ಕಬೀರ ಕಂಡಂತೆ..೧೫
ತಾಳಿದವನಿಗೆ ದಕ್ಕೀತು ಬದುಕು..!
ಧೀರೆ ಧೀರೆ ರೆ ಮನಾ, ಧೀರೆ ಸಬ ಕುಛ ಹೋಯ್/
ಮಾಲಿ ಸಿಂಚೆ ಸೌ ಘಡಾ, ಋತು ಆಯೆ ಫಲ ಹೋಯ್//
ಸಹನೆಯಿಂದಿರು ಮನವೆ, ಸಹನೆಯಿಂದಿರೆ ಕಾರ್ಯ ಸಿದ್ಧಿಪುದು/
ನೂರು ಕೊಡ ನೀರು ಸುರಿದರೂ ಮಾಲಿ, ಋತು ಬಂದಾಗಲೇ ಫಲ ದೊರೆವುದು//
'ಎಲ್ಲದಕ್ಕೂ ಕಾಲ ಕೂಡಿ ಬರಬೇಕು, ಅಲ್ಲಿಯ ವರೆಗೆ ತಾಳ್ಮೆಯಿರಬೇಕು' ಎಂಬ ಮಾತು ಬದುಕಿನ ಮಾರ್ಗದಲ್ಲಿ ದಾರಿದೀಪವಿದ್ದಂತೆ. ಯಾವುದೇ ಕೆಲಸ ಮಾಡಬೇಕಾದರೂ ನಮ್ಮಲ್ಲಿ ಕಾಯಕ ಪ್ರೀತಿ ಇರಬೇಕಾದುದು ಅತ್ಯಂತ ಅವಶ್ಯ. ಇದರ ಜೊತೆಗೆ ನಮ್ಮ ಪ್ರಯತ್ನಕ್ಕೆ ದೊರೆಯಬೇಕಾದ ಪ್ರತಿಫಲದ ಕುರಿತು ತಾಳ್ಮೆ ಇರಬೇಕು. ನಿಸರ್ಗದ ಮಕ್ಕಳಾದ ನಾವು ಭಗವಂತನ ಸೃಷ್ಟಿಯ ನಿಯಮಗಳನ್ನು ಅರಿತು ನಡೆದಾಗ ಮಾತ್ರ ಯಶಸ್ಸು ದೊರೆಯಲು ಸಾಧ್ಯ. ಇಂದು ಬೀಜ ಬಿತ್ತಿದರೆ ನಾಳೆಯೇ ಫಲವನ್ನು ಅಪೇಕ್ಷಿಸುವದು ಮೂರ್ಖತನದ ಮಾತಾದೀತು.
ಆದರೆ ಇಂದಿನ ಧಾವಂತದ ಜೀವನ ಪದ್ಧತಿಯಲ್ಲಿ ಸೂಕ್ತ ಸಮಯಕ್ಕೆ ಕಾಯಲು ಯಾರ ಬಳಿಯೂ ತಾಳ್ಮೆ ಇಲ್ಲ. ಯಾಂತ್ರಕ ಜಗತ್ತಿನಲ್ಲಿರುವ ಮನುಷ್ಯ ಗುಂಡಿಯೊತ್ತಿದರೆ ನಿರೀಕ್ಷಿತ ಪರಿಣಾಮ ನೀಡುವ ಯಂತ್ರದಂತೆ ತಕ್ಷಣ ಪ್ರತಿಫಲ ನಿರೀಕ್ಷಿಸುತ್ತಾನೆ. ತಾಳ್ಮೆ ಎನ್ನುವದು ಈಗ ಹಳಸಲು ಪದದಂತೆ ಆಗಿದೆ. ಕೆಲಸ ಮಾಡಲೂ ಪುರಸೊತ್ತಿಲ್ಲ, ಕೆಲಸಕ್ಕೆ ತಕ್ಕ ಪ್ರತಿಫಲಕ್ಕಾಗಿ ಕಾಯಲೂ ಪುರಸೊತ್ತಿಲ್ಲ ಎನ್ನುವಂತಾಗಿದೆ ಇಂದಿನ ಸ್ಥಿತಿ.
ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಮನವನ್ನು ಸಂತೈಸಿ, ಸಮಾಧಾನ ಪಡಿಸಿ ಎಂಬ ಕಿವಿಮಾತು ಹೇಳಿದ್ದಾರೆ. ತೋಟದ ಮಾಲಿ ಸಸಿಗೆ ಇಂದು ನೂರು ಕೊಡ ನೀರು ಹಾಕಿ ನಾಳೆಯೇ ಫಲ ನೀಡಬೇಕು ಎಂದು ಬಯಸುವದು ಮೂರ್ಖತನ ವಾದೀತು ಎಂದು ಎಚ್ಚರಿಸಿದ್ದಾರೆ. ಸಾಧನೆಯ ಮಾರ್ಗ ಪರಿಶ್ರಮದ ಜೊತೆಗೆ ಸಹನೆಯನ್ನೂ ಬಯಸುತ್ತದೆ. ನಮ್ಮ ಮಕ್ಕಳನ್ನು ನಿತ್ಯ ಪಾಲನೆ, ಪೋಷಣೆ ಮಾಡಿದರೂ ಅವರು ಬೆಳೆದು ಒಳ್ಳೆಯ ನಾಗರಿಕರಾಗಲು ವರ್ಷಗಳೇ ಹಿಡಿಯುತ್ತವೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯುವ ಗುಣ ನಮ್ಮಲ್ಲಿ ಬೆಳೆದು ಬರಬೇಕು.
ಯಾವುದೇ ಹೋರಾಟವಾಗಲೀ, ಸಾಮಾಜಿಕ ಪರಿವರ್ತನೆ ಯಾಗಲೀ, ನಾವು ಕೈಗೊಳ್ಳುವ ಪೂಜೆ, ಪುನಸ್ಕಾರಗಳಿರಲಿ, ಬಿತ್ತಿದ ಬೀಜ ಫಲ ನೀಡುವವರೆಗೆ ತಾಳ್ಮೆ ಅತ್ಯಗತ್ಯ. " ಸಬರ ಕಾ ಫಲ ಮೀಠಾ ಹೋತಾ ಹೈ" ಎನ್ನುವಂತೆ ತಾಳ್ಮೆಯ ಫಲ ಸಿಹಿಯಾಗಿಯೇ ಇರುತ್ತದೆ. "ತಾಳಿದವನು ಬಾಳಿಯಾನು" ಎಂಬ ನಾಣ್ಣುಡಿ ಇಲ್ಲಿ ಪ್ರಸ್ತುತ.
ನಮ್ಮ ಪಾಲಿನ ಕರ್ತವ್ಯ ವನ್ನು ನಿರ್ವಹಿಸುವ ಶೃದ್ಧೆ ಕೆಲಸದ ಅಂದ ಹೆಚ್ಚಿಸಿದರೆ ತಾಳ್ಮೆ ಬದುಕಿನ ಸೌಂದರ್ಯ ಇಮ್ಮಡಿಸುತ್ತದೆ.
ತಾಳ್ಮೆಯಿಂ ಕಾಯ್ದೊಡೆ ಬ್ರಹ್ಮಾಂಡ ದೊರಕೀತು
ತಾಳ್ಮೆಯಿಂದಲಿ ಬೀಜ ಬೃಹತ್ ವೃಕ್ಷವಾದೀತು /
ತಾಳ್ಮೆ ಕಹಿಯಾದರೂ ಅನುಭವದ ಸವಿ ದಕ್ಕೀತು
ತಾಳ್ಮೆ ಉತ್ಕರ್ಷಕೆ ದಾರಿ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.