ಕಾಡ ಕತ್ತಲು ನಿನ್ನ ಮೌನ
ಕಾಡ ಕತ್ತಲು ನಿನ್ನ ಮೌನ ಎರಡೂ ಒಂದೇ ಅನಿಸುತ್ತದೆ ಕತ್ತಲಲ್ಲಿ ಬರಿಗಾಲಲ್ಲಿ ನಡೆದು ಬೊಕುಳ ಹೂ ಆರಿಸಿ ಚಂದಕದೆಲೆಯ ಕೊಟ್ಟೆಯಲಿ ತುಂಬುತ್ತಿರುವಾಗ ಸಿಕ್ಕ ರಾಮಪತ್ರೆ ಹೊಕ್ಕಿಬಿಡುತ್ತವೆ ಅವಳ ಗೇಟ್ಗಿ ಮುಡ್ಲಿಗೆ. ಬರಿಗಾಲ ನಡಿಗೆಯಲಿ ಕತ್ತಲ ಸರಿಸಿ ಬರುವಾಗ ರುಕ್ಮಿಣಿಗೆ ಕೃಷ್ಣ ಕಾಯುತ್ತಾನೆ ಎಂದೇ ನಂಬಿಕೆ ಯುಗ ಯುಗಗಳು ದಾಟಿದ ನಂತರವೂ ನಸುಕಿಗೆ ಕರಿ ಚಾ ಕುಡಿದವಳೆ ಹಾದಿಯಂಚಿನ ಮರದ ಬುಡದಲ್ಲಿ ಹೋಗಿ ನಿಲ್ಲುತ್ತಾಳೆ ಅಥವಾ ಒಮ್ಮೊಮ್ಮೆ ಕುಳ್ಳುತ್ತಾಳೆ ಅಲ್ಲಿಯೆ ಬಿದ್ದ ತುಂಡುಗಲ್ಲಿಗೆ ಕುಂಡಿಯೂರಿ ಮರದ ಬೇರು ಕಾಂಡ ರೆಂಬೆ ಕೊಂಬೆ ಕೊನೆಗೆ ಕುಳಿತ ತುಂಡುಗಲ್ಲಿಗೂ ಬೊಕುಳದ ಸುಗಂಧ ಗೊತ್ತಿಲ್ಲದೆ ಇವಳ ಮೈ ಏರಿಯೂ ಕುಳಿತಿದೆ ಪಕ್ಕದಲ್ಲಿಯೆ ಒಣಮೀನು ಬುಟ್ಟಿ ಇಟ್ಟುಕೊಂಡವಳು ವಾಸನೆಯನ್ನು ಮಾರಾಟಕಿಟ್ಟಿದ್ದಾಳೆ "ಹೊಸ ಸೇಂಟು" ನಗೆ ಬೀರಿ ಅಲ್ಲಿಂದಲೆ ಹಲವರು ದಾಟಿದ್ದಾರೆ ಸುಗಂಧ ನಿಧಾನ ಕರಗುತ್ತಿದೆ ಎಂದಿನ ಹಾಗೆ ಖರ್ಚಾಗದ ಮಾಲೆಯ ಮರಕ್ಕೊಪ್ಪಿಸಿ ಮತ್ತೆ ಕಾಡ ಹೊಕ್ಕಿ ಬೊಕುಳವ ಹುಡುಕುತ್ತ ಕತ್ತಲಾಗುತ್ತಾಳೆ ಮತ್ತೆ ಮತ್ತೆ ಚಾಪೇರಾ ಮೆಡ್ಡೂಕಾ ಕಡ್ಲಹಣ್ಣು ಮುಳ್ಳಣ್ಣು ಕೊನೆಗೆ ಯಾವುದಾದರೂ ಗಡ್ಡೆ ಒಂದಿಷ್ಟು ಝರಿ ನೀರು ಮತ್ತು ಅವನು.. ಬೇಕು ಉಸಿರಾಡಲು. ಈ ನಡುವೆ ಕಾಳಿಂಗದ ಹರಿದಾಟ ಹುಲಿ ಹೆಗ್ಗುರುತು ಕರಡಿಯ ಹಲಸಿನ ಪ್ರೇಮ ಚಿರತೆಯ ಕಳ್ಳ ಹೆಜ್ಜೆ ಕಣ್ಣೆದುರಿಗಿದ್ದರೂ ಇಲ್ಲದಂತಿರುವ ಕತ್ತಲು ಎಲ್ಲ ಅಸ್ಪಷ್ಟ ಮಬ್ಬು ಇವೆಲ್ಲ ನೋಡಿದರೆ ಕಾಡ ಕತ್ತಲು ನಿನ್ನ ಮೌನ ಈಗ ಏನೂ ಅನಿಸದೆ ಜುಜುಬಿ ಆಗಿಬಿಡುತ್ತದೆ. ಅಕ್ಷತಾ ಕೃಷ್ಣಮೂರ್ತಿ