top of page

ಕನ್ನಡ ನುಡಿಯ ಕುಂದಣ :ಕೆ.ಜಿ.ಕದಣಗಾರರು

ಇಂದು ಜನ್ಮದಿನದ ನೆನಪು *********************** ಕನ್ನಡ ನುಡಿಗೆ ಕುಂದಣವೆನಿಸಿದ ಕೆ. ಜಿ. ಕುಂದಣಗಾರರು ************************** ಕನ್ನಡ ಭಾಷೆ, ಸಾಹಿತ್ಯ, ಪತ್ರಿಕೆಗಳ ಬೆಳವಣಿಗೆಗೆ ಅಪಾರ ಕೊಡುಗೆಯಿತ್ತ ಕೆ. ಜಿ. ಕುಂದಣಗಾರ ಅವರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿ ಎಂಬ ಗ್ರಾಮದವರು. ಕಲ್ಲಪ್ಪ ಗಿರಿಯಪ್ಪ ಕುಂದಣಗಾರ ಬಡ ಪತ್ತಾರ ಕುಟುಂಬಕ್ಕೆ ಸೇರಿದವರು. ೧೮೯೫ ರ ಅಗಸ್ಟ್ ೧೪ ರಂದು ಜನಿಸಿದ ಕುಂದಣಗಾರರು ಚಿಕ್ಕವರಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡು ಶಿಕ್ಷಣ ಪಡೆಯುವದೂ ಕಷ್ಟವೆಂಬಂತಹ ಪರಿಸ್ಥಿತಿಯಲ್ಲಿ ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆದರು. ಸರಾಫಿ ಅಂಡಿಯಲ್ಲಿ ತಿಂಗಳಿಗೆ ೪ ರೂ. ಸಂಬಳದ ಕೆಲಸ ಮಾಡುತ್ತ ಒಂದೊಂದೇ ಹಂತ ದಾಟುತ್ತ ೩೦ ನೇ ವಯಸ್ಸಿನಲ್ಲಿ ಪುಣೆ ಫರ್ಗ್ಯುಸನ್ ಕಾಲೇಜಿನಲ್ಲಿ ಎಂ. . ಎ. ಮುಗಿಸಿದರು. ರಾಜಾರಾಮ ಹೈಸ್ಕೂಲಿನಲ್ಲಿ ಹೆಡ್ಮಾಸ್ಟರ್ ಆಗಿ , ನಂತರ ಗೋಕಾಕನಲ್ಲಿ ವಿಜ್ಞಾನ ಶಿಕ್ಷಕರಾಗಿ , ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ೧೯೪೮ ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಳಗಾವಿಗೆ ಬಂದು ಆರ್. ಪಿ. ಡಿ. ಕಾಲೇಜಿನಲ್ಲಿ ಕನ್ನಡದ ಗೌರವ ಪ್ರಾಧ್ಯಾಪಕರಾಗಿ ಮತ್ತೆ ಹದಿನೇಳು ವರ್ಷ ಸೇವೆ ಸಲ್ಲಿಸಿದರು. ಮಹಾರಾಷ್ಟ್ರದ ನೆಲದಲ್ಲಿ ಕನ್ನಡವನ್ನು ಕಟ್ಟಿ ಬೆಳೆಸಿದ ಶ್ರೇಯಸ್ಸು ಕುಂದಣಗಾರರಿಗೆ ಸಲ್ಲುತ್ತದೆ. ಅವರು ಕನ್ನಡ ವಿಭಾಗಕ್ಕೆ ಮುಂಬಯಿ ವಿವಿ ಮನ್ನಣೆ ದೊರಕುವಂತೆ ಮಾಡಿದರು. ಕೊಲ್ಲಾಪುರದಲ್ಲಿ ಕರ್ನಾಟಕ ಸಂಘ ಸ್ಥಾಪಿಸಿ ಅಲ್ಲಿಯ ಕನ್ನಡಿಗರನ್ನು ಸಂಘಟಿಸಿ ಕನ್ನಡದ ಹಿರಿಯ ಸಾಹಿತಿಗಳನ್ನು ಆಮಂತ್ರಿಸಿ ಉಪನ್ಯಾಸ ಏರ್ಪಡಿಸಿದರು.ಗೆಳೆಯರ ಬಳಗ, ಬಸವ ಬಳಗಗಳನ್ನು ಆರಂಭಿಸಿ ಚಟುವಟಿಕೆ ನಡೆಸಿದರು. ಕೊಲ್ಲಾಪುರವನ್ನು ಕನ್ನಡದ ಯಾತ್ರಾಸ್ಥಳವನ್ನಾಗಿಸಿದರು. ಬೇಂದ್ರೆ, ಗೋಕಾಕ , ಮಾಳವಾಡ, ಮುಗಳಿ, ಆರ್. ಸಿ. ಹಿರೇಮಠ, ಬಿ. ಡಿ‌. ಜತ್ತಿ, ಮೊದಲಾದವರಿಗೆ ಕನ್ನಡದ ದೀಕ್ಷೆಯನ್ನಿತ್ತರು. ಬೆಳಗಾವಿಯ ರಾಣಿ ಪಾರ್ವತಿದೇವಿ ಕಾಲೇಜಿನಲ್ಲೂ ಕುಂದಣಗಾರರು ಕನ್ನಡ ವಿಭಾಗವನ್ನು ಬೆಳೆಸಿ ಅದಕ್ಕೆ ಭದ್ರ ತಳಹದಿ ನಿರ್ಮಿಸಿದರು. ಕನ್ನಡ,ಪಾಲಿ, ಮರಾಠಿ, ಅರ್ಧಮಾಗಧಿ, ಇಂಗ್ಲಿಷ್ ಭಾಷೆಗಳಲ್ಲಿ ಪ್ರಭುತ್ವ ಹೊಂದಿದ್ದ ಅವರು ಉತ್ತರ ಕರ್ನಾಟಕದ ಮೊದಲ ಕನ್ನಡ ಎಂಎ. ಪಾಸಾದವರೂ ಮೊದಲ ಕನ್ನಡ ಪ್ರಾಧ್ಯಾಪಕರೂ, ಪಿಎಚ್ಡಿ ಗೆ ಮೊದಲ ಮಾರ್ಗದರ್ಶಕರೂ ಆದವರು. ಸಾಹಿತ್ಯ ಮತ್ತು ಭಾಷಾ ಸಂಶೋಧನೆ, ಸಂಪಾದನೆ, ವಿಮರ್ಶೆಗಳ ಕ್ಷೇತ್ರದಲ್ಲಿ ಅಗಾಧ ಕೆಲಸ ಮಾಡಿದ ಅವರು ಅಸಂಖ್ಯಾತ ಹಳೆಗನ್ನಡ ಗ್ರಂಥಗಳನ್ನು ಪರಿಷ್ಕರಿಸಿ ಪ್ರಕಟಿಸಿದರು. ಸರಸ್ವತಿ ಎಂಬ ಕಾದಂಬರಿ ಬರೆದರು. ಭರತೇಶ ವೈಭವ , ರತ್ನಾವಳಿ , ನಾಗಾನಂದರ ನಾಟಕಗಳನ್ನು ಮರಾಠಿಗೆ ಅನುವಾದಿಸಿದರು. ಕೊಲ್ಲಾಪುರದ ಇತಿಹಾಸವನ್ನು ಇಂಗ್ಲಿಷಿನಲ್ಲಿ ಬರೆದರು. ಮಹಾದೇವಿಯಕ್ಕ, ಹರಿಹರ ಮೊದಲಾದವರ ಕುರಿತು ಅವರು ಬರೆದ ಕೃತಿಗಳು ಹೊಸ ಬೆಳಕು ಚೆಲ್ಲಿದವು. ಕೊಲ್ಲಾಪುರದ ಬ್ರಹ್ಮಪುರಿ ಉತ್ಖನನದಲ್ಲಿ ಅವರು ಮಹತ್ವದ ಪಾತ್ರ ನಿರ್ವಹಿಸಿದರು. ೧೯೬೧ ರಲ್ಲಿ ಗದಗದಲ್ಲಿ ಜರುಗಿದ ೪೩ ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಪಡೆದರು. ಶಿಲಾಶಾಸನ, ತಾಮ್ರಪಟ , ತಾಳೆಗರಿ ಹಳೆಯ ಕಡತಗಳ ಸಂಗ್ರಹ , ಅಧ್ಯಯನ ನಡೆಸಿದರು. ವಾಗ್ಭೂಷಣ ಮತ್ತು ಜಿನಸಮಯ ಎಂಬ ಪತ್ರಿಕೆಗಳಿಗೂ ಅವರ ಸೇವೆ ಸಂದಿದೆ. ಕಸಾಪ , ಮೈಸೂರು ವಿವಿ ನಿಘಂಟು ಸಮಿತಿಗಳ ಸಂಪಾದಕರಾಗಿಯೂ ಕಾರ್ಯ ನಿರ್ವಹಿಸಿದರು. ‌ ಕುಂದಣಗಾರರು ಕನ್ನಡಕ್ಕೆ ಕುಂದಣವೆನಿಸಿ ಬಾಳಿ ೧೯೬೫ ಅಗಸ್ಟ್ ೨೨ ರಂದು ನಿಧನರಾದರು. ‌ - ಎಲ್. ಎಸ್. ಶಾಸ್ತ್ರಿ

ಕನ್ನಡ ನುಡಿಯ ಕುಂದಣ :ಕೆ.ಜಿ.ಕದಣಗಾರರು
bottom of page