top of page

ಕಬೀರ ಕಂಡಂತೆ...೭೦

ಸಂಬಂಧ ಉಳಿಸಿಕೊಳ್ಳುವ ಕಾಳಜಿಯಿರಲಿ... ಆಗಿ ಆಂಚಿ ಸಹನಾ ಸುಗಮ, ಸುಗಮ ಖಡುಗಕಿ ಧಾರ| ನೇಹ ನಿಭಾಹನ ಏಕ ರಸ, ಮಹಾ ಕಠಿನ ವೋ ಹಾರ|| ಸಂಬಂಧಗಳಲ್ಲಿ ‌ವ್ಯಾವಹಾರಿಕ ಸಂಬಂಧ, ಸ್ನೇಹ, ರಕ್ತ ಸಂಬಂಧ ಮುಂತಾದ ವಿವಿಧ ಪ್ರಕಾರಗಳನ್ನು ಕಾಣುತ್ತೇವೆ. ಇದರ ಜೊತೆಗೆ ಅವುಗಳನ್ನು ಪೋಷಿಸಲು ತಾಳ್ಮೆ, ಬದ್ಧತೆ ಅತ್ಯಂತ ಅವಶ್ಯ. ಮನೆ ಕಟ್ಟಿಸುವ, ವ್ಯವಹಾರ ನಡೆಸುವ ಚಟುವಟಿಕೆಗಳಲ್ಲಿ ಹಣ ಓಡಾಡುವದರಿಂದ ಅಲ್ಲಿ ಪರಸ್ಪರ ವಿಶ್ವಾಸ ಬಹಳ ಮುಖ್ಯ. ಆದರೂ ಒಂದು ವೇಳೆ ಈ ಕಾರ್ಯದಲ್ಲಿ ಯಾವುದೇ ತಪ್ಪುಗಳು ನಡೆದರೂ ಅವುಗಳನ್ನು ಹೇಗಾದರೂ ಸರಿಪಡಿಸಬಹುದು. ಆದರೆ ಇತರೆ ಕೆಲವು ಸಂಬಂಧಗಳು ಭಾವನಾತ್ಮಕ ತಳಹದಿಯ ಮೇಲೆ ನಿಂತಿರುವ ಕಾರಣ ಅಲ್ಲಿ ಸ್ವಾರ್ಥಕ್ಕೆ ಕಿಂಚಿತ್ತೂ ಅವಕಾಶ ಎಂಬುದು ಇಲ್ಲವೇ ಇಲ್ಲ. ಈ ಹಿನ್ನೆಲೆಯಲ್ಲಿ ಸ್ನೇಹ, ಪ್ರೇಮ, ಕೌಟುಂಬಿಕ ಬಂಧಗಳನ್ನು ಸಂಭಾಳಿಸುವಾಗ ಬಹಳ ಎಚ್ಚರಿಕೆ ಬಹಳ ಪ್ರಧಾನವಾದದ್ದು. ಇವುಗಳ ನಿರ್ವಹಣೆ -ಯಲ್ಲಿ ಕಿಂಚಿತ್ ಪ್ರಮಾದವಾದರೂ ಅದರ ಪರಿಣಾಮ ವಿಪರೀತವಾಗುತ್ತದೆ.ತಪ್ಪುಗಳು ಘಟಿಸಿದಾಗ, ತಪ್ಪು ತಿಳುವಳಿಕೆ ಉಂಟಾದಾಗ ತಕ್ಷಣ ಅದನ್ನು ಸರಿಪಡಿಸುವದು ಅಗತ್ಯ. ಸೂಕ್ಷ್ಮ ಸಂಬಂಧಗಳಲ್ಲಿ ಮೇಲಿನಿಂದ ತೇಪೆ ಹಚ್ಚಿದರೂ ಅದರ ಗುರುತು, ನೋವು ಇದ್ದೇ ಇರುತ್ತದೆ! ಈ ದೋಹೆಯಲ್ಲಿ ಸಂತ ಕಬೀರರು, ಸುಲಭವದು ಬೆಂಕಿಯ ಝಳ, ಸುಲಭ ಖಡ್ಗದ ಧಾರ| ಮೈತ್ರಿ, ಪ್ರೇಮ ಕಾಪಾಡುವದು, ಬಲು ಕಠಿಣ ವ್ಯವಹಾರ|| ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಬೆಂಕಿಯ ಝಳ, ಖಡ್ಗದ ಧಾರೆಗಳು ನೀಡುವ ನೋವನ್ನು ಬೇಕಾದರೆ ಸಂಬಂಧಗಳಲ್ಲಿ ಮೈತ್ರಿ ಮತ್ತು ಪ್ರೇಮ ಸಂಬಂಧ- ಗಳನ್ನು ನಿಭಾಯಿಸುವದು ಕಠಿಣವೇ ಸರಿ. ಆರಂಭದಲ್ಲಿ ಸ್ನೇಹ, ಪ್ರೀತಿ ಎಲ್ಲವೂ ಸುಲಭ, ಸರಳ ಅನ್ನಿಸಿದರೂ, ಅವುಗಳನ್ನು ಜತನದಿಂದ ಕಾದುಕೊಂಡು ಹೋಗುವದು ಮಾತ್ರ ಸುಲಭವಲ್ಲ. ಈ ತರಹದ ಸಂಬಂಧಗಳಲ್ಲಿ ಸಹ ಆಧಾರವಾಗಿರುವ ವಿಶ್ವಾಸವೆಂಬ ಅಸ್ತಿಭಾರ ಅಲುಗಾಡಿದರೆ ಸ್ನೇಹ, ಪ್ರೇಮದ ಸೌಧ ಮುರಿದು ಬಿದ್ದೀತು! ಈ ಕಾರಣಕ್ಕಾಗಿ ಪರಸ್ಪರರಲ್ಲಿ ಮತಭೇದಗಳು ಕಾಣಿಸಿಕೊಳ್ಳಬಹುದು. ಮಾಡಿದ ತಪ್ಪುಗಳನ್ನು ಒಪ್ಪಿಕೊಳ್ಳುವ ವಿಶಾಲ ಮನಸ್ಸು ಇದ್ದರೆ ಸಂಬಂಧಗಳು ಉಳಿದಾವು.‌ ಹಾಗಾಗಿ ಭಾವನಾತ್ಮಕ ನೆಲೆಯಲ್ಲಿ ಹುಟ್ಟಿಕೊಂಡ ಸಂಬಂಧಗಳನ್ನು ಕಾಳಜಿ ಮತ್ತು ಹೃದಯ ವೈಶಾಲ್ಯತೆಯಿಂದ ಕಾಪಿಟ್ಟುಕೊಂಡಾಗ ಬದುಕು ಸುಂದರವಾದೀತು! ಸಮಸ್ತ ಲೋಕಕೆ ಪ್ರೀತಿಯೆರೆ, ಹಗೆಯ ಹೊಗೆಯೇಕೆ? ಸಮತೆಯಿಂ ಬಾಳು, ಭೇದ-ಭಾವಗಳ ಕಹಿಯೇಕೆ?| ನಿರ್ಮಲ, ಸರಳ ನಡೆ-ನುಡಿ ಜಗಕೆ ಆಸರೆಯಾದೀತು ಮಮತೆ ಬಾಳಿನ ಮರ್ಮ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ...೭೦
bottom of page