ಕಬೀರ ಕಂಡಂತೆ..೧೧. ಮನಸ್ಸಿನ ಹಣತೆಯಲಿ ಜ್ಯೋತಿ ಬೆಳಗಲಿ..!
ಮಾಲಾ ಬನಾಯಿ ಕಾಷ್ಠಕಿ, ಬೀಚ ಮೆ ಡಾಲಾ ಸೂತ/
ಮಾಕಾ ಬಿಚಾರಿ ಕ್ಯಾ ಕರಿ, ಜಪನೆವಾಲಾ ಕಪೂತ//
ಮಾಲಾ ಫೇರತ ಜುಗ ಭಯಾ, ಫಿರ ನಾ
ಮನಕಾ ಫೇರ/
ಕರಕಾ ಮನಕಾ ಡಾರ ದೇ, ಮನಕಾ ಮನಕಾ ಫೇರ//
ಕಟ್ಟಿಗೆಯಿಂದ ತಯಾರಿಸಿದ ಮಣಿಗಳನ್ನು ದಾರದಿಂದ ಪೋಣಿಸಿ ಮಾಲೆ ಸಿದ್ಧಗೊಂಡಿದೆ. ಆದರೆ, ಜಪ ಮಾಡುವವನೇ ಸರಿ ಇಲ್ಲದಿದ್ದರೆ, ಮಾಲೆಯದೇನು ದೋಷ ಎಂಬ ಪ್ರಶ್ನೆ ನಮ್ಮ ಮುಂದೆ ಇರಿಸಲಾಗಿದೆ. ಇನ್ನೊಂದು ದೋಹೆಯಲ್ಲಿ ' ಮಾಲೆ ತಿರುಗಿಸುತ್ತ ಯುಗಗಳೇ ಕಳೆದರೂ, ಮನಸ್ಸು ಮಾತ್ರ ಸಮಸ್ಥಿತಿಗೆ ಬರುತ್ತಿಲ್ಲ. ಮಾಲೆ ತೆಗೆದು ಪಕ್ಕಕ್ಕಿಡು, ಮನಸ್ಸಿನ ಮಣಿ ತಿರುಗಿಸು" ಎಂಬುದು ಸಂತ ಕಬೀರರ ಸಂದೇಶ.
ಈ ಸುಂದರ ಪ್ರಕೃತಿಯಲ್ಲಿ, ಮನುಷ್ಯನಿಗೆ ಬೇಕಾದ ಎಲ್ಲವೂ ಇದೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವದು ಮನುಷ್ಯನ ಕೈಯಲ್ಲಿದೆ. ಆದರೆ ಹೀಗೆ ಮಾಡದೇ, ದೇವರು ನನಗೇನೂ ಕೊಟ್ಟಿಲ್ಲ ಎಂದು ಕಣ್ಣೀರು ಸುರಿಸಿದರೆ ಅದು ಯಾರ ತಪ್ಪು? ಈ ಹಿನ್ನೆಲೆಯಲ್ಲಿ, ಸುಂದರ ಜಪ ಮಾಲೆ ಕೈಯಲ್ಲಿ ಹಿಡಿದು ಮನಸ್ಸನ್ನು ಬೇರೆ ಕಡೆಗೆ ಹರಿಬಿಟ್ಟರೆ, ಮಾಲೆಯಿಂದಾದ ಪ್ರಯೋಜನವೇನು? ಎಂಬದು ಕಬೀರರ ಚಿಂತೆ.
ಪುಸ್ತಕಗಳನ್ನು ಹೊತ್ತ ಮಾತ್ರಕ್ಕೆ ಕತ್ತೆ ಎಂದಿಗೂ ಪಂಡಿತ ಆಗಲಾರದು. ಮನೆಯಲ್ಲಿ ಪುಸ್ತಕದ ಗುಡ್ಡೆ ಹಾಕಿಕೊಂಡ ಕಾರಣಕ್ಕೆ ಮನುಷ್ಯ ಜ್ಞಾನಿ ಆಗಲಾರ. ಸಂಗೀತದ ಉಪಕರಣ ಎಷ್ಟಿದ್ದರೇನು ಅದರ ಸಾಧನೆ ಮಾಡದಿದ್ದರೆ? ನಮಗೆ ಭಗವಂತ ಕೊಟ್ಟ ಸಂಪತ್ತನ್ನು ಹಾಗೆಯೇ ಇಟ್ಟುಕೊಳ್ಳುವದರ ಬದಲು ಅದರ ಸದ್ವಿನಿಯೋಗ ಮಾಡಿಕೊಂಡಾಗ ಬದುಕು ಸಾರ್ಥಕವಾದೀತು. ಇದಕ್ಕೆ ಬದುಕಿನಲ್ಲಿ ಸಾಧನೆ ಅತ್ಯವಶ್ಯ. ಮತ್ತು ಸಾಧನೆ ಮಾಡಲು ಮನಸ್ಸು ಮುಖ್ಯ. ಕೈಯೊಳು ಜಪಮಣಿ ಹಿಡಿದು, ಬಾಯಲ್ಲಿ ಮಂತ್ರ ಹೇಳುತ್ತ ಡಾಂಭಿಕರಂತೆ ವರ್ತಿಸುವ ಬದಲು ಮನಸ್ಸನ್ನು ಗಮ್ಯದತ್ತ ಕೇಂದ್ರೀಕರಿಸುವದು ಅಗತ್ಯ. ಮಾಲೆ ತಿರುಗಿಸುತ್ತ, ತೋರಿಕೆಯ ಆಚರಣೆ ಮಾಡುತ್ತ, ಮನದಲ್ಲಿ ಕಪಟವನ್ನಿಟ್ಟುಕೊಂಡರೆ ಏನು ಫಲ? ಈ ಹಿನ್ನೆಲೆಯಲ್ಲಿ ಕಬೀರರು ಬಾಹ್ಯ ಆಡಂಬರ ಬಿಟ್ಟು ಅಂತರಂಗದ ಪರಿವರ್ತನೆಯ ಅಗತ್ಯವನ್ನು ಒತ್ತಿ ಹೇಳಿದ್ದಾರೆ.
" ಮಾಲೆ ಸವರುತ್ತ ಜನ್ಮ ಕಳೆಯಿತು, ಬಿಡದು ಮನದ ಕಾಮಾಲೆ!
ಬಿಡು ವನಮಾಲೆ, ಮನಸ್ಸು ಹದಮಾಡಿಕೊ
ಸವರು ವನಮಾಲೆ!!" ಎಂಬ ಪ್ರಾಜ್ಞರ ನುಡಿಗಳು ಅದೆಷ್ಟು ಮಾರ್ಮಿಕ! ಎಲ್ಲ ಶಕ್ತಿಗಳಿಗಿಂತ ಮನಸ್ಸಿನ ಶಕ್ತಿ ಅತ್ಯಂತ ಪ್ರಬಲ. ಮನಸ್ಸನ್ನು ಹಿಡಿತದಲ್ಲಿ ಇರಿಸಿಕೊಂಡು ಅಂತಃಶಕ್ತಿಯನ್ನು ಜಾಗೃತಗೊಳಿಸಿದಾಗ ಮಾನವ ಜನ್ಮದ ಸಾಫಲ್ಯ ಕಾಣಲು ಸಾಧ್ಯ. ದೇಹವೆಂಬ ದೇಗುಲದಲಿ ಮನಸ್ಸೆಂಬ ಜ್ಯೋತಿ ಬೆಳಗಿದೊಡೆ ದೇವರು ಕಾಣದಿಹನೆ..!?
ಮಣ್ಣು ಹಾಳಾದೊಡೆ ಹದಗೊಳಿಸಬಹುದು
ಮನಸ್ಸು ಸರಿಮಾಡಲು ಆಯುಷ್ಯ ಸಾಕಾಗದು/
ಮನವಿದ್ದೊಡೆ ಮಣ್ಣಲ್ಲಿ ಬಂಗಾರ ಬೆಳೆದೀತು
ಮನವ ಸಿಂಗರಿಸೊ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ.