top of page

ಕಬೀರ ಕಂಡಂತೆ... ೬೮

ಸಾಧಕನಿಗೆ ಸಾವಿಲ್ಲ, ಸಾಧನೆಗೆ ಮಿತಿಯಿಲ್ಲ... ಭಕ್ತಿ ಗೇಂದ ಚೌಗಾನಕಿ, ಭಾವೈ ಕೋಯಿ ಲೇ ಜಾಯ| ಕಹೈ ಕಬೀರ ಕಛು ಭೇದನಾಹಿಂ, ಕಹಾಂ ರಂಕ ಕಹಾಂ ರಾಯ|| ಪ್ರಪಂಚದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವ ಅವಕಾಶ ಎಲ್ಲರಿಗೂ ಇದೆ. ಇದಕ್ಕೆ ಯಾವುದೇ ನಿರ್ಬಂಧ ಇಲ್ಲ. ಸಾಧನೆಯ ದಾರಿ ದುರ್ಗಮವಾಗಿದ್ದರೂ ಛಲವಿದ್ದರೆ ಎಂಥ ಕೆಲಸವನ್ನಾದರೂ ಸಾಧಿಸಬಹುದು ಎಂಬುದು ಸುಳ್ಳಲ್ಲ. ದೈವಭಕ್ತಿ, ದೀನರಿಗೆ ಸಹಾಯ ಮಾಡುವದು, ತಂದೆ, ತಾಯಿಯರ ಸೇವೆ, ಗುರು ಸೇವೆ, ದೇಶ ಸೇವೆ, ಕರ್ತವ್ಯ ಪಾಲನೆ, ಜ್ಞಾನ ಸಾಧನೆ ಮುಂತಾದವುಗಳನ್ನು ಯಾರು ಬೇಕಾದರೂ ಮಾಡಬಹುದು. ಆದರೆ ಆ ಕುರಿತಾದ ಶೃದ್ಧೆ, ಇಚ್ಛಾಶಕ್ತಿಗಳು ಅತ್ಯಂತ ಅಗತ್ಯ! ಬಡವ-ಬಲ್ಲಿದ, ಉಚ್ಚ-ನೀಚ, ಸಣ್ಣವ-ದೊಡ್ಡವ ಎಂಬ ಭೇದಭಾವವಿಲ್ಲದೆ ಎಲ್ಲರೂ ಸಾಧನೆಯ ದಾರಿಯಲ್ಲಿ ಮೈಲುಗಲ್ಲು ಸ್ಥಾಪಿಸಲು ಸಾಧ್ಯ. "ಸಾಧನೆಗೆ ಮಿತಿಯಿಲ್ಲ, ಸಾಧಕನಿಗೆ ಸಾವಿಲ್ಲ" ಎಂಬ ನಾಣ್ಣುಡಿಯಂತೆ ಎಲ್ಲರೂ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬಹುದು. ಸಾಮಾನ್ಯ ವ್ಯಕ್ತಿಗಳೂ ಸಹ ಪ್ರಯತ್ನದಿಂದ ಯಶಸ್ಸಿನ ಉತ್ತುಂಗಕ್ಕೇರಿದ ಉದಾಹರಣೆ ಸಾಕಷ್ಟಿವೆ. ಜಗತ್ತಿನಲ್ಲಿ ಮೇಲ್ನೋಟಕ್ಕೆ ಭೇದಭಾವಗಳಿವೆ ಎಂದು ಅನ್ನಿಸಿದರೂ, ವಾಸ್ತವದಲ್ಲಿ ಹಾಗಿಲ್ಲ ಎಂದು ತಿಳಿದು ಮುನ್ನಡೆಯುವದೇ ಉತ್ತಮ‌ ಸಾಧಕನ ಲಕ್ಷಣ. ಸಾಮಾನ್ಯ ಕುಲದಲ್ಲಿ ಹುಟ್ಟಿದ ಸಂತ ಕಬೀರರ ಜೀವನವೇ ಎಲ್ಲರಿಗೂ ಜ್ಞಾನ, ಚೈತನ್ಯದ ಪಾಠ ಹೇಳುತ್ತದೆ. ಮೇಲಿನ ದೋಹೆಯಲ್ಲಿ, ಭಕ್ತಿ ಮೈದಾನದ ಚೆಂಡು, ಬೇಕಾದವರು ಒಯ್ಯಲಿ| ಕಬೀರನೆಂದ ಏನೂ ಭೇದವಿಲ್ಲ, ಬಡವ, ಬಲ್ಲಿದರಲಿ|| ಎಂದು ಹೇಳುವ ಕಬೀರರು, ಭಕ್ತಿಯೆಂಬುದು ಮೈದಾನದ ಚೆಂಡು ಇದ್ದಂತೆ.‌ ಯಾರಿಗೆ ಸಾಧ್ಯವೊ, ಯಾರಿಗೆ ಆಸಕ್ತಿ ಇದೆಯೊ ಅವರು ಅದನ್ನು ಒಯ್ಯಬಹುದು. ಇದರಲ್ಲಿ ಯಾವುದೇ ಭೇದವಿಲ್ಲ. ಎಲ್ಲರಿಗೂ ಮುಕ್ತ ಅವಕಾಶವಿದೆ ಎಂದು ಕಬೀರರು ಸಾರಿ ಹೇಳಿದ್ದಾರೆ. ದೈವಭಕ್ತಿ, ದೈವ ಚಿಂತನೆ ಕಾರ್ಯದಲ್ಲಿ ಯಾರು ಬೇಕಾದರೂ ತೊಡಗಿಕೊಳ್ಳ -ಬಹುದು. 'ಪ್ರಯತ್ನದಲ್ಲಿ ಪರಮಾತ್ಮನಿದ್ದಾನೆ' ಎಂಬಂತೆ ಕಷ್ಟಪಟ್ಟು ಮುನ್ನಡೆದರೆ ಅಸಾಧ್ಯವಾದದ್ದನ್ನೂ ಸಾಧಿಸಲು ಸಾಧ್ಯ. ದೊರೆತ ಅವಕಾಶ ಸದುಪಯೋಗ ಮಾಡಿಕೊಂಡು ಅಥವಾ ಹೊಸ ಅವಕಾಶವನ್ನು ತನಗಾಗಿ ಸೃಷ್ಟಿಸಿಕೊಂಡು ಸಾಧನೆಯ ಮಾರ್ಗದಲ್ಲಿ ನಡೆಯುವದೇ ಯಶಸ್ವಿ ಮನುಷ್ಯನ ಲಕ್ಷಣವಾಗಿದೆ. ಸಾಧಕನಿಗೆ ಸಾವಿಲ್ಲ, ಸಾಧನೆಗೆ ಮಿತಿಯಿಲ್ಲ ಸಾಧನೆಗೆ ಮೇಲು-ಕೀಳೆಂಬ ತರತಮವಿಲ್ಲ| ನದಿಯೊಂದು ಅಡೆತಡೆಗಳ ನುಗ್ಗಿ ಹರಿವಂತೆ ಕದಲದಿರಲಿ ಸಂಕಲ್ಪ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ... ೬೮
bottom of page