ಕಬೀರ ಕಂಡಂತೆ..೧೨ ಹೂವಿನ ಸಾಂಗತ್ಯದಿಂದ ನಾರು ಕಂಡೀತು ಸ್ವರ್ಗ.!
ಸಂಗತಿ ಸೆ ಸುಖ ಉಪಜೈ, ಕುಸಂಗತಿಸೆ ದುಃಖ ಹೋಯ್ /
ಕಹೇ ಕಬೀರ ತಹ ಜಾಯಿಯೇ, ಸಾಧು ಸಂಗ ಜಹಾಂ ಹೋಯ್//
ಮನುಷ್ಯ ಸಂಘಜೀವಿ. ಆದ್ದರಿಂದ ಇತರರ ಸಂಗಡ ಬೆರೆತು ಬದುಕುವದು ಅತ್ಯಂತ ಅವಶ್ಯ. ಆದರೆ ಬದುಕಿನಲ್ಲಿ ನಾವು ಯಾರ ಸಂಗ, ಯಾವ ವಸ್ತುವಿನ ಸಾಂಗತ್ಯ ಬಯಸುತ್ತೇವೆ ಅನ್ನುವದರ ಮೇಲೆ ನಮ್ಮ ಯಶ ಮತ್ತು ಅಪಯಶಗಳು ಅವಲಂಬಿಸಿವೆ. ಜಗತ್ತಿನಲ್ಲಿ ಒಳ್ಳೆಯ ವಿಚಾರ ಮತ್ತು ಸಂಸ್ಕಾರವುಳ್ಳ ಜನರು ಇರುವಂತೆ ವಾಮ ಮಾರ್ಗದಲ್ಲಿ ನಡೆದು ಜನ ಪೀಡಕರಾಗುವವರೂ ಇರುತ್ತಾರೆ. ಬದುಕಿನಲ್ಲಿ ನಮ್ಮ ಆಯ್ಕೆಗಳೇನು?
ಯಾರ ಸಾಂಗತ್ಯಕ್ಕೆ ನಾವು ಬೆಲೆ ಕೊಡುತ್ತೇವೆ? ಎಂಬುದರ ಮೇಲೆ ಜನ್ಮ ಸಾರ್ಥಕ್ಯ ಅಡಗಿದೆ.
ವಾತಾವರಣ ಮತ್ತು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಮನುಷ್ಯ ಕೆಲವರ ಸಂಗ ಮಾಡುತ್ತಾನೆ. ಆದರೆ ನಾವು ಯಾರ ಸಂಗ ಮಾಡುತ್ತೇವೆ, ಅದರ ಪರಿಣಾಮಗಳೇನು, ನಮ್ಮ ವ್ಯಕ್ತಿತ್ವದ ಮೇಲೆ ಅದು ಬೀರುವ ಪ್ರಭಾವ ಎಂಥದ್ದು ಎಂಬುದರ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಒಳ್ಳೆಯ ಸಾಂಗತ್ಯದಿಂದ ಸುಖ- ಸಂತೋಷ ಮತ್ತು ಕೆಟ್ಟ ಸಹವಾಸದಿಂದ ಕೆಟ್ಟ ಪರಿಣಾಮ, ದುಃಖಗಳು ನಿಶ್ಚಿತ ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಜೀವನದಲ್ಲಿ ಸಾಧು, ಸಜ್ಜನರ ಸಂಗ ಮಾಡಬೇಕು ಎಂಬ ಕಿವಿಮಾತು ಹೇಳಿದ್ದಾರೆ. " ಸಜ್ಜನರ ಸಂಗವಿದು ಹೆಜ್ಜೇನು ಸವಿದಂತೆ" ಎಂಬ ಸರ್ವಜ್ಞನ ಮಾತುಗಳು ಇಲ್ಲಿ ಪ್ರಸ್ತುತ. ಒಳ್ಳೆಯ ಮಿತ್ರರು, ಒಳ್ಳೆಯ ವಿಚಾರ ಗಳು, ಒಳ್ಳೆಯ ಹವ್ಯಾಸಗಳು ನಮ್ಮ ಆದ್ಯತೆ ಯಾದರೆ ಬದುಕು ಸಫಲವಾದೀತು. ಇದರ ಬದಲು, ಭೃಷ್ಟಾಚಾರಿಗಳು, ವ್ಯಸನಿಗಳು, ಮೋಸಗಾರರ ಸಂಗ ಮಾಡಿದರೆ ಸರ್ವನಾಶಕ್ಕೆ ದಾರಿಯಾದೀತು.
ಹುಟ್ಟುವಾಗಲೇ ಯಾರೂ ಕೆಟ್ಟವರಿರುವದಿಲ್ಲ. ಆದರೆ ವ್ಯಕ್ತಿಗೆ ದೊರಕುವ ಸಂಸ್ಕಾರ, ಸಂಗ ಅವನನ್ನು ಮಾನವ ಇಲ್ಲವೆ ದಾನವನನ್ನಾಗಿ ರೂಪಿಸುತ್ತವೆ. ಕೆಲವು ಸಲ ನಾವು ಆರಿಸಿಕೊಂಡ ಮಿತ್ರರು ಸರಿಯಾಗಿರದಿದ್ದರೆ, ಕಮಲ ಪತ್ರದ ಮೇಲಿನ ನೀರ ಹನಿಯಂತಿದ್ದು ದುರ್ವ್ಯಸನ
ಗಳಿಂದ ದೂರವಿರುವ ಮನುಷ್ಯ ಸುಖಿಯಾಗಲು ಸಾಧ್ಯ. ಕಬ್ಬಿಣದ ತುಂಡು ಪರಶುಮಣಿಯ ಸ್ಪರ್ಶ ದಿಂದ ಬಂಗಾರವಾಗುತ್ತದೆ. ಅಂಗುಲಿಮಾಲಾ ಎಂಬ ನರರಾಕ್ಷಸ ಬುದ್ಧನ ಸಾಂಗತ್ಯದಿಂದ ತನ್ನ ಪೈಶಾಚಿಕತೆಯನ್ನು ಕಳೆದುಕೊಂಡು ಸಾಯುಜ್ಯ ಪಡೆದ ದೃಷ್ಟಾಂತ ಸದಾ ಬೆಳಕಾಗಿ ನಿಲ್ಲುತ್ತದೆ.
ದುಸ್ಸಂಗದಿಂದ ಅಧಃಪತನದ ದಾರಿ ಹಿಡಿಯದೇ ಸತ್ಸಂಗದಿಂದ ಮೌಲ್ಯಯುತ ಬದುಕನ್ನು ರೂಪಿಸಿ ಕೊಂಡರೆ ಬದುಕು ಮೌಲ್ಯಯುತವಾದೀತು.
ತ್ಯಾಜ್ಯವುಂಡ ಗಂಗೆಗೆ ಮಲಿನತೆಯೇ ಗತಿ
ಪೂಜೆಗೆ ಹೊರಟಿತು ನಾರು, ಹೂವ ಜೊತೆ/
ಸಾಂಗತ್ಯದಿಂದ ಸುಖ- ದುಃಖದ ಪ್ರತಿಫಲ
ಸಂಗವಿರಲಿ ಶುದ್ಧ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.
#####################