ಕವಿ ಸು.ರಂ.ಎಕ್ಕುಂಡಿ
ಪದವಿ ಪಡೆಯುವಾಗ ಸಾಂಗ್ಲಿ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಡಾ. ವಿ. ಕೃ. ಗೋಕಾಕ , ರಂಶ್ರೀ. ಮುಗಳಿಯಂಥವರ ಪ್ರೇರಣೆ ಪ್ರಭಾವಗಳಿಗೊಳಗಾಗಿ ಕಾವ್ಯಾಸಕ್ತಿಯನ್ನು ಬೆಳೆಸಿಕೊಂಡ ಎಕ್ಕುಂಡಿಯವರು ತಮ್ಮ ಮುಂದಿನ ಬದುಕನ್ನು ರೂಪಿಸಿಕೊಂಡಿದ್ದು ನಿಸರ್ಗ ರಮ್ಯ ಕರಾವಳಿ ಪ್ರದೇಶದ ಸಹ್ಯಾದ್ರಿಯ ಮಡಿಲಿನ ಬಂಕಿಕೊಡ್ಲ ಎಂಬ ಚಿಕ್ಕ ಹಳ್ಳಿಯ ಹೈಸ್ಕೂಲ್ ಒಂದರಲ್ಲಿ. ಆನಂದಾಶ್ರಮ ಹೈಸ್ಕೂಲಿನ ಅಧ್ಯಾಪಕರಾಗಿ, ಅಲ್ಲಿಯೇ ಮುಖ್ಯಾಧ್ಯಾಪಕರಾಗಿ ೧೯೪೪ ರಿಂದ ೧೯೭೭ ರತನಕ ಕೆಲಸ ಮಾಡಿದ ಎಕ್ಕುಂಡಿಯವರಿಗೆ ಅಲ್ಲಿಯ ನಿಸರ್ಗವೇ ಕಾವ್ಯಸ್ಫೂರ್ತಿಯ ಸೆಲೆಯಾಯಿತು. ಅಂದು ಅವರ ಸಮಕಾಲೀನರಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರೊ. ಬಿ. ಎಚ್. ಶ್ರೀಧರ, ಗೌರೀಶ ಕಾಯ್ಕಿಣಿ , ಎಲ್. ಡಿ. ಶರ್ಮಾ , ಎಂ. ಅಕಬರ ಅಲಿ ಮೊದಲಾದವರು ಸಾಹಿತ್ಯ ಕ್ಷೇತ್ರದಲ್ಲಿ ಒಡನಾಟಕ್ಕೆ ದೊರಕಿದರು. ಕಾಲೇಜು ಹಂತದಲ್ಲಿದ್ದಾಗ ಗಂಗಾಧರ ಚಿತ್ತಾಲ, ವರದರಾಜ ಹುಯಿಲಗೋಳ, ರಾ. ಯ. ಧಾರವಾಡಕರ, ವಿ. ಜಿ. ಭಟ್ಟ ಮೊದಲಾದವರೊಡನೆ ವರುಣಕುಂಜ ಬಳಗದ ಮೂಲಕ ಕವನರಚನೆ, ಕಾವ್ಯವಾಚನ, ಸಾಹಿತ್ಯಿಕ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು. ಹುಬ್ಬಳ್ಳಿಯಲ್ಲಿ ನಡೆಯುತ್ತಿದ್ದ ನಾಡಹಬ್ಬದ ಕಾಲಕ್ಕೆ ದ. ರಾ. ಬೇಂದ್ರೆ, ಗೋಕಾಕ, ಆನಂದಕಂದ, ಶಂಬಾ, ಶ್ರೀರಂಗ ಮೊದಲಾದವರ ಉಪನ್ಯಾಸಗಳನ್ನು ಕೇಳುವ ಅವಕಾಶ ಅವರಲ್ಲಿ ಸಾಹಿತ್ಯಶಕ್ತಿಯನ್ನು ತುಂಬುವದಕ್ಕೆ ಕಾರಣವಾಯಿತು. ಎಕ್ಕುಂಡಿಯವರು ಒಂದೆಡೆ ಮಧ್ವಚಿಂತನೆಗಳಲ್ಲಿ ಆಸಕ್ತರಾಗಿದ್ದರೆ ಇನ್ನೊಂದೆಡೆ ಕಮ್ಯುನಿಸ್ಟ್ ವಿಚಾರಧಾರೆಯ ಕಡೆಗೂ ಒಲವನ್ನು ಹೊಂದಿದ್ದರೆಂಬುದು ಒಂದು ವಿಶಿಷ್ಟ ಅಂಶ. ಆದರೆ ಅವರು ಸಂಘರ್ಷ ಮನೋಭಾವದವರಲ್ಲವಾದ್ದರಿಂದ ಮಾಧ್ವ- ಮಾರ್ಕ್ಸ್ ವಾದಗಳೆರಡರ ಸಮನ್ವಯದ ಹರಿಕಾರರಾಗಿ ಕಾಣಿಸಿಕೊಂಡರು. " ಪಂಪ, ಹರಿಹರರಂತಹ ಕತೆ ಹೇಳುವ ಕವಿಗಳು ತಮಗೆ ಇಷ್ಟ" ಎಂದು ಒಂದು ಕಡೆ ಸು. ರಂ. ಅವರೇ ಒಂದು ಕಡೆ ಹೇಳಿಕೊಂಡಿದ್ದಾರೆ. ಅದಕ್ಕೆ ತಕ್ಕಂತೆ ಅವರು ಕಥನ ಕವನಗಳ ರಚನೆಯತ್ತ ವಿಶೇಷ ಆಸಕ್ತಿ ಹೊಂದಿದರಲ್ಲದೇ ಆ ಪ್ರಕಾರಕ್ಕೆ ಅಪೂರ್ವ ಕೊಡುಗೆಯನ್ನೂ ನೀಡಿದರು. ಅವರ " ರೊಟ್ಟಿ ಮತ್ತು ಕೋವಿ, ಯೋಧ ಮತ್ತು ಹೆಂಗಸರು, ಕವಿತೆ ಮತ್ತು ಮೋಡಗಳು, ಋಣದ ಹುಂಜ, ಹಿಟ್ಟು ಮತ್ತು ಮಲ್ಲಿಗೆ, ಕೊಳದ ಗೌರಿ, ನಾಗಿಯ ಕಥೆ, ಪಾರಿವಾಳಗಳು , ಮತ್ಸ್ಯಗಂಧಿ ಮೊದಲಾದ ರಚನೆಗಳು ಓದುಗರ ಮೇಲೆ ಬೀರುವ ಪರಿಣಾಮ ಅಚ್ಚಳಿಯದಂತಹದು. ಮತ್ತೆ ಮತ್ತೆ ಮೆಲುಕಾಡಿಸುವಂತಹದು. ಉತ್ತರ ಕನ್ನಡದ ಪ್ರಕೃತಿ, ಕಾರವಾರದ ಕಡಲತೀರ, ಹಾರಾಡುವ ಬೆಳ್ಳಕ್ಕಿಗಳು ಎಕ್ಕುಂಡಿಯವರ ಕವನಗಳಿಗೆ ವಸ್ತುವಾದದ್ದು ಸಹಜ. ಬೆಳ್ಳಕ್ಕಿಗಳು ಎಂಬ ಹೆಸರಿನ ಒಂದು ಕವನ ಸಂಕಲನವೇ ಪ್ರಕಟವಾಗಿದೆ. ಅವರ ' ಬಕುಳದ ಹೂವು" ಕವನ ಸಂಕಲನ ೧೯೯೨ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನ ಪಡೆದುಕೊಂಡರೆ, " ಮತ್ಸ್ಯಗಂಧಿ" ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ೧೯೭೫ ರಲ್ಲಿ ಬಹುಮಾನ ದೊರಕಿದೆ." ಲೆನಿನ್ನರ ನೆನಪಿಗೆ" ಎಂಬ ಕೃತಿ ೧೯೭೦ ರಲ್ಲಿ ಸೋವಿಯತ್ ಲ್ಯಾಂಡ್ ನೆಹರೂ ಪುರಸ್ಕಾರ ಪಡೆದಿದ್ದು, ಬೆಳ್ಳಕ್ಕಿಗಳು ಕವನಸಂಕಲನ ಮುದ್ದಣ ಸ್ಮಾರಕ ಕಾವ್ಯ ಪ್ರಶಸ್ತಿ ಪಡೆದಿದೆ. ಸಂತಾನ, ಹಾವಾಡಿಗರ ಹುಡುಗ, ಗೋದಿಯ ತೆನೆಗಳು, ನೆರಳು ಕಥಾಸಂಕಲನ, ಪ್ರತಿಬಿಂಬಗಳು, ತಾಳತಂಬೂರಿ,ಪಂಜುಗಳು ಎಂಬ ಕಾದಂಬರಿಗಳು, ಎರಡು ರಶಿಯನ್ ಕಾದಂಬರಿಗಳ ಅನುವಾದ, ಆನಂದತೀರ್ಥರು ಎಂಬ ಖಂಡಕಾವ್ಯ, ಮೊದಲಾದ ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ನೀಡಿರುವ ಎಕ್ಕುಂಡಿಯವರನ್ನು ಡಾ. ಯು. ಆರ್. ಅನಂತಮೂರ್ತಿಯವರು "ಕನ್ನಡದ ಸಮರ್ಪಣಾ ಭಾವದ ಕವಿ" ಎಂದಿದ್ದರೆ, ಡಾ. ನಾ. ಮೊಗಸಾಲೆ ಅವರು " ಸಂಸಾರದ ನಡುವೆ ಅರಳಿದ ಸಂತ" ಎಂದು ಬಣ್ಣಿಸಿದ್ದಾರೆ. ಅವರ ಹತ್ತಿರದ ಒಡನಾಟವುಳ್ಳವರ ಪಾಲಿಗೆ ಅವರೊಬ್ಬ " ಮಗುನಗೆಯ ಮುಗ್ಧ ಕವಿ". ಎಕ್ಕುಂಡಿಯವರ ಬರೆಹದ ವೈಶಿಷ್ಟ್ಯವೇ ಅವುಗಳ ಸರಳತೆ. ಸಾಮಾನ್ಯರ ಬದುಕಿನ ಚಿತ್ರಣವನ್ನೇ ಹೆಚ್ಚು ಇಷ್ಟಪಡುತ್ತಿದ್ದ ಅವರ ಕವನಗಳು ದೃಶ್ಯಕಾವ್ಯವಾಗಿ , ಅಪರೂಪದ ರೂಪಕಗಳಿಂದ ಓದುಗರನ್ನು ಸೆಳೆಯುತ್ತಿದ್ದವು. "ಪುರಾಣ, ಇತಿಹಾಸ , ಹಾಗೆಯೇ ಸಮಕಾಲೀನ ನೆಲೆಗಳು ತಮ್ಮ ಕಾವ್ಯವನ್ನು ರೂಪಿಸಿವೆ" ಎನ್ನುತ್ತಿದ್ದ ಅವರು ಬೇಂದ್ರೆಯವರಂತೆಯೇ ಅತ್ಯಂತ ಪರಿಣಾಮಕಾರಿಯಾಗಿ ತಮ್ಮ ಕವನ ವಾಚನ ಮಾಡುತ್ತಿದ್ದರು. ಕೆಲಕಾಲ ರೋಮನ್ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿದ ಎಕ್ಕುಂಡಿಯವರಿಗೆ ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ, ಸೊವಿಯತ್ ಲ್ಯಾಂಡ್ ಪ್ರಶಸ್ತಿ ಗೌರವಗಳು ದೊರಕಿದ್ದವು. ಪತ್ನಿ ಇಂದಿರಾ, ಮೂವರು ಮಕ್ಕಳನ್ನು ಹೊಂದಿದ್ದ ಅವರು ೨೦-೮-೧೯೯೫ ರಂದು ಬೆಂಗಳೂರಿನಲ್ಲಿ ನಿಧನ ಹೊಂದಿದರು. ಎಲ್.ಎಸ್.ಶಾಸ್ತ್ರಿ