top of page

ಕಬೀರ ಕಂಡಂತೆ.. ೭೩

ಕುಕರ್ಮಗಳು ವಿಷಚಕ್ರವಿದ್ದಂತೆ..! ಕಬೀರ ಮಾಯಾ ಬೇಸವಾ, ದೋನೊಂ ಕಿ ಇಕ ಜಾತ| ಆವತಕೊ ಆದರ ಕರೆಂ, ಜಾತ ನ ಬುಝೆ ಬಾತ|| ರಾತ್ರಿ ಬೆಳಗಾಗುವದರೊಳಗೆ ಶ್ರೀಮಂತರಾಗಬೇಕು ಎಂಬ ಪ್ರವೃತ್ತಿ ಇಂದಿನ‌ ಯುವ ಜನರಲ್ಲಿ ಹೆಚ್ಚಾಗುತ್ತಿದೆ. ಇದಕ್ಕಾಗಿ ಕಾನೂನು ಬಾಹಿರ ಕೃತ್ಯ, ಅನೈತಿಕ ವ್ಯವಹಾರ ಮುಂತಾದವು -ಗಳನ್ನು ಮಾಡಲೂ ಹಿಂಜರಿಯುವದಿಲ್ಲ.‌ಕುಕರ್ಮಗಳು ಯಾವಾಗಲೂ ವಿಷಚಕ್ರವಿದ್ದಂತೆ.‌ ಒಂದು ಸಲ‌ ಈ ಚಕ್ರವ್ಯೂಹದಲ್ಲಿ ಸಿಲುಕಿದರೆ ಅದರಿಂದ ಹೊರ ಬರುವದು ಸುಲಭದ ಮಾತಲ್ಲ. ಇನ್ನು ಕೆಲವರು ಮೋಜಿಗಾಗಿ ಮಾದಕ ವಸ್ತುಗಳ ಸೇವನರ, ಮಾರಾಟ, ವೇಶ್ಯಾಸಂಗ, ಜೂಜು ಮುಂತಾದ ಕುಕೃತ್ಯಗಳ ಮೊರೆ ಹೋಗುತ್ತಾರೆ. ಉದ್ದೇಶ ಯಾವುದೇ ಇದ್ದರೂ ಕೊನೆಗೆ ವಿನಾಶವೊಂದೆ ಅದರ ಪರಿಣಾಮ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಈ ರೀತಿ ವಿಷಚಕ್ರದ ಸುಳಿಯಲ್ಲಿ ಸಿಲುಕಿದವರು ಅದೆಷ್ಟು ಗೋಗರೆದರೂ ಅವರನ್ನು ರಕ್ಷಿಸುವವರಾರು? ಇಂಥ ಕುಕರ್ಮಿಗಳ ಸಹಾಯಕ್ಕೆ ಹೋಗುವದರ ಬದಲು ಅವರು ಮಾಡಿದ ಕರ್ಮ ಅವರೇ ಅನುಭವಿಸಲಿ ಎಂದು ಸಮಾಜ, ತನ್ನ ಪಾಡಿಗೆ ತಾನು ಮುಂದೆ ಹೋಗುತ್ತದೆ. ಅತಿ ಬೇಗ ಶ್ರೀಮಂತರಾಗಲು ಎಷ್ಟು ಎಚ್ಚರದಿಂದ ಇದ್ದರೂ, ಬುದ್ಧಿವಂತಿಕೆ ಉಪಯೋಗಿಸಿದರೂ ಮೋಸ ಹೋಗುವ ಸಾಧ್ಯತೆಗಳೇ ಹೆಚ್ಚು. ಈ ವಿಷಯದಲ್ಲಿ ಸಂತ ಕಬೀರರು, ಕಬೀರ ಮಾಯೆ ವೇಶ್ಯೆ, ಜಾತಿಯಲಿ ಒಂದೆ ಇಬ್ಬರು| ಬರುವಾಗ ತೋರಿ ಆದರ, ಇಲ್ಲದಾಗ ಮಾತಾಡಿಸರು|| ಎಂದು ಸಮಾಜವನ್ನು ಎಚ್ಚರಿಸಿದ್ದಾರೆ. ಅತಿರೇಕದ ಮೋಹ, ಮಾಯೆ ಮತ್ತು ವೇಶ್ಯೆಯರ ಕರ್ಮ, ಸ್ವಭಾವಗಳು ಒಂದೆ. ಅದು ಏನೆಂದರೆ, ಆರಂಭದಲ್ಲಿ ಬಣ್ಧದ ಮಾತುಗಳನ್ನಾಡಿ ಬಣ್ಣ ಬಣ್ಣದ ಕನಸುಗಳನ್ನು ತೋರಿಸಿ ತಮ್ಮತ್ತ ಜನರನ್ನು ಸೆಳೆದುಕೊಳ್ಳುತ್ತಾರೆ. ಆದರೆ ಅವರ ಪ್ರಯೋಜನ ಇಲ್ಲ ಎಂದು ಗೊತ್ತಾಗುತ್ತಲೆ ರಸಹಿಂಡಿದ ಕಬ್ಬಿನ ಸಿಪ್ಪೆಯಂತೆ ಅವರನ್ನು ದುರ್ಲಕ್ಷಿಸುತ್ತಾರೆ. ಇಂಥ ಅಕ್ರಮ ದಂಧೆಯಲ್ಲಿ ತೊಡಗಿಕೊಂಡವರು ಆರಂಭದಲ್ಲಿ ಬೆಲ್ಲದಂತೆ ಮಾತಾಡುತ್ತ ಜನರಲ್ಲಿ ಸುಲಭವಾಗಿ ಕೋಟ್ಯಾಧೀಶರಾಗುವ, ಸುಖ ಕಾಣುವ ಕನಸುಗಳನ್ನು ಬಿತ್ತುತ್ತಾರೆ. ಈ ರೀತಿ ಇನ್ನಿಲ್ಲದ ಆಮಿಷಗಳನ್ನು ಒಡ್ಡಿ ಯುವಕರನ್ನು ಅಡ್ಡದಾರಿಗೆ ಎಳೆದು, ತಮ್ಮ ಕೆಲಸ ಆದ ನಂತರ ಅವರನ್ನು ನಿರ್ದಾಕ್ಷಿಣ್ಯವಾಗಿ ತಿಪ್ಪೆಗೆ ಎಸೆಯುತ್ತಾರೆ. ಈ ಕಟು ಸತ್ಯವನ್ನು ಅರ್ಥ ಮಾಡಿಕೊಂಡು ಜೀವನದಲ್ಲಿ ವಿವೇಕದಿಂದ ಮುಂದಕ್ಕೆ ಹೆಜ್ಜೆ ಇಡುವದರಲ್ಲಿ ಶ್ರೇಯಸ್ಸು ಅಡಗಿದೆ. ಕೆಡುವ ಕಾಯದ ಮೋಹಕೆ ಸುಖ ಬಲಿ ಉಡುವ, ಉಂಬುವ ಬದುಕು ಬಣ್ಣಗೇಡು| ಪಡೆಯಲೆಣಿಸಿದರೆ ಸುಖ ಅನ್ಯ ಮಾರ್ಗದಿ ಕೆಡುಕು ಬೆನ್ನಟ್ಟೀತು - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ.. ೭೩
bottom of page