top of page

ಕಬೀರ ಕಂಡಂತೆ...೭೬

ಪರಶು ಸ್ಪರ್ಶವಿಲ್ಲದೆ ಕಬ್ಬಿಣ ಬದಲಾಗದು..! ಗಾವೆ ಕಥೆ ವಿಚಾರೆ ನಾಹಿ, ಅನಜಾನೆ ಕಾ ದೋಹಾ| ಕಹಿಂ ಕಬೀರ ಪಾರಸ ಪರಸೆ ಬಿನಾ, ಜೋ ಪಾಹನ ಭೀತರ ಲೊಹಾ|| ದೇವರ ಪೂಜೆ, ಭಜನೆ, ಪ್ರಾರ್ಥನೆ, ನಾಮ ಸಂಕೀರ್ತನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಮ್ಮಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುವ ಉತ್ತಮ ಸಾಧನ -ಗಳಾಗಿವೆ. ಆದರೆ ಅನೇಕ ಸಲ ನಾವು ಮಾಡುವ ಧಾರ್ಮಿಕ ಅನುಷ್ಠಾನಗಳ ಅರ್ಥ ಮತ್ತು ಮಹತ್ವ ತಿಳಿಯದೇ ಕೇವಲ ಯಾಂತ್ರಿಕವಾಗಿ, ಕಾಟಾಚಾರಕ್ಕೆ ಅವುಗಳನ್ನು ಮಾಡಿದರೆ ಅಂಥ ಪೂಜೆ, ಪ್ರಾರ್ಥನೆಗಳಿಂದ ಏನು ಪ್ರಯೋಜನ!? ದೇವರ ಆರಾದನೆ ಮಾಡುವಾಗ ನಾವು ಏನನ್ನು ಮಾಡುತ್ತೇವೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಭಕ್ತನಿಗೆ ಇದ್ದಾಗ ಮಾತ್ರ ಭಗವಂತನೊಂದಿಗೆ ಮನಸ್ಸು ತಾದಾತ್ಮ್ಯ ಭಾವದಿಂದ ಬೆಸೆಯಲು ಸಾಧ್ಯ. ಭಜನೆ, ಪ್ರಾರ್ಥನೆಗಳು ಕೇವಲ ಅಬ್ಬರದ ಆಡಂಬರಗಳಾದರೆ, ಹೃದಯದಲ್ಲಿ ಭಕ್ತಿ ಭಾವ ಹೇಗೆ ಸ್ಫುರಿಸೀತು? ಸಂಸ್ಕೃತ ಭಾಷೆಯಲ್ಲಿರುವ ಮಂತ್ರಗಳನ್ನು ಪಠಿಸುವಾಗ ಅವುಗಳ ಅರ್ಥ ತಿಳಿಯದೇ ಹೋದರೆ ಅದು ಕೇವಲ ಶುಷ್ಕ ಪಾಠವಾದೀತು! ನಮ್ಮ ಧಾರ್ಮಿಕ ಆಚರಣೆಗಳ ಅರ್ಥ ತಿಳಿದು ಮಾಡಿದರೆ ನಮ್ಮಲ್ಲಿ ಭಕ್ತಿ ಮೂಡಿ ಮನಸ್ಸು ಭಗವಂತನಲ್ಲಿ ಸಂಲಗ್ನಗೊಳ್ಳಲು ಸಾಧ್ಯ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಹಾಡುವರು ಗೀತೆ ವಿಚಾರವಿಲ್ಲದೆ, ಪ್ರಾರ್ಥನೆಯ ಅರ್ಥ ಗೊತ್ತಿಲ್ಲದೆ| ಕಬೀರ ಹೇಳುವ ಪರಶು ಸ್ಪರ್ಶವಿಲ್ಲದೆ, ಕಬ್ಬಿಣವೆಂದೂ ಬದಲಾಗದು|| ಎಂದು ಸ್ಪಷ್ಟಪಡಿಸಿದ್ದಾರೆ.ಅವಶ್ಯವಿಚಾರವಿಲ್ಲದೆ ಅರ್ಥರಹಿತವಾಗಿ ಪಠಿಸುವ ಮಂತ್ರ ಮಣ್ಣಲ್ಲಿ ಬಿದ್ದ ಕಬ್ಬಿಣದಂತೆ. ಭಕ್ತಿ ಭಾವದೊಂದಿಗೆ ಪ್ರಾರ್ಥಿಸಿದರೆ ಮನುಷ್ಯ ಉದ್ಧಾರವಾಗುವ ಪರಶು ಸ್ಪರ್ಶವಾದ ಕಬ್ಬಿಣದಂತೆ ಎಂದಿದ್ದಾರೆ. ಅರ್ಥ ತಿಳಿಯದೆ ಮಾಡಿದ ನೂರೆಂಟು ಜಪಕ್ಕಿಂತ ಅರ್ಥ ತಿಳಿದು ಮಾಡುವ ಒಂದು ಜಪ ಅತ್ಯಂತ ಶ್ರೇಷ್ಠವಾದದ್ದು. ಕಾಳಜಿ ಮತ್ತು ನಂಬಿಕೆಯಿಂದ ಸೇವಿಸುವ ಔಷಧಿ ರೋಗ ಗುಣ ಪಡಿಸುವಂತೆ ತಿಳಿದು ಉಚ್ಚರಿಸುವ ಮಂತ್ರದಿಂದ ಮನದಲ್ಲಿ ಉಂಟಾಗುವ ಭಕ್ತಿಭಾವ ಮತ್ತು ನಂಬಿಕೆಗಳು ಮನುಷ್ಯನಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಾಧ್ಯ. ತಿಳಿದು ಭಜಿಸಿದರೆ ಭಕ್ತಿಭಾವ ಸ್ಫುರಿಸೀತು ತಿಳಿಯದೆ ಮಾಡಿದ ಪೂಜೆ ವ್ಯರ್ಥವಾದೀತು| ಪರಶು ಸ್ಪರ್ಶವಿರದ ಕಬ್ಬಿಣ ಬದಲಾಗದು ಅರಿತುಕೊ ನಿಜ ಪಥವ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ...೭೬
bottom of page