶಾ ಸೋವಿಯತ್ ಯೂನಿಯನ್ ಗೆ ಭೆಟ್ಟಿ ನೀಡಿದ. ಶಾ ತನ್ನ ಉಳಿದ ಜೀವನಾವಧಿ ಪೂರ್ತಿ ನಾಟಕ ರಚನೆ ಮಾಡಿದ. 1943 ರಲ್ಲಿ ಶಾನ ಪತ್ನಿ ನಿಧನ ಹೊಂದಿದಳು. ಶಾ ಸಹ ಅನಾರೋಗ್ಯಕ್ಕೀಡಾದ. ಅತ ತನ್ನ ಉಯಿಲು ಬರೆದ. ತನ್ನ ಆಸ್ತಿಯಲ್ಲಿ ಬಹು ಪಾಲನ್ನು ಆತ ಇಂಗ್ಲಿಷ್ ಅಕ್ಷರಮಾಲೆ ಸುಧಾರಣಾ ಯೋಜನೆಗೆ ದೇಣಿಗೆಯಾಗಿ ನೀಡಿದ. ಶಾ ನ ಸಮಗ್ರ ಕೃತಿಗಳ ಪ್ರಕಟನೆ 36 ಸಂಪುಟಗಳಲ್ಲಿ 1930 ರಿಂದ 50 ರ ಅವಧಿಯಲ್ಲಿ ಪ್ರಕಟಗೊಂಡಿತು. ಶಾ ಮರಣ ವಿಚಿತ್ರ ರೀತಿಯಲ್ಲಿ ಸಂಭವಿಸಿತು. ಆತ 1950 ರ ನವೆಂಬರ್ 2 ರಂದು ಮನೆ ಹತ್ತಿರದ ಒಂದು ಮರವನ್ನು ಹತ್ತಿ ಅದನ್ನು ಟ್ರಿಮ್ ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದು ತೀವ್ರ ಗಾಯಗೊಂಡ. ಕೆಲವು ದಿವಸಗಳಲ್ಲೇ ಅವನು ಕೊನೆಯುಸಿರೆಳೆದ. ಅಗ ಅವನಿಗೆ 94 ವರ್ಷ ವಯಸ್ಸಾಗಿತ್ತು. ಮರಣಾನಂತರ ಅವನ ಬೃಹತ್ ಎಸ್ಟೇಟ್ ಎರಡು ಮೂರು ಸಂಸ್ಥೆಗಳಲ್ಲಿ ಹಂಚಲಾಯಿತು. ಶಾ ನಾಟಕಗಳು ತಮ್ಮ ಹಾಸ್ಯ, ನಾಟಕೀಯತೆ, ಮತ್ತು ಸಾಮಾಜಿಕ ಚಿಂತನೆಗಳ ಸಂಗಮವಾಗಿ ಇಂದಿಗೂ ಎಲ್ಲೆಡೆ ಮಾನ್ಯತೆ ಪಡೆದಿವೆ. ಅತ ನೆಲೆಸಿದ್ದ ಮನೆ ಇಂದು ರಾಷ್ಟ್ರೀಯ ಟ್ರಸ್ಟ್ ಆಸ್ತಿಯಾಗಿದೆ. ಈ ಸ್ಮಾರಕ ಪ್ರವಾಸೀ ಸ್ಥಳವೂ ಆಗಿದೆ. ಅವನ ನಾಟಕಗಳ ನಿರಂತರ ಪ್ರದರ್ಶನ ನಡೆಯುತ್ತಿದೆ. 1971 ರಲ್ಲಿ ಆತನ ಹೆಸರಿನ ರಂಗಮಂದಿರವೂ ನಿರ್ಮಾಣಗೊಂಡಿದೆ. ಶೇಕ್ಸ್‌ಪಿಯರ್ ನ ನಂತರದಲ್ಲಿ ಬರ್ನಾರ್ಡ್ ಶಾ ನಾಟಕಗಳೇ ಹೆಚ್ಚು ಪ್ರದರ್ಶಿತಗೊಳ್ಳುತ್ತಿವೆ. ಶಾ ತನ್ನ ಕೃತಿಗಳ ಮೂಲಕ ವಿಶ್ವ ಸಾಹಿತ್ಯ ಲೋಕದಲ್ಲಿ ಅಜರಾಮರನಾಗಿದ್ದಾನೆ. - ಎಲ್. ಎಸ್. ಶಾಸ್ತ್ರಿ