top of page

ಕಬೀರ ಕಂಡಂತೆ.. ೯೦

ಅಹಮಿನ ಪರದೆ ಸರಿದಾಗ ಸತ್ಯ ಕಂಡೀತು..! ಏಕ ಬಾತ ಕಿ ಬಾತ ಹೈ, ಕೋಯಿ ಕಹೆ ಬನಾಯ| ಭಾರಿ ಪರದಾ ಬೀಚ ಕೆ, ತಾತೆಂ ಲಖಿ ನ ಜಾಯ|| "ದೇವನೊಬ್ಬ ನಾಮ ಹಲವು ಎಂಬ ಉಕ್ತಿಯಂತೆ ಜಗತ್ತಿನಲ್ಲಿ ದೇವರ ಅನೇಕ ರೂಪಗಳಿದ್ದರೂ ಜಗ ಸೃಷ್ಟಿ ಮಾಡಿ ಅದನ್ನು ನಡೆಸುವ "ದೇವರು" ಎಂಬ ಶಕ್ತಿ ಮಾತ್ರ ಒಂದೆ ಎನ್ನುವ ಸತ್ಯ ಸರ್ವ ವಿದಿತ. ಇದೇ ಭಾವನೆ ಸರ್ವಧರ್ಮ ಸಮನ್ವಯತೆಗೆ ದಾರಿ ಮಾಡಿ ವಿಶ್ವಶಾಂತಿಗೆ ಕಾರಣವಾಗುತ್ತದೆ. ಆದರೆ ನಕಾರಾತ್ಮಕ ಮನಸ್ಸಿನ ವ್ಯಕ್ತಿಗಳ ಧೋರಣೆ, ಮತ ಭೇದ ಮತ್ತು ಜಾತಿ ದಂಗೆಗಳಿಗೆ ಕಾರಣವಾಗುತ್ತದೆ. ಒಂದೇ ಧರ್ಮದ ಜನರಲ್ಲಿಯೂ ಸಹ ಪೂಜಾ ಪದ್ಧತಿಗಳು ಭಿನ್ನವಾಗಿರುವದು ಆಶ್ಚರ್ಯವಾದರೂ ಸತ್ಯ! ಹಿಂದೂ ಧರ್ಮ ಒಂದರಲ್ಲಿಯೇ ೩೩ ಕೋಟಿ ದೇವರು ಮತ್ತು ಅಸಂಖ್ಯಾತ ಪೂಜಾ ಪದ್ಧತಿಗಳು ರೂಢಿಯಲ್ಲಿರುವದು ವಿಶೇಷ. ಆದರೆ ಎಲ್ಲರೂ ತಾವು ನಂಬಿದ ದೇವರು ಮತ್ತು ಅಚರಣೆಗಳನ್ನು ಪಾಲಿಸುತ್ತ ಇತರೆ ಧರ್ಮ, ಮತಗಳ ಬಗ್ಗೆ ಸಹಿಷ್ಣುತಾ ಭಾವವಿದ್ದರೆ ಆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾದೀತು! ಅಲೊಪತಿ, ಹೋಮಿಯೊಪತಿ, ಆಯುರ್ವೇದ, ಯುನಾನಿ ಇತ್ಯಾದಿ ವಿವಿಧ ವೈದ್ಯ ಪದ್ಧತಿಗಳಿದ್ದರೂ ಎಲ್ಲವುಗಳ ಉದ್ದೇಶ ರೋಗವನ್ನು ಗುಣಪಡಿಸುವದು ಮಾತ್ರ. ಅದೇ ರೀತಿ ದೇವರ ನಾಮ, ಅಕಾರ ಹಲವು. ಧರ್ಮ, ಮತ, ಪಂಥಗಳು ಹಲವು. ಆದರೆ ಎಲ್ಲರ ಉದ್ದೇಶ ಮೋಕ್ಷ ಸಾಧನೆಯೆ ಹೊರತು ಬೇರೇನೂ ಅಲ್ಲ ಎಂಬುದನ್ನು ಮಾತ್ರ ಮರೆಯಲಾಗದು. ಒಂದೆ ಶಕ್ತಿಯ ಮಾತಿದು, ಯಾರು ಏನೆ ಹೇಳಲಿ| ಮಧ್ಯದಲಿ ನಿಂತಿದೆ ಪರದೆ, ಸತ್ಯ ಕಾಣುವದೆಲ್ಲಿ?|| ಎಂದು ಹೇಳುವ ಸಂತ ಕಬೀರರು, ಮನುಷ್ಯನ ದ್ವಂದ್ವಕ್ಕೆ ತೆರೆ ಎಳೆದಿದ್ದಾರೆ. ದೀಪಗಳ ಆಕಾರ, ವಿನ್ಯಾಸ ಬೇರೆ ಬೇರೆಯಾಗಿದ್ದರೂ ಜಗತ್ತಿಗೆ ಬೆಳಕು ನೀಡುವದೆ ಅವುಗಳ ಉದ್ದೇಶ. ಜನರ ವಿಚಾರದಲ್ಲಿ ಭೇದವಿರುವದರಿಂದ ಈಶ್ವರಿ ಶಕ್ತಿ ಒಂದೆ ಎಂಬ ಸತ್ಯ ಒಪ್ಪಿಕೊಳ್ಳಲು ಸಿದ್ಧರಿಲ್ಲ. ಧರ್ಮ ಬದ್ಧತೆ ಎಂಬ ಮಿಥ್ಯಾ ಪರದೆ ಮುಸುಕಿದ್ದು ಇದು ಸಂಘರ್ಷಗಳಿಗೆ ದಾರಿಮಾಡುತ್ತಿದೆ. ಸಾಧು, ಸಂತರು, ಪ್ರಾಜ್ಞರು ದೇವನೊಬ್ಬನೆ ಎಂಬ ಸತ್ಯವನ್ನು ಸಾರುತ್ತಲೇ ಬಂದಿದ್ದರೂ ಸತ್ಯದ ಸೌಂದರ್ಯ ಮಾತ್ರ ಕಣ್ಣಿಗೆ ಕಾಣದಾಗಿದೆ. ಎಲ್ಲರೂ ತಮ್ಮ ಧರ್ಮಾಚರಣೆಗೆ ಬದ್ಧರಾಗಿರುವದರ ಜೊತೆಗೆ ಅನ್ಯ ಧರ್ಮದ ತಿರುಳು ಅರಿತು ಅವರೊಂದಿಗೆ ಗೌರವ ಭಾವನೆ ತಾಳಿದಾಗ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮೂಡೀತು. ಪೂರ್ಣ ತುಂಬಿದ ಕೊಡ ತುಳುಕದೆಂದಿಗೂ ಅರೆ ತುಂಬಿದ ಕೊಡವು ಸದ್ದು ಮಾಡುವದು| ಅರಿವಿನಾಗರಕೆ ತಲೆ ಬಾಗುವರು ಸಜ್ಜನರು ಅರಿವೆ ಗುರುವೆಂದ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ.. ೯೦
bottom of page