top of page
ಕಾವ್ಯ ಕನ್ನಿಕೆ
ಇಂದುವದನೆಯೆ ಚಂದವತಿಯೆ ನೀನೆ ಕಾವ್ಯೋನ್ಮಾದಿನಿ ಅಂದದಾ ಪದಬಂಧಕೆ ಸುಳುಹು ನಿನ್ನಂದದ ಖನಿ ಹಂಸ ನಡಿಗೆಯ ಪದತಲದಲಿ ಮಣ್ಣು ತಾ ಮರುಗುಡುತಿದೆ ಬಿಟ್ಟು ಹೋಗದಿರೆನುತ ಹೆಜ್ಜೆಯ ಸಾವಕಾಶಿಸಿ ಸೋತಿದೆ ನೀಳ ಮೂಗಿಗೆ ನತ್ತು ನಾಚಿದೆ ತನ್ನ ಸ್ಥಾನದ ಮೇಲ್ಮೆಗೆ ಚೆಂಗುಳಿಯ ಕಪೋಲ ಕರೆದಿದೆ ಮನ ಸೆಳೆದು ತನ್ನಲ್ಲಿಗೆ ಕೆಂಗುಲಾಬಿಯ ಮೊಗವದು ಮಗಮಗಿಸುತಿದೆ ನಗು ಹೊಮ್ಮಿಸಿ ದಂತ ಪಂಕ್ತಿಯ ಹೊಳಹಿನಲ್ಲಿ ಮಿಕ್ಕೆಲ್ಲ ಚಂದವ ಮೀರಿಸಿ ಸಂಪಿಗೆಯ ಮೊಗಕೆ ಹಣೆಬೊಟ್ಟ ಚಿಟ್ಟೆ ಮುಖಪುಷ್ಪ ಮುದ್ದಿಸಿ ನಗುತಿದೆ ಮುಗ್ಧತೆಯ ಕಣ್ಣೋಟವದು ಕನಿಕರಿಸಿ ಬರಸೆಳೆವಂತಿದೆ ಬಳುಕೊ ಮೈಯದು ನವಿರು ಲತೆ ಕೈ ಬೆರಳು ಚಿಗುರಿನ ಕುಡಿಗಳು ಕುಂಭ ಮಾಟ ನಿತಂಬಗಳು ಎದೆಯುಬ್ಬು ಹದವರಿತಂತಿದೆ ಪಾರಿಜಾತದ ಪುಷ್ಪದಂತೆಯೆ ಸುಕೋಮಲ ನಿನ್ನ ಮೈಸಿರಿ ಗಂಧ ವರ್ಣದ ನಿನ್ನಂಗವೆ ಸುಗಂಧ ತಾ ಸೂಸುತ್ತಿದೆ ನಿನ್ನಂದ ಬಣ್ಣಿಸಿ ತೃಪ್ತನಾಗದೆ ಕವಿ ಮನವು ತಾ ಕೊರಗಿದೆ ದೈವ ಸೃಷ್ಟಿಯ ಅದ್ಭುತವು ನೀ- -ನೆಂದು ಸಾಂತ್ವನಗೊಂಡಿದೆ # ಸಂತೋಷಕುಮಾರ ಅತ್ತಿವೇರಿ
bottom of page