top of page

ಕಬೀರ ಕಂಡಂತೆ..೧೩'ಸಾಕು' ಮಂತ್ರವ ಜಪಿಸೊ ಮನುಜಾ..!

ಸಾಯಿ ಇತನಾ ದೀಜಿಯೆ, ಜಾಮೆ ಕುಟುಂಬ ಸಮಾಯೆ/
ಮೈ ಭಿ ಭೂಖಾ ನ ರಹೂಂ, ಸಾಧು ನ ಭೂಖಾ ಜಾಯೆ//


"ಆಸೆಯೇ ದುಃಖಕ್ಕೆ ಕಾರಣ" ಎಂಬ ಬುದ್ಧವಾಣಿ ನಮ್ಮನ್ನು ಸದಾ ಎಚ್ಚರಿಸುತ್ತಿದ್ದರೂ ಇಂದು ಮಾನವ ಜನಾಂಗ ' ಬೇಕು' ಮಂತ್ರವನ್ನು ಜಪಿಸು ತ್ತಿರುವದು ಸರ್ವ ವಿದಿತ. ಆಸೆಗೆ ಮಿತಿಯುಂಟೆ? ಒಂದು ಆಸೆ ತೃಪ್ತಿ ಪಡಿಸುವಷ್ಟರಲ್ಲಿ ಹತ್ತಾರು ಆಸೆಗಳು ಪೆಡಂಭೂತದಂತೆ ನಮ್ಮೆದುರು ಬಾಯಿ ತೆರೆದು ನಿಲ್ಲುತ್ತವೆ. ಆದಷ್ಟು ಹೆಚ್ಚು ಹೆಚ್ಚು ಆಸೆ ಗಳನ್ನು ಈಡೇರಿಸಬೇಕು ಎಂಬ ಧಾವಂತದಲ್ಲಿ ಹಣದ ಹಿಂದೆ ಓಡುತ್ತಿರುವ ಮನುಷ್ಯ ದೈಹಿಕ, ಮಾನಸಿಕ ಸ್ವಾಸ್ಥ್ಯವನ್ನೂ ಬಲಿಕೊಡುತ್ತಿದ್ದಾನೆ. ಇದಕ್ಕೂ ಮೀರಿ ಹಣ ಸಂಪಾದಿಸಲು‌ ವಾಮ ಮಾರ್ಗ ಹಿಡಿಯುತ್ತಿರುವದು ದುರಂತದ ಸಂಗತಿ. ಉತ್ತಮ ಸೇವಕನಾಗಿ, ಸಾಧನವಾಗಿ ಇರಬೇಕಾದ ದುಡ್ಡಿನ ಪ್ರಭಾವ ಇಂದು ಬೃಹದಾಕಾರ ಬೆಳೆದು ನಮ್ಮನ್ನೇ ಆಪೋಷಣ ತೆಗೆದುಕೊಳ್ಳಲು ಹೊರಟಿ ರುವದು ವಿಪರ್ಯಾಸವೇ ಸರಿ.
ನಾಲ್ಕು ತಲೆಮಾರು ಕುಳಿತು ತಿಂದರೂ ಕರಗದಷ್ಟು ಸಂಪತ್ತು ಗುಡ್ಡೆ ಹಾಕಿಕೊಂಡರೂ ಮತ್ತೂ ಬೇಕು ಎನ್ನುವ ಹಪಹಪಿಯಂತೂ ಮೇರೆ ಮೀರಿದ್ದು. ಗಳಿಸುವದಕ್ಕಾಗಿ ಆರೋಗ್ಯ ಹಾಳಾಗಿ ಅದನ್ನು ಸರಿಪಡಿಸಿಕೊಳ್ಳಲು ಇದೇ ಹಣವನ್ನು ಖರ್ಚು ಮಾಡುವ ಮನುಷ್ಯನ ಪಾಡು ಹೇಳ ತೀರದು! ಸಂತ ಕಬೀರರು ಮೇಲಿನ ದೋಹೆಯಲ್ಲಿ
"ದೇವರೇ,ನನ್ನ ಕುಟುಂಬ ರಕ್ಷಣೆಗೆ ಸಾಕಾಗುವಷ್ಟು ಮಾತ್ರ ಸಂಪತ್ತು ಕೊಡು. ಇದರಿಂದ ನಾನೂ ಉಪವಾಸ ಬೀಳಬಾರದು, ಮನೆಗೆ ಬರುವ ಸಾಧು, ಸಂತರೂ ತೃಪ್ತರಾಗಬೇಕು" ಎಂದು ಪ್ರಾರ್ಥಿಸುತ್ತಾರೆ. ಕೇವಲ ಅಗತ್ಯಗಳನ್ನು ಪೂರೈಸುವದರ ಜೊತೆಗೆ ಗ್ರಹಸ್ಥ ಧರ್ಮ ಪಾಲಿಸಲು ಅವಶ್ಯವಿರುವ ಸಂಪತ್ತು ಮಾತ್ರ ಕೊಡು ಎಂದು ಬೇಡುತ್ತಾರೆ..
ನಾವು ಕೇವಲ ಅವಶ್ಯಕತೆ ಪೂರೈಕೆಯತ್ತ ಗಮನ ಹರಿಸಿದರೆ ಸಮಸ್ಯೆಯೇ ಇರಲಾರದು. ಆದರೆ ಐಷಾರಾಮಿ ಬದುಕು ನಮ್ಮನ್ನು ಆಕರ್ಷಿಸಿ ಹಣ ಕೂಡಿಡುವ ಪ್ರವೃತ್ತಿಯಿಂದಾಗಿ ಸ್ವಾರ್ಥ, ಅನಾಚಾರಗಳು ನಮ್ಮನ್ನು ಆಳುತ್ತವೆ. ಇದನ್ನು ಮನಗಂಡ ಕಬೀರರು, 'ಸಾಕು' ಎಂಬ ಸಂತೃಪ್ತ ಭಾವಕ್ಕೆ ಒತ್ತು ನೀಡಿದ್ದಾರೆ. ಮನುಷ್ಯ ಹುಟ್ಟಿದಾಗ ಅವನ ತೂಕ ಎರಡೂವರೆ ಕಿಲೊ ಮತ್ತು ಸತ್ತಾಗ ಆತನ ಅಸ್ತಿಯ ತೂಕವೂ ಎರಡೂವರೆ ಕಿಲೊ!! ಪ್ರಕೃತಿ ತನ್ನ ಲೆಕ್ಕ ಸರಿಯಾಗಿಯೇ ಇಟ್ಟಿರುತ್ತದೆ. ಆದರೆ ಮನುಷ್ಯ ಜೀವನದಲ್ಲಿ ತನ್ನದಲ್ಲದ್ದನ್ನು
ಕೂಡಿಡಲು ಹೆಣಗಾಡುತ್ತಾನೆ. ತೃಪ್ತಿ, ಸಮಾಧಾನ ಗಳೇ ಬದುಕಿನ ನಿಜವಾದ ಸಂಪತ್ತು ಎಂಬುದನ್ನು ಅರಿತವ ನಿಜಾರ್ಥದಲ್ಲಿ ಶ್ರೀಮಂತನಲ್ಲವೆ!?


ಸಂತೃಪ್ತಿಯ ಗರ್ಭದಲ್ಲಿ ಅಡಗಿದೆ ಸುಖ
ಅತೃಪ್ತಿಯ ರಣಹದ್ದು ತಂದೀತು ದುಃಖ/
'ಬೇಕು' ಎಂಬ ಬೇತಾಳ ಮನೆ ಮುರಿದೀತು
'ಸಾಕು' ಮಂತ್ರವ ಜಪಿಸೊ - ಶ್ರೀವೆಂಕಟ//


ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ..೧೩'ಸಾಕು' ಮಂತ್ರವ ಜಪಿಸೊ ಮನುಜಾ..!
bottom of page