ಕಬೀರ ಕಂಡಂತೆ..೮ ನಿಂದಕರಿರಬೇಕಯ್ಯಾ ಜಗದೊಳಗೆ..!
ನಿಂದಕ ನಿಯರೆ ರಾಖಿಯೆ, ಆಂಗನ ಕುಟಿ ಬಂಧಾಯಿ/
ಬಿನ ಸಾಬನ, ಪಾನಿ ಬಿನಾ ನಿರ್ಮಲ ಕರೆ ಸುಭಾಯಿ//
ಬದುಕು ಒಂದು ನಿರಂತರ ಪಯಣ. ಈ ಮಾರ್ಗದಲ್ಲಿ ಅಡೆ ತಡೆಗಳು, ನಿಂದೆ, ನೋವು ಗಳು ಎದುರಾಗುವದು ಸಹಜ. ಅನೇಕ ಸಲ ಮನಸ್ಸಿಗೆ ಕಿರಿ ಕಿರಿ ಉಂಟು ಮಾಡುವ ಸಂಗತಿ ಗಳು ನಮಗೆ ಬದುಕಿನ ಬಹು ದೊಡ್ಡ ಪಾಠ ಕಲಿಸುತ್ತವೆ. ಕೆಲವು ಬಾರಿ ಸ್ವಯಂಕೃತ ಅಪರಾಧ ಗಳಿಂದಲೂ ಸಹ ಅವಘಡಗಳು ಸಂಭವಿಸಿ ಮರೆಯಲಾರದ ನೋವು ನೀಡುತ್ತವೆ. ಆದರೆ ಇವೆಲ್ಲವುಗಳ ಮಧ್ಯೆಯೂ ನಾವು ಇವುಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿದರೆ ಮುಂದಿನ ದಾರಿ ನಿಚ್ಚಳವಾಗಿ ಕಂಡೀತು. ನಮ್ಮ ಬಗ್ಗೆ ಸಮಾಜ ಒಳ್ಳೆಯ ಮಾತುಗಳನ್ನೇ ಆಡಬೇಕೆಂದು ಬಯಸುವ ಮನಸ್ಸು, ನಿಂದೆ, ಕೊಂಕು ನುಡಿಗಳಿಂದ ಗಾಸಿಗೊಳ್ಳುತ್ತದೆ. ಆದರೆ ನಮ್ಮ ಜೀವನ ಸಾಫಲ್ಯಕ್ಕೆ ನಿಂದಕರ ನುಡಿಗಳನ್ನು ಪ್ರೇರಣಾದಾಯಿಯನ್ನಾಗಿ ಮಾಡಿಕೊಳ್ಳಬಹುದು ಎಂದು ಭಾರತೀಯ ಸಂಸ್ಕೃತಿಯ ಅನುಭಾವಿ ಗಳು ಸಾರಿ ಹೇಳಿದ್ದಾರೆ. ನಮ್ಮ ಸುತ್ತಲೂ ಟೀಕೆ ಗಳು ಕೇಳಿ ಬಂದಾಗಲೇ ನಮ್ಮ ತಪ್ಪಿನ ಅರಿವಾಗಿ ಅದರಿಂದ ಸುಧಾರಣೆಯ ದಾರಿಯಲ್ಲಿ ನಡೆಯುವ ಅವಕಾಶ ಸಿಗುತ್ತದೆ.
ಈ ಹಿನ್ನೆಲೆಯಲ್ಲಿ ದಾಸರು "ನಿಂದಕರಿರಬೇಕಯ್ಯ ಹಂದಿಯ ಹಾಗೆ" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ನಮ್ಮ ತಪ್ಪುಗಳು ನಮಗೆ ಕಾಣುವದಿಲ್ಲ ಎಂಬುದನ್ನು ' ನಮ್ಮ ಬೆನ್ನು ನಮಗೆ ಕಾಣದು' ಎಂಬ ಉಕ್ತಿಯ ಮೂಲಕ ಅನುಭವಿಗಳು ಸಮಾಜಕ್ಕೆ ತಿಳಿಸಿಕೊಟ್ಟಿದ್ದಾರೆ. ಜನರು ನಮ್ಮ ಕುರಿತಾಗಿ ಆಡುವ ಮಾತುಗಳಿಂದ ಮನ ನೊಂದರೂ ಅವುಗಳನ್ನು ಕ್ರೀಡಾ ಮನೋಭಾವನೆಯಿಂದ ಸ್ವೀಕರಿಸಿದಾಗ ಮಾತ್ರ ನಮ್ಮ ಪ್ರಗತಿ ಸಾಧ್ಯ.
ಸಂತ ಕಬೀರರು ಹೇಳುತ್ತಾರೆ, " ನಿಂದಕರನ್ನು ಹತ್ತಿರವಿಡಿ, ಕಟ್ಟಿಹಾಕಿ ಅಂಗಳ ಕುಂಟೆಗೆ/
ನೀರು, ಸಾಬೂನು ತಾವು ಖರ್ಚಾದರೂ ಕೊಳೆ ತೊಳೆಯುವ ಹಾಗೆ// ನಿಂದಕರು ನಮ್ಮ ದೋಷ ಗಳನ್ನು ಎತ್ತಿ ತೋರುವ ಕನ್ನಡಿಯಿದ್ದಂತೆ. ನೀರು ಮತ್ತು ಸಾಬೂನು ಸ್ವತಃ ನಷ್ಟವಾಗಿ ಹೋದರೂ ಬಟ್ಟೆಯ ಕೊಳೆ ತೊಳೆಯುವಂತೆ, ಜನರು ತಮ್ಮ ವೇಳೆ, ಶಕ್ತಿಯನ್ನು ವ್ಯಯಿಸಿ ಇತರರ ದೋಷ ಗಳನ್ನು ತೋರಿಸಿಕೊಡುತ್ತಾರೆ. ಹಾಗಾಗಿ ನಿಂದಕರು ಇರಬೇಕು ಹತ್ತಿರ ಎಂದು ಕಬೀರರು ಜಾಣತನದ ಸಲಹೆ ನೀಡುತ್ತಾರೆ ನಿಂದಕರು ನಮ್ಮ ಕಾಲೆಳೆಯಲು ಪ್ರಯತ್ನಿಸಿದರೂ ಅದಕ್ಕೆ ಜಗ್ಗದೇ, ಬೆದರದೇ ಅವರನ್ನು ಮನದಲ್ಲಿಯೇ ವಂದಿಸಿ ನಮ್ಮ ಸುಧಾರಣೆಯತ್ತ ಗಮನ ಹರಿಸುವದು ಒಳ್ಳೆಯದು. ಕಾಲೆಳೆಯುವವರ ಸಂತತಿ ಹೆಚ್ಚಾಗಲಿ, ನಮ್ಮ ಮೇಲೇಳುವ ಶಕ್ತಿ ಇಮ್ಮಡಿಸಲಿ ಎಂಬ ನಂಬಿಕೆಯಿಂದ ಮುನ್ನಡೆಯ ಬೇಕಾಗಿದೆ.
ಎಲ್ಲ ಆಟಗಳಲ್ಲಿ ಪ್ರೇಕ್ಷಕರು ಬೊಬ್ಬೆ ಹೊಡೆಯುತ್ತಾರೆಯೇ ಹೊರತು ಆಟಗಾರನಲ್ಲ. ಇತರರ ಟೀಕೆಗಳನ್ನು ಕೇಳುತ್ತಲೇ ತನ್ನ ಪಾಲಿನ ಆಟ ಆಡುತ್ತ ಗುರಿಯೆಡೆಗೆ ಸಾಗುವವನೇ ನಿಜ ಜೀವನದಲ್ಲಿ ಯಶಸ್ವಿಯಾಗಬಲ್ಲ. ಈ ಹಿನ್ನೆಲೆಯಲ್ಲಿ, ' ಸಂತೆಯೊಳಗೊಂದು ಮನೆಯ ಮಾಡಿ, ಶಬ್ದಕ್ಕೆ ಅಂಜಿದೊಡೆಂತಯ್ಯಾ?' ಎಂಬ ಅಕ್ಕ ಮಹಾದೇವಿಯ ಮಾತುಗಳು ಸ್ಮರಣಾರ್ಹ.
ಪರರೆಸೆವ ಕಲ್ಲುಗಳಿಂ ಕಟ್ಟಿಕೊಳೊ ಸೇತುವೆಯ
ಪರನಿಂದೆ, ಪರಿಹಾಸಗಳಿಂ ರಚಿಸು ರಸಕಾವ್ಯವ/
ಪರರ ಹೊಗಳಿಕೆ ಎಚ್ಚರಿಕೆ ಗಂಟೆಯಂತಿರಲಿ
ಪರಕಿಸೆಲ್ಲವ ಸಮಚಿತ್ತದಲಿ - ಶ್ರೀವೆಂಕಟ//
##############
- ಶ್ರೀರಂಗ ಕಟ್ಟಿ ಯಲ್ಲಾಪುರ