ಕಬೀರ ಕಂಡಂತೆ... ೬೪
ಮಾತೊಂದು ಮುತ್ತಾಗಿ ಜಗವ ಬೆಳಗೀತು... ಶಬ್ದ ಸಂಹಾರೆ ಬೋಲಿಯೆ, ಶಬ್ದಕೆ ಹಾಥ ನ ಪಾಂವ| ಏಕ ಶಬ್ದ ಔಷಧಿ ಕರೆ, ಏಕ ಶಬ್ದ ಕರೆ ಘಾಂವ|| "ಮಾತೇ ಮುತ್ತು, ಮಾತೇ ಮೃತ್ಯು", "ನುಡಿದರೆ ಮುತ್ಯಿನ ಹಾರದಂತಿರಬೇಕು", " ಅಯ್ಯಾ ಎಂದರೆ ಸ್ವರ್ಗ, ಎಲವೊ ಎಂದರೆ ನರಕ" ಮುಂತಾದ ನುಡಿಗಟ್ಟುಗಳು ಮಾತಿನ ಮಹತಿಯನ್ನು ಎತ್ತಿ ತೋರಿಸುತ್ತವೆ. ಬೇರೆಯವರ ನೋವಿಗೆ ಸಾಂತ್ವನದ ಸಂಜೀವಿನಿಯಾಗಬಲ್ಲ ಮಾತಿಗೆ, ಹೃದಯ ಗಾಸಿಗೊಳಿಸುವ ಶಕ್ತಿಯೂ ಇದೆ! ಕೆಲವು ಬಾರಿ ಶಬ್ದಗಳು ಒಂದೇ ಆದರೂ ಅವುಗಳನ್ನು ಉಚ್ಚರಿಸುವ ರೀತಿ, ಆಂಗಿಕ ಹಾವಭಾವ, ಸಮಯ, ಸಂದರ್ಭಗಳ ಮೇಲೆ ಅವುಗಳ ಪರಿಣಾಮ ಅವಲಂಬಿಸಿರುತ್ತದೆ. ಮಾತನಾಎಉವಾಗ ನಾವು ಯಾವ ಶಬ್ದದ ಮೇಲೆ ಒತ್ತು ನೀಡುತ್ತೇವೆ ಎಂಬುದರ ಮೇಲೆ ಆ ಮಾತಿನ ಅರ್ಥ ಬದಲಾಗುತ್ತದೆ ಎಂದರೆ ಆಶ್ಚರ್ಯವಾಗದೇ ಇರದು! ಸದಿವ ಪುರಾಣದ "ಶಿವನೆಂದರೆ ಪಾಪ ಪರಿಹಾರವಾಗುವದು" ಎಂಬ ವಾಕ್ಯವನ್ನು ಓದುವಾಗ ಶಿವನೆಂದರೆ ಪಾಪ.. ಎಂಬಲ್ಲಿಗೆ ನಿಂತು ಓದಿದರೆ ಅರ್ಥ ಸೂಚಿಸುತ್ತದೆ! ಹಾಗಾಗಿ ಅಲ್ಪಪ್ರಾಣ, ಮಹಾಪ್ರಾಣ, ಅಲ್ಪ ವಿರಾಮ, ಪೂರ್ಣವಿರಾಮ ಮುಂತಾದ ಜ್ಞಾನ ಅತ್ಯಂತ ಅವಶ್ಯ. ಸಾಧಾರಣವಾಗಿ ಜನರು ಮಾತನಾಡುವಾಗ ಯೋಗ್ಯ ಶಬ್ದಗಳ ಬಳಕೆಯನ್ನು ಮರೆತಾಗ ವ್ಯತಿರಿಕ್ತ ಅರ್ಥ ಹೊರಟು ಇದೇ ಮುಂದೆ ಘೋರ ಕಾದಾಟಕ್ಕೂ ಕಾರಣವಾಗಬಹುದು! ಈ ಹಿನ್ನೆಲೆಯಲ್ಲಿ ಕಬೀರರು, "ಎಚ್ಚರವಿರಲಿ ಮಾತಿನಲಿ, ಆಡುವ ಶಬ್ದಕ್ಕೆ ಕೈ ಕಾಲಿಲ್ಲ| ಒಂದು ಶಬ್ದ ಔಷಧಿಯಾದರೆ, ಮತ್ತೊಂದು ಗಾಯ ಮಾಡೀತಲ್ಲ||" ಎಂದು ಹೇಳುವ ಮೂಲಕ ಜನರನ್ನು ಎಚ್ಚರಿಸಿದ್ದಾರೆ. ಶಬ್ದ ಬಳಕೆಯಲ್ಲಿ ಎಚ್ಚರ ತಪ್ಪಿದರೆ, ಅದೇ ಶಬ್ದಕ್ಕೆ ಕಾಲು, ಬಾಲ ಸೇರಿಕೊಂಡು ಅನರ್ಥಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದು ಕಬೀರರ ಕಳಕಳಿ. ಒಳ್ಳೆಯ ಮನಸ್ಸಿನಿಂದ ಆಡುವ ಮಾತುಗಳು ನೊಂದ ಮನಸ್ಸಿಗೆ ಸಂಜೀವಿನಿಯಾದರೆ, ವಿಚಾರ ಹೀನರ ಮಾತುಗಳು ಕೂರಂಬುಗಳಂತೆ ಗಾಸಿಗೊಳಿಸುತ್ತವೆ. ಇದೇ ಮುಂದೆ ಸಂಬಂಧಗಳ ಶಿಥಿಲತೆಗೂ ಕಾರಣವಾದೀತು. ಕುಹಕ ಬುದ್ಧಿಯಿಂದ ಆಡುವ ವ್ಯಂಗ್ಯದ ಮಾತುಗಳು ನೋವನ್ನಲ್ಲದೇ ಬೇರೇನನ್ನೂ ನೀಡಲಾರವು. "ನಾಲಿಗೆ ಕುಲವನ್ನು ಹೇಳಿತು" ಎಂಬ ಮಾತಿನಂತೆ, ವ್ಯಕ್ಯಿಯೋರ್ವನ ಬಾಯಿಯಿಂದ ಬರುವ ಮಾತುಗಳು ಆತನ ವ್ಯಕ್ತಿತ್ವದ ದರ್ಶನ ಮಾಡಿಸುತ್ತವೆ. ಹಾಗಾಗಿ ಭಗವಂತ ಮನುಷ್ಯ ಮಾತ್ರರಿಗೆ ನೀಡಿದ ವಾಕ್ ಶಕ್ತಿಯ ಸದ್ಬಳಕೆ ಮಾಡಿಕೊಂಡರೆ ವ್ಯಕ್ತಿಗೂ, ಸಮಾಜಕ್ಕೂ ಒಳ್ಳೆಯದು. ಮಾತೊಂದು ಮುತ್ತಾಗಿ ಜಗಹೃದಯ ಬೆಳಗೆ ಪ್ರೀತಿ ಭಾವದ ಬಾಂಧವ್ಯ ಎದೆಯನಪ್ಪೀತು| ಅತಿ ಮಾತು ಒಡೆದೀತು ಸಂಬಂಧದ ಮುತ್ತು ಮಿತಿಯಿರಲಿ ಮಾತಿನಲಿ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.