ಕಬೀರ ಕಂಡಂತೆ...
ಆಚಾರವಿಲ್ಲದ ನಾಲಿಗೆ ಸಂಚಕಾರ ತಂದೀತು..! ಜಿಭ್ಯಾ ಜಿನ ಬಸ ಮೆಕರಿ, ತಿನ ಬಸಕಿಯೊ ಜಹಾನ| ನಹಿ ತೊ ಚೌಗುನ ಉಪಜೆ, ಕಹಿ ಸಬ ಸಂತ ಸುಜಾನ|| "ಆಚಾರವಿಲ್ಲದ ನಾಲಿಗೆ, ನಿನ ನೀಚ ಬುದ್ಧಿಯ ಬಿಡು ನಾಲಿಗೆ" ಎಂದು ದಾಸವರೇಣ್ಯರು ನಾಲಿಗೆ ಮಾಡುವ ಆವಾಂತರಗಳ ಕುರಿತು ಎಚ್ಚರಿಸಿದ್ದಾರೆ. ನಾಲಿಗೆಯ ಮೇಲೆ ಹಿಡಿತವಿಲ್ಲದಿದ್ದರೆ, ಅದು ಸದಾ ಒಟಗುಟ್ಟುವ ಕಪ್ಪೆಯಂತೆ ಮಾತನಾಡುತ್ತಲೇ ಇರುತ್ತದೆ. 'ನಾಲಿಗೆ ಒಳ್ಳೆಯದಾದರೆ ನಾಡೆಲ್ಲ ಒಳ್ಳೆಯದು' ಎಂಬ ಗಾದೆ ಒಳ್ಳೆಯ ಮಾತುಗಳನ್ನಾಡಲು ಪ್ರೇರೇಪಿಸುತ್ತದೆ. ನಾಲಿಗೆಗೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡನ್ನೂ ಮಾಡುವದು ಗೊತ್ತು. ಹಿಂಸಾ ವಿನೋದಿ -ಗಳಾದ ಜನರು ತಮ್ಮ ನಾಲಿಗೆ ಹರಿಬಿಟ್ಟು, ಮನಸ್ಸಿಗೆ ಬಂದಂತೆ ಇತರರ ಮಾನಹಾನಿ ಮಾಡುತ್ತ, ಅವರಿಗೆ ಮಾನಸಿಕ ಆಘಾತ ನೀಡುತ್ತಾರೆ. ಮಾತನಾಡುವದು ಕೆಟ್ಟ ಅಭ್ಯಾಸವಲ್ಲ. ಆದರೆಅದರಿಂದ ಆಗುವ ಪರಿಣಾಮ ಮಾತ್ರ ಕೆಟ್ಟದ್ದಾಗಲು ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, "ಕಡಿವಾಣ ಹಾಕಿದ ನಾಲಿಗೆ, ಜಗವ ಗೆಲ್ಲಬಹುದು| ಇಲ್ಲದಿರೆ ಅವಗುಣ ಕಾಣುವವು, ಸಂತನ ಜ್ಞಾನದ ನುಡಿಯಿದು|| ಎಂದು ನಾಲಿಗೆಯ ಗುಣಾವಗುಣಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ನಾಲಿಗೆಯ ಮೇಲೆ ನಿಯಂತ್ರಣ ಹಾಕಿಕೊಂಡ ವ್ಯಕ್ತಿ, ತನ್ನ ಮೌಲಿಕ ಮಾತುಗಳಿಂದ ಜಗತ್ತನ್ನೇ ಗೆಲ್ಲಬಹುದು. ಆದರೆ ನಾಲಿಗೆಯ ಮೇಲೆ ಹಿಡಿತ ತಪ್ಪಿದರೆ, ಅದು ಇತರರ ಅವಗುಣಗಳನ್ನು ಪಟ್ಟಿಮಾಡುವದರಲ್ಲಿ ಕಾಲ ಕಳೆಯುತ್ತದೆ ಎಂಬುದು ಶತಃಸಿದ್ಧ. " Mind your tongue" ಎಂಬ ಆಂಗ್ಲ ಉಕ್ತಿ, ನಾಲಿಗೆ ಅಥವಾ ಆಡುವ ಮಾತಿನ ಮೇಲೆ ಕಡಿವಾಣವಿರಲಿ ಎಂಬ ಎಚ್ಚರಿಕೆ ನೀಡುತ್ತದೆ. ರಂಧ್ರಾನ್ವೇಷಿಗಳಿಗಂತೂ ಕಡಿವಾಣವಿಲ್ಲದ ನಾಲಿಗೆ ವರವಿದ್ದಂತೆ! ಕಾರಣ ಯಾವುದೇ ಹಿಡಿತವಿಲ್ಲದೆ ಅದು ಇತರರ ತಪ್ಪುಗಳನ್ನು ಎತ್ತಿ ತೋರಿಸಿತ್ತ ಅವರ ತೇಜೋವಧೆಯಲ್ಲಿ ತೊಡಗುತ್ತದೆ. ಸಂಕುಚಿತ ಬುದ್ಧಿಯ ವ್ಯಕ್ತಿಗಳು ಇತರರ ಮೇಲೆ ಬಾಯಿಯನ್ನು ಹರಿಬಿಡುವದರಲ್ಲಿ ನಿಸ್ಸೀಮರು. ಸಣ್ಣವರು, ದೊಡ್ಡವರು ಎಂಬ ವ್ಯತ್ಯಾಸವಿಲ್ಲದೆ ಎಲ್ಲರೊಂದಿಗೆ ಬಡಬಡ ಮಾತನಾಡುವ ಇಂಥವರು ಬೇರೆಯವರಿಗೆ ಮಾತನಾಡುವ ಅವಕಾಶವನ್ನೇ ನೀಡುವುದಿಲ್ಲ. ನಾಲಿಗೆಯ ದುರ್ಬಳಕೆಯಿಂದಾಗಿ ಮನಸ್ತಾಪಗಳು ಹೆಚ್ಚಾಗಿ ಸಂಬಂಧ ಹದಗೆಡುತ್ತದೆ. ಮೌನವಾಗಿದ್ದಷ್ಟೂ ಮನಃಶಾಂತಿ ಹೆಚ್ಚಾದೀತು. ಆದರೆ ನಾಲಿಗೆ ಇದಕ್ಕೆ ತದ್ವಿರುದ್ಧ. ಬಡಬಡನೆ ಮಾತನಾಡುವ ಕೆಲವು ವ್ಯಕ್ತಿಗಳು ಮನಸ್ಸಿನಿಂದ ಒಳ್ಳೆಯವರಾದರೂ ಅನೇಕ ಬಾರಿ ಅವರ ಮಾತುಗಳು ಅನಾಹುತ ಸೃಷ್ಟಿಸುತ್ತವೆ! ಈ ಕಾರಣದಿಂದ ನಾಲಿಗೆಯ ಮೇಲೆ ಹಾಕುವ ನಿಯಂತ್ರಣ, ವ್ಯಕ್ತಿಯ ಗೌರವ ಹೆಚ್ಚುವಂತೆ ಮಾಡುವದರಲ್ಲಿ ಯಾವುದೇ ಸಂದೇಹವಿಲ್ಲ. ಮನವೊಂದು ಅಂಗಡಿ, ಬಾಯದರ ಬೀಗ ಇನಿತು ಬಾಯ್ದೆರೆಯೆ ಕಂಡೀತು ಬಂಡವಾಳ| ಆಚಾರವಿಲ್ಲದ ನಾಲಿಗೆ ಸಂಚಕಾರ ತಂದೀತು ಎಚ್ಚರಿಸು ನಾಲಿಗೆಯ - ಶ್ರೀವೆಂಕಟ || ಶ್ರೀರಂಗ ಕಟ್ಟಿ ಯಲ್ಲಾಪುರ.