ಕಬೀರ ಕಂಡಂತೆ... ೮೬
ಅತಿ ಹಟದಿಂದ ಸಂಬಂಧ ಕೆಟ್ಟೀತು...! ಅತಿ ಹಟ ಮತ ಕರ ಬಾವರೆ, ಹಟ ಸೆ ಬಾತ ನ ಹೋಯ | ಜ್ಯೂ ಜ್ಯೂ ಭಜೆ ಕಾಮರಿ, ಯ್ಯೂಂ ಯ್ಯೂಂ ಭಾರಿ ಹೋಯ || "ಅತಿ ಸರ್ವತ್ರ ವರ್ಜಯೇತ್" ಎಂಬ ನುಡಿಯಂತೆ, ಯಾವುದೇ ಸಂಗತಿ ಅಥವಾ ವಸ್ತುವಿರಲಿ ಅದು ಅತಿಯಾಗಿ ಪ್ರಮಾಣ ಮೀರಿದರೆ ಪರಿಣಾಮ ಕೆಟ್ಟದ್ದಾದೀತು. ಕೆಲವರು ತಮ್ಮ ವಿಚಾರ ಅಥವಾ ಬೇಡಿಕೆಗಳ ಬಗ್ಗೆ ವಿಪರೀತ ಕಟ ಮಾಡಯವ ಪ್ರವೃತ್ತಿ ಹೊಂದಿ ತಮ್ಮ ಇಚ್ಛೆಯನ್ನು ಈಡೇರಿಸಿಕೊಳ್ಳಲು ಇಲ್ಲದ ನಾಟಕ ಮಾಡುತ್ತಾರೆ. ಇಂಥ ಹಟದ ಸ್ವಭಾವ ಅನೇಕ ಬಾರಿ ಸ್ವಾರ್ಥ ಮತ್ತು ಅಹಂಕಾರಕ್ಕೆ ದಾರಿ ಮಾಡಿಕೊಟ್ಟು ಅನಾಹುತವನ್ನೇ ಸೃಷ್ಟಿಸುತ್ತದೆ. ತಮ್ಮ ವಿಚಾರ ಯೋಗ್ಯವಿದೆಯೊ ಇಲ್ಲವೊ ಎಂಬುದರ ಬಗ್ಗೆ ಚಿಂತಿಸದೆ ವಿವೇಕ ಶೂನ್ಯರಂತೆ ವರ್ತಿಸುವದು ವಿಪರ್ಯಾಸದ ಸಂಗತಿ. ಇಂಥ ಹಟ ನವಿರಾದ ಸಂಬಂಧಗಳನ್ನು ಮುರಿಯಬಹುದು! ಎಲ್ಲದಕ್ಕೂ ಒಂದು ಮಿತಿ ಇರಬೇಕು ಎನ್ನುವಂತೆ ಹಟಕ್ಕೂ ಸಹ ಕಡಿವಾಣ ಎಂಬುದಿದ್ದರೆ ಅದು ಕೌಟುಂಬಿಕ ಆರೋಗ್ಯ ಮತ್ತು ಪರಿವಾರದ ಸ್ವಾಸ್ಥ್ಯಕ್ಕೆ ಪೂರಕ -ವಾದೀತು. ಕೆಲವು ಸಲ ಅಜ್ಞಾನ ಹಟಕ್ಕೆ ಕಾರಣ -ವಾದರೆ ಇನ್ನು ಕೆಲವು ಬಾರಿ ಅಹಮಿಕೆಯ ಅಟ್ಟಹಾಸದಿಂದ ಹಟ ವಿಜ್ರಂಭಿಸುತ್ತದೆ. ಮೇಲಿನ ದೋಹೆಯಲ್ಲಿ ಸಂತ ಕಬೀರರು, ಅತಿ ಹಟ ಮಾಡದಿರು ಮರುಳೆ, ಹಟದಿಂದ ಪ್ರಯೋಜನವಿಲ್ಲ| ಕಂಬಳಿ ನೆನೆಸುತ್ತ ಹೋದಂತೆ, ಹೆಚ್ಚು ಹೆಚ್ಚು ಒಜ್ಜೆಯಾಗುವದಲ್ಲ|| ಎಂದು ಬುದ್ಧಿವಾದ ಹೇಳಿದ್ದಾರೆ. ಅತಿ ಹಟಮಾಡಿ ಮೂರ್ಖನಂತೆ ಆಡದಿರು ಎಂದಿರುವ ಕಬೀರರು, ಸಂಬಂಧಗಳು ಮುರಿದುಹೋಗುವ ಮುನ್ನ ಅತಿ ಹಟದಿಂದ ದೂರವಿರಿ ಎಂದು ಬೋಧಿಸಿದ್ದಾರೆ. ಯಾವ ರೀತಿ ಕಂಬಳಿ ನೀರಿನಲ್ಲಿ ನೆನೆಯುತ್ತ ಹೋದಂತೆ ಭಾರವಾಗುತ್ತದೊ ಅದೇ ರೀತಿ ಹಟಮಾರಿ ವ್ಯಕ್ತಿಸಹ ಸಮಾಜದಲ್ಲಿ ಇತರರಿಗೆ ಭಾರವಾಗುತ್ತಾನೆ ಎಂದಿದ್ದಾರೆ. ಸಣ್ಣ ಮಕ್ಕಳು ಆಟಿಕೆ ಸಾಮಾನು, ತಿಂಡಿ ಬೇಕೆಂದು ಹಟ ಮಾಡುವದು ಸಾಮಾನ್ಯ. ಅದನ್ನು ಪಾಲಕರು ಒಂದು ಹಂತದವರೆಗೆ ಮಾತ್ರ ಸಹಿಸುತ್ತಾರೆ. ಹೆಚ್ಚು ಹಟ ಮಾಡಿದರೆ ಶಿಕ್ಷಿಸುತ್ತಾರೆ. ಇದೇ ರೀತಿ ಹೆಚ್ಚು ಹಟ ಸಾಧಿಸುವ ವ್ಯಕ್ತಿಯ ಹತ್ತಿರ ಬರಲು ಸಮಾಜವೂ ಇಷ್ಟಪಡುವದಿಲ್ಲ. ತನ್ನ ಅತಿಯಾದ ಧೋರಣೆಯ ಸ್ವಭಾವದಿಂದ ಸುತ್ತಲಿನ ಜನರ ಪ್ರೀತಿ, ವಿಶ್ವಾಸ ಕಳೆದುಕೊಳ್ಳುವ ವ್ಯಕ್ತಿ ಸ್ವತಃ ಮಾನಸಿಕ ಕ್ಷೋಭೆಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಹಟದ ಸ್ವಭಾವ -ದಿಂದ. ರಾವಣ, ದುರ್ಯೋಧನ ಮುಂತಾದವರು ಕೆಟ್ಟರು. ಈ ಹಿನ್ನೆಲೆಯಲ್ಲಿ ಅತಿಯಾದ ಹಟದ ಮೇಲೆ ನಿಯಂತ್ರಣ ಸಾಧಿಸಿ ಪ್ರೀತಿಪೂರ್ವಕ ನಡುವಳಿಕೆ ಅಪ್ಪಿಕೊಳ್ಳುವದು ಅಗತ್ಯ. ವಾದ ಗೆಲ್ಲುವ ಹಟ ಸಂಬಂಧ ಸುಟ್ಟೀತು ಹೃದಯ ಗೆಲ್ಲುವ ನಡೆ ಬದುಕ ಕಟ್ಟೀತು| ಜಗಗೆದ್ದ ಸಿಕಂದರ ಬರಿಗೈಲಿ ತೆರಳಿದನಲ್ಲ ನೀಗು ಅಹಮಿಕೆಯ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.