ಕಾವ್ಯದ ಬಗ್ಗೆ ಒಂದಿಷ್ಟು
ಕಾವ್ಯವನ್ನು ಒಂದು ಮಾಯಾಜಿಂಕೆ ಎಂದು ಹೇಳಬಹುದು. ಬಾಲ ಅಲ್ಲಾಡಿಸಿ ಓರೆನೋಟದಲ್ಲಿ ಕಣ್ಣು ಹಾಯಿಸಿ ಪುಟನೆಗೆಯುತ್ತದೆ. ಎಲ್ಲೆಂದರಲ್ಲಿ ಕಾಡೊಳಗೆ ನುಗ್ಗಿಬಿಡುತ್ತದೆ. ಕೈಗೆ ಸಿಕ್ಕಿತು ಅಂದುಕೊಳ್ಳುತ್ತೇವೆ; ಮತ್ತೆಲ್ಲೋ ನುಸುಳಿಬಿಡುತ್ತದೆ. ಗಿಡ ಪೊದೆ ಅಲ್ಲಾಡುವುದು ಕಾಣುತ್ತದೆ. ದರ್ಶನವೇ ಆಗುವುದಿಲ್ಲ.
ಆಧುನಿಕ ಕಾಲದಲ್ಲಿ ಈ ಮಾಯಾಜಿಂಕೆ ಕೈಗೆ ಸಿಕ್ಕಿದ್ದು ಬೇಂದ್ರೆಗೆ ಮಾತ್ರ. ಉಳಿದವರಿಗೆ ಕಾಣಲು ಸಿಕ್ಕಿದೆ. ಬೆಂಬತ್ತಿ ಹೋಗುವಂತೆ ಮಾಡಿದೆ. ಇನ್ನೇನು ಕೈಗೆ ಸಿಕ್ಕಿತು ಅನ್ನುವಾಗ ತಪ್ಪಿಸಿಕೊಂಡು ಓಡಿದೆ.
ಈ ಮಾಯಾಜಿಂಕೆಯನ್ನು ಹಿಡಿಯುವುದು ಬಿಡಿ, ಅದರ ದರ್ಶನಕ್ಕೂ ಭಾಗ್ಯ ಬೇಕು. ಕಣ್ಣಿನಲ್ಲಿ ನೋಡಲು ಅದೃಷ್ಟ ಬೇಕು.
ಎಷ್ಟೋ ಮಂದಿ ಶಬ್ದಗಳನ್ನು ಹೊಸೆಯುವರು. ವಾಕ್ಯ ರಚನೆ ಸರಿ ಇರುತ್ತದೆ. ಒಂದು ಬಂಧದಲ್ಲಿ ಬರೆದಿರುತ್ತಾರೆ. ಆದರೆ ಅದರಲ್ಲಿ ಸಾಲಿನಿಂದ ಸಾಲಿಗೆ, ಅರ್ಥದಿಂದ ಅರ್ಥಕ್ಕೆ ಸಾವಯವವಾಗಿ ವಿಸ್ತರಿಸುತ್ತ ಹೋಗುವ ಸೋಪಾನವೇ ಇರುವುದಿಲ್ಲ. ಲಂಘನವೇ ಇರುವುದಿಲ್ಲ. ಅದಕ್ಕೆ ಒಂದು ಆತ್ಮ ಇರುವುದಿಲ್ಲ. ಕಬ್ಬಿನ ಒಣ ಜಲ್ಲೆಯಂತಿರುತ್ತದೆ: ಅದರಲ್ಲಿ ರಸವೇ ಇರುವುದಿಲ್ಲ.
ಕಾವ್ಯ ಎಂದರೆ ಕವಿ ತನ್ನ ’ದರ್ಶನ’ವನ್ನು (ನೋಟವನ್ನು, ಅನುಭವವನ್ನು) ರಸಾರ್ದ್ರವಾಗಿ ಓದುಗರೆದುರು ತೆರೆದಿಡುವುದು. ಒಂದು ಶಬ್ದವನ್ನೋ ಸಾಲನ್ನೋ ಹಿಡಿದುಕೊಂಡು ಅದನ್ನು ವಿಸ್ತರಿಸುತ್ತ ಹೋಗುವುದಲ್ಲ. ಕಾಡಿನಲ್ಲಿ ಹಾದಿ ತಪ್ಪಿ ನಡೆಯುವವನಿಗೂ ಬೆಳಕಿನ ಬೀಜವನ್ನು ಕಂಡು ಅದರತ್ತ ಸಾಗುವವನಿಗೂ ವ್ಯತ್ಯಾಸ ಇರುವ ಹಾಗೆ!
ಒಂದು ಕೇಂದ್ರ ಭಾವವನ್ನು ಅಡಕವಾಗಿ ಸಾಂದ್ರವಾಗಿ ಅರ್ಥಪೂರ್ಣವಾಗಿ ಸಂಕೀರ್ಣವಾಗಿ ಮತ್ತು ಸಾವಯವ ಶಿಲ್ಪದಲ್ಲಿ ಸಮಗ್ರೀಕರಣಗೊಳಿಸಿ ಒಂದು ಅನುಭವವಾಗಿ ಕಟ್ಟಿಕೊಡುವುದೇ ಕಾವ್ಯ. ಅಡಕತೆ ಯಾಕೆಂದರೆ ಅದು ರಸಘಟ್ಟಿ; ಎಲ್ಲೂ loose construction ಇರಬಾರದು. ಸಾಂದ್ರತೆ ಯಾಕೆಂದರೆ ಅದು ಘನೀಭೂತ. ವಜ್ರದ ಹಾಗೆ; ಬಹುಕಾಲ ನಿಲ್ಲಬೇಕು. ಅರ್ಥಪೂರ್ಣತೆ ಯಾಕೆಂದರೆ ಅದು ಕಾವ್ಯ (ಗದ್ಯವಲ್ಲ); ಓದುಗನಿಗೆ ಅವನವನ ಭಾವಸಂಸ್ಕಾರ, ತಿಳಿವಳಿಕೆ, ಜ್ಞಾನ, ಓದಿನ ಹಿನ್ನೆಲೆ, ಸಂಸ್ಕೃತಿ, ಸಹೃದಯತೆ – ಇವುಗಳನ್ನು ಆಧರಿಸಿ ಅದು ಅರ್ಥಸ್ತರಗಳನ್ನು ಮತ್ತು ಅನುಭವವನ್ನು ಬಿಚ್ಚುತ್ತ ಹೋಗಬೇಕು.
ಪ್ರಾಚೀನ ಕಾಲದಲ್ಲಿ ಗುಹೆ ಪೊಟರೆಗಳಲ್ಲಿ ಮನುಷ್ಯ ವಾಸಿಸುತ್ತಿದ್ದ. ನಾಗರಿಕತೆ ಬೆಳೆಯುತ್ತ ಅನಂತರ ಗುಡಿಸಲುಗಳಲ್ಲಿ. ಆಮೇಲೆ ಹಂಚು ಹಾಕಿದ ಮನೆಗಳಲ್ಲಿ. ಈಗ ತಾರಸಿ ಮನೆಗಳಲ್ಲಿ ಅವನು ವಾಸ ಮಾದತೊಡಗಿದ್ದಾನೆ. ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಕವಿ ಕಾವ್ಯರೂಪಗಳನ್ನು ಸೃಷ್ಟಿಸಿಕೊಂಡ. ಈಗ ನಾವು ಪೊಟರೆಗಳಿಗೆ ಹೋಗಲಾಗುವುದಿಲ್ಲ. ಕಾವ್ಯವನ್ನು ’ಒಡೆದು ಕಟ್ಟು’ವುದೆಂದರೆ ಇದು. ವಸ್ತುವಿಷಯ, ಭಾವ, ಭಾಷೆ, ರೂಪ ವಿನ್ಯಾಸ, ಅರ್ಥಸ್ತರಗಳು, ರಸ ಮತ್ತು ಇವೆಲ್ಲ ಒಂದು ಸಂಯೋಗದಲ್ಲಿ ಒಟ್ಟಾಗಿ ಅದು ಕಟ್ಟಿ ಕೊಡುವ ದರ್ಶನ ಇಲ್ಲದಿದ್ದರೆ ಕಾವ್ಯ ತನ್ನ ಪಾತ್ರವನ್ನು ಸರಿಯಾಗಿ ನಿರ್ವಹಿಸಿದಂತೆ ಆಗುವುದಿಲ್ಲ.
ರಚನೆಗೆ ಕೆಲವೊಂದು ನಿಯಮಗಳು, ಕಟ್ಟುಪಾಡುಗಳು ಇರುತ್ತವೆ, ನಿಜ. ಅದು ನಟನಿಗೆ ರಂಗಸ್ಥಳವೆಂಬ ಚೌಕಟ್ಟು ಇರುವಂತೆ. ಆ ಚೌಕಟ್ಟಿನೊಳಗೆ ಮಾತ್ರ ಆತ ನಟಿಸಬೇಕಾಗುತ್ತದೆ. ಅದೇ ರೀತಿ ಕವಿಗೆ ಹಾಕಲಾಗಿರುವ ಚೌಕಟ್ಟು ಒಂದು ನಿರ್ಬಂಧವಲ್ಲ, ಕಾವ್ಯದ ಶಿಸ್ತನ್ನು ಕಾಪಾಡಲು ಸ್ವಯಂ ನಿರ್ಮಿಸಿಕೊಂಡ ಚೌಕಟ್ಟು.
ಕವಿ ಬೇರಾರದೋ ಪಾತ್ರೆಗೆ ತನ್ನ ಹಾಲನ್ನು ಹೊಯ್ಯಬಾರದು. ತನ್ನದೇ ಪಾತ್ರೆಯನ್ನು ನಿರ್ಮಿಸಿಕೊಳ್ಳಬೇಕು. ಆಗ ಮಾತ್ರ ಅದಕ್ಕೆ ಕವಿತ್ವದ ಮುದ್ರೆ ಬೀಳುತ್ತದೆ. ಇಲ್ಲವಾದರೆ ಯಾರದೋ ನೆರಳಲ್ಲಿ ನಿಂತಂತೆ ಭಾಸವಾಗುತ್ತದೆ. ಕವಿ ತನ್ನ ಅನುಭವಗಳಿಗೆ ನಿಷ್ಠನಾಗಿರಬೇಕು. ಆಗ ಅದು ಓದುಗನಿಗೆ ನೈಜ ಮತ್ತು ತಾಜಾ (fresh) ಆಗಿ ಕಾಣಿಸುತ್ತದೆ.
ಕವಿತಾರಚನೆ ಭಾವಕೋಶಕ್ಕೆ ಸಂಬಂಧಿಸಿದ ವಿಷಯವೇ ಹೊರತು ಬುದ್ಧಿಗೆ ಸಂಬಂಧಿಸಿದ ವಿಚಾರವಲ್ಲ. ಭಾವಕೋಶಕ್ಕೆ ಹೋದಾಗ ಮಾತ್ರ ಆತ ಪ್ರಾಮಾಣಿಕನೂ ಜೀವನಿಷ್ಠನೂ ಆಗುವನು. ಭಾವ ತುಂಬಿ ಬಂದಾಗ ಅದು ರೂಪವಿನ್ಯಾಸಗಳ ಮತ್ತು ಶಬ್ದಗಳ ಹಾದಿ ಹುಡುಕುತ್ತ ಕೂರುವುದಿಲ್ಲ. ತನ್ನಿಂದ ತಾನೇ ತನಗೆ ಬೇಕಾದ ರೂಪಧಾರಣೆ ಮಾಡಿ ಹೊರಬರುತ್ತದೆ.
ಕಾವ್ಯ ಅನುಭವವನ್ನು ಕಟ್ಟಿ ಕೊಡಬೇಕೇ ಹೊರತು ಸಪಾಟಾದ ಸಂಗತಿಗಳ ವಿವರಣೆಯನ್ನಲ್ಲ. ವಿವಿಧ ಸಂಗತಿಗಳ ಮತ್ತು ವಿಚಾರಗಳ ಸಂಘರ್ಷದಲ್ಲಿ ಕವಿಗೆ ಎಂತಹ ಅನುಭವ ಆಯಿತು ಎಂಬುದು ಕವಿತೆಯಲ್ಲಿ ಹರಳುಗಟ್ಟಬೇಕು. ವಿವರಣೆ ಕಾವ್ಯ ಆಗುವುದಿಲ್ಲ. ವಿವರಿಸಿದ ಕೂಡಲೆ ಅದು ಗದ್ಯ ಆಗಿಬಿಡುತ್ತದೆ. ಪ್ರಾಸ ತಂದರೂ ಕವಿತೆ ಆಗುವುದಿಲ್ಲ.
ಒಳ್ಳೆಯ ವಸ್ತು, ಭಾವ, ಭಾಷೆ, ಶೈಲಿ, ರೂಪ-ವಿನ್ಯಾಸ ಮತ್ತು ಮಂಡನಾಕ್ರಮ ಇಷ್ಟೆಲ್ಲವೂ ಕಾವ್ಯದ ಬಾಹ್ಯಕ್ಕೆ ಸಂಬಂಧಿಸಿದ ವಿಚಾರ. ಕೊನೆಗೆ, ಅದು ಕಟ್ಟಿಕೊಡುವ ಅನುಭವ, ಆನಂದ, ದರ್ಶನ, ಅದರ ಅಂತರ್ಯಾಮಿ – ಇವೇ ಕಾವ್ಯದ (ಕವಿತೆಯ) ಅಂತಿಮ ಫಲಿತ. ನಿರಂತರ ಪ್ರಯೋಗಶೀಲತೆಯೇ ಅದಕ್ಕಿರುವ ಹಾದಿ.
ಇಷ್ಟು ಹೇಳಿದರೆ ಕಾವ್ಯ ಬರೆದಂತಾಗಲಿಲ್ಲ! ಕಾವ್ಯ ಬರೆಯುವುದು ಕಷ್ಟ; ಒಳ್ಳೆಯ ಕಾವ್ಯ ಬರೆಯುವುದು ಇನ್ನೂ ಕಷ್ಟ. ಅದೊಂದು ಯೋಗ.
- ಡಾ. ವಸಂತಕುಮಾರ ಪೆರ್ಲ.