ಕಬೀರ ಕಂಡಂತೆ. ೮೭
ಸತ್ಕರ್ಮದ ದಾರಿಯಲಿ ಸಂಯಮವಿರಲಿ... ರಿತು ವಸಂತ ಯಾಚಕ ಭಯಾ, ಹರಖಿ ದಿಯಾ ಧೃಮ್ ಪಾತ| ತಾತೆ ನವ ಪಲ್ಲವ ಭಯಾ, ದಿಯಾ ದೂರ ನಹಿಂ ಜಾತ|| "ಆರೇನ ಮಾಡುವರು ಆರಿಂದಲೇನಹುದು, ಪೂರ್ವ ಜನ್ಮದ ಕರ್ಮ ವಿಧಿ ಬೆನ್ನ ಬಿಡದು" ಎಂಬ ದಾಸರ ನುಡಿಯಂತೆ ನಮ್ಮ ಕರ್ಮದ ಫಲಗಳನ್ನು ನಾವು ಅನುಭವಿಸಲೇಬೇಕು. ಸತ್ಕರ್ಮ ನಮ್ಮನ್ನು ನೆರಳಾಗಿ ಕಾಯ್ದರೆ ಕುಕರ್ಮ ನೆರಳಿನಂತೆ ಬಿಡದೆ ಕಾಡುತ್ತದೆ. ಈ ಜನ್ಮದಲ್ಲಿ ಮಾಡಿದ ಕರ್ಮ ಜನ್ಮಾಂತರಗಳಲ್ಲಿ ಸಹ ಫಲ ಕೊಡಬಹುದು. ಆದರೆ ಮನುಷ್ಯನಿಗೆ ಈ ಕರ್ಮಫಲದ ಬಗ್ಗೆ ವಿಸ್ಮೃತಿ ಕಾಡುವದರಿಂದ ಆತ ಕುಕೃತ್ಯ ಮಾಡಲು ಹಿಂದೆ ಮುಂದೆ ನೋಡಲಾರ. ಅಲ್ಲದೇ ಒಳ್ಳೆಯ ಕರ್ಮದ ಫಲಗಳು ಸಿಗುವದು ತಡವಾದಾಗ ಅನೇಕರಿಗೆ ತಾವು ಮಾಡಿದ ಸತ್ಮರ್ಮ -ಗಳ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಆದರೆ ಕರ್ಮ ಮತ್ತು ಕರ್ಮಫಲಗಳ ಬಗ್ಗೆ ಜನರಲ್ಲಿ ಸದಾ ವಿಶ್ವಾಸ ಮತ್ತು ಜಾಗೃತಿ ಮೂಡಿಸಲು ಅನಾದಿ ಕಾಲದಿಂದಲೂ ಸಾಧು-ಸಜ್ಜನರ ಪ್ರಯತ್ನವಂತೂ ನಡೆದೇಯಿದೆ. ಕುಕರ್ಮಗಳನ್ನು ಖಂಡಿಸುವ ಮತ್ತು ಸತ್ಕರ್ಮ -ಗಳನ್ನು ಪ್ರೋತ್ಸಾಹಿಸುವ ಮನೋಭಾವ ಜನರಲ್ಲಿ ಮೂಡಿದಾಗ ಆದರ್ಶ ಸಮಾಜದ ಕನಸು ಸಾಕಾರ -ಗೊಂಡೀತು. ಮೇಲಿನ ದೋಹೆಯಲ್ಲಿ ಸಂತ ಕಬೀರರು, ವಸಂತ ಋತು ಹೇಳಿದಂತೆ, ವೃಕ್ಷ ಎಲೆ ಉದುರಿಸುವವು| ನವ ಮನ್ವಂತರ ಬಂದಂತೆ, ಹೊಸ ಚಿಗುರು ಮೂಡುವವು|| ಎಂದಿದ್ದಾರೆ. ವಸಂತ ಋತುವಿನ ವಿನಂತಿಯಂತೆ ಎಲ್ಲ ವೃಕ್ಷಗಳು ತಮ್ಮ ಎಲೆಯುದುರಿಸಿ ಬೋಳಾದರೆ, ಕಾಲಾನಂತರದಲ್ಲಿ ಒಳ್ಳೆಯ ಹಸಿರೆಲೆಗಳು ಮೂಡುತ್ತವೆ. ಕೊಟ್ಟಿದ್ದು ಎಂದಿಗೂ ವ್ಯರ್ಥವಾಗದು. ಕೊಟ್ಟದ್ದರ ಎಷ್ಟೋ ಪಟ್ಟು ಅಧಿಕ ಪ್ರತಿಫಲ ಪ್ರಾಪ್ತವಾದೀತು ಎಂಬುದು ಕಬೀರರ ಅಭಿಪ್ರಾಯ. ಅನ್ಯರಿಗೆ ಉಪಕಾರ ಮಾಡುವ ಮೂಲಕ ಮಾನವೀಯತೆಯನ್ನು ಮೆರೆದಾಗ, ದಾನ ಮಾಡಿದ ವ್ಯಕ್ತಿಯೇನೂ ಬಡವನಾಗಲಾರ. ಆತನ ಸುಕೃತ್ಯಕ್ಕೆ ತಕ್ಕ ಪ್ರತಿಫಲ ದೊರೆಯುವದರ ಜೊತೆಗೆ ಅನ್ಯರಿಗೆ ಸಹಾಯ ಹಸ್ತ ಚಾಚಿದ ತೃಪ್ತಿ, ಆನಂದ, ಸಮಾಧಾನ -ಗಳಿಗೆ ಬೆಲೆ ಕಟ್ಟಲು ಸಾಧ್ಯವೆ!? "ಕರ್ಮಣ್ಯೇ ವಾಧಿಕಾರಸ್ತೆ ಮಾಫಲೇಷು ಕದಾಚನ" ಎಂಬ ಭಗವದ್ಗೀತೆಯ ನುಡಿಯಂತೆ ಪ್ರತಿಫಲದ ಅಪೇಕ್ಷೆ ಮಾಡದೆ ಸತ್ಕರ್ಮದ ಮಾರ್ಗದಲ್ಲಿ ಮುನ್ನಡೆ -ಯಬೇಕಾದುದು ಅವಶ್ಯ. ಇದರ ಜೊತೆಗೆ ಸತ್ಕರ್ಮದ ಪರಿಣಾಮ ನಿರೀಕ್ಷಿಸುವಾಗ ತಾಳ್ಮೆ, ಸಂಯಮವಿದ್ದರೆ ಮಾನಸಿಕ ಶಾಂತಿ ಮತ್ತು ಆತ್ಮತೃಪ್ತಿ ದೊರಕೀತು. ಎಲೆ ಉದುರೀತೆಂದು ಮರ ಅಳುವದೇನು? ಜಲ ಬತ್ತುವದೆಂದು ನದಿ ಹಳಹಳಿಸೀತೇನು?| ಬೆದರಿದರೆ ಅಪಜಯ, ತಲೆಯೆತ್ತಿರೆ ವಿಜಯ ಎದೆಯೊಳಗಿರಲಿ ಛಲ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.