ಕವಿ ಕೆ.ವಿ.ತಿರುಮಲೇಶ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ
ಭಾಷಾ ವಿಜ್ಞಾನಿ,ಚಿಂತಕ,ಪ್ರಯೋಗಶೀಲ ಕವಿ, ಕೆ.ವಿ.ತಿರುಮಲೇಶ ನಮ್ಮೆಲ್ಲರನ್ನು ಅಗಲಿದ್ದಾರೆ ಎಂಬ ಸಂಗತಿಯನ್ನು ಮನಸ್ಸು ಒಮ್ಮೆಲೆ ಒಪ್ಪಕೊಳ್ಳದ ಸ್ಥಿತಿ ನನ್ನದು. ನಾನು ಅವರನ್ನು ಕಂಡು ಮಾತನಾಡಿ ಒಡನಾಡುವ ಅವಕಾಶದಿಂದ ವಂಚಿತನಾದವನು. ಆದರೆ ಅವರ ಕವಿತೆಗಳನ್ನು ಓದುವ ಮೂಲಕ ಅವರ ಪೆಂಟಯ್ಯನ ಅಂಗಿ,ಪ್ರೀತಿಸುವ ಮುಂತಾದ ಕವನಗಳನ್ನು ನನ್ನ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ಪಾಠ ಮಾಡುವ ಮೂಲಕ ಪ್ರೊ.ಕೆ.ವಿ.ತಿರುಮಲೇಶ ಅವರನ್ನು ನನ್ನ ಪ್ರಜ್ಞೆಯಲ್ಲಿ ಸದಾ ಕಾಪಾಡಿಕೊಂಡು ಬಂದವನು. ಈಚಿನ ಸಾಹಿತ್ಯದ ತರಹೇವಾರಿ ಪಂಥ ಪಂಗಡಗಳಲ್ಲಿ ನಾನು ಗುರುತಿಸಿಕೊಂಡವನಲ್ಲ. ಅವರಿಗೆಲ್ಲರಿಗು ಸಲ್ಲುವ ಮಾತಿನ ವರಸೆ ,ಜಾತಿಯ ಪರಿಷೆಯನ್ನು ಮುಂದಿಡಲು ಆಗದಷ್ಟು ಅಸಹಾಯಕನಾದ್ದವನು ನಾನು. ಆದರೆ ಗುಣವಂತರನ್ನು ,ಪ್ರತಿಭಾವಂತರನ್ನು ನಾನು ಸದಾಕಾಲ ಗೌರವಿಸತ್ತಾ ಬಂದವನು. ಅಂಥವರಲ್ಲಿಕೆ.ವಿ.ತಿರುಮಲೇಶ ಅವರು ಒಬ್ಬರು. ಅವರ ಜೀವನ ಪ್ರೀತಿ,ಕ್ರಿಯೆಟಿವಿಟಿ,ಸಹಜಸ್ಪೂರ್ತ ಕವಿತ್ವ ಗುಣದ ಬಗ್ಗೆ ಕೇಳಿ ತಿಳಿದುಕೊಂಡಿದ್ದೆ. ಪೆಂಟಯ್ಯನ ಅಂಗಿ ಕವನದ ಮೂಲಕ ಇದ್ದಿಲಂಗಡಿಯ ಪೆಂಟಯ್ಯ ಹೊಸ ಅಂಗಿ ಹಾಕಿಕೊಂಡ ದಿನವೆ ಇದ್ದಿಲು ತರಲು ಹೋಗ ಬೇಕಾದ ಅನಿವಾರ್ಯತೆ ಒದಗಿ ಬಂದು ಅಂದಿನಿಂದ ಪೆಂಟಯ್ಯನ ಅಂಗಿ ಮತ್ತೆ ಹೊಸದಾಗಲೆ ಇಲ್ಲ.ಎಂಬ ಸಾಲು ನಮ್ಮ ಸಂವೇದನೆಯನ್ನು ಚುಚ್ಚುತ್ದದೆ. ಪ್ರೀತಿಸುವ ಎಂಬ ಕವನದಲ್ಲಿ " ನಾವು ಪ್ರೀತಿಸುವ ಮರಗಳನ್ನು ಅವು ಒಂಟಿಯಾಗಿರುತ್ತವೆ ಬೀಸುವ ಗಾಳಿಯ ಜೊತೆಯಲ್ಲಷ್ಟೆ ಮಾತನಾಡುತ್ತವೆ" ನಾವು ಪ್ರೀತಿಸುವ ಸಮುದ್ರವನ್ನು ಅದು ಆಳವಾಗಿರುತ್ತದೆ ಎಂಥ ಪ್ರಕ್ಷುಬ್ಧತೆಯನ್ನು ಅದು ತಾಳಿಕೊಳ್ಳುತ್ತದೆ ಎಂದು ಗಹನವಾದುದನ್ನು ಸರಳವಾಗಿ ನಿರೂಪಿಸಿದ ಕೆ.ವಿ.ತಿರುಮಲೇಶ ಸಾಮಾನ್ಯತೆಯ ಒಡಲಿನಿಂದ ಅಸಾಮಾನ್ಯತೆಯ ಮಿಂಚನ್ನು ಮೂಡಿಸಿದ ಕನ್ನಡದ ಅಪರೂಪದ ಕವಿ. ಅವರ ಆತ್ಮಕ್ಕೆ ಚಿರ ಶಾಂತಿ ಸಿಗಲಿ ಎಂದು ಮನಸಾರೆ ಹಾರೈಸುವೆ. ಡಾ.ಶ್ರೀಪಾದ ಶೆಟ್ಟಿ ಸಂಪಾದಕ