ಕಬೀರ ಕಂಡಂತೆ...೭೭
ಹೊಟ್ಟೆಪೂಜೆಯ ಮುಂದೆ ಮಿಕ್ಕ ಪೂಜೆಗಳಿಲ್ಲ..! ಕಬೀರ ಕ್ಷುಧಾ ಹೈ ಕುಕರಿ, ಕರತ ಭಜನ ಮೆ ಭಂಗ| ವಾಂಕೂ ದುಕುಡಾ ಡಾರಿಕೆ, ಸುಮಿರ ನ ಕರೂಂ ಸುರಂಗ|| ಭಾರತೀಯ ಸಂಸ್ಕೃತಿಯಲ್ಲಿ ಜಪ-ತಪಗಳ ಜೊತೆಯಲ್ಲಿ ಉಪವಾಸಕ್ಕೂ ಪ್ರಮುಖ ಸ್ಥಾನವಿದೆ. ಆದರೆ ಈ ರೀತಿಯ ಅನುಷ್ಠಾನ ಮಾಡುವದಕ್ಕೆ ಮನೋ ನಿಗ್ರಹ ಅತ್ಯಂತ ಅಗತ್ಯ. ಇಲ್ಲದಿದ್ದರೆ ಹಸಿವಿನಿಂದ ಬಳಲುವ ವ್ಯಕ್ತಿಗೆ ದೈಹಿಕ ತೊಂದರೆ ಆಗಬಹುದು, ಇಲ್ಲವೆ ಹೊಟ್ಟೆಯ ಧ್ಯಾನದಲ್ಲಿ ಬೇರೆ ಕೆಲಸದಲ್ಲಿ ಮನಸ್ಸು ಬಾರದು. ಜಠರಾಗ್ನಿಯನ್ನು ಶಾಂತಗೊಳಿಸಲು ಅನ್ನಾಹಾರಗಳು ಅವಶ್ಯ. ಅದನ್ನು ಶಮನಗೊಳಿಸದ ಹೊರತು ಪೂಜಾ ಕಾರ್ಯಗಳಿಗೆ ಭಂಗ ಬಂದೀತು. ಆದರೆ ಭಕ್ತಿಯಿದ್ದರೂ ಉಪವಾಸವನ್ನು ತಡೆದುಕೊಳ್ಳುವ ಶಕ್ತಿ ಇರದಿದ್ದರೆ ಅಂಥವರಿಗೆ ಖಂಡಿತ ಉಪವಾಸ ಸಲ್ಲ. ಅದಕ್ಕಾಗಿ ಮಕ್ಕಳು ಮತ್ತು ವೃದ್ಧರಿಗೆ ಉಪವಾಸ ನಿಷಿದ್ಧ ಎಂದು ಹೇಳಲಾಗಿದೆ. ಅತಿಯಾದ ಆಹಾರ ಸೇವನೆ ಅಥವಾ ಆಹಾರ ವರ್ಜನೆ ಎರಡೂ ದೇಹಕ್ಕೆ ಒಗ್ಗದಿರಬಹುದು. ಹಾಗಾಗಿ ಹಸಿವನ್ನು ತಾತ್ಕಾಲಿಕ -ವಾಗಿಯಾದರೂ ಶಾಂತಗೊಳಿಸಲು ಲಘು ಆಹಾರ ಸೇವನೆ ಒಳ್ಳೆಯದು. ಮೈ, ಮನಸ್ಸುಗಳು ಸಹಕರಿಸಿದರೆ ಮಾತ್ರ ದೈವಭಕ್ತಿ, ಜ್ಞಾನ ಸಾಧನೆ, ಆನಂದ, ಸಮಾಧಾನಗಳು ಲಭಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಪೂಜಾ ಅನುಷ್ಠಾನಗಳ ಜೊತೆ ಜೊತೆಗೆ ಆಹಾರ, ಪಾನೀಯಗಳ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ ಕಬೀರನ ತಿನ್ನುವ ಹಸಿವು, ಭಜನೆಗೆ ತರುವದು ಭಂಗ| ತುಂಡು ರೊಟ್ಟಿ ಹೊಟ್ಟೆಗೆ, ಸ್ಮರಣೆಗೆ ತಂದೀತು ರಂಗು|| ಹೊಟ್ಟೆ ಶಾಂತವಿದ್ದರೆ ಮನಸ್ಸು ಕೂಡಾ ಶಾಂತವಾಗಿ ದೈವ ಸ್ಮರಣೆಗೆ ರಂಗು ತುಂಬೀತು ಎಂಬುದು ಕಬೀರರ ಅಭಿಮತ. ಭಕ್ತಿ ಸಾಧನೆ ಅಥವಾ ಇನ್ನಿತರ ಯಾವುದೇ ಕಾಯಕ ಮಾಡುವಾಗ ಜಠರಾಗ್ನಿ ಶಾಂತವಾಗಿ ಇಟ್ಟುಕೊಳ್ಳುವದು ಅವಶ್ಯ. ಅರಸನಾಗಲಿ, ಅಗಸನಾಗಲಿ ತಮ್ಮ ದೈನಂದಿನ ಕಾಯಕದ ಜೊತೆಗೆ ಹಸಿವು ನೀಗಿಸುವದು ಬಹಳ ಮುಖ್ಯ ಎಂದಿದ್ದಾರೆ. ಹೊಟ್ಟೆಗೆ ಆಹಾರ ಬೇಕಾದಂತೆ ಮನಸ್ಸಿಗೂ ಒಳ್ಳೆಯ ಚಿಂತನೆ ಅತ್ಯಂತ ಅಗತ್ಯ. ಇದನ್ನು ತಿಳಿದು ನಡೆದಾಗ ಜೀವನ ಸರಳ, ಸುಂದರವಾದೀತು. ಕಾಯಕ ತತ್ವ ನಂಬಿ ದುಡಿಯುವಾಗ ಕಾಲಕಾಲಕ್ಕೆ ಅನ್ನಾಹಾರಗಳನ್ನು ಸೇವಿಸಿದರೆ ಮನಸ್ಸು ಕಾಯಕದ ಯಶಸ್ಸಿಗೆ ಸಹಕಾರಿಯಾದೀತು. ಹೊಟ್ಟೆಪೂಜೆಯ ಮುಂದೆ ಮಿಕ್ಕ ಪೂಜೆಗಳಿಲ್ಲ ಹೊಟ್ಟೆ ಸಾಲ ತೀರಿಸಲು ನರಜನ್ಮ ಸಾಕಾಗದು| ಹೊಟ್ಟೆ ತುಂಬಿಸಲು ನೂರೆಂಟು ಮುಖವಾಡ ಹೊಟ್ಟೆ ಮಾತನು ಕೇಳೊ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.