top of page

ಕಬೀರ ಕಂಡಂತೆ... ೫೨

ವ್ಯಸನಕ್ಕೆ ಬಲಿಯಾಗಿ ಕಸಕಿಂತ ಕಡೆಯಾಗದಿರು..! ಅವಗುಣ ಕಹೂಂ ಶರಾಬ ಕಾ, ಆಪಾ ಅಹಮಕ ಹೋಯ| ಮನುಷ ಸೆ ಪಶುವಾ ಭಯಾ, ದಾಮ ಗಾಂಠಸೆ ಖೋಯ|| ಆನಂದಕ್ಕಾಗಿ, ಸಹವಾಸ, ಫ್ಯಾಶನ್ ಮುಂತಾದ ಅನೇಕ ಕಾರಣಗಳಿಂದ ಮನುಷ್ಯನಿಗೆ ಕುಡಿತದ ಚಟ ಅಂಟಿಕೊಳ್ಳುತ್ತದೆ. ಆದರೆ ಮದ್ಯ ಸೇವನೆ ಎಂಬ ವ್ಯಸನ ಹೇಗೆ ಅಂಟಿಕೊಂಡರೂ ಅಂತಿಮವಾಗಿ ಅದರ ಪರುಣಾಮ ಮಾತ್ರ ಒಂದೆ. ಈ ಚಟದಿಂದ ಬಿಡಿಸಿಕೊಳ್ಳುವದು ಅಷ್ಟು ಸುಲಭವೂ ಅಲ್ಲ. ಮದ್ಯ ಸೇವನೆ ಒಳ್ಳೆಯದೊ, ಕೆಟ್ಟದ್ದೊ ಎಂಬ ಬಗ್ಗೆ ಅನೇಕ ವಾದ - ಪ್ರತಿವಾದಗಳು ನಡೆಯುತ್ತಲೇ ಇವೆ. ಮದ್ಯ ಸೇವನೆ ವೈಯಕ್ತಿಕ ವಿಷಯವಾದರೂ ಅದು ಅಳತೆ ಮೀರಿ ಮನುಷ್ಯ ಅದರ ದಾಸನಾದರೆ ಆತನ ಪರಿಸ್ಥಿತಿ ಮತ್ತು ಪ್ರತಿಷ್ಠೆ ಏನಾದೀತು ಎಂಬ ಬಗ್ಗೆ ಎಲ್ಲರಿಗೂ ಅರಿವಿದೆ. ಈ ಚಟದ ದುಷ್ಪರಿಣಾಮಗಳು ಸಮಾಜದ ಎದುರು ಕನ್ನಡಿಯಷ್ಟೇ ಸ್ಪಷ್ಟವಾಗಿದ್ದರೂ ಬೇರೆ ಬೇರೆ ಕಾರಣಗಳಿಂದ ಅದಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಾಧು, ಸಂತರು, ಸಮಾಜ ಸುಧಾರಕರು ಕಾಲಕಾಲಕ್ಕೆ ಈ ಕುರಿತು ಜನರನ್ನು ಎಚ್ಚರಿಸುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, *"ಮದ್ಯದ ಅವಗುಣ ಹೇಳುವೆ, ಎಚ್ಚರ ತಪ್ಪಿ ಮೂರ್ಖನಾಗುವೆ| ಮನುಷ್ಯನಿಂದ ಮೃಗವಾಗುವೆ, ಹಣದ ಗಂಟು ಕಳೆಯುವೆ||* ಎಂದು ಮದ್ಯದ ದುಷ್ಪರಿಣಾಮಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಸಾರಾಯಿ ಸೇವನೆಯಿಂದ ವ್ಯಕ್ತಿ, ಬುದ್ದಿ ಸ್ಥಿಮಿತ ಕಳೆದುಕೊಳ್ಳುತ್ತಾನೆ. ಮದ್ಯದ ಪ್ರಭಾವದಿಂದ ಕುಡುಕ ವಿಷಚಕ್ರದಲ್ಲಿ ಸಿಲುಕಿ ತೊಳಲಾಡುತ್ತಾನೆ. ಯಾವುದೇ ಪೇಯ, ಆಹಾರ ಕೆಟ್ಟದ್ದಲ್ಲ. ಆದರೆ 'ಅತಿ ಸರ್ವತ್ರ ವರ್ಜಯೇತ್' ಎನ್ನುವಂತೆ ಅತಿಯಾದರೆ ಅಮೃತವೂ ವಿಷವಾದೀತು! ಅಲ್ಲದೇ ತಾಮಸ ವಸ್ತುಗಳು ಮನುಷ್ಯನನ್ನು ವಿನಾಶದ ಕಡೆಗೆ ಕೊಂಡೊಯ್ಯುತ್ತವೆ. ಆರಂಭದಲ್ಲಿ ಮದ್ಯ ಸೇವನೆ ಮಾಡುವವನಿಗೆ, ಅದರ ಮೇಲೆ ತನ್ನ ಹಿಡಿತವಿದೆ ಅನಿಸುತ್ತದೆ‌ ಆದರೆ ಕೊನೆಗೆ ಮದ್ಯದ ಪ್ರವಾಹದಲ್ಲಿ ಆತನ ಬದುಕೇಕೊಚ್ಚಿಕೊಂಡು ಹೋಗುವದು ಮಾತ್ರ ದೊಡ್ಡ ದುರಂತ! ಮದ್ಯಪಾನದ ಚಟದ ಮೇಲೆ ಕೊನೆಯವರೆಗೂ ಹಿಡಿತಸಾಧಿಸುವದು ಕಷ್ಟವಾಗಿದ್ದು ಅದರಿಂದ ದೂರ ಉಳಿಯುವದೇ ಜಾಣತನ ಅಲ್ಲವೆ..? ವ್ಯಸನವೆಂಬ ರಕ್ಕಸನಿಗೆ ಕದ ತೆರೆದೊಡೆ ವಾಸನೆ ಮೈಯುಂಡು ಬದುಕ ಕಸಿದೀತು| ರಸ ಹೀರಿಕೆಪಾ ಕಬ್ಬಿನ ಗಾಣದಂದದಿ ಚಟ ಕಸಕಿಂತ ಕಡೆಯಾಗುವೆ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ... ೫೨
bottom of page