ಕಾರ್ಗಿಲ್ ಯೋಧರಿಗೆ ನುಡಿ ನಮನ
ಓ ಭಾರತ ಮಾತೆಯ ವೀರ ಪುತ್ರರೆ ನಿಮಗಿದೋ ನನ್ನ ನಮನ । ನೆನೆವೆವು ಎಂದೂ ಭಾರತೀಯರು ಕಾರ್ಗಿಲ್ ವಿಜಯ ದಿನ ॥ ಸಂದೇಶ ಬಂದಿತಂದು ಕಾರ್ಗಿಲ್ ಕದನಕೆ ಹೊರಟು ನಿಂತನೀ ಸೈನಿಕ। ಹೆತ್ತವರಡಿಗೆರಗಿ । ಈ ದೇಶ ರಕ್ಷೆಗಾಗಿ। ಶತ್ರು ಶಮನಕಾಗಿ। ಈ ದೇಶ ಸೇವೆಗಾಗಿ ॥ ಸೇನೆಯೊಡನೆ ಹೊರಟನೀತ ವೀರ ಕಂಕಣ ಧರಿಸಿ। ಯುದ್ಧವಲ್ಲವಿದು ಪಂದ್ಯ। ಗೆದ್ದೇ ಗೆಲುವೆವು ಇಂದು। ವಿಜಯ ಮಾಲೆ ತೊಡಿಸುವೆವು ತಾಯಿ ಭಾರತಿಗೆಂದು॥
ಮೊಳಗಿತು ರಣಕಹಳೆ..... ಢಂ... ಢಂ.... ಗುಂಡಿನ ಸದ್ದು। ಶತ್ರು ಸೈನ್ಯವ ಹಿಮ್ಮೆಟ್ಟಿಸುವೆವು ಇದೇ ನಮ್ಮ ಜಿದ್ದು। ಗುಂಡಿನ ದಾಳಿ ಪ್ರತಿ ದಾಳಿ ... ಎಡ-ಬಲದಲಿ ಉರುಳಿದ ಗೆಳೆಯರ ಹೊರಳಿ ನೋಡುವುದಿನ್ನೆಲ್ಲಿ ಅರೆ ಕ್ಷಣ ಮೈಮರೆತರೆ ನಾವಿನ್ನು ವಿಜಯದ ಮಾತೆಲ್ಲಿ?॥
ಕೆಚ್ಚೆದೆಯಿಂದ ಮುನ್ನುಗ್ಗಿ ಹೊರಟನು ಅರಿಗಳನುರುಳಿಸುತ। ಬಂಡೆಯ ಮರೆಯಲಿಹ ಪಾಕಿಯ ಗುಂಡು ದೇಹವ ಹೊಕ್ಕರೂ ಲೆಕ್ಕಿಸದೆ ಓಡುತಲಿದ್ದವು ಕಾಲುಗಳು ಪಾಕಿಗಳೊಡಲನು ಸೀಳುತ್ತ ॥ ಭೂತಾಯಿಗೆ ಯೋಧರ ನೆತ್ತರ ಸ್ನಾನ ಪಾವನವಿದು ಗಂಗಾ ಜಲಕೆ ಸಮಾನ। ತತ್ತರಿಸಿತು ಶತ್ರುಸೇನೆ । ವಿಜಯವು ನಮ್ಮದೆ ತಾನೆ! ನೆತ್ತರಮಡುವಲಿ ನೆಲಕುರುಳುವ ಕೊನೇ ಘಳಿಗೆ ಭಾರತ ಮಾತೆಗೆ ಜೈಕಾರ ಅಸು ನೀಗಿದ ಮಾತೆಯ ಹೆಮ್ಮೆಯ ಪುತ್ರ ॥ ಹಾರಾಡಿತು ವಿಜಯ ಪತಾಕೆ ಜೈ ಘೋಷವು ಧ್ವನಿಸಿತು ಜಗಕೆ ಓ ಭಾರತ ಮಾತೆಯ ವೀರಪುತ್ರರೇ ನಿಮಗಿದೋ ನನ್ನ ನಮನ। ನೆನೆವೆವು ಎಂದೂ ಭಾರತೀಯರು ಕಾರ್ಗಿಲ್ ವಿಜಯ ದಿನ ॥
- ಸಾವಿತ್ರಿ ಮಾಸ್ಕೇರಿ ಸಾವಿತ್ರಿ ಮಾಸ್ಕೇರಿಯವರು ವೃತ್ತಿಯಲ್ಲಿ ಶಿಕ್ಷಕಿ.ಪ್ರವೃತ್ತಿಯಲ್ಲಿ ಕವಯತ್ರಿ.ಇವರ ಒಡಲ ಹಣತೆ ಎಂಬ ಕವನ ಸಂಕಲನ ಬೆಳಕು ಕಂಡಿದೆ.ನವೋದಯದ ಲಯ ಲಾಲಿತ್ಯವನ್ನು ಕಾದುಕೊಂಡು ಸಮಕಾಲೀನತೆಗೆ ಸ್ಪಂದಿಸುವ ಸಾವಿತ್ರಿಯವರ ಕವಿತೆ ನಿಮ್ಮ ಓದಿಗಾಗಿ. - ಸಂಪಾದಕ