ಕಬೀರ ಕಂಡಂತೆ..೩
ಸುಖ-ದುಃಖಗಳಲಿ ಬಾಂಧವ್ಯ ಬಲವಾಗಿರಲಿ... ದುಃಖ ಮೆ ಸುಮಿರನ ಸಬ ಕರೇ, ಸುಖ ಮೆ ಕರೇ ನ ಕೋಯಿ/ ಜೋ ಸುಖಮೆ ಸುಮಿರನ ಕರೆ, ದುಃಖ ಕಾಯೆ ಕೊ ಹೋಯೆ//
ಪರೀಕ್ಷೆಗಳು ಹತ್ತಿರ ಬಂದಾಗ ಅಥವಾ ಜೀವನ ದಲ್ಲಿ ಸಂಕಷ್ಟಗಳು ಎದುರಾದಾಗ ಜನರು ದೇವರ ಮೊರೆ ಹೋಗುವದು ಎಲ್ಲರಿಗೂ ತಿಳಿದಿರುವ ಸಂಗತಿ. ಇದಕ್ಕಾಗಿಯೇ ' ಸಂಕಟ ಬಂದಾಗ ವೆಂಕಟರಮಣ' ಎಂಬ ಗಾದೆ ರೂಢಿಯಲ್ಲಿದೆ. ಈ ರೀತಿ ಬೇರೆ ದಾರಿ ಕಾಣದಿದ್ದಾಗ ತಮ್ಮ ಸ್ವಾರ್ಥ ಸಾಧನೆಗಾಗಿ ದೇವರನ್ನು ಸ್ತುತಿಸುವ ಮನುಷ್ಯರು ಕೊನೆಗೆ ಅಪೇಕ್ಷಾಭಂಗಿಗಳಾಗಿ, ದುಃಖಿಗಳಾಗಿ, ನಿರಾಸೆಯ ಮಡುವಿನಲ್ಲಿ ತೊಳಲಾಡುವದನ್ನು ಕಾಣುತ್ತೇವೆ. ಆಧುನಿಕ ಕಾಲದಲ್ಲಂತೂ ಇಂಥವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಸುಖವೆನ್ನುವದು ಬದುಕಿನಲ್ಲಿ ಇದ್ದಾಗ ಅದರ ಅಮಲಿನಲ್ಲಿ ತೇಲಾಡುತ್ತ ಎಲ್ಲವನ್ನು, ಎಲ್ಲರನ್ನೂ ಮರೆತು ನಡೆಯುವ ಮನುಷ್ಯ ದುಃಖ ಕಂಡಾಗ ಮಾತ್ರ ದಿಕ್ಕುಗಾಣದೇ ಹೌಹಾರಿ ದೇವರಿಗೆ ಶರಣು ಹೋಗುತ್ತಾನೆ. ಪೂಜೆ, ಪುನಸ್ಕಾರ, ಹೋಮ, ಹವನ ಇತ್ಯಾದಿಗಳಿಂದ ಶತಾಯ ಗತಾಯ ದೇವರನ್ನು ಒಳಿಸಿಕೊಳ್ಳುವ ವ್ಯರ್ಥ ಸಾಹಸಕ್ಕೆ ಕೈ ಹಾಕುತ್ತಾನೆ ಸುಖ, ಸಮೃದ್ಧಿಯ ದಿನಗಳಲ್ಲಿ ಸ್ಮರಣೆಗೇ ಬಾರದ ದೇವರು ಸಂಕಷ್ಟದ ಸಮಯ ದಲ್ಲಿ ಒಮ್ಮೆಲೇ ಜ್ಞಾನೋದಯವಾದಂತೆ ವರ್ತಿಸುವವರನ್ನು ಕಂಡು "ಜಗದೊಳಿರುವ ಮನುಜರೆಲ್ಲ ಹಗರಣ ಮಾಡುವದು ಕಂಡು, ನಗೆಯು ಬರುತಿದೆ ಎನಗೆ" ಎಂದು ದಾಸರು ಜನರ ಆಷಾಢಭೂತಿತನಕ್ಕೆ ಕನ್ನಡಿ ಹಿಡಿದಿದ್ದಾರೆ. "ದುಃಖದಲಿ ದೇವನನು ಸ್ಮರಿಸುತ್ತ ಸುಖದಲ್ಲಿ ಮರೆಯುವರು; ಸುಖದಲ್ಲಿ ಸ್ಮರಿಸಿದರೆ ಮನುಜರಿಗೆ ದುಃಖ ಇನ್ನೆಲ್ಲಿ!?" ಎಂದು ಪ್ರಶ್ನಿಸಿರುವ ಕಬೀರರು, ಸುಖದಲ್ಲಿ ದೇವರನ್ನು ಮರೆತವರು ಕಷ್ಟಕಾಲದಲ್ಲಿ ಎಷ್ಟು ಭಜಿಸಿದರೇನು ಫಲ? ಎಂಬ ಉತ್ತಮ ಸಂದೇಶ ನೀಡಿದ್ದಾರೆ. ಕಣ್ಣೊರೆಸಿ ಸಮಾಧಾನ ಪಡಿಸುವ ಜನರು ಇಲ್ಲದಿದ್ದರೆ ದುಃಖ ಇಮ್ಮಡಿ ಆಗುತ್ತದೆ. ಆದರೆ ಸುಖವಿದ್ದಾಗ ಅವರನ್ನು ದೂರ ಮಾಡಿದರೆ, ಕಷ್ಟದ ಸಂದರ್ಭದಲ್ಲಿ ಅವರು ಹೇಗೆ ಸಾಥ್ ನೀಡುತ್ತಾರೆ? ಇದರ ಜೊತೆಗೆ,ಸುಖವಿದ್ದಾಗ ನಾವು ನಮ್ಮ ಬೇರುಗಳನ್ನು, ನಿಂತ ನೆಲವನ್ನು ಮರೆತರೆ, ಅವು ಮುಂದೆ ಎಂದಿಗೂ ನಮಗೆ ಆಶ್ರಯ ನೀಡಲಾರವು ಎಂಬ ಸತ್ಯವನ್ನು ಅರಿತು ನಡೆಯಬೇಕು. ಸದಾ ಕಾಲದ ಭಗವಂತನ ಪ್ರಾರ್ಥನೆ, ಸ್ಮರಣೆ, ಧ್ಯಾನಗಳಲ್ಲಿ ಅದ್ಭುತವಾದ ಶಕ್ತಿಯಿದ್ದು ಇವು ಮಾನವ- ಮಾಧವರ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ. ಮನುಷ್ಯ- ಮನುಷ್ಯರ ಮಧ್ಯದ ಒಡನಾಟ, ಭಕ್ತ- ಭಗವಂತನ ಬಾಂಧವ್ಯ ಮಾತ್ರ ಬದುಕಿಗೆ ಆಧಾರವಾಗಬಲ್ಲದು. ಕಷ್ಟಕ್ಕೆ ವಿಚಲಿತರಾಗದಂತೆ ಮಾಡುವ ಶಕ್ತಿ ನಿರ್ಮಲ ಅಂತಃಕರಣದಿಂದ ಮಾಡುವ ಭಕ್ತಿಗೆ ಇದ್ದು, ನಿರಂತರ ಭಗವಂತನ ಸ್ಮರಣೆ ಬದುಕಿಗೆ ಹೊಸ ದಿಕ್ಕನ್ನು ತೋರಿಸಬಲ್ಲದು. ಸುಖದ ಅಮಲಿನಲಿ ದೇವನನು ಮರೆತು ದುಃಖ ಎದುರಾಗೆ ಅವನನ್ನೇ ಸ್ಮರಿಸುವರು/ ಸುಖದಲ್ಲಿ ಭಕ್ತಿಭಾವ ಬಲಗೊಂಡೊಡೆ ದುಃಖಕ್ಕೆ ಎಡೆಯೆಲ್ಲಿ?- ಶ್ರೀವೆಂಕಟ // ಶ್ರೀರಂಗ ಕಟ್ಟಿ ಯಲ್ಲಾಪುರ.