top of page

ಕಬೀರ ಕಂಡಂತೆ...೫೪

ಜ್ಞಾನದಿಂದ ವಿನಯ ಮೈಗೂಡಿದರೆ ಅಮೃತ..! ಪಡಿ ಪಡಿ ಕೆ ಪತ್ಥರ ಭಯೆ, ಲಿಖಿ ಭಯೆ ಜುಯಿಟ| ಕಬೀರ ಅಂತರ ಪ್ರೇಮ ಕಾ, ಲಗೊ ನೇಕ ನ ಝಿಟ|| ಜೀವನದಲ್ಲಿ ಪಡೆಯುವ ಜ್ಞಾನ ಮನುಷ್ಯನ ಮನ ಪರಿವರ್ತನೆಗೆ ದಾರಿಯಾಗುತ್ತದೆ ಎಂಬುದು ಜ್ಞಾನಿಗಳ ನುಡಿ. ಅರಿವಿನ ಜ್ಯೋತಿ ಬೆಳಗುವ ಮನುಷ್ಯನ ಅಂತರಾಳದಲ್ಲಿ ಮಾನವೀಯತೆಯ ಬೆಳಕು ಬೀಳುವದು ಅಪೇಕ್ಷಣೀಯ. ಆದರೆ ಹೆಚ್ಚೆಚ್ಚು ಓದಿದ ಜನ ವಾಸ್ತವದಲ್ಲಿ ಸಂವೇದನಾ ರಹಿತರಾಗುತ್ತಿರುವದು ಆಧುನಿಕ ಜಗತ್ತಿನ ವಿಪರ್ಯಾಸಗಳಲ್ಲೊಂದು! ಹಿಂದಿನ ಕಾಲದ ಜನ ಅನಕ್ಷರಸ್ಥರಾಗಿದ್ದರೂ ಭಾವನಾ -ಜೀವಿಗಳಾಗಿದ್ದರು. ಸಂಬಂಧಗಳಿಗೆ ಅವರು ಎಲ್ಲಿಲ್ಲದ ಪ್ರಾಮುಖ್ಯತೆ ನೀಡುತ್ತಿದ್ದರು. ಅಲ್ಲದೇ ಇತರರ ಕಷ್ಟ - ಸುಖಗಳಿಗೆ ಸ್ಪಂದಿಸುವ ವಿಶಾಲ ಹೃದಯ ಅಂದಿನ ಜನರಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಕಲಿತಂತೆಲ್ಲ ಮನುಷ್ಯನಲ್ಲಿ ಭಾವನೆ ಬರಡಾಗುತ್ತಿವೆ. ಇದಕ್ಕೆ ಕಾರಣ ಆತ ಭಾವನಾಜೀವಿಯಿಂದ ವಾಸ್ತವ -ವಾದಿಯಾಗಿ ಬದಲಾಗುತ್ತಿದ್ದಾನೆ. ವಾಸ್ತವದ ದೃಷ್ಟಿಕೋನ ಅಗತ್ಯವಾದರೂ ಅದು ಅತಿಯಾದರೆ ಮಾನವೀಯ ಸಂಬಂಧಗಳು ನಶಿಸುತ್ತವೆ. ಮನುಷ್ಯ ಮತ್ತು ಭಾವನೆಗಳ ನಡುವಿನ ನೈಸರ್ಗಿಕ ಸಂತುಲನ ಸರಿಪಡಿಸಲಾಗದಷ್ಟು ಹಾಳಾದ ಹಿನ್ನೆಲೆಯಲ್ಲಿ ಎಲ್ಲೆಡೆ ಸ್ವಾರ್ಥ ತಾಂಡವವಾಡುತ್ತಿದೆ. ವಿವಿಧ ಪ್ರಕಾರದ ಜ್ಞಾನ, ಕೌಶಲ್ಯ, ಯೋಗ್ಯತೆ, ಅಧಿಕಾರಗಳನ್ನು ಪಡೆದ ಬಳಿಕ ಮನುಷ್ಯ ತನ್ನ ಮೂಲಭೂತ ಸಂವೇದನೆಗಳನ್ನು ಅಲಕ್ಷ ಮಾಡುತ್ತಿರುವದು ವಿಪರ್ಯಾಸದ ಸಂಗತಿ. ಈ ಸಂದರ್ಭದಲ್ಲಿ ಸಂತ ಕಬೀರರ ಅಭಿಪ್ರಾಯ ಮಹತ್ವ ಪಡೆಯುತ್ತದೆ. "ಓದಿ ಕಲ್ಲಾದಾನು, ಬರೆದು ಕಠಿಣ ಇಟ್ಟಿಗೆಯಾದಾನು| ಕಬೀರ ಪ್ರೇಮ ದೂರಾಗಿ,ಸಜ್ಜನಿಕೆ ಕಳೆದುಕೊಂಡಾನು ಎಂದು ಆತಂಕ ವ್ಯಕ್ತಪಡಿಸುವ ಕಬೀರರು, ಬಹಳ ಕಲಿತಂಥ ಬುದ್ಧಿವಂತರು ಕೊನೆಗೆ ಕಲ್ಲು,ಇಟ್ಟಿಗೆಯಂತೆ ಕಠೋರವಾಗುತ್ತಿದ್ದಾಳೆ ಎಂದು ದುಃಖ ಪಡುತ್ತಾರೆ. ಹೆಚ್ಚು ಕಲಿತು ಕೇವಲ ಸ್ವಾರ್ಥದ ಕಡೆಗೆ ಲಕ್ಷಗೊಡುತ್ತ ಮನುಷ್ಯ‌ ಮೃಗವಾಗಬಾರದು.ಏನು ನಷ್ಟವಾದರೂ ಮಾನವೀಯತೆಯ ಝರಿ ಮನುಷ್ಯನಲ್ಲಿ ಹರಿಯುತ್ತಿ - ದ್ದರೆ ಮಾತ್ರ ಆತ ಇತರೆ ಪ್ರಾಣಿಗಳಿಗಿಂತ ಶ್ರೇಷ್ಠ ಎನಿಸಬಲ್ಲ. ಜ್ಞಾನದಿಂ ಅಹಮಿಕೆ ಹುಟ್ಟಲದುವೆ ವಿಷ ಜ್ಞಾನದಿಂ ವಿನಯವು ಮೈಗೂಡೆ ಅಮೃತ| ಸುಜ್ಞಾನದಿಂ ಮನವು ಪರಿವರ್ತನೆಯಾಗೆ ಅಜ್ಞಾನ ಕರಗೀತು - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ...೫೪
bottom of page