ಕೊರೋನಾ
ಮನೆ ತುಂಬ ಜನರಿಲ್ಲ ಮನದಲ್ಲಿ ಖುಷಿ ಇಲ್ಲ ಮುನ್ನಿನಂತೆ ಮುದದಿ ಬೆರೆಯುವಂತಿಲ್ಲ. ಪ್ರಕೃತಿ ಮುನಿಸೋ ಇದು ಮನುಜ ಕುಕೃತ್ಯವೋ ಕಾಡುತಿದೆ ಕೊರೋನಾ ಹೆಸರಿನಲ್ಲಿ ! ಬಂದವರು ಬಂದಲ್ಲಿ ಹೋದವರು ಹೋದಲ್ಲಿ ಇರಬೇಕು ಬರದೆ ಮನೆಯಿಂದ ಹೊರಗೆ ಬೇಕಾದ ಹಾಗಲ್ಲ ಬಂದಂತೆ ಬದುಕುವುದ ರೂಢಿ ಮಾಡಿಸುತಿಹುದು ವ್ಯಾಧಿ ಸುಳಿದು ಮದುವೆ ಮುಂಜಿಗಳಿಲ್ಲ ಹಬ್ಬಗಳ ಗೌಜಿಲ್ಲ ಅಗಲಿದವರಂತಿಮ ದರ್ಶನವು ಇಲ್ಲ ಜನರು ನೆರೆವಂತಿಲ್ಲ ಔತಣವೂ ಸಲ್ಲ ಎಷ್ಟು ದಿನ ಮುಂದೂಡ ಬೇಕು ಮದುವೆ? ಕಂಡಿಲ್ಲ ಕೇಳಿಲ್ಲ ಕಲ್ಪನೆಗು ನಿಲುಕದಿಹ ಕ್ರಿಮಿ ಬಂದು ಬೆದರಿಸುತೆ ಬಿತ್ತಿ ಭಯವ! ನಾನು ನಾನೆಂದು ಜಗದಿ ಮೆರೆವವರಿಗೆ ಅಣಕಿಸುತ ನೀನು ಏನೇನು ಅಲ್ಲ ಅಂಕೆ ಇಲ್ಲದ ಡೌಲು ಸಂಪತ್ತಿನಾ ತೆವಲು ಬೇಡವಾಗಿದೆ ರೋಗ ಬಳಿಗೆ ಬರಲು! ಹಣಕಾಗಿ ಹಪಹಪಿಸಿ ಮಿತಿಮೀರಿ ಸಂಗ್ರಹಿಸಿ ಅಳುಕಿದೆದೆ ಚಿಂತನೆಯು ನಾಳೆ ಹೇಗೋ? ಬೇಕಷ್ಟನೇ ಬಳಸಿ ಹೆಚ್ಚಿರುವುದ ಹಂಚಿ ಇನ್ನಾದರೂ ಒಳಿತು ತಿಳಿದು ಬದುಕಿ ಅರ್ಥವಾಗಲಿ ಕರ್ಮ ಧನ್ಯವಾಗಲು ಜನ್ಮ ಸಂತೃಪ್ತಿ ಸರಳ ಜೀವನವೆ ನಿಜ ಧರ್ಮ. ಹೊನ್ನಮ್ಮ ನಾಯಕ, ಅಂಕೋಲಾ ಹೊನ್ನಮ್ಮ ನಾಯಕ,ಇವರು ಮೂಲ ಉತ್ತರ ಕನ್ನಡದ ಅಂಕೋಲಾದವರು. ಪ್ರಾರಂಭದಲ್ಲಿ ಶಿಕ್ಷಕಿಯಾಗಿ ತಮ್ಮ ವೃತ್ತಿಯನ್ನು ಪ್ರಾರಂಬಿಸಿದ ಇವರು ಕ್ಷೇತ್ರ ಪದವಿಪೂರ್ವ ಕಾಲೇಜು ಕನ್ನಡ ಭಾಷಾ ಉಪನ್ಯಾಸಕಿಯಾಗಿ ಸೇವೆಗೈದು ನಿವೃತ್ತಿಯಾಗಿದ್ದಾರೆ. ವೃತ್ತಿಯ ಜೊತೆಗೆ ಸಾಹಿತ್ಯದಲ್ಲಿ ಆಸಕ್ತಿ ಹೊಂದಿರುವ ಇವರ ಹಲವಾರು ಕವನ ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.ಇವರ ಚೊಚ್ಚಲ ಕವನ ಸಂಕಲನ' ನಗುವಿನಲಿ ನೋವ ಬಚ್ಚಿಟ್ಟು’ ಈಗಾಗಲೇ ಬಿಡುಗಡೆಯಾಗಿದೆ.ಅಪಾರ ಜೀವನ ಪ್ರೀತಿ ಹೊಂದಿರುವ ಇವರು ಪ್ರಸ್ತುತದಲ್ಲಿ ಅಂಕೋಲೆಯ ವಂದಿಗೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಅವರ ಈ ಕವನ ತಮ್ಮ ಓದಿಗಾಗಿ- ಸಂಪಾದಕ