top of page

ಗುರು

ಗುರುವಿನ ಮಹತ್ವವನ್ನು,ಮಹಿಮೆಯನ್ನು ವರ್ಣಿಸುವುದು ಸುಲಭ ಸಾಧ್ಯವಲ್ಲ.ಗುರು ಎಂದರೆ ದೊಡ್ಡದು ಎಂಬ ಅರ್ಥವು ಇದೆ.ಗ್ರಹಗಳಲ್ಲಿ ಗುರು ಗ್ರಹವು ಎಲ್ಲ ಗ್ರಹಗಳಿಗಿಂತ ದೊಡ್ಡಧಾಗಿ ಗೋಚರಿಸುತ್ತದೆ. " ನ ಗುರೋರಧಿಕಂ ನ ಗುರೋರಧಿಕಂ" ಎಂದು ಗುರುವಿನ ಹೆಚ್ಚುಗಾರಿಕೆಯನ್ನು ಬಣ್ಣಿಸಲಾಗಿದೆ. ಗುರು ಬ್ರಹ್ಮ ಗುರು ವಿಷ್ಣು ಗುರು ದೇವೊ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೆ ನಮ: ಗುರು ಬ್ರಹ್ಮ,ವಿಷ್ಣು,ಮಹೇಶ್ವರ ಎಂಬ ತ್ರಿಮೂರ್ತಿಯು ಹೌದು.ಸಾಕ್ಷಾತ್ ಪರಬ್ರಹ್ಮನೆ ಆಗಿರುವ ಗುರುವಿಗೆ ನಮಸ್ಕಾರ ಎಂಬುದು ಈ ಸುಭಾಷಿತದ ಅರ್ಥ. ಮಹಾ ಭಾರತವನ್ನು ಬರೆದ ಮಹರ್ಷಿ ವ್ಯಾಸರು ಆಷಾಡ ಶುದ್ದ ಪೂರ್ಣಿಮೆಯ ದಿನ ಜನಿಸಿದ ಕಾರಣ ಆ ದಿನವನ್ನು ಗುರು ಪೂರ್ಣಿಮೆ ಎಂದು ಆಚರಿಸುತ್ತಾ ಬಂದಿದ್ದಾರೆ. ವ್ಯಾಸ ಮಹರ್ಷಿಗಳು ಪರಾಶರ ಮುನಿ ಮತ್ತು ಯೋಜನಗಂಧಿಯ ಮಗ. ಮತ್ತು ಶುಕ ಮಹರ್ಷಿಯ ತಂದೆ.ಮಹಾ ಜ್ಞಾನಿಗಳಾದ ಅವರ ಶಕ್ತಿ,ಸಾಮರ್ಥ್ಯ,ಕ್ರಿಯಾಶೀಲತೆ ಅಗಾಧವಾದುದು. " ವ್ಯಾಸಂ ವಸಿಷ್ಠನಪ್ತಾರಂ ಶಕ್ತೇ: ಪೌತ್ರಮಕಲ್ಮಷಂ ಪರಾಶರಾತ್ಮಜಂ ವಂದೆ ಶುಕತಾತಂ ತಪೋನಿಧಿಮ್" ಎಂದು ಅವರನ್ನು ಸ್ತುತಿಸಲಾಗಿದೆ. " ವ್ಯಾಸಾಯ ವಿಷ್ಣು ರೂಪಾಯ ವ್ಯಾಸ ರೂಪಾಯ ವಿಷ್ಣವೆ ನಮೊ ವೈ ಬ್ರಹ್ಮ ನಿಧಯೆ ವಾಸಿಷ್ಠಾಯ ನಮೋನಮ." ಎಂಧು ವಿಷ್ಣು ಸಹಸ್ರ ನಾಮದ ಪೀಠಿಕೆಯಲ್ಲಿ ವ್ಯಾಸರಾಯರನ್ನು ಆವರ ಗುಣ ವಿಶೇಷಣಗಳಿಂದ ಸ್ತುತಿ ಮಾಡಲಾದೆ. ಗುರುವಿನ ಮಹಿಮೆಯನ್ನು ಸಾಮಾನ್ಯರಿಂದ ವರ್ಣಿಸಲು ಸಾಧ್ಯವಿಲ್ಲ.ಗುರು ಎಂಬ ಪದದಲ್ಲಿ ಗು ಎಂದರೆ ಕತ್ತಲೆ ರು ಎಂದರೆ ಕತ್ತಲೆಯನ್ನು ನಿವಾರಿಸುವವನು ಎಂಬ ಅರ್ಥವಿದೆ. "ಸಬ್ ಧರತಿ ಕಾಗಜ ಕರು ಲೇಖನಿ ಸಬ್ ಬನರಾಯ ಸಪ್ತ ಸಮುಂದಕಿ ಮಸಿ ಕರು ಗುರುಗುನ್ ಲಿಖಾ ನ ಜಾಯ" ಎಂದು ಸಂತ ಕಬೀರರು ತಮ್ಮ ದೋಹೆಯಲ್ಲಿ ಹೇಳಿದ್ದಾರೆ. ಇಡಿ ಭೂಮಿಯನ್ನೆ ಕಾಗದವನ್ನಾಗಿ ಮಾಡಿಕೊಂಡು,ಅಡವಿಯಲ್ಲಿರು ಮರಗಳನ್ನೆಲ್ಲ ಲೇಖನಿಯನ್ನಾಗಿ ಮಾಡಿ,ಸಪ್ತ ಸಮುದ್ರದ ನೀರನ್ನು ಬರೆಯುವ ಶಾಯಿ(ಮಸಿ) ಯನ್ನಾಗಿಸಿಕೊಂಡರು ಗುರುವಿನ ಗುಣವನ್ನು ಬರೆದು ಮುಗಿಸಲು ಸಾಧ್ಯವಿಲ್ಲ ಎಂದರು ಕಬೀರರು. ಪರಮ ಕಾರುಣಿಕ ತಪಸ್ವಿಗಳಾದ ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳು ಸಂತರ ಮಹಿಮೆಯ ಬಗ್ಗೆ ಹೇಳುತ್ತಾ ಕಲ್ಪ ವೃಕ್ಷವು ನಾವು ಕಲ್ಪಿಸಿದ್ದನ್ನು ಕೊಡುತ್ತದೆ, ಕಾಮಧೇನು ನಾವು ಇಚ್ಛಿಸಿದ್ದನ್ನು ಕೊಟ್ಟರೆ, ಚಿಂತಾಮಣಿ ನಾವು ಚಿಂತಿಸಿದ್ದನ್ನು ಕೊಡುತ್ತದೆ. ಆದರೆ ಗುರು ನಮಗೆ ಏನು ಬೇಕು ಎಂದು ತಿಳಿದು ಅದನ್ನೆ ಕೊಡುತ್ತಾನೆ ಎಂದರು.ಮನುಷ್ಯ ಮಾತ್ರರು, ಅನ್ನಮಯ ಅವಸ್ಥೆಯಲ್ಲಿರುವವರು ಏನೇನನ್ನೊ ಬಯಸ ಬಹುದು.ಅವರ ಬಯಕೆ ಫಲಿಸಿ ಅದರಿಂದ ಗಂಡಾಂತರವು ಉಂಟಾಗ ಬಹುದು. ಆದರೆ ಗುರು ಸಾರಾಸಾರ ವಿಚಾರ ಮಾಡಿ ಶಿಷ್ಯನಿಗೆ ಹಿತವಾಗುವಂತಹದ್ದನ್ನೆ ನೀಡುತ್ತಾನೆ ಎಂಬುದು ಗುರು ಶ್ರೀಧರರ ಅಭಿಮತ. ಅರಿತರೆ ಶರಣ ಮರೆತರೆ ಮಾನವ ಎಂದ ವಚನಕಾರರು ಅರಿವೆ ಗುರು ಎಂದರು.ತನ್ನ ಅರಿವೆ ಗುರುವಾದವನು ಭವ ಸಾಗರವನ್ನು ಸುಲಭವಾಗಿ ದಾಟ ಬಲ್ಲನು.ಅವರು ಗುರು,ಲಿಂಗ,ಜಂಗಮ ಗಳನ್ನು ತ್ರಿವಿಧ ಎಂದು ಕರೆದರು.ಅವರ ಸೇವೆಯಲ್ಲಿ ತೊಡಗಿದ ಶರಣರನ್ನು ತ್ರಿವಿಧ ದಾಸೋಹಿ ಗಳೆಂದು ಕರೆದರು.ಗುರುವಿನ ಘನತೆಯನ್ನು ಅವರು ಸಾರಿ ಹೇಳಿದರು. "ಉರಿವ ಕೆಂಡದ ಮೇಲೆ ತೃಣವ ತಂದಿರಿಸಿದರೆ ಆ ತೃಣವನಾ ಕೆಂಡ ನುಂಗಿದಂತೆ,ಗುರು ಚರಣದ ಮೇಲೆ ತನುವೆಂಬ ತೃಣವ ತಂದಿರಿಸಿದರೆ ಆತನ ಸರ್ವಾಂಗವೆಲ್ಲ ಲಿಂಗ ಕಾಣಾ ರಾಮನಾಥ." ಎಂದು ಜೇಡರ ದಾಸಿಮಯ್ಯ ಹೇಳಿದ. "ಕಲ್ಲೊಳಗೆ ಹೊನ್ನುಂಟು,ಉದಕದೊಳಗೆ ಅಗ್ನಿಯುಂಟು,ಹಾಲೊಳಗೆ ತುಪ್ಪವುಂಟು, ಅಂತರ್ಯಾಮಿಯಲ್ಲಿ ಶಿವನಿಹನು,ಇದೇನು ಕತ್ತಲೆ ಕಾಣ ಬಾರದು.ತೋರ ಬಲ್ಲ ಗುರು ಸುಳಿಯನು ಕೂಡಲಸಂಗಮ ದೇವಾ." ಎಂದು ಬಸವಣ್ಣ ಗುರುವಿನ ಮಹತಿಯನ್ನು ಬಣ್ಣಿಸಿದ. ವ್ಯೋಮ ಮೂರುತಿ ಎಂದು ಶರಣರೆಲ್ಲರು ಕರೆಯುವ ಜ್ಞಾನದ ತವನಿಧಿ ಅಲ್ಲಮ ಪ್ರಭು ತನ್ನ ವಚನದಲ್ಲಿ " ಆಸೆಗೆ ಸತ್ತುದು ಕೋಟಿ ಆಮಿಷಕ್ಕೆ ಸತ್ತುದು ಕೋಟಿ,ಹೆಣ್ಣು ಹೊನ್ನು ಮಣ್ಣಿಂಗೆ ಸತ್ತುದು ಕೋಟಿ ಗುಹೇಶ್ವರ ನಿಮಗಾಗಿ ಸತ್ತವರನೊಬ್ಬರನು ಕಾಣೆ " ಎಂದು ಹೇಳಿದ. ಅಕ್ಕ ಮಹಾದೇವಿ ಗುರುವಿನ ಮಹತ್ವವನ್ನು ತನ್ನ ವಚನದಲ್ಲಿ ಶ್ರುತ ಪಡಿಸುವ ಪರಿ "ಸಂಸಾರ ಸಾಗರದೊಳಗೆ ಬಿದ್ದೆ ನೋಡಾ ನಾನು. ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು.ಅಂಗವಿಕಾರದ ಸಂಗವ ನಿಲ್ಲಿಸಿ, ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು.ಹಿಂದಣ ಜನ್ಮವ ತೊಡೆದು ಮುಂದಣ ಪಥವ ತೋರಿದನೆನ್ನ ತಂದೆ. ಚೆನ್ನ ಮಲ್ಲಿಕಾರ್ಜುನ ನಿಜವನರುಹಿದನೆನ್ನ ಗುರು." ಈ ವಚನದಲ್ಲಿದೆ. ಗುರುವಿನ ಗುಣವನ್ನು ಸಾರಿ ಹೇಳುವ ಈ ವಚನಗಳ ಅರ್ಥ ಮತ್ತು ವಿಶ್ಲೇಷಣೆಯನ್ನು ನಿಮಗೆ ಬಿಟ್ಟಿದ್ದೇನೆ‌. ಓಂ ಜಗತ್ಕಲ್ಯಾಣಕ ಕಾರ್ಯಾಯ ನರ ರೂಪ ಧರಾಯಚ ಯೋಗಿ ರಾಜಾಯ ವಂದ್ಯಾಯ ಶ್ರೀಧರಾಯ ನಮೋ ನಮ: ಡಾ.ಶ್ರೀಪಾದ ಶೆಟ್ಟಿ.

ಗುರು
bottom of page